ಭಾನುವಾರ, ಜನವರಿ 19, 2020
27 °C

ಗೂಗಲ್‌ನಲ್ಲಿ ಈ ವರ್ಷ ಜನ ಹುಡುಕಿದ್ದು ತಡಕಿದ್ದು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2013 ವರ್ಷ ಕೊನೆಗೊಳ್ಳುವ ಸಂದರ್ಭ ಹತ್ತಿರವಾಗುತ್ತಿದ್ದಂತೆ ವರ್ಷದ ಪ್ರಮುಖ ದಾಖಲೆಗಳಾದ ಪಟ್ಟಿಗಳು ಬಿಡುಗಡೆಯಾಗುತ್ತಿವೆ. ಗೂಗಲ್‌ ಹುಡುಕುತಾಣದ ಮೂಲಕ ಜನ  ಹುಡುಕಿದ ಪ್ರಮುಖ ವ್ಯಕ್ತಿಗಳ ಚಿತ್ರಗಳಲ್ಲಿ ಅಗ್ರ ಪಂಕ್ತಿಯಲ್ಲಿ ನಿಂತವರಲ್ಲಿ ಕ್ರಿಕೆಟ್‌ ದೇವರು ಸಚಿನ್ ತೆಂಡೂಲ್ಕರ್‌, ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಅಥವಾ ಮೋಹಕ ನಟಿ ಕತ್ರಿನಾ ಕೈಫ್‌ ಎಂಬ ಊಹೆ ಇದ್ದರೆ ಅದು ಸುಳ್ಳು.

ಏಕೆಂದರೆ ಭಾರತೀಯ ಗೂಗಲ್ ಬಳಕೆದಾರರು ಅತಿ ಹೆಚ್ಚು ಹುಡುಕಾಡಿದ್ದು ನೀಲಿ ಚಿತ್ರಗಳ ಬಾಲಿವುಡ್‌ ಚೆಲುವೆ ಸನ್ನಿ ಲಿಯಾನ್‌ ಹೆಸರನ್ನು ಎಂಬುದು ಅಚ್ಚರಿ ಎನಿಸಿದರೂ ಸತ್ಯ. ಶಾರುಖ್‌ ಖಾನ್‌ ಐದನೇ ಸ್ಥಾನದಲ್ಲಿದ್ದರೆ, ಗಾಯಕ ಹನಿ ಸಿಂಗ್‌, ತೆಲುಗು ಹಾಗೂ ತಮಿಳು ನಟಿ ಕಾಜಲ್‌ ಅಗರವಾಲ್‌, ಕರೀನಾ ಕಪೂರ್‌, ಸಚಿನ್‌ ತೆಂಡೂಲ್ಕರ್‌ ಹಾಗೂ ಪೂನಂ ಪಾಂಡೆ ನಂತರದ ಸ್ಥಾನದಲ್ಲಿದ್ದಾರೆ.ಇವರೊಂದಿಗೆ ಅತಿ ಹೆಚ್ಚು ತಡಕಾಡಿದ ಜಾಲತಾಣಗಳಲ್ಲಿ ‘ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2013’, ಬಾಲಿವುಡ್‌ ಸಿನಿಮಾಗಳಾದ ‘ಆಷಿಕಿ 2’, ಆಧಾರ್‌ ಗುರುತಿನ ಚೀಟಿ ನೀಡುವ ‘ಯುಐಡಿಎಐ’, ‘ಜಾನ್‌ ವಾಕರ್‌’ ಹಾಗೂ ‘ಜಿಯಾ ಖಾನ್‌’ ಕೂಡ ಮೊದಲ ಹತ್ತು ಸ್ಥಾನದಲ್ಲಿವೆ/ಇದ್ದಾರೆ. ಜನ ಅತಿ ಹೆಚ್ಚು ಹುಡುಕಾಡಿದ ವ್ಯಕ್ತಿಗಳಲ್ಲಿ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಅಗ್ರ ಸ್ಥಾನಲ್ಲಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಬ್ಲಾಕ್‌ಬೆರ್ರಿ ಫೋನ್‌, ರಾಹುಲ್‌ ದ್ರಾವಿಡ್‌, ಸೈನಾ ನೆಹ್ವಾಲ್‌ ಹಾಗು ವಿಜಯ್‌ ಮಲ್ಯರನ್ನೂ ಭಾರತೀಯರು ಹೆಚ್ಚಾಗಿ ಹುಡುಕಿದ್ದಾರಂತೆ.ಇನ್ನು ಕುಳಿತಲ್ಲೇ ಶಾಪಿಂಗ್‌ ಮಾಡುವ ಸೌಲಭ್ಯ ನೀಡುವ ಇ–ಕಾಮರ್ಸ್‌ ತಾಣಗಳಲ್ಲಿ ‘ಫ್ಲಿಪ್‌ಕಾರ್ಟ್‌’, ‘ಒಲೆಕ್ಸ್‌.ಕಾಂ’ ಮೊದಲ ಸ್ಥಾನದಲ್ಲಿವೆ.

ಈ ಸಂಗತಿಗಳಿಂದಾಗಿ ಅಂತರಜಾಲ ಬಳಸುವ ಭಾರತೀಯರ ಸಂಖ್ಯೆ ಏರಿಕೆಯಾಗಿರುವುದರ ಜತೆಯಲ್ಲೇ ಗೂಗಲ್‌ ಬಳಕೆದಾರರ ಸಂಖ್ಯೆಯೂ ಹೆಚ್ಚಿದೆ. ಬಳಕೆದಾರರು ಮನರಂಜನೆ, ಶಾಪಿಂಗ್‌, ಬ್ಯಾಂಕಿಂಗ್‌, ಇ–ಕಾಮರ್ಸ್‌ ಇತ್ಯಾದಿ ಮೂಲಕ ಅಂತರ್ಜಾಲದ ಎಲ್ಲಾ ವಿಭಾಗಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವುದರ ಉದಾಹರಣೆಗಳಿವೆ ಎಂದು ಗೂಗಲ್‌ನ ಅಧಿಕಾರಿಗಳು ಹೇಳಿದ್ದಾರೆ.ಇನ್ನು ಮೊಬೈಲ್‌ಗಳ ಮೂಲಕ ಭಾರತೀಯರು ರೆಸ್ಟೊರಾ, ಬಾರ್‌, ಸಿನಿಮಾಗಳನ್ನು ಹೆಚ್ಚಾಗಿ ಹುಡುಕಾಡಿದ್ದಾರಂತೆ. ಇವುಗಳ ಜತೆಯಲ್ಲಿ ಕಾಫಿ ಹಾಗೂ ಕ್ರಿಕೆಟ್‌ ಸ್ಕೋರ್‌ಗಳನ್ನೂ ಹುಡುಕಿದ್ದಾರೆ. ಇನ್ನು ಪ್ರವಾಸಕ್ಕೆ ಸಂಬಂಧಿಸಿದಂತೆ ಮಕಾವ್‌, ಮಾಲ್ಡೀವ್ಸ್‌ ಹಾಗೂ ಮಾರಿಷಸ್‌ ಕುರಿತು ಭಾರತೀಯರು ಹೆಚ್ಚು ಆಸಕ್ತರಾಗಿದ್ದಾರೆ ಎಂದು ಗೂಗಲ್‌ ದಾಖಲೆಗಳು ಹೇಳುತ್ತವೆ. ಇವುಗಳ ನಂತರದಲ್ಲಿ ಬೋಸ್ಟನ್‌, ದುಬೈ, ಆ್ಯಮ್ಸ್ಟರ್‌ಡ್ಯಾಂ ಹಾಗೂ ಸಿಂಗಾಪೂರ್‌ಗಳತ್ತಲೂ ಒಂದು ಕಣ್ಣು ಹಾಯಿಸಿದ್ದಾರೆ.ಒಟ್ಟಿನಲ್ಲಿ ಜಗತ್ತಿನ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಭಾರತದಲ್ಲಿ ಅಂತರ್ಜಾಲದ ಬಳಕೆ ವ್ಯಾಪಕವಾಗಿದೆ. ಇವುಗಳಲ್ಲಿ ಕಂಪ್ಯೂಟರ್‌ ಹಾಗೂ ಸ್ಮಾರ್ಟ್‌ಫೋನ್‌ಗಳ ಕೊಡುಗೆ ದೊಡ್ಡದು.

ಪ್ರತಿಕ್ರಿಯಿಸಿ (+)