ಶನಿವಾರ, ಜೂಲೈ 11, 2020
21 °C

ಗುಬ್ಬಿ ಸಜ್ಜಾಗಿದೆ ಗುಬ್ಬಿಯಪ್ಪನ ಜಾತ್ರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಬ್ಬಿ ಸಜ್ಜಾಗಿದೆ ಗುಬ್ಬಿಯಪ್ಪನ ಜಾತ್ರೆಗೆ

ಗುಬ್ಬಿ: ಪವಾಡ ಪುರುಷ ಗುಬ್ಬಿ ಚನ್ನಬಸವೇಶ್ವರ ಸ್ವಾಮಿ ಜಾತ್ರೆ ಆರಂಭಗೊಂಡಿದ್ದು. ಮಾರ್ಚ್ 11ರಂದು ಧ್ವಜಾರೋಹಣ ನಡೆಯಲಿದೆ. ದೇವಸ್ಥಾನದ ಜೀರ್ಣೋದ್ಧಾರ ಕೆಲಸವು ಅಂತಿಮಗೊಂಡಿದ್ದು, ಕೆಲವೇ ದಿನಗಳಲ್ಲಿ ಉಳಿದ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಮಾ. 15 ರಂದು ರಥೋತ್ಸವ, 19 ರಂದು ಬೆಳ್ಳಿಪಲ್ಲಕ್ಕಿ ಉತ್ಸವ ನಡೆಯಲಿದೆ. ಮಾ.25 ರಂದು ತೆಪ್ಪೋತ್ಸವದೊಂದಿಗೆ ಜಾತ್ರೆ ಮುಕ್ತಾಯಗೊಳ್ಳಲಿದ್ದು, ಪಟ್ಟಣದಲ್ಲಿ ಈಗಾಗಲೆ ಹಬ್ಬದ ವಾತಾವರಣ ಮೂಡಿದೆ.ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ತನ್ನದೇ ಸ್ಥಾನಮಾನ ಈ ದೇವಸ್ಥಾನಕ್ಕಿದೆ. ಗುಬ್ಬಿಯಲ್ಲಿ ವೀರಶೈವ ಧರ್ಮ ಉಳಿಸಿ ಬೆಳೆಸಿದ ಗೋಸಲ ಚನ್ನಬಸವೇಶ್ವರ ಸ್ವಾಮಿ ನೆಲಸಿರುವ ಪ್ರದೇಶವೆಂದು ಪ್ರತೀತಿ. ‘ಗುಬ್ಬಿಯಪ್ಪ’ ಎಂದೇ ನಾಡಿನಾದ್ಯಂತ ಪ್ರಸಿದ್ಧರಾಗಿದ್ದಾರೆ. 25 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದ ನವೀಕರಣ ಕೆಲಸ ಅಂತಿಮ ಹಂತದಲ್ಲಿದ್ದು. ಆಂಧ್ರಪ್ರದೇಶದ ನಾಮಕಲ್ ಹಾಗೂ ಕೃಷ್ಣಶಿಲೆಯನ್ನು ಒಳಗೊಂಡ ಸಂಪೂರ್ಣ ‘ಸ್ಟೋನ್ ಟೆಂಪಲ್’ ಗಮನ ಸೆಳೆಯುತ್ತಿದೆ.ಚನ್ನಬಸವೇಶ್ವರರು 15 ನೇ ಶತಮಾನದಲ್ಲಿ ಭಕ್ತಿ ದಾಸೋಹದ ಮೂಲಕ ಜಾತ್ಯತೀತ ಶರಣ ಸಾಹಿತ್ಯ ಪ್ರತಿಪಾದಿಸಿ ಮಹಾಸಂತರೆನಿಸಿಕೊಂಡವರು. ಚಾಮರಾಜನಗರ ಜಿಲ್ಲೆಯ ಹರದನಹಳ್ಳಿ ಗ್ರಾಮದಲ್ಲಿ ಹುಟ್ಟಿದ ಇವರು ಅಲ್ಲಮಪ್ರಭು ಸ್ಥಾಪಿಸಿದ ಶೂನ್ಯ ಸಿಂಹಾಸನದ 18 ನೇ ಗುರುಗಳಾಗಿದ್ದರು. ವಿದೇಶದಲ್ಲು ನೆಲೆ ನಿಂತಿರುವ ಭಕ್ತರ ಸಹಕಾರದಿಂದ ಮೂರು ವರ್ಷಗಳಿಂದ ಜೀರ್ಣೋದ್ಧಾರ ಕೆಲಸ ನಡೆಯುತ್ತಿದೆ. ಜೀರ್ಣೋದ್ಧಾರ ಸಮಿತಿಗೆ ಸಂಸದ ಜಿ.ಎಸ್. ಬಸವರಾಜು ಅಧ್ಯಕ್ಷರಾಗಿದ್ದಾರೆ.ಶೇ90 ರಷ್ಟು ಜೀರ್ಣೋದ್ದಾರ ಕಾರ್ಯ ಈಗಾಗಲೆ ಪೂರ್ಣಗೊಂಡಿದ್ದು, ಸುಮಾರು 25 ಕೋಟಿ ವೆಚ್ಚ ತಗುಲುತ್ತಿದೆ. ಇಷ್ಟು ಹಣವನ್ನು ಭಕ್ತರೆ ನೀಡಿರುವುದು ವಿಶೇಷವಾಗಿದೆ. ದೇವಾಲಯದ ಮುಖ್ಯದ್ವಾರದ ಮೇಲೆ 210 ಅಡಿಗಳಷ್ಟು ಎತ್ತರದ ರಾಜಗೋಪುರ ನಿರ್ಮಾಣವಾಗಲಿದ್ದು, ರಾಜ್ಯದಲ್ಲೆ ಎರಡನೇ ಅತಿ ಎತ್ತರದ ಗೋಪುರ ಎಂಬ ದಾಖಲೆಗೆ ಸೇರಲಿದೆ. ದೆಹಲಿಯ ಅಕ್ಷರಧಾಮದ ಮಾದರಿಯಲ್ಲಿ ಪೌಳಿ, ಪ್ರಾಂಗಣ ಮತ್ತು ಪ್ರದಕ್ಷಿಣಾ ಪಥದ ನಡುವೆ ಹುಲ್ಲುಹಾಸು ಹಾಗೂ ಹೂವಿನಗಿಡಗಳು ದೇವಾಲಯದ ಸೌಂದರ್ಯವನ್ನು ಇಮ್ಮಡಿಸಲಿವೆ.ಇಂದಿಗೂ ಪವಾಡ! 

ಮಹಾತಪಸ್ವಿಯಾದ ಇವರ ಪವಾಡಗಳು ಇಂದಿಗೂ ಕಾಣಬಹುದು ಎಂದು ಅರ್ಚಕರು ಹೇಳುತ್ತಾರೆ. ತಲಾಂತರದಿಂದ ದಲಿತ ಕುಟುಂಬದವರು ಸ್ವಾಮಿಗೆ ಹುಲಿ ಮುಟ್ಟಿದ ಪ್ರಾಣಿಯ ಚರ್ಮದಿಂದ ಪಾದುಕೆ ಸಿದ್ದಪಡಿಸಿ ಅರ್ಪಿಸುತ್ತಾರೆ. ಈ ಪಾದುಕೆಯ ಮೇಲೆ ಸ್ವಾಮಿಯ ಪಾದದ ಗುರುತುಗಳು ಮೂಡುವುದು ನಿಜಕ್ಕೂ ಪವಾಡವೇ ಸರಿ. ಜೊತೆಯಲ್ಲಿ ಮುಂಜಾನೆ ನಸುಕಿನಲ್ಲಿ ಎಷ್ಟೇ ಪ್ರಯತ್ನಿಸಿದರೂ ದೇವಸ್ಥಾನದ ಬಾಗಿಲು ತೆರೆಯಲು ಸಾಧ್ಯವೇ ಇಲ್ಲ. ಈ ಸಂದರ್ಭದಲ್ಲಿ ಸಂಚಾರಕ್ಕೆ ಹೊರ ಹೋಗಿರುತ್ತಾರೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ದೇವಸ್ಥಾನದ ಅರ್ಚಕರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.