ಸೋಮವಾರ, ಜೂನ್ 27, 2022
26 °C

ಗುಲಗಂಜಿ ರಾಸುಗಳ ರಕ್ಕಸ

ಅರುಣ ಎಂ.ಜಿ Updated:

ಅಕ್ಷರ ಗಾತ್ರ : | |

ತೀವ್ರ ಬರದ ಕಾರಣದಿಂದ ಜಾನುವಾರುಗಳಿಗೆ ಮೇವಿನ ಅಭಾವ ಕಾಡತೊಡಗಿದೆ. ಇದರಿಂದ ಕಂಗಾಲಾದ ರೈತರು ಸಮೀಪದ ಗುಡ್ಡಗಳಿಗೆ ಇಲ್ಲವೆ ಕುರುಚಲು ಕಾಡುಗಳಿಗೆ ತಮ್ಮ ರಾಸುಗಳನ್ನು ಮೇಯಲು ಅಟ್ಟುತ್ತಿದ್ದಾರೆ. ಆದರೆ ಇವು ಮೇವಿಗೆ ಆಶ್ರಯಿಸುವ ಕುರುಚಲು ಪೊದೆಗಳೇ ಎಷ್ಟೋ ಸಲ ಅವುಗಳ ಜೀವಕ್ಕೂ ಕುತ್ತು ತರುವ ಸಂಭವವಿದೆ. ಕಾಡು, ಗುಡ್ಡಗಳಲ್ಲಿ ನಾಟಿ ವೈದ್ಯ ಪದ್ಧತಿಗೆ ಅವಶ್ಯಕವಾದ ಉಪಯುಕ್ತ ಸಸ್ಯಗಳಿರುವ ರೀತಿಯಲ್ಲಿಯೇ ಗುಲಗಂಜಿಯಂಥ ವಿಷಕಾರಿ ಸಸ್ಯಗಳೂ ಬೆಳೆದಿದ್ದು ಪ್ರಾಣಕ್ಕೆ ಕಂಟಕವಾಗುತ್ತಿವೆ.

ಬಯಲು ಸೀಮೆಯ ಕುರುಚಲು ಪೊದೆಗಳಲ್ಲಿ ಕಂಡು ಬರುವ ಗಾಢ ಕೆಂಪು ಮತ್ತು ಸ್ವಲ್ಪ ಕಪ್ಪು ಬಣ್ಣದ ಗುಲಗಂಜಿ ವಿಷ ಬೀಜ. ಚಿನ್ನವನ್ನು ತೂಕ ಮಾಡಲು ಮುಂಚೆ ಹೆಚ್ಚು ಬಳಕೆಯಲ್ಲಿತ್ತು. ವೈದ್ಯಕೀಯ ಶಿಕ್ಷಣದ `ವಿಷಶಾಸ್ತ್ರ~ (ಟೆಕ್ಸಿಕಾಲಜಿ) ವಿಷಯದ ವಿಷ ಸಸ್ಯಗಳ ಅಧ್ಯಯನದಲ್ಲಿ ಗುಲಗಂಜಿ ವಿಷದ ಬಗ್ಗೆ ಉಲ್ಲೇಖವಿದೆ. ಸಸ್ಯಜನ್ಯಗಳ ಪೈಕಿ ಇದರ ವಿಷ ತೀವ್ರ. ಏಕೆಂದರೆ ಇದರಲ್ಲಿ `ಅಬ್ರಿನ್~ ಎನ್ನುವ ಅಪಾಯಕಾರಿ ಅಂಶವಿದೆ. ಇದು ನಾಗರಹಾವಿನ ವಿಷಕ್ಕಿಂತಲೂ ಹೆಚ್ಚು ಘೋರ.

ವಿಶೇಷ ಎಂದರೆ ಗುಲಗಂಜಿ ಬೀಜದಲ್ಲಿ ಮಾತ್ರ ವಿಷವಿದ್ದು, ಕಾಂಡ, ಎಲೆಗಳಲ್ಲಿ ವಿಷ ಇರುವುದಿಲ್ಲ. ಗುಲಗಂಜಿಯನ್ನು ಕಡಿಯದೆ ಹಾಗೇ ನುಂಗಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಮಲ ವಿಸರ್ಜನೆಯ ಮೂಲಕ ಅದು ದೇಹದಿಂದ ಹೊರ ಹೋಗುತ್ತದೆ. ಆದರೆ ಜಗಿದು ಇಲ್ಲವೇ ಪುಡಿ ಮಾಡಿ ತಿಂದರೆ ಅಪಾಯ ತಪ್ಪಿದ್ದಲ್ಲ.

ನೋಡಲು...

ನೋಡಲು ಕೃತಕ ವಸ್ತುವಿನಂತೆ ಕಂಡರೂ ಪ್ರಕೃತಿದತ್ತವಾಗಿ ಬಂದ ಸಂಪತ್ತು ಅದು. ಗಾಢ ಕೆಂಪು ಮತ್ತು ಕಪ್ಪು ಬಣ್ಣದ ಅದರ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ ಎನ್ನಬಹುದು. ಗುಲಗಂಜಿಯ ಗಿಡ ಹಳದಿ ಬಣ್ಣದ್ದಾಗಿದ್ದು ಕೆಂಪು ಹೂವುಗಳನ್ನು ಬಿಡುತ್ತದೆ. ಕಡು ಕೆಂಪಗಿನ ತುದಿಯಲ್ಲಿ ಕಪ್ಪು ಟೋಪಿಯಿರುವ ಸಣ್ಣ ಬೀಜ. ಇದು ನೋಡಲು ಮೊಟ್ಟೆಯ ಆಕಾರದಲ್ಲಿರುತ್ತದೆ. ಗುಲಗಂಜಿಯನ್ನು ಬಹಳಷ್ಟು ಮಂದಿ ನೋಡಿಯೇ ಇಲ್ಲ. ಆದರೆ ಅಕ್ಕಸಾಲಿಗರಿಗೆ ಮಾತ್ರ ಇದು ಚಿರಪರಿಚಿತ.

ಜಾನುವಾರುಗಳು ಗುಲಗಂಜಿ ಬೀಜಗಳನ್ನು ತಿಂದ ತಕ್ಷಣ ಸಾಯುವುದಿಲ್ಲ. ಮೇವನ್ನು ತಿಂದು ಮೆಲುಕು ಹಾಕುವ ವೇಳೆ ವಿಷ ನಿಧಾನವಾಗಿ ದೇಹವನ್ನು ಪಸರಿಸುತ್ತದೆ. ಅವುಗಳ ಪಾಲಕರಿಗೂ ಇದು ತಕ್ಷಣ ಅರಿವಿಗೆ ಬರುವುದಿಲ್ಲ. ವಿಷವು ಹಂತ ಹಂತವಾಗಿ ನರಗಳಿಗೆ ಹರಡುತ್ತದೆ. ಅದರಿಂದ ಬಾಯಲ್ಲಿ ಜೊಲ್ಲು ಹೆಚ್ಚುತ್ತದೆ. ಮೂಗಿನಲ್ಲಿ ಅತಿಯಾದ ಸಿಂಬಳ, ರಕ್ತ ಮಿಶ್ರಿತ ಭೇದಿ, ಬಾಯಿಯಲ್ಲಿ ಹುಣ್ಣು, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು, ಬಾಯಾರಿಕೆ, ನಿತ್ರಾಣ ಮತ್ತಿತರ ಲಕ್ಷಣಗಳು ಕಂಡು ಬರುತ್ತವೆ. ಈ ಲಕ್ಷಣಗಳು ಉಲ್ಬಣಿಸಿದರೆ ರಾಸುಗಳಿಗೆ ನಡೆದಾಡಲೂ ಕಷ್ಟವಾಗಿ ಪಾರ್ಶ್ವವಾಯುವಿಗೆ ತುತ್ತಾಗುತ್ತವೆ. ಅಂತಿಮವಾಗಿ ಸಾವಿನ ದವಡೆಯತ್ತ ಸಾಗುತ್ತವೆ.ರಾಸುಗಳ ರಕ್ಷಣೆ ಹೇಗೆ?

ರಾಸುಗಳ ದೇಹಕ್ಕೆ ಗುಲಗಂಜಿ ವಿಷ ಸೇರಿರುವುದನ್ನು ಪತ್ತೆ ಮಾಡುವುದು ಕಷ್ಟ. ಇದಕ್ಕೆ ನಿಖರ ಚಿಕಿತ್ಸೆ ಇಲ್ಲದ ಕಾರಣ ರೋಗದ ಲಕ್ಷಣಗಳ ಆಧಾರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.ಗುಲಗಂಜಿ ಸೇವಿಸಿದ ತಕ್ಷಣ ವಾಂತಿ- ಭೇದಿ ಮಾಡಿಸಿದರೆ ರೋಗದ ತೀವ್ರತೆ ಕಡಿಮೆ ಮಾಡಬಹುದು. ಅದಕ್ಕಾಗಿ ಗ್ಲೂಕೋಸ್ ಹೆಚ್ಚು ಪ್ರಮಾಣದಲ್ಲಿ ಕೊಡಬೇಕು. ಪ್ರಮುಖವಾಗಿ ಕುರುಚಲು ಮುಳ್ಳಿನ ಪೊದೆಗಳ ಭಾಗದಲ್ಲಿ ರಾಸುಗಳು ಮೇಯುವಾಗ ಪಾಲಕರು ಗುಲಗಂಜಿ ಗಿಡಗಳು ಇವೆಯೇ ಎಂಬುದನ್ನು ಪರೀಕ್ಷಿಸಿದರೆ ಅಪಾಯವನ್ನು ತಪ್ಪಿಸಬಹುದು.ಗುಲಗಂಜಿಯ ತವರು ಮಲೇಷ್ಯಾ ಮತ್ತು ಇಂಡೋನೇಷ್ಯಾ. ಚೀನಾದಲ್ಲಿ ಪ್ರೀತಿಯ ಸಂಕೇತ ಗುಲಗಂಜಿ.  ಸಸ್ಯ ಶಾಸ್ತ್ರೀಯ ಹೆಸರು `ಏಬ್ರಸ್ ಪ್ರಿಕಟೋರಿಯಸ್~. ಇಂಗ್ಲೀಷ್‌ನಲ್ಲಿ `ಇಂಡಿಯನ್ ಲಿಕೋರಿಸ್~ ಅಥವಾ `ಕ್ರಾಬ್ಸ್ ಐ, ಕನ್ನಡದಲ್ಲಿ `ಗುಲಗಂಜಿ~, ಮಲೆಯಾಳಂನಲ್ಲಿ ಕುನ್ನಿ-ಕುರು, ಸಂಸ್ಕೃತದಲ್ಲಿ `ಗುಂಜ~, ತಮಿಳಿನಲ್ಲಿ `ಗುಂಡು ಮಣಿ~ ಮತ್ತು `ಕುಂತಮಣಿ~, ತೆಲುಗಿನಲ್ಲಿ `ಗುರಿವಿಂದ~,  ಪಂಜಾಬಿಯಲ್ಲಿ `ಮುಲಟಿ~, ಬೆಂಗಾಲಿಯಲ್ಲಿ ಕುಂಚ್ ಅಥವಾ ಕೂಂಚ್, ಕಾಶ್ಮೀರಿ ಭಾಷೆಯಲ್ಲಿ `ಶಂಗಿರ್~ ಹೀಗೆ ನಾನಾ  ಹೆಸರುಗಳಿಂದ ಕರೆಯುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.