ಭಾನುವಾರ, ಏಪ್ರಿಲ್ 18, 2021
29 °C

ಗುತ್ತಿಗೆ ನಿವೇಶನಗಳಿಗೆ ದೊರೆಯದ ಮುಕ್ತಿ

ಪ್ರಜಾವಾಣಿ ವಾರ್ತೆ ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಗುತ್ತಿಗೆ ನೀಡಲಾದ 2,689 ಪಾಲಿಕೆ ಒಡೆತನದ ನಿವೇಶನಗಳ (ಲೀಸ್ ಪ್ರಾಪರ್ಟಿ) ಭವಿಷ್ಯ ಕಳೆದ ಆರು ವರ್ಷಗಳಿಂದಲೂ ಬಗೆಹರಿಯದ್ದರಿಂದ ಇನ್ನೂ ಕಗ್ಗಂಟಾಗಿ ಉಳಿದಿದೆ. ಗುತ್ತಿಗೆಗೆ ನೀಡಲಾದ ಆಸ್ತಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇದುವರೆಗೆ ಯಾವುದೇ ನಿರ್ಧಾರ ಕೈಗೊಳ್ಳದಿರುವುದೇ ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ.ಪಾಲಿಕೆ ಒಡೆತನದ ನಿವೇಶನ ಹಾಗೂ ಕಟ್ಟಡಗಳನ್ನು ಹಲವು ವರ್ಷಗಳಿಂದ ಲೀಸ್ ಆಧಾರದ ಮೇಲೆ ನೀಡುತ್ತಲೇ ಬರಲಾಗಿದೆ. ಕೆಲವು `ಲೀಸ್ ಡೀಡ್~ಗಳಿಗಂತೂ ದಶಕಗಳ ಇತಿಹಾಸವೇ ಇದೆ. ಲೀಸ್ ವ್ಯವಹಾರದಲ್ಲಿ ಸುದೀರ್ಘ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಗುತ್ತಿಗೆದಾರರು ಕಾಲ-ಕಾಲಕ್ಕೆ ಈ ಒಪ್ಪಂದಗಳನ್ನು ನವೀಕರಣ ಮಾಡಿಸಿಕೊಳ್ಳುತ್ತಲೇ ಬಂದಿದ್ದಾರೆ.ಲೀಸ್ ಆಸ್ತಿಗಳಿಂದ ಪಾಲಿಕೆ ಇದುವರೆಗೆ 1.47 ಕೋಟಿ ವರಮಾನ ಪಡೆದಿದೆ. ಆದರೆ, 2004ರಲ್ಲಿ ರಾಜ್ಯ ಸರ್ಕಾರ `ಸ್ಥಳೀಯ ಸಂಸ್ಥೆಗಳು ಯಾವುದೇ ಆಸ್ತಿಗಳ ಗುತ್ತಿಗೆ ಒಪ್ಪಂದವನ್ನು ನವೀಕರಿಸಬಾರದು~ ಎನ್ನುವ ಆದೇಶ ಹೊರಡಿಸಿದ್ದರಿಂದ ಆಗಿನಿಂದಲೂ ಈ ಆಸ್ತಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ.ಗುತ್ತಿಗೆದಾರರು ತಾವು ಲೀಸ್ ಪಡೆದ ನಿವೇಶನದಲ್ಲಿ ಮಳಿಗೆ ಇಲ್ಲವೆ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿದ್ದಾರೆ. ಕೆಲವರು ಸ್ವಂತ ಉದ್ದಿಮೆ ನಡೆಸುತ್ತಿದ್ದರೆ, ಹಲವರು ಮೂರನೇ ವ್ಯಕ್ತಿಗಳಿಗೆ ಬಾಡಿಗೆ ಕೊಟ್ಟಿದ್ದಾರೆ. ಯಾರಿಂದಲೂ ಪಾಲಿಕೆ 2004ರ ಬಳಿಕ ಗುತ್ತಿಗೆ ಮೊತ್ತವನ್ನು ಪಡೆದಿಲ್ಲ. ಕೋಟ್ಯಂತರ ರೂಪಾಯಿ ಬಾಕಿ ಉಳಿದುಕೊಂಡಿದ್ದು, ಏನು ಮಾಡಬೇಕೆಂಬುದು ತೋಚದೆ ಪಾಲಿಕೆ ಅಧಿಕಾರಿಗಳು ಹೊಸ ಆದೇಶದ ನಿರೀಕ್ಷೆಯಲ್ಲಿದ್ದಾರೆ.ಲೀಸ್ ಮೇಲೆ ನೀಡಿದ ಎಲ್ಲ ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ಪಾಲಿಕೆಗೆ ದೊಡ್ಡ ಮೊತ್ತದ ಹಣ ಸಂಗ್ರಹಿಸುವ ಯತ್ನಗಳು ನಡೆದಿವೆ. ಈ ಸಂಬಂಧ ಪಾಲಿಕೆ ಸಾಮಾನ್ಯಸಭೆಯಲ್ಲಿ ನಿರ್ಣಯವನ್ನೂ ಅಂಗೀಕರಿಸಲಾಗಿದೆ. ಆದರೆ, ಅನುಮೋದನೆಗಾಗಿ ಮೂರು ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದ್ದರೂ ನಗರಾಭಿವೃದ್ಧಿ ಇಲಾಖೆ ಇನ್ನೂ ಹಸಿರು ನಿಶಾನೆ ನೀಡಿಲ್ಲ.`ದಶಕಗಳ ಹಿಂದಿನ ಲೆಕ್ಕದಲ್ಲಿ ನಿವೇಶನವನ್ನು ಲೀಸ್‌ಗೆ ನೀಡಿದ್ದರಿಂದ ಅದರಿಂದ ತೀರಾ ಕಡಿಮೆ ಮೊತ್ತದ ವರಮಾನ ಬರುತ್ತಿತ್ತು. ಆರು ವರ್ಷಗಳಿಂದ ಅದೂ ನಿಂತಿದೆ. ಕನಿಷ್ಠ ಗುತ್ತಿಗೆ ಮೊತ್ತ ಮಾತ್ರ ಬರುತ್ತಿದೆ~ ಎಂದು ಹೇಳುತ್ತಾರೆ ಪಾಲಿಕೆ ನಗರಯೋಜನೆ ವಿಭಾಗದ ಅಧಿಕಾರಿಗಳು. `ನೂರಾರು ನಿವೇಶನಗಳ ಲೀಸ್ ಅವಧಿ ಮುಗಿದಿದ್ದರೂ ಸರ್ಕಾರದ ನಿಲುವು ತಿಳಿಯದ್ದರಿಂದ ಅದೇ ಗುತ್ತಿಗೆದಾರರು ನಿವೇಶನಗಳ ಉಪಯೋಗ ಪಡೆಯುತ್ತಿದ್ದಾರೆ~ ಎಂದೂ ಅವರು ವಿವರಿಸುತ್ತಾರೆ.`ಎಲ್ಲ ಲೀಸ್ ನಿವೇಶಗಳನ್ನು ಮಾರಾಟ ಮಾಡಬೇಕು. ಗುತ್ತಿಗೆ ಪಡೆದ ವ್ಯಕ್ತಿಗಳಿಗೆ ಪ್ರಚಲಿತ ಮಾರುಕಟ್ಟೆ ದರಕ್ಕೆ ತಕ್ಕಂತೆ ಅವುಗಳ ಮಾಲೀಕತ್ವವನ್ನು ವರ್ಗಾಯಿಸಬೇಕು. ಗುತ್ತಿಗೆ ಪಡೆದ ವ್ಯಕ್ತಿಗಳು ನಿವೇಶನ ಖರೀದಿಸಲು ವಿಫಲವಾದರೆ ಹರಾಜಿನಲ್ಲಿ ಅಂತಹ ನಿವೇಶನಗಳನ್ನು ಮಾರಾಟ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬರಲಾಗಿದೆ~ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.`ಪಾಲಿಕೆ ಪ್ರಸ್ತಾವಕ್ಕೆ ಕೆಲವು ಸ್ಪಷ್ಟನೆಗಳನ್ನು ಕೇಳಿ ಸರ್ಕಾರ ಪತ್ರ ಬರೆದಿತ್ತು. ಅದರ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಲಾಗಿದೆ. ಬೇಗ ಅನುಮೋದನೆ ನೀಡುವಂತೆ ಪಾಲಿಕೆ ನಿಯೋಗ ಬೆಂಗಳೂರಿಗೆ ಹೋಗಿ ಬಂದಿದೆ. ಅಲ್ಲಿಂದ ಪ್ರಕ್ರಿಯೆ ಮಾತ್ರ ನಿಂತಲ್ಲೇ ನಿಂತಿದೆ~ ಎಂದು ಅವರು ಹೇಳುತ್ತಾರೆ.ಲೀಸ್ ಆಸ್ತಿಯನ್ನು ಮಾರಾಟ ಮಾಡಿದರೆ ಪಾಲಿಕೆಗೆ ರೂ 35 ಕೋಟಿ ದೊರೆಯುವ ಅಂದಾಜಿದೆ.

`ನಮ್ಮ ನಾಯಕ ಜಗದೀಶ ಶೆಟ್ಟರ್ ಅವರೇ ಮುಖ್ಯಮಂತ್ರಿ ಆಗಿದ್ದರಿಂದ ಈ ಸಂಬಂಧದ ಫೈಲ್‌ಗೆ ಬೇಗ ಮುಕ್ತಿ ದೊರೆಯಲಿದೆ. ಅವಳಿನಗರದ ಅಭಿವೃದ್ಧಿಗೆ ಶೆಟ್ಟರ್ ಕೂಡ ಉತ್ಸುಕರಾಗಿದ್ದರಿಂದ ಪಾಲಿಕೆಯ ಎಲ್ಲ ಬಾಕಿ ಯೋಜನೆಗಳಿಗೂ ಮಂಜೂರಾತಿ ಸಿಗಲಿದೆ~ ಎಂದು ಮೇಯರ್ ಡಾ. ಪಾಂಡುರಂಗ ಪಾಟೀಲ ಭರವಸೆ ವ್ಯಕ್ತಪಡಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.