ಶನಿವಾರ, ಮೇ 28, 2022
24 °C

ಗುಡಗೇರಿಯಲ್ಲಿ ಬಸವರಾಜ ಅಂತ್ಯಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಡಗೇರಿ: ಮೇರುನಟ, ಸಂಗಮೇಶ್ವರ ನಾಟಕ ಕಂಪನಿಯ ಮಾಲೀಕ, ಸ್ಥಳೀಯ ಪ್ರತಿಷ್ಠಿತ ನಾಗರಹಳ್ಳಿ ಮನೆತನದ ಪೈಲ್ವಾನ ಗುಡಗೇರಿ ಬಸವರಾಜ ಅವರ ಅಂತ್ಯಸಂಸ್ಕಾರ ಸಾವಿರಾರು ಜನರ ಕಣ್ಣೀರಿನ ನಡುವೆ ಬುಧವಾರ ಸಂಜೆ ನಡೆಯಿತು.ಪಾರ್ಥಿವ ಶರೀರ ಹುಬ್ಬಳ್ಳಿಯಿಂದ ಕುಂದಗೋಳ, ಸಂಶಿ, ರಾಮಗೇರಿ ಮಾರ್ಗವಾಗಿ ಇಲ್ಲಿಗೆ ಮಧ್ಯಾಹ್ನ 12.30ಕ್ಕೆ ಆಗಮಿಸಿತು. ನಂತರ ಮೆರವಣಿಗೆ ಮುಖಾಂತರ ಗ್ರಾಮದ ಸಂಗಮೇಶ್ವರ ಮಠದ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಯಿತು. ಸಾವಿರಾರು ಜನರು ದುಃಖತಪ್ತರಾಗಿ ದರ್ಶನ ಪಡೆದರು.ಗದುಗಿನ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮೀಜಿ, ಶಿರಹಟ್ಟಿಯ ಫಕ್ಕೀರೇಶ್ವರ ಸ್ವಾಮೀಜಿ, ಹೊಳೆಇಟಗಿ ಹಾಗೂ ಗುಡಗೇರಿ ಮಠದ ಮಡಿವಾಳೇಶ್ವರ ಸ್ವಾಮೀಜಿ, ಚನ್ನವೀರೇಶ್ವರ ದೇವರು ಅಂತಿಮ ದರ್ಶನ ಪಡೆದರು. ಕುಂದಗೋಳ ಶಾಸಕ ಎಸ್.ಐ. ಚಿಕ್ಕನಗೌಡರ, ಮಾಜಿ ಶಾಸಕರಾದ ಎಂ.ಎಸ್. ಅಕ್ಕಿ, ಸಿ.ಎಸ್. ಶಿವಳ್ಳಿ, ಶಿರಹಟ್ಟಿಯ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅವರು ದರ್ಶನ ಪಡೆದವರಲ್ಲಿ ಪ್ರಮುಖರು.ಮಧ್ಯಾಹ್ನ 3.30ಕ್ಕೆ ಅಂತಿಮ ಯಾತ್ರೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಸಂಶಿ ರಸ್ತೆಯಲ್ಲಿರುವ ಬಸವರಾಜ ಮನೆ ಹತ್ತಿರ ಪಾರ್ಥಿವ ಶರೀರ ಬಂದಾಗ ಸರ್ಕಾರದ ಪರವಾಗಿ ಜಿಲ್ಲಾಧಿಕಾರಿ ದರ್ಪಣ್ ಜೈನ್ ಪುಷ್ಪಗುಚ್ಛ ಇರಿಸಿ ಅಂತಿಮ ನಮನ ಸಲ್ಲಿಸಿದರು. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಯಿತು. ನಂತರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ, ಮಾಜಿ ಸಂಸದ ಐ.ಜಿ. ಸನದಿ ಮೊದಲಾದವರು ಮಾತನಾಡಿದರು.ವಿಜಾಪುರ, ಬಾಗಲಕೋಟೆ, ಹಾವೇರಿ, ಗದಗ ಮೊದಲಾದ ಜಿಲ್ಲೆಗಳಿಂದ ಆಗಮಿಸಿದ ಗಣ್ಯರು, ಕಲಾವಿದರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಅಗಲಿದ ಹಿರಿಯ ರಂಗಕರ್ಮಿಗೆ ಗೌರವ ಸಲ್ಲಿಸಲು ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆ, ಖಾಸಗಿ ಪ್ರಾಥಮಿಕ ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜೊತೆಗೆ ಅಂಗಡಿ-ಮುಂಗಟ್ಟುಗಳೂ ಮುಚ್ಚಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.