ಭಾನುವಾರ, ಮಾರ್ಚ್ 7, 2021
18 °C

ಗುಲ್ಬರ್ಗದ ಕನ್ನಡ ಸ್ವಾಭಿಮಾನ ಸೌಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗದ ಕನ್ನಡ ಸ್ವಾಭಿಮಾನ ಸೌಧ

ಮರಾಠಿ, ತೆಲುಗು, ಹಿಂದಿ, ಉರ್ದು ಭಾಷೆಗಳ ದಟ್ಟಪ್ರಭಾವ ಇರುವ ಗುಲ್ಬರ್ಗದ ನೆಲದಲ್ಲಿ ಕನ್ನಡದ ಹುಲುಸಾಗಿ ಬೆಳೆದದ್ದು ಸಾಹಸಗಾಥೆ.ಕನ್ನಡದ ಮೊದಲ ಕೃತಿಕಾರ ಶ್ರೀವಿಜಯ, ಆದ್ಯ ವಚನಕಾರ ಜೇಡರ ದಾಸಿಮಯ್ಯ, ಗಣಿತಶಾಸ್ತ್ರದ ಮಹಾವೀರಾಚಾರ್ಯ, ಕಾಲಜ್ಞಾನದ ಕೊಡೇಕಲ್ಲ ಬಸವಣ್ಣ, ತಿಂಥಿಣಿ ಮೌನೇಶ್ವರ, ಡಂಗುರ ಪದಗಳ ನಾಗಾವಿ ಈರಪ್ಪಯ್ಯ, ತತ್ವ ಪದಕಾರ ಚನ್ನೂರ ಜಲಾಲ ಸಾಹೇಬ, ಕಡಕೋಳ ಮಡಿವಾಳೇಶ್ವರ ಇತ್ಯಾದಿ ಪ್ರಾತಃಸ್ಮರಣೀಯರ ಜತೆಗೆ ಹೊಸಗನ್ನಡ ಸಾಹಿತ್ಯ ಕ್ಷೇತ್ರಕ್ಕೂ ದಿಗ್ಗಜರಂತಹ ಲೇಖಕರನ್ನು ನೀಡಿದ ನೆಲದಲ್ಲಿ ಸದ್ದು ಗದ್ದಲವಿಲ್ಲದೇ ಕನ್ನಡ ಭವನ ನಿರ್ಮಾಣವಾಗುತ್ತಿದೆ!ಕನ್ನಡ `ಕೈಂಕರ್ಯ~ಕ್ಕೆ ಒಂದು ಶಾಶ್ವತ ನೆಲೆಬೇಕು ಎಂಬ ಕನಸು ಚಿಗುರೊಡೆದು ಎರಡು ದಶಕಗಳು ಸಂದಿವೆ. ಆದರೆ ರಾಜ್ಯದ ಮೊದಲ ಕನ್ನಡ ಭವನ ಇನ್ನೂ  `ತ್ರಿಶಂಕು~ವಾಗಿಯೇ ಉಳಿದಿದೆ. ಕನ್ನಡ ಹೃದಯಗಳನ್ನು ಕಾಡಿ, ಬೇಡಿ ನಿರ್ಮಿಸಿದ `ಭವ್ಯ ಭವನ~ ಪೂರ್ಣಗೊಳ್ಳಲು ಇನ್ನೂ ಎಪ್ಪತ್ತು ಲಕ್ಷ ರೂಪಾಯಿಗಳು ಬೇಕು. ಈ ಕಾರಣಕ್ಕಾಗಿ  ಮುಖ್ಯಮಂತ್ರಿಗೆ ಮೂರು ಬಾರಿ ಮನವಿ ಸಲ್ಲಿಸಲಾಗಿದೆ.ಗುಲ್ಬರ್ಗದಲ್ಲಿ 1987ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭವನದ ಕನಸು ಮೊಳಕೆಯೊಡೆದಿತ್ತು. ಅಂದಿನ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಸಮೀಪದಲ್ಲಿ ಎಕರೆ ಭೂಮಿ ಖರೀದಿಸಿದ್ದೂ ಆಯಿತು.

 

ರಾಜ್ಯದಲ್ಲೇ ಸ್ವತಂತ್ರ ನಿವೇಶನ ಹೊಂದಿದ ನಾಲ್ಕನೇ ಜಿಲ್ಲಾ ಘಟಕ ಎಂಬ ಹೆಗ್ಗಳಿಕೆಯೂ ಬಂತು.  ಏಳು ವರ್ಷಗಳಲ್ಲಿ ಪುಟ್ಟ ಸಭಾಭವನ ತಲೆ ಎತ್ತಿತು. ಹೈದರಾಬಾದ್ ಕರ್ನಾಟಕದಲ್ಲಿ ಕಟ್ಟಡ ಹೊಂದಿದ ಏಕೈಕ ಜಿಲ್ಲಾ ಘಟಕ ಎಂಬ ಕೀರ್ತಿಗೂ ಪಾತ್ರವಾಯಿತು.ಈ ಯಶಸ್ಸು ದೊಡ್ಡ ಕನಸಿನ ಬೀಜವನ್ನೂ ಬಿತ್ತಿತು. ಜಿಲ್ಲಾ ಕಸಾಪ ಅಧ್ಯಕ್ಷ ಶಿವಶರಣಪ್ಪ ಜವಳಿ ನೇತೃತ್ವದಲ್ಲಿ 1997ರಲ್ಲಿ ಕನಸಿನ ಸೌಧದ ಕಾಮಗಾರಿ ಶುರುವಾಯಿತು. ಆದರೆ ಹಣದ ಮುಗ್ಗಟ್ಟು ಕಸಾಪಕ್ಕೆ ನುಂಗಲಾರದ ತುತ್ತಾಯಿತು.ಆದರೆ 2004ರಲ್ಲಿ ವೀರಭದ್ರ ಸಿಂಪಿ ನೇಲೋಗಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಬಳಿಕ ಸಮಗ್ರ ಚಿತ್ರಣವೇ ಬದಲಾಯಿತು. ಮೂರು ಕೋಟಿ ಅಂದಾಜು ವೆಚ್ಚದ ಕಟ್ಟಡವನ್ನು ಪೂರ್ಣಗೊಳಿಸುವ ಛಲದಿಂದ ಮುನ್ನುಗ್ಗಿದರು.ಕಳ್ಳಕಾಕರಿಂದ, ಮಲ- ಮೂತ್ರ ವಿಸರ್ಜಿಸುವವರಿಂದ ಕಟ್ಟಡ ರಕ್ಷಿಸುವ ಸಲುವಾಗಿ ಪ್ರವೇಶದ್ವಾರ, ಆವರಣದ ಗೋಡೆ ನಿರ್ಮಿಸಲಾಯಿತು. ಆದರೂ ಹೊಸ ಕಟ್ಟಡದ ಸಲಕರಣೆಗಳ ಕಳವು ಮಾಡಲು ಏಳೆಂಟು ಪ್ರಯತ್ನಗಳು ನಡೆದಿವೆ. ಹೀಗಾಗಿ ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿದರೆ ಈ ಕಟ್ಟಡವನ್ನು ರಕ್ಷಿಸಿಕೊಳ್ಳಬಹುದು ಎಂಬುದು ಸಿಂಪಿ ಅವರ ಅಭಿಪ್ರಾಯ.ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಈ ಭಾಗದ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ತಮ್ಮ ಪಾಲಿನ ಅನುದಾನ ನೀಡಿದ್ದಾರೆ. ವಿವಿಧ ಸಂಘ ಸಂಸ್ಥೆಗಳು ನೆರವಿಗೆ ಬಂದಿವೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಸಹಾಯಹಸ್ತ ಚಾಚಿದೆ.ಬೃಹತ್ ಭವನ

ತಳ, ನೆಲ ಹಾಗೂ ಮೊದಲ ಅಂತಸ್ತು ಸೇರಿದಂತೆ ಒಟ್ಟು 32,517.60 ಚದರ ಅಡಿಯ ಬೃಹತ್ ಭವನ ರಾಜ್ಯದಲ್ಲೇ ವಿಶಿಷ್ಟವಾದದ್ದು. ನೆಲ ಅಂತಸ್ತಿನಲ್ಲಿ ಸುಮಾರು 10 ಸಾವಿರ ಚದರ ಅಡಿಯ ಸಭಾಂಗಣ, 1200 ಮಂದಿಗೆ ಆಸನ ಸೌಲಭ್ಯವಿದೆ.ಎರಡು ಸಾವಿರ ಚದರ ಅಡಿಯ ಬೃಹತ್ ವೇದಿಕೆ, ಅಕ್ಕಪಕ್ಕದಲ್ಲಿ ಗ್ರೀನ್‌ರೂಂ, 200 ಮಂದಿ ಕೂರಬಹುದಾದ ಬಾಲ್ಕನಿಯನ್ನೂ ಒಳಗೊಂಡಿದೆ.ಕೆಳ ಅಂತಸ್ತಿನಲ್ಲಿ ತರಬೇತಿ, ಕಾರ್ಯಾಗಾರ, ರಿಹರ್ಸಲ್‌ಗಳಿಗಾಗಿ ಆರು ಸಾವಿರ ಚದರ ಅಡಿ ವಿಸ್ತೀರ್ಣದ ಕೊಠಡಿ ಇದೆ. ಉಳಿದಂತೆ ಉಗ್ರಾಣ, ಕಚೇರಿ, ಪ್ರವೇಶ ಚಾವಡಿ, ಪ್ರತ್ಯೇಕ ಶೌಚಾಲಯಗಳು, ವಿಶೇಷ ಅತಿಥಿಗಳಿಗೆ ಮೂರು ಕೊಠಡಿಗಳು (ವಸತಿ ಗೃಹ), ಕಲಾಕೃತಿ ಪ್ರದರ್ಶನಕ್ಕೆ ಗ್ಯಾಲರಿ ಸೇರಿದಂತೆ ಎಲ್ಲ ಅಗತ್ಯ ಸೌಕರ್ಯಗಳಿವೆ. ಅಂತೂ ಇಂತು ಎರಡು ಕೋಟಿ ವೆಚ್ಚದ ಕನ್ನಡ ಭವನ ಒಂದು ಹಂತಕ್ಕೆ ಬಂದಿದೆ.ಕನ್ನಡ ಕೈಂಕರ್ಯ:

 ಕನ್ನಡ ಕೈಂಕರ್ಯದಲ್ಲಿ ಜಿಲ್ಲೆ ಹಿಂದೆಬಿದ್ದಿಲ್ಲ. ಮೂರು ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಿಗೆ ವೇದಿಕೆ ಕಲ್ಪಿಸಿದೆ. ಬಿ.ಎಂ.ಶ್ರೀ ಅವರ ಅಧ್ಯಕ್ಷತೆಯ 14ನೇ ಕನ್ನಡ ಸಾಹಿತ್ಯ ಸಮ್ಮೇಳನ (1928), ರೆವರೆಂಡ್ ಉತ್ತಂಗಿ ಚನ್ನಪ್ಪ ಅವರ ಅಧ್ಯಕ್ಷತೆಯಲ್ಲಿ 32ನೇ ಸಮ್ಮೇಳನ (1949) ಮತ್ತು ಸಿದ್ದಯ್ಯ ಪುರಾಣಿಕರ ಸಾರಥ್ಯದಲ್ಲಿ 58ನೇ ಸಮ್ಮೇಳನ (1987) ಇಲ್ಲಿ ನಡೆದಿದೆ. 12 ಜಿಲ್ಲಾ ಸಾಹಿತ್ಯ ಸಮ್ಮೇಳನಗಳು ನಡೆದಿವೆ. ಹತ್ತು ಕೃತಿಗಳನ್ನು ಜಿಲ್ಲಾ ಕಸಾಪ ಪ್ರಕಟಿಸಿದೆ. ಜಿಲ್ಲಾ ಮಟ್ಟದ ವೈದ್ಯ, ಮಕ್ಕಳ, ಸಂಗೀತ ಸಾಹಿತ್ಯ ಸಮ್ಮೇಳನಗಳನ್ನೂ ನಿಯತವಾಗಿ ಆಯೋಜಿಸುತ್ತಾ ಬಂದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.