ಗುತ್ತಿಗೆ ಪದ್ಧತಿ ವಿರುದ್ಧ ದನಿ ಎತ್ತಿ

7

ಗುತ್ತಿಗೆ ಪದ್ಧತಿ ವಿರುದ್ಧ ದನಿ ಎತ್ತಿ

Published:
Updated:

ಹುಬ್ಬಳ್ಳಿ: ‘ಕೆಲಸ ಇದ್ದಾಗ ಮಾತ್ರ ಕಾರ್ಮಿಕರನ್ನು ಉಪಯೋಗಿಸಿ ಅನಂತರ ‘ಎಸೆಯುವ’ ಗುತ್ತಿಗೆ ಪದ್ಧತಿಯನ್ನು ಅಳವಡಿಸುವ ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಕಾರ್ಮಿಕರು ಮುಂದಾಗಬೇಕು’ ಎಂದು ವಿಚಾರವಾದಿ ಹಾಗೂ ಪ್ರಗತಿಪರ ಚಿಂತಕ ತಮ್ಮಣ್ಣ ಮಾದರ ಸಲಹೆ ನೀಡಿದರು. ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಪೌರ ಕಾರ್ಮಿಕರ ಮತ್ತು ನೌಕರರ ಸಂಘ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಗುತ್ತಿಗೆ ಪೌರಕಾರ್ಮಿಕರ ಬದುಕು ಮತ್ತು ಭವಿಷ್ಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.‘ನೌಕರರ ಪಾಲಿಗೆ ಸರ್ಕಾರ ತಾಯಿಯಂತಿರಬೇಕು. ಅವರನ್ನು ಪೋಷಿಸುವ ಗಂಭೀರ ಜವಾಬ್ದಾರಿ ಸರ್ಕಾರದ ಮೇಲಿದೆ. ಆದರೆ ಯಾವ ಸರ್ಕಾರವೂ ಈ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಹೀಗಾಗಿ ಪೌರಕಾರ್ಮಿಕರು ಸೇರಿದಂತೆ ಎಲ್ಲ ಕಾರ್ಮಿಕ ವರ್ಗದ ಸಮಸ್ಯೆಗಳು ಪರಿಹಾರ ಕಾಣದೆ ಉಳಿದಿವೆ’ ಎಂದು ಅವರು ಹೇಳಿದರು. ಪೌರ ಕಾರ್ಮಿಕರ ಬಗ್ಗೆ ರಾಜ್ಯ ಸರ್ಕಾರ ಉದಾಸೀನ ಭಾವ ತಳೆದಿದೆ ಎಂದು ಅರೋಪಿಸಿದ ತಮ್ಮಣ್ಣ, ಸಿಗಬೇಕಾದ ಸೌಲಭ್ಯಗಳನ್ನು ಸರಿಯಾಗಿ ಒದಗಿಸುತ್ತಿಲ್ಲ ಎಂದರು.‘ಉತ್ತರ ಪ್ರದೇಶದಲ್ಲಿ ಪೌರಕಾರ್ಮಿಕರಿಗೆ 8 ಸಾವಿರ ರೂಪಾಯಿ ಹಾಗೂ ಕೇರಳದಲ್ಲಿ 6 ಸಾವಿರ ರೂಪಾಯಿ ಮಾಸಿಕ ವೇತನ ನೀಡಲಾಗುತ್ತದೆ. ಕರ್ನಾಟಕದಲ್ಲಿ ಮಾತ್ರ ಕೇವಲ 2 ಸಾವಿರ ರೂಪಾಯಿ ನೀಡಲಾಗುತ್ತದೆ. ನಿಯಮದ ಪ್ರಕಾರ ಎಲ್ಲ ಭತ್ಯೆಗಳು ಸೇರಿ 11,070 ರೂಪಾಯಿ ಪೌರಕಾರ್ಮಿಕರಿಗೆ ಮಾಸಿಕ ವೇತನದ ರೂಪದಲ್ಲಿ ಸಿಗಬೇಕು’ ಎಂದು ಅವರು ಪ್ರತಿಪಾದಿಸಿದರು.ವೇತನ ಮಾತ್ರವಲ್ಲದೆ ಇತರ ಅನೇಕ ಸೌಲಭ್ಯಗಳು ಕೂಡ ಪೌರಕಾರ್ಮಿಕರಿಗೆ ಸಿಗಬೇಕಾಗಿದ್ದು, ಅವುಗಳನ್ನು ಕೂಡ ಸರ್ಕಾರ ಸರಿಯಾಗಿ ಒದಗಿಸುತ್ತಿಲ್ಲ ಎಂದು ಆರೋಪಿಸಿದರು.‘ರಾಜ್ಯ ಸರ್ಕಾರ ಅನಗತ್ಯ ವಿಷಯಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತದೆ. ಆದರೆ ದುಡಿಯುವ ವರ್ಗದ ಕ್ಷೇಮಕ್ಕಾಗಿ ಖರ್ಚು ಮಾಡಲು ಹಿಂದೇಟು ಹಾಕುತ್ತದೆ. ಕೇವಲ ಜಾತಿ ಹಿನ್ನೆಲೆಯಲ್ಲಿ ಎಲ್ಲವನ್ನೂ ನೋಡುವ ಸರ್ಕಾರ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದೆ. ಇಂಥ ಅನೀತಿ ವಿರುದ್ಧ ದನಿ ಎತ್ತಬೇಕಾದ ಅಗತ್ಯವಿದೆ’ ಎಂದು ಅವರು ಸಲಹೆ ನೀಡಿದರು. ‘ಪೌರಕಾರ್ಮಿಕರ ಹಿತರಕ್ಷಣೆಗೆ ಅಂಬೇಡ್ಕರ್ ವಾದದ ಹಿನ್ನೆಲೆಯಲ್ಲಿ ಹೋರಾಟ ನಡೆಸಬೇಕಾದ ಅಗತ್ಯವಿದೆ. ನಿರಂತರ ಹೋರಾಟಕ್ಕೆ ಈಗಲೇ ಪಣ ತೊಟ್ಟರಷ್ಟೇ ಸಮಸ್ಯೆಗಳಿಗೆ ಪರಿಹಾರ ಕಾಣಲು ಸಾಧ್ಯ’ ಎಂದು ಅವರು ಹೇಳಿದರು.ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ಎಂ. ಹಿಂಡಸಗೇರಿ ಮಾತನಾಡಿ, ಗುತ್ತಿಗೆ ಆಧಾರಿತ ಪದ್ಧತಿಯನ್ನು ರದ್ದು ಮಾಡಿ ಸರ್ಕಾರ ಕಾರ್ಮಿಕರ ನೇರ ನೇಮಕಾತಿ ಮಾಡಬೇಕು ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry