ಸೋಮವಾರ, ಮಾರ್ಚ್ 1, 2021
23 °C

ಗುಲ್ಬರ್ಗದಿಂದ ಬೆಳಮಗಿ ಕಣಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗದಿಂದ ಬೆಳಮಗಿ ಕಣಕ್ಕೆ

ಬೆಂಗಳೂರು: ಗುಲ್ಬರ್ಗ ಮೀಸಲು ಕ್ಷೇತ್ರದಿಂದ ಮಾಜಿ ಸಚಿವ ರೇವೂ­ನಾಯಕ ಬೆಳಮಗಿ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ತೀರ್ಮಾನಿಸಿದೆ. ಗುರುವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಮುಖಂಡರಾದ ಕೆ.ಎಸ್‌.ಈಶ್ವರಪ್ಪ ಜತೆಗೂ ಬೆಳಮಗಿ ಮಾತುಕತೆ ನಡೆಸಿ, ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.ಉತ್ತರ ಕನ್ನಡ ಕ್ಷೇತ್ರದಿಂದ ಹಾಲಿ ಸದಸ್ಯ ಅನಂತಕುಮಾರ ಹೆಗಡೆ, ಚಿತ್ರದುರ್ಗ ಕ್ಷೇತ್ರದಿಂದ ಹಾಲಿ ಸದಸ್ಯ ಜನಾರ್ದನ ಸ್ವಾಮಿ ಅವರಿಗೇ ಟಿಕೆಟ್‌ ನೀಡಲು ತೀರ್ಮಾನಿಸಲಾಗಿದೆ.ಉಡುಪಿ– ಚಿಕ್ಕಮಗಳೂರು ಕ್ಷೇತ್ರ­ದಿಂದ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್‌ ನೀಡಲು ಶಾಸಕ ಸಿ.ಟಿ.ರವಿ ವಿರೋಧ ವ್ಯಕ್ತಪಡಿಸಿದರು ಎನ್ನುವ ಕಾರಣಕ್ಕೆ ಅದು ನೆನೆಗುದಿಗೆ ಬಿದ್ದಿದೆ. ಇದೇ ವಿಷಯವನ್ನು ಮುಂದಿಟ್ಟು­ಕೊಂಡು ಬಿಜೆಪಿಯಲ್ಲಿನ ಕೆಲವು ಆರ್‌ಎಸ್‌ಎಸ್‌ ನಾಯಕರು ಪತ್ರಕರ್ತ ಪ್ರತಾಪ್‌ ಸಿಂಹ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ.ಇದಕ್ಕೆ ಚಿಕ್ಕಮಗ­ಳೂರು ಜಿಲ್ಲಾಧ್ಯಕ್ಷ ಡಿ.ಎನ್‌.ಜೀವ­ರಾಜ್‌ ಮತ್ತು ಸಿ.ಟಿ.ರವಿ ವಿರೋಧ ವ್ಯಕ್ತಪಡಿಸಿದರು ಎನ್ನಲಾಗಿದೆ. ‘ಚುನಾ­ವಣೆ ಘೋಷಣೆಯಾದ ನಂತರ ಹೊಸ­ಬರನ್ನು ಕಣಕ್ಕೆ ಇಳಿಸುವುದು ಬೇಡ. ಅದರ ಬದಲು ಶೋಭಾ ಅವರಿಗೇ ಟಿಕೆಟ್‌ ಕೊಡಬೇಕು’ ಎಂದು ಜೀವ­ರಾಜ್‌ ಸಲಹೆ ಮಾಡಿದರು ಎಂದು ಗೊತ್ತಾಗಿದೆ.ಸಿ.ಟಿ.ರವಿ ಕೂಡ ‘ಪ್ರತಾಪ್‌ ಅವರಿಗಿಂತ ಶೋಭಾ ಅವರೇ ಉತ್ತಮ’ ಎಂದು ತಮ್ಮ ಅಭಿಪ್ರಾಯ ತಿಳಿಸಿದರು ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಗುರು­ವಾರ ಕೂಡ ಜೀವರಾಜ್‌ ಜತೆ ಮಾತುಕತೆ ನಡೆಸಿದ ಮುಖಂಡರು, ಪ್ರತಾಪ್‌ ಸಿಂಹ ಅವರ ಹೆಸರನ್ನೇ ಪ್ರಸ್ತಾಪಿಸಿದರು ಎಂದು ಗೊತ್ತಾಗಿದೆ.‘ಎಲ್ಲರೂ ಸೇರಿ ಕೆಲಸ ಮಾಡಿದರೆ ಪ್ರತಾಪ್‌ ಗೆಲ್ಲಬಹುದು’ ಎನ್ನುವ ಅಭಿ­ಪ್ರಾಯವನ್ನು ಮುಖಂಡರು ವ್ಯಕ್ತ­ಪಡಿಸಿ­ದರು ಎನ್ನಲಾಗಿದೆ.

ಮೈಸೂರು ಕ್ಷೇತ್ರದಿಂದ ಸ್ಪರ್ಧಿಸು­ವುದಕ್ಕೂ ಶೋಭಾ ಹಿಂದೇಟು ಹಾಕಿದ್ದು, ಹೊಸ ಅಭ್ಯರ್ಥಿಗಾಗಿ ಹುಡುಕಾಟ ನಡೆದಿದೆ.ಕಾಂಗ್ರೆಸ್‌ ಅಭ್ಯರ್ಥಿಯಾದ ಎಚ್‌.­ವಿಶ್ವನಾಥ್‌ ಕುರುಬ ಸಮುದಾಯಕ್ಕೆ ಸೇರಿದವರು. ಹೀಗಾಗಿ ಬಿಜೆಪಿಯಿಂದ ಅದೇ ಸಮುದಾಯಕ್ಕೆ ಸೇರಿದ ಸಿ.ಎಚ್‌.ವಿಜಯಶಂಕರ್‌ ಅವರನ್ನು ಕಣಕ್ಕೆ ಇಳಿಸುವುದು ಸರಿಯಲ್ಲ ಎನ್ನುವ ಭಾವನೆ ಪಕ್ಷದ ಮುಖಂಡರಲ್ಲಿದೆ. ಹೀಗಾಗಿ ಶಾಸಕ ಅಪ್ಪಚ್ಚು ರಂಜನ್‌ ಸೇರಿದಂತೆ ಇತರ ಕೆಲವರ ಹೆಸರುಗಳು ಕೇಳಿಬರುತ್ತಿವೆ ಎಂದು ಮೂಲಗಳು ತಿಳಿಸಿವೆ.ಬೀದರ್‌, ಬಳ್ಳಾರಿ, ತುಮಕೂರು, ಕೋಲಾರ, ಮಂಡ್ಯ ಮತ್ತು ಹಾಸನ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲು ಇನ್ನೂ ಸಾಧ್ಯ­ವಾಗಿಲ್ಲ. ಎರಡನೇ ಹಂತದಲ್ಲಿ ಈ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.