ಭಾನುವಾರ, ಮೇ 16, 2021
28 °C

ಗುಲ್ಬರ್ಗ ಕ್ರಿಕೆಟ್‌ನ `ಇರಾನಿ'

ಹರ್ಷವರ್ಧನ ಪಿ.ಆರ್. Updated:

ಅಕ್ಷರ ಗಾತ್ರ : | |

ಗುಲ್ಬರ್ಗ ಕ್ರಿಕೆಟ್‌ನ `ಇರಾನಿ'

ಸ್ಪಾಟ್ ಫಿಕ್ಸಿಂಗ್, ಐಪಿಎಲ್, ಹಣ ಹೂಡಿಕೆ, ತರಬೇತಿ ಶಿಬಿರಗಳು, ಕ್ಲಬ್‌ಗಳು, ಅಕಾಡೆಮಿಗಳು ಹೀಗೆ ಕ್ರಿಕೆಟ್ ಈಗ ಉದ್ಯಮವಾಗಿ ಬೆಳೆದಿದೆ. ಆದರೆ ಈ ಕ್ರೀಡೆ ಹಳ್ಳಿ ಹಳ್ಳಿಗಳಲ್ಲಿ ಜನಪ್ರಿಯಗೊಳ್ಳಲು ಹಲವರ ಕೊಡುಗೆಯಿದೆ. ಅಂತಹ ಪ್ರಮುಖ ಪೋಷಕರ ಪೈಕಿ ಗುಲ್ಬರ್ಗದ ಇರಾನಿ ಕುಟುಂಬವೂ ಒಂದು. ಈ ಭಾಗದ ಬರ, ನೆರೆ, ಬಡತನಗಳ ಬೇಗೆಯ ನಡುವೆಯೇ ಕ್ರಿಕೆಟ್ ಬೆಳೆಸಿದ ಪ್ರಮಖರು ಹೋಮಿ ಇರಾನಿ. ಮಹಾರಾಷ್ಟ್ರದ ಪುಣೆ ಮೂಲದ ಹೋಮಿ ಇರಾನಿ 1950ರ ದಶಕದಲ್ಲಿ ಅಮೆರಿಕಾದಲ್ಲಿ ಎಂ.ಇ. ಪದವಿ ಪಡೆದ ಹೋಮಿ ಇರಾನಿ ಭಾರತಕ್ಕೆ ಮರಳಿದರು. ಅವರಿಗೆ ಗುಲ್ಬರ್ಗ ಜಿಲ್ಲೆಯ ಜೇವರ್ಗಿಯಲ್ಲಿ ಭೀಮಾ ನದಿಗೆ ಸೇತುವೆ ನಿರ್ಮಿಸುವ ಕಾರ್ಯವೂ ದೊರೆಯಿತು. ಹಾಗೆ ಗುಲ್ಬರ್ಗಕ್ಕೆ ಬಂದವರು, ನೆಲೆ ನಿಂತು ಕ್ರಿಕೆಟ್ ಬೆಳೆಸಿದ ಕತೆಯೇ ರೋಚಕ.ಹೈದರಾಬಾದ್ ನಿಜಾಮ ಸಂಸ್ಥಾನಕ್ಕೆ ಒಳಪಟ್ಟಿದ್ದ ಗುಲ್ಬರ್ಗದಲ್ಲಿ ಫುಟ್‌ಬಾಲ್ ಹಾಗೂ ಕುಸ್ತಿ ಜನಪ್ರಿಯ ಕ್ರೀಡೆಯಾಗಿತ್ತು. ಉಳಿದಂತೆ ಅಧಿಕಾರಿಗಳು ಟೆನಿಸ್ ಆಡುತ್ತಿದ್ದರು. ಕ್ರಿಕೆಟ್ ಪ್ರಭಾವ ಕಡಿಮೆ ಇತ್ತು. ಕೆಲವು ಯುವಕರು ಆಸಕ್ತಿ ಹೊಂದಿದ್ದರು. ಅವರಿಗೆ ಆರ್ಥಿಕ ಸ್ಫೂರ್ತಿಯಾಗಿ ಹೋಮಿ ಇರಾನಿ ನಿಂತರು. `ವ್ಯಕ್ತಿತ್ವ ವೃದ್ಧಿಗೆ ಶಿಕ್ಷಣದಷ್ಟೇ ಕ್ರೀಡೆಯೂ ಮುಖ್ಯ ಎಂದು ಹೋಮಿ ನಂಬಿದ್ದರು. ಅದಕ್ಕೆ ನಿರಂತರ ಕ್ರೀಡಾ ಚಟುವಟಿಕೆ ನಡೆಯುತ್ತಿರಬೇಕು ಎನ್ನುತ್ತಿದ್ದರು. ಹಲವು ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಿದರು. ರಣಜಿ ಪಂದ್ಯದ ಸಂದರ್ಭ ಅವರ ಜೊತೆ ಕೆಲಸ ಮಾಡಿದ ನೆನಪು ಇನ್ನೂ ಹಸಿರಾಗಿದೆ. ಹೋಮಿ ಇರಾನಿ ಬಳಿಕ ಮಗ ನವಿಲೆ ಇರಾನಿ ಈ ಕಾರ್ಯ   ಮುಂದುವರಿಸಿ ದರು ' ಕೆಸ್‌ಸಿಎ ರಾಯಚೂರು ವಲಯದ ಗುಲ್ಬರ್ಗ ಜಿಲ್ಲಾ ಸಂಚಾಲಕ ಮಾಧವ ಜೋಶಿ ಹೇಳುತ್ತಾರೆ.ಆರಂಭದಲ್ಲಿ ಸ್ಥಳೀಯ ಯುವಕರ ಕ್ರಿಕೆಟ್ ಆಟಕ್ಕೆ ಪ್ರೋತ್ಸಾಹ ನೀಡುತ್ತಿದ್ದ ಹೋಮಿ, 1965ರಲ್ಲಿ  ಮುಲ್ಕ್ ಶೇರ್ ಇರಾನಿ ರೋಲಿಂಗ್ ಟ್ರೋಫಿ  ಕ್ರಿಕೆಟ್ ಟೂರ್ನಿ ಆರಂಭಿಸಿದರು.ಅಂತರರಾಷ್ಟ್ರೀಯ ನಿಯಮಾವಳಿ ಮಾದರಿಯಲ್ಲಿ, ಲೆದರ್ ಬಾಲ್‌ನಲ್ಲೇ ನಡೆಯಬೇಕು ಎಂಬುದು ಅವರ ನಿಲುವಾಗಿತ್ತು. ದುಬಾರಿಯಾದರು ಭರಿಸಲು ಮುಂದಾದರು. ಹೈದರಾಬಾದ್, ಪುಣೆ, ರಾಯಚೂರು, ಸೋಲಾಪುರ, ಶಹಾಬಾದ್, ಬಾಂಬೆ ಮತ್ತಿತರ ತಂಡಗಳನ್ನು ಕರೆಯಿಸಿದರು. ಸತತ 34 ವರ್ಷ ಟೂರ್ನಿ ನಡೆಯಿತು. ಈ ಟೂರ್ನಿಯ ವಿವಿಧ ಸಂದರ್ಭಗಳಲ್ಲಿ  ಸುನೀಲ್ ಗಾವಸ್ಕರ್, ನಾರಿಮನ್ ಕಾಂಟ್ರ್ಯಾಕ್ಟರ್, ರೋಜರ್ ಬಿನ್ನಿ, ಪಾಲಿ ಉಮ್ರಿಗಾರ್, ಜಸ್ವಂತ್, ಜಾವಗಲ್ ಶ್ರೀನಾಥ್ ಆಗಮಿಸಿದ್ದರು.ಇರಾನಿ ಅವರು ಗುಲ್ಬರ್ಗದಲ್ಲಿ ರಣಜಿ ಪಂದ್ಯಗಳು ನಡೆಯಲು ಕಾರಣರಾದರು. 1984 ಜನವರಿಯಲ್ಲಿ ಗುಲ್ಬರ್ಗದಲ್ಲಿ ಮೊದಲ ಬಾರಿಗೆ ಕರ್ನಾಟಕ ಮತ್ತು ಕೇರಳದ ಮಧ್ಯೆ ಪಂದ್ಯ ನಡೆಯಿತು. 1987ರ ನವೆಂಬರ್‌ನಲ್ಲಿ  ಗೋವಾ ವಿರುದ್ಧ ಪಂದ್ಯ ನಡೆಯಿತು. ಎರಡೂ ಪಂದ್ಯಗಳನ್ನು ಕರ್ನಾಟಕ ಗೆದ್ದಿತು. ಆ ಪಂದ್ಯಗಳಲ್ಲಿ  ಜಿ.ಆರ್.ವಿಶ್ವನಾಥ್, ಎ.ವಿ.ಜಯಪ್ರಕಾಶ್, ರೋಜರ್ ಬಿನ್ನಿ, ಬ್ರಿಜೇಶ್ ಪಟೇಲ್, ಕೀರ್ಮಾನಿ, ಜಸ್ವಂತ್ ಮತ್ತಿತರ ಪ್ರಮುಖ ಆಟಗಾರರು ಆಡಿದ್ದರು.1992ರ ಜನವರಿಯಲ್ಲಿ  ವಿಶ್ವವಿದ್ಯಾಲಯ ಮಟ್ಟದ ರೋಹಿಂಗ್ಟನ್ ಟ್ರೋಫಿಯ ಪಂದ್ಯಗಳು ನಡೆದವು. ಬಳಿಕ 1983ರ ವಿಶ್ವಕಪ್ ವಿಜೇತ ಭಾರತೀಯ ತಂಡ ಮತ್ತು ಇತರ ಭಾರತೀಯ ತಂಡದ ಮಧ್ಯೆ ರೋಜರ್ ಬಿನ್ನಿ ನೆರವಿನ ಪಂದ್ಯ ಆಯೋಜಿಸಿದರು. ಸಚಿನ್, ಅಜರ್, ಗಾವಸ್ಕರ್ ಸೇರಿದಂತೆ ಬಹುತೇಕ ಭಾರತೀಯ ಆಟಗಾರರು ಬಂದು ಆಡಿದರು. ಈ ಬಳಿಕ ನಡೆದ ಕೆಲವು ಲೀಗ್ ಪಂದ್ಯಗಳಲ್ಲಿ  ರಾಹುಲ್ ದ್ರಾವಿಡ್, ಸನತ್‌ಕುಮಾರ್ ಮತ್ತಿತರರು ಬಂದು ಆಡಿದ್ದರು. ಸಂಚಾರ ಮತ್ತು ವಾಸ್ತವ್ಯ ಸಮಸ್ಯೆಯಿದ್ದ ಗುಲ್ಬರ್ಗದಲ್ಲಿ ಹಲವು ಆಟಗಾರರಿಗೆ ಇರಾನಿ ಮನೆಯಲ್ಲಿಯೇ ವಾಸ್ತವ್ಯ ಇರುತಿತ್ತು ಎಂದು ಸ್ಥಳೀಯ ಕ್ರಿಕೆಟ್ ಪ್ರೇಮಿಗಳು ನೆನಪಿಸುತ್ತಾರೆ.`ಇರಾನಿ ಟ್ರೋಫಿಗಳಲ್ಲಿ ನಾನು ಆಡಿದ್ದೇನೆ. ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ರಣಜಿ ಆಟಗಾರರು ಆಡುತ್ತಿದ್ದರು. ಗ್ರಾಮೀಣ ಮತ್ತು ರಾಜ್ಯ ರಣಜಿ ತಂಡ ನಡುವೆಯೂ ಇಲ್ಲಿ ಪಂದ್ಯ ನಡೆದಿತ್ತು. ರಣಜಿ ಪಂದ್ಯಗಳ ಅಭ್ಯಾಸದ ವೇಳೆ ನನಗೆ ಮತ್ತು ಹಲವು ಸ್ಥಳೀಯ ಆಟಗಾರರಿಗೆ ಅವಕಾಶ ನೀಡಿದ್ದರು. ಪಂದ್ಯ ಆಯೋಜನೆಯಲ್ಲಿ ಹೋಮಿ ಇರಾನಿ ಪಾತ್ರ ಬಹುಮುಖ್ಯವಾಗಿತ್ತು' ಎಂದು ಜಿಮ್ಖಾನ್ ಕ್ರಿಕೆಟ್ ಕ್ಲಬ್‌ನ ಡಾ.ರಾಜು ಕುಳಗೇರಿ ನೆನಪಿಸುತ್ತಾರೆ.

ಗುಲ್ಬರ್ಗ ಕ್ರಿಕೆಟ್‌ನ ಮಹಾಪೋಷಕ ಹೋಮಿ ಇರಾನಿ 1999ರಲ್ಲಿ ಕೊನೆಯುಸಿರೆಳೆದರು. ಆ ಬಳಿಕ ಅವರ ಪುತ್ರ ನವಿಲೆ ಇರಾನಿ ಮತ್ತೆ ಎಂ.ಎಸ್.ಇರಾನಿ ಹಾಗೂ ಹೋಮಿ ಇರಾನಿ ಟ್ರೋಫಿಯನ್ನು ಮುಂದುವರಿಸಿದ್ದರು.`ಈ ಭಾಗದಲ್ಲಿ ಕ್ರಿಕೆಟ್‌ಗೆ ಕೊಡುಗೆ ನೀಡಿದ್ದ ಅವರು, ದಿನನಿತ್ಯ ಟೆನಿಸ್ ಆಡುತ್ತಿದ್ದರು. ಟೆನಿಸ್ ಅವರ ಜೀವವಾಗಿತ್ತು. ಮಾವ 1960ರ ತನಕ ಟೆನಿಸ್ ಟೂರ್ನಿಗಳಲ್ಲಿ ಆಡುತ್ತಿದ್ದರು. 1990ರ ತನಕ ಹವ್ಯಾಸಕ್ಕೆ ಆಡುತ್ತಿದ್ದರು. ಆದರೆ ಕ್ರಿಕೆಟ್ ಬಗ್ಗೆ ಅಪಾರ ತುಡಿತವಿತ್ತು. ಮಾವನ ಬಳಿಕ ನವಿಲೆ ಕ್ರಿಕೆಟ್‌ಗೆ ಪ್ರೋತ್ಸಾಹ ಕೊಡುತ್ತಿದ್ದರು' ಎಂದು ನವಿಲೆ ಇರಾನಿ ಪತ್ನಿ ಡೆನಿಶ್ ಇರಾನಿ ಮೆಲುಕು ಹಾಕುತ್ತಾರೆ.`ಅಜ್ಜನ ಬಳಿಕ ಅಪ್ಪ ಟೂರ್ನಿ ಆಯೋಜಿಸುವುದು, ಪಂದ್ಯಕ್ಕೆ ನೆರವು ನೀಡುವುದು, ಹಿರಿಯ ಆಟಗಾರರನ್ನು ಕರೆಯಿಸುವ ಕೆಲಸ ಮಾಡುತ್ತಿದ್ದರು. ಇದರಿಂದ ನಮ್ಮ ಕುಟುಂಬಕ್ಕೆ ಯಾವುದೇ ಲಾಭವಿರಲಿಲ್ಲ. ರಾಜಕೀಯ ಮಾಡಲು ಯಾವುದೇ ಬಂಧುಗಳೂ ಇಲ್ಲಿಲ್ಲ. ನಮ್ಮ ನಂಬಿಕೆಯ ಗುಡಿಗಳೂ ಇಲ್ಲ. ಪಾರ್ಸಿಗಳ ಶವಸಂಸ್ಕಾರ ಸ್ಥಳವೂ ಇಲ್ಲ. ಆದರೆ ಕ್ರಿಕೆಟ್ ಅಕಾಡೆಮಿ ಸ್ಥಾಪಿಸುವುದು ಅವರ ಕನಸಾಗಿತ್ತು. ಅವರ ನೆನಪಿಗಾಗಿ ಮತ್ತೆ ನಾನು ಟೂರ್ನಿ  ಆಯೋಜಿಸುತ್ತೇನೆ' ಎಂದು ಮೊಮ್ಮಗ ನೌಶಾದ್ ಇರಾನಿ ಹೇಳಿದರು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.