ಶುಕ್ರವಾರ, ಜೂನ್ 18, 2021
28 °C

ಗುಲ್ಬರ್ಗ: 13 ಬಾರಿ ಕಾಂಗ್ರೆಸ್‌ ಗೆಲುವು

ಪ್ರಜಾವಾಣಿ ವಾರ್ತೆ/ ಸುಭಾಸ ಎಸ್.ಮಂಗಳೂರ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: 1952 ರಿಂದ 2009 ರ ವರೆಗೆ ನಡೆದ 15 ಲೋಕಸಭಾ ಚುನಾ­ವಣೆಗಳಲ್ಲಿ ಗುಲ್ಬರ್ಗ ಮತ ಕ್ಷೇತ್ರದಿಂದ 13 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿನ ಪತಾಕೆ ಹಾರಿಸಿದ್ದಾರೆ.1951–52ರಲ್ಲಿ ನಡೆದ ಮೊಟ್ಟ ಮೊದಲ ಚುನಾವಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ರಾಮಾನಂದ ತೀರ್ಥ ಅವರು ಶೇ 52.8 ಮತಗಳನ್ನು ಪಡೆದು ‘ಕೈ’ ಅಭ್ಯರ್ಥಿಯಾಗಿ ಲೋಕ­ಸಭೆ ಪ್ರವೇಶಿಸಿದರು. ಆ ಬಳಿಕ ನಡೆದ 14 ಚುನಾವಣೆಗಳಲ್ಲಿ ತಲಾ ಒಂದು ಅವಧಿಗೆ ಮಾತ್ರ ಬಿಜೆಪಿ ಹಾಗೂ ಜನತಾ ಪಕ್ಷದ ಅಭ್ಯರ್ಥಿಗಳು ವಿಜ­ಯದ ನಗೆ ಬೀರಿದ್ದರು. ಎರಡು ಅವಧಿ ಹೊರತು ಪಡಿಸಿದರೆ 13 ಚುನಾವಣೆ­ಗಳಲ್ಲಿ ಕಾಂಗ್ರೆಸ್ ಪಾಳೆಯವೇ ಮೇಲುಗೈ ಸಾಧಿಸಿದೆ.1957ರಲ್ಲಿ ದ್ವಿಸದಸ್ಯ ಕ್ಷೇತ್ರ: ಮತ­ಕ್ಷೇತ್ರಗಳ ಪುನರ್‌ರಚನೆ ಆದೇಶದ ಪ್ರಕಾರ (ಡಿಲಿಮಿಟೇಷನ್–1956) ಗುಲ್ಬರ್ಗ ಮತ ಕ್ಷೇತ್ರವನ್ನು ದ್ವಿಸದಸ್ಯ ಕ್ಷೇತ್ರವನ್ನಾಗಿ ಘೋಷಿಸಲಾಯಿತು. ಇವುಗಳಲ್ಲಿ ಒಂದು ಸಾಮಾನ್ಯ ಹಾಗೂ ಮತ್ತೊಂದು ಮೀಸಲು ಸ್ಥಾನವಾಗಿತ್ತು. ಮಹದೇವಪ್ಪ ಯಶವಂತರಾವ್ (ಸಾಮಾನ್ಯ–ಶೇ 26.17 ಮತ) ಹಾಗೂ ಶಂಕರದೇವ್ (ಮೀಸಲು–ಶೇ 27.27 ಮತ) ಆಯ್ಕೆಯಾದರು. ಇವರಿಬ್ಬರೂ ಕಾಂಗ್ರೆಸ್ ಅಭ್ಯರ್ಥಿಗಳು.1962ರಲ್ಲಿ ದ್ವಿಸದಸ್ಯ ಲೋಕಸಭಾ ಕ್ಷೇತ್ರ ರದ್ದಾಗಿ ಮತ್ತೆ ಏಕ ಸದಸ್ಯ ಕ್ಷೇತ್ರವಾಗಿ ಚುನಾವಣಾ ಆಯೋಗ ಘೋಷಣೆ ಮಾಡಿತು. ಆಗ ಕಾಂಗ್ರೆಸ್‌­ನಿಂದ ಸ್ಪರ್ಧಿಸಿದ್ದ ಮಹಾದೇವಪ್ಪ ಯಶವಂತಪ್ಪ ಅವರು 92,399 (ಶೇ 52.28) ಮತಗಳನ್ನು ಪಡೆದು ಜಯಶಾಲಿಯಾಗಿದ್ದರು.1974, 1980ರಲ್ಲಿ ಉಪ ಚುನಾವಣೆ: 1971ರಲ್ಲಿ ನಡೆದ 5ನೇ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಜಗಜೀವನ್‌ರಾಂ ಬಣದ (ಎನ್‌ಸಿಜೆ) ಅಭ್ಯರ್ಥಿ ಧರ್ಮರಾವ್ ಶರಣಪ್ಪ ಅವರು ಶೇ 68.10 (1,71,264) ಮತಗಳನ್ನು ಪಡೆದು ವಿಜೇತರಾಗಿದ್ದರು. ಆದರೆ, ಅವರು ನಿಧನ ಹೊಂದಿದ ಕಾರಣ ತೆರವಾದ ಸ್ಥಾನಕ್ಕೆ 1974ರ ಏಪ್ರಿಲ್ 21ರಂದು ಉಪ ಚುನಾವಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಎನ್‌ಸಿಜೆಯಿಂದ ಕಣಕ್ಕೆ ಇಳಿದಿದ್ದ ಸಿದ್ರಾಮರೆಡ್ಡಿ ಅವರು ಶೇ 57.30 ಮತಗಳನ್ನು ಪಡೆದು ಜಯ­ಭೇರಿ ಭಾರಿಸಿದ್ದರು.1980ರಲ್ಲಿ 6ನೇ ಲೋಕಸಭೆ ಅವಧಿ ಮುಕ್ತಾಯಕ್ಕೆ ಎರಡು ವರ್ಷ ಬಾಕಿ ಇದ್ದಾಗಲೇ ಲೋಕಸಭೆಯನ್ನು ವಿಸ­ರ್ಜಿಸಲಾಯಿತು. ಆಗ ಕಾಂಗ್ರೆಸ್‌­ನಿಂದ ಸ್ಪರ್ಧಿಸಿದ್ದ ಎನ್.ಧರ್ಮಸಿಂಗ್ ಅವರು ಶೇ 56.19 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಆದರೆ, ಕೇರಳದಲ್ಲಿ ಸಿ.ಎಂ. ಸ್ಟೀಫನ್ ಪರಾಭವ­ಗೊಂಡಿದ್ದರಿಂದ ಅಂದಿನ ಪ್ರಧಾನಿ ಇಂದಿರಾಗಾಂಧಿ ಆಣತಿಯಂತೆ ಪ್ರಮಾ­ಣ­ವಚನ ಸ್ವೀಕಾರಕ್ಕೂ ಮುನ್ನವೇ ಸ್ಥಾನ ತೊರೆದ ಧರ್ಮಸಿಂಗ್ ಅವರು ಸ್ಟೀಫನ್ ಅವರಿಗೆ ಸಂಸತ್ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿದ್ದರು. ಈ ಸಂದ­ರ್ಭ­ದಲ್ಲೂ ಉಪ ಚುನಾವಣೆ ನಡೆಸಲಾಗಿತ್ತು.ಕಾಂಗ್ರೆಸ್, ಬಿಜೆಪಿ ವಶ: 1996ರಲ್ಲಿ ಜನತಾ ಪಕ್ಷದಿಂದ ಕಣಕ್ಕೆ ಇಳಿದಿದ್ದ ಖಮರುಲ್ ಇಸ್ಲಾಂ ಅವರು 2,03,­521 ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಬಸವರಾಜ ಪಾಟೀಲ್ ಸೇಡಂ ಅವರನ್ನು (1,87,­976) ಪರಾಭವಗೊಳಿ­ಸಿದ್ದರು. ಆದರೆ, 1998ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಬಸವ­ರಾಜ ಪಾಟೀಲ್ ಸೇಡಂ ಅವರು 3,28,982 ಮತಗ­ಳನ್ನು ಪಡೆಯುವ ಮೂಲಕ ಜನತಾ ಪಕ್ಷದ ಅಭ್ಯರ್ಥಿ ಖಮರುಲ್ ಇಸ್ಲಾಂ ಅವರನ್ನು (1,97,184) ಪರಾಭವ­ಗೊಳಿಸು­ವಲ್ಲಿ ಯಶಸ್ವಿಯಾಗಿದ್ದರು.ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.