ನಲ್ಮೆಯ ಮಿತ್ರರೇ,
ಇಂದು ನನ್ನ ದಿನ, ಅಂದರೆ ನನ್ನ ಉಳಿವಿನ ಕುರಿತು ಚರ್ಚೆ ನಡೆಸುವ ದಿನ. ವಿಪರ್ಯಾಸ ಅಲ್ಲವೇ? ನಿಮ್ಮ ಕಾಳಜಿಯನ್ನು ಅರೆ ಮನಸ್ಥಿತಿಯಿಂದ ಸ್ವಾಗತಿಸುತ್ತೇನೆ. ನಾನು ಕಾಣೆಯಾಗಲು ನಿಮ್ಮ ನಡೆಯೂ ಕಾರಣ ಎಂದು ದೂರುತ್ತೇನೆ. ಈ ಅಕ್ಷರಗಳನ್ನು ಮನವಿ ಪತ್ರ ಎಂದುಕೊಳ್ಳಿ ಅಥವಾ ಒಡಲಾಳದ ನೋವಿನ ಕಾಗದ ಎಂದಾದರೂ ತಿಳಿದುಕೊಳ್ಳಿ. ಆದರೆ ನಾನು ಬರೆಯುತ್ತಿರುವುದು ಮನವರಿಕೆಯ ಪತ್ರ.

ಈ ಪುಟ್ಟ ದೇಹದ ಅಂದ ಚೆಂದವ ವರ್ಣಿಸಿ, ನಿಮ್ಮ ಮಕ್ಕಳಿಗೆ ತೋರಿಸಿ, ಹಾಲು–ಅನ್ನ ಉಣ್ಣಿಸಿದ್ದೀರಿ. ಆ ತುತ್ತಿನಲ್ಲಿ ನನಗೂ ಮುಷ್ಟಿ ಪಾಲು ಕೊಟ್ಟಿದ್ದೀರಿ. ಅಂಗಳದಲ್ಲಿ ಒಣಗಿಹಾಕಿದ್ದ ಕಾಳು, ಧಾನ್ಯಗಳಿಗೆ ನನ್ನ ದಾಯಾದಿಗಳು ಮೂತಿಯಿಡದಂತೆ ಕನ್ನಡಿ ಇಟ್ಟು, ಇದ್ದಿಲಿಟ್ಟು ಕಾಯ್ದು ಕೂತವರು ನೀವು. ಆದರೆ ನನ್ನ ವಿಚಾರದಲ್ಲಿ ಮಾತ್ರ ಉದಾರ ಧೋರಣೆ. ಹಿಂಡು ಕಟ್ಟಿಕೊಂಡು ಬಂದು ಹೊಟ್ಟೆ ತುಂಬುವಷ್ಟು ತಿಂದುಂಡು ಮಕ್ಕಳಿಗೆ ಕೊಂಡೊಯ್ದರೂ ಕೆಂಗಣ್ಣು ಬೀರಲಿಲ್ಲ. ನಮ್ಮ ಹಕ್ಕಿಲೋಕದ ಇತರೆ ಸಂತತಿಗಳಿಗಿಂತ ನಾನು ನಿಮಗೆ ಹೆಚ್ಚು ಪರಿಚಿತ ಮತ್ತು ಆತ್ಮೀಯ. ನೆಂಟನಂತೆ ಮನೆಯ ಪ್ರವೇಶಕ್ಕೆ ಯಾವುದೇ ಅನುಮತಿ ಇಲ್ಲದೆ ನಿರಾಳವಾಗಿ ಬಂದು ಹೋಗುವ ಸಲುಗೆ ದಯಪಾಲಿಸಿದ್ದೀರಿ. ದವಸ– ಧಾನ್ಯಗಳ ಮೇಲೆ ಆಧಿಪತ್ಯ ಸ್ಥಾಪಿಸಿ ಕೊಂಡೊಯ್ದರೂ ನಿಮ್ಮದು ಮೌನ ನಿಲುವು .

ಹಿತ್ತಿಲಿನ ಬಣವೆಗಳಲ್ಲಿ, ಮನೆಯ ಜಂತೆಗಳಲ್ಲಿ ನಾ ಸೂರು ಕಟ್ಟಿಕೊಂಡು ಸಂತಾನ ಬೆಳೆಸುವಾಗ, ನನ್ನ ಮಕ್ಕಳನ್ನೂ ಪೋಷಿಸಿದ್ದೀರಿ. ನಿಮ್ಮ ಮಕ್ಕಳು– ಮರಿಗಳು ನನ್ನ ಕೂಸು–ಕುಡಿಗಳನ್ನು ನೋಡಿ ಖುಷಿಪಟ್ಟಿದ್ದಾರೆ. ಕ್ಷಣ ಸೂರಿಗೆ ಬರುವುದು ತಡವಾದಾಗ ನನ್ನ ಕಂದಮ್ಮಗಳ ಕೂಗಿಗೆ ‘ಪಾಪ ಗುಬ್ಬಚ್ಚಿ...’ ಎಂದು ಆಹಾರದ ಗುಟುಕು ಕೊಟ್ಟಿದ್ದಾರೆ. ನನ್ನ ಮಕ್ಕಳೂ ಭಯವಿಲ್ಲದೆಯೇ ನಿಮ್ಮ ಪ್ರೀತಿಯನ್ನು ಸ್ವೀಕರಿಸಿದ್ದಾರೆ.

ಆ ಭರವಸೆ ಮತ್ತು ವಿಶ್ವಾಸ ಭಾವಗಳು ಇಬ್ಬರ ನಡುವೆ ಚೆಂದವಾಗಿಯೇ ಬಲಿತಿವೆ ಅಲ್ಲವೇ? ದೇವರ ಮೂರ್ತಿಗಳನ್ನು ಮಡಿ ಮೈಲಿಗೆ, ಮುಟ್ಟು–ಚಟ್ಟುಗಳಿಂದ ಕಾಪಾಡುವ ನೀವು ಗುಡಿ ಗುಂಡಾರಗಳ ಹೆಂಚು, ಮಹಡಿಗಳ ಸಂದುಗಳಲ್ಲಿ ನಮಗೆ ನಿಶ್ಚಿಂತೆಯಿಂದ ಬದುಕಲು ಅವಕಾಶಕೊಟ್ಟಿದ್ದೀರಿ, ನಾ ಗಲೀಜು ಮಾಡಿದರೂ ಗುಡಿಸಿ ತೊಳೆದಿರಿ. ನಿಮ್ಮ ಕಲ್ಪನಾ ಪದಪುಂಜಗಳಲ್ಲಿ ಪೋಣಿಸಿ ‘ಚಿವ್ ಚಿವ್ ಗುಬ್ಬಿ...’ ಎಂದು ಹಾಡು ಹೊಸೆದಿರಿ.

ಮಕ್ಕಳಿಗೆ ಕಥೆ ಹೇಳುವಾಗ ನನ್ನ ಪರಿಚಯವಿಲ್ಲದಿದ್ದರೆ ಅದು ಅರ್ಥಪೂರ್ಣವಾಗುವುದೇ ಇಲ್ಲ ಎನ್ನುವಂತೆ ಸಾಲು ಸಾಲು ಕಥೆಗಳನ್ನು ಕಟ್ಟಿದ್ದೀರಿ...ಇಷ್ಟೆಲ್ಲವನ್ನು ನಾನು ಹೇಳಿದ್ದು ಏಳೆಂಟು ವರ್ಷಗಳ ಹಿಂದಿನ ನಮ್ಮಿಬ್ಬರ ನಡುವಿನ ಬಾಂಧವ್ಯ ನೆನೆದು. ಕಾಲದ ಓಟಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿರುವ ನಿಮ್ಮ ಮತ್ತು ನನ್ನ ನಡುವೆ ಸಂಬಂಧ ಹಳಿ ತಪ್ಪಿ ಬಹಳ ದಿನಗಳೇ ಆಯಿತು ಬಿಡಿ. ನನ್ನ ಕಣ್ಮರೆ ನಿಮ್ಮ ಬದುಕಿನ ಅಧಃಪತನದ ಮುನ್ನುಡಿಗಳಲ್ಲಿ ಒಂದು ಎಂದು ಒಮ್ಮೆಯಾದರೂ ಅನ್ನಿಸಿದ್ದರೆ ನನ್ನ ಉಳಿವಿನ ಪ್ರಶ್ನೆ ಎದುರಾಗುತ್ತಲೇ ಇರಲಿಲ್ಲ.

ನಿಮ್ಮ ತೋಟ ತುಡಿಕೆಗಳಲ್ಲಿ ತಿಂದುಂಡು ನಿಶ್ಚಿಂತೆಯಿಂದ ಸಂತಾನಾಭಿವೃದ್ಧಿ ಮಾಡುತ್ತಿದ್ದೆ. ಆದರೆ ಅದ್ಯಾವ ಗಳಿಗೆಯಲ್ಲಿ ನಿಮ್ಮ ಆಸೆ– ಕನಸುಗಳು ನಿಮಿರಿ ಬೆಳೆಗಳಿಗೆಲ್ಲಾ ಹೇರಳವಾಗಿ ಕ್ರಿಮಿನಾಶಕ ಸಿಂಪಡಿಸಿ ಬಿಟ್ಟಿರೋ ನನ್ನ ತುತ್ತಿಗೆ ಕಲ್ಲು ಬಿತ್ತು. ಒಂದು ಅನ್ನದ ಬಟ್ಟಲು ಮಾಯವಾಯಿತು. ಮನುಷ್ಯರೇ ಕ್ರಿಮಿನಾಶಕದಿಂದ ಸಾಯುವಾಗ ನಾನು ಬದುಕುಳಿಯಲು ಸಾಧ್ಯವೇ? ಆದರೂ ಬದುಕಬೇಕಲ್ಲವೇ. ಕ್ರಿಮಿನಾಶಕದಿಂದ ತೊಯ್ದು ತೊಪ್ಪೆಯಾದ ಅನ್ನವ ತಿಂದು ನಿಶ್ಶಕ್ತನಾದೆ. ಸಂತಾನಾಭಿವೃದ್ಧಿಯೂ ಕುಂಠಿತವಾಯಿತು.

ಬಹುಶಃ ನಿಮಗೂ ಆ ಪರಿಣಾಮ ತಟ್ಟಿರಬೇಕು. ಆದರೆ ನಿಮಗಿಂತ ಮೊದಲು ಬಲಿಯಾಗಿದ್ದು ನಾನು. ಮನೆಯ ಅಂಗಳದಿಂದ ಕಾಳುಗಳನ್ನು ಹಸನು ಮಾಡುವುದು ನಿಂತೇ ಹೋಗಿದೆ. ಧಾನ್ಯ ಒಣಗಿ ಹಾಕುವುದನ್ನು ಮರತೇ ಬಿಟ್ಟಿದ್ದೀರಿ, ವಾಡೆ–ಮೂಡೆಗಳಲ್ಲಿ ಧಾನ್ಯ ಕಟ್ಟುವುದನ್ನು ಈಗ ಕಲ್ಪಿಸಿಕೊಳ್ಳಲೂ ಆಗದು. ಏಕೆಂದರೆ, ಅಡುಗೆಮನೆಯಲ್ಲಿ ಬಳಸುವ ಎಲ್ಲಾ ಆಹಾರ ಧಾನ್ಯಗಳೂ ‘ಝೀರೋ ವೇಸ್ಟೇಜ್’ ಪ್ಲಾಸ್ಟಿಕ್ ಪ್ಯಾಕೇಟ್ಗಳಲ್ಲಿ ನಿಮಗೆ ಸುಲಭವಾಗಿ ಸಿಗುತ್ತಿವೆ...ಇನ್ನೆಲ್ಲಿ ನನಗೆ ಆಹಾರ ಸಿಗಬೇಕು. ಗುಬ್ಬಚ್ಚಿಯ ಕಥೆಗಳಿಗಿಂತ ಕಾರ್ಟೂನು ಕಾರ್ಯಕ್ರಮಗಳನ್ನು ಮಕ್ಕಳ ಮನಸ್ಸಿಗೆ ಒಗ್ಗಿಸಿದ್ದೀರಿ.

ನಗರದ ಅಂಚಿನ ಹಳ್ಳಿಗಳು ಪಟ್ಟಣಗಳಾದವು. ತೋಟ–ತುಡಿಕೆಗಳು ಕಾಣಿಯಾಗಿ ಕಾಂಕ್ರೀಟು ಕಾಡು ಬೆಳೆಯಿತು. ಮತ್ತೆಲ್ಲಿ ನನ್ನ ನಿಶ್ಚಿಂತೆಯ ನೆಲೆ? ಜಾಗತೀಕರಣ, ನಗರಿಕರಣ... ಹೀಗೆ ನಿಮ್ಮ ಕರ್ಣಪಟಲಗಳ ಮೇಲೆ ಬಿದ್ದ ಸದ್ದು ಗದ್ದಲಕ್ಕೆ ಕಿವಿಗೊಟ್ಟು ನಾನೂ ಅವುಗಳನ್ನು ಒಪ್ಪಿಕೊಂಡೆ. ಆದರೆ ಅವುಗಳನ್ನೆಲ್ಲ ಎದುರಿಸಿ ಬದುಕುವ ಶಕ್ತಿ ನನಗೆ ದಕ್ಕಲಿಲ್ಲ. ಬಹುಶಃ ಪ್ರಕೃತಿಗೆ ವಿರುದ್ಧವಾಗಿ ಬದುಕಲು ನನಗೆ ಬರುವುದಿಲ್ಲ. ನನ್ನ ನೋವು–ಕೂಗನ್ನು ನಿಮ್ಮ ವಿಜ್ಞಾನಿ, ಪರಿಸರವಾದಿಗಳೂ ಅನುಮೋದಿಸಿದ್ದಾರೆ.

ಆದರೆ ನಿಮ್ಮದು ಜಾಣ ಕಿವುಡು. ಎಷ್ಟೇ ಆಗಲಿ ಪೆಟ್ಟು ಬಿದ್ದಮೇಲೆಯೇ ಅಲ್ಲವೇ ಎಲ್ಲವನ್ನೂ ವಿವೇಚಿಸುವುದು. ಒಂದಂತೂ ನಿಜ, ನಿಮಗೆ ಬೀಳುವ ಪರೋಕ್ಷ ಪೆಟ್ಟುಗಳು ನನಗೆ ಪ್ರತ್ಯಕ್ಷವಾಗಿಯೇ ಬೀಳುತ್ತವೆ. ಆದರೆ ಪೆಟ್ಟು ಪೆಟ್ಟೇ ಎನ್ನುವುದನ್ನು ನೀವು ಅರಿತುಕೊಂಡರೆ ಒಳಿತು. ನಾನು ಪೂರ್ಣವಾಗಿ ಗತಿಸಿಹೋಗಿ ಪಠ್ಯಪುಸ್ತಕಗಳಲ್ಲೋ, ಟೀವಿಗಳಲ್ಲೋ ಕಾಣಸಿಗುವ ವೇಳೆಗೆ ನಿಮ್ಮ ಉಳಿವು–ಅಳಿವಿನ ಚರ್ಚೆ ದೊಡ್ಡದಾಗುತ್ತದೆ ಎನ್ನುವುದು ನನ್ನ ನಂಬಿಕೆ.

–ಇಂತಿ ನಿಮ್ಮ
ಗುಬ್ಬಿ

2010ರಿಂದ ಈ ದಿನ ಗುಬ್ಬಿಗಳ ದಿನ
ಭಾರತದ ‘ನೇಚರ್ ಫಾರ್ ಎವರ್ ಸೊಸೈಟಿ’ ಮತ್ತು ಬುರಾಹನಿ ಫೌಂಡೇಶನ್ ಜೊತೆಗೂಡಿ ಗುಬ್ಬಿಗಳ ಅಳಿವಿನ ಕುರಿತು ಜಾಗೃತಿ ಮೂಡಿಸಲು 2010ರಿಂದ ಮಾರ್ಚ್ 20ರಂದು ‘ವಿಶ್ವ ಗುಬ್ಬಿಗಳ ದಿನಾಚರಣೆ’ ಆರಂಭಿಸಿದವು. ಈ ಆಂದೋಲನಕ್ಕೆ ಅಮೆರಿಕದ ‘ಕಾರ್ನೆಲ್ ಲ್ಯಾಬ್ ಆಫ್ ಆರ್ನಿಥಾಲಜಿ’, ಫ್ರಾನ್ಸಿನ ‘ಇಕೋಸಿಸ್ಟಂ ಆಕ್ಷನ್ ಫೌಂಡೇಶನ್’, ಬ್ರಿಟನ್ ನ ‘ಏವನ್ ವೈಲ್ಡ್ ಲೈಫ್ ಟ್ರಸ್ಟ್’ ಹಾಗೂ ಭಾರತದ ‘ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ’ ಕೈ ಜೋಡಿಸಿವೆ. ಇಂದು ವಿಶ್ವದ ವಿವಿಧ ಭಾಗಗಲ್ಲಿ ಗುಬ್ಬಿಗಳ ಅಳಿವಿನ ಕುರಿತು ಸಂಘಟನೆಗಳ ಕಾರ್ಯಕರ್ತರು, ಪರಿಸರವಾದಿಗಳು, ಪಕ್ಷಿ ಪ್ರೇಮಿಗಳು ಜಾಗೃತಿ ಮೂಡಿಸಲಿದ್ದಾರೆ.

ಗುಬ್ಬಿಯ ನಾಲ್ಕು ಪ್ರಭೇದಗಳು
* ಹೌಸ್ ಸ್ಪ್ಯಾರೊ: ಈಶಾನ್ಯ ಹಾಗೂ ವಾಯವ್ಯ ಭಾರತದಲ್ಲಿ ಹೆಚ್ಚಾಗಿ ಕಂಡುಬರುವ ಈ ಗುಬ್ಬಿಗಳಲ್ಲಿ ಗಂಡು ಗುಬ್ಬಿಗೆ ಬೂದು ಬಣ್ಣದ ಜುಟ್ಟು ಹಾಗೂ ಕಪ್ಪು ಕುತ್ತಿಗೆ ಇರುತ್ತದೆ. ಹೆಣ್ಣಿಗೆ ಬೂದು ಬಣ್ಣದ ಪುಕ್ಕವಿರುತ್ತದೆ.

* ಸ್ಪ್ಯಾನಿಷ್ ಸ್ಪ್ಯಾರೊ: ಚಳಿಯನ್ನು ಹೆಚ್ಚು ಇಷ್ಟಪಡುವ ಈ ಗುಬ್ಬಿಗಳು ನೇಪಾಳ ಹಾಗೂ ಉತ್ತರ ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ರೂಪದಲ್ಲಿ ಹೌಸ್ ಸ್ಪ್ಯಾರೊಗಳಿಗಿಂಥ ಕೊಂಚ ಭಿನ್ನವಾಗಿರುತ್ತವೆ.

* ಯೆಲ್ಲೋ ಥ್ರೋಟೆಡ್ ಸ್ಪ್ಯಾರೊ: ಏಷ್ಯಾದಲ್ಲಿ ಹೆಚ್ಚಾಗಿ ಕಂಡುಬರುವ ಈ ಪ್ರಭೇದದ ಗುಬ್ಬಿಯ ಕತ್ತು ಮೇಲೆ ಹಳದಿ ಮಿಶ್ರಿತವಾಗಿರುತ್ತದೆ. ಇವುಗಳು ಹೆಚ್ಚಾಗಿ ಮರದ ಪೊಟರೆಗಳಲ್ಲಿ ಹಾಗೂ ಕಟ್ಟಡದ ಖಾಲಿ ಪೊಟರೆಗಳಲ್ಲಿ ವಾಸಿಸುತ್ತವೆ.

* ಯೂರೇಷ್ಯನ್: ಗಂಡು ಹಾಗೂ ಹೆಣ್ಣು ಗುಬ್ಬಿಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಾರದ ಪ್ರಭೇದವಿದು. ಪೂರ್ವಘಟ್ಟ ಹಾಗೂ ಈಶಾನ್ಯ ಭಾರತದಲ್ಲಿ ಈ ಗುಬ್ಬಿಗಳು ಹೆಚ್ಚಾಗಿ ಕಂಡುಬರುತ್ತವೆ.

ಗುಬ್ಬಿ ಸಂಗತಿ
* ಮನುಷ್ಯನ ಹೃದಯ ಪ್ರತಿ ನಿಮಿಷಕ್ಕೆ ಸರಾಸರಿ 72 ಬಾರಿ ಬಡಿದುಕೊಳ್ಳುತ್ತದೆ. ಆದರೆ ಗುಬ್ಬಿಗಳ ಹೃದಯ ಪ್ರತಿ ನಿಮಿಷಕ್ಕೆ 460 ಬಾರಿ ಬಡಿದುಕೊಳ್ಳುತ್ತದೆ.

* ಕಲ್ಲು ತಿಂದು ಕರಗಿಸಿಕೊಳ್ಳಬಲ್ಲ ಜೀರ್ಣಶಕ್ತಿ ಗುಬ್ಬಿಗಳಿಗಿವೆಯಂತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.