ಶುಕ್ರವಾರ, ಮೇ 14, 2021
32 °C

ಗೃಹಿಣಿ ಆತ್ಮಹತ್ಯೆ: ವರದಕ್ಷಿಣೆ ಕಿರುಕುಳ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಮತ್ತೀಕೆರೆ ಬಳಿಯ ಅಕ್ಕಪ್ಪಗಾರ್ಡನ್‌ನಲ್ಲಿ ಗುರುವಾರ ರಾತ್ರಿ ಅರುಣಾದೇವಿ (19) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಶರಣ್‌ಬಾಬು ಎಂಬುವರನ್ನು ವಿವಾಹವಾಗಿದ್ದ ಅರುಣಾದೇವಿ ಅವರಿಗೆ ಎರಡೂವರೆ ತಿಂಗಳ ಹೆಣ್ಣು ಮಗುವಿದೆ. ಪತಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಅವರು ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ.`ಅಳಿಯ ಶರಣ್‌ಬಾಬು, ಮಗಳ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ಕಿರುಕುಳ ನೀಡುತ್ತಿದ್ದ. ಅಲ್ಲದೇ, ವರದಕ್ಷಿಣೆ ಹಣಕ್ಕಾಗಿ ಪೀಡಿಸುತ್ತಿದ್ದ. ಇದರಿಂದ ಬೇಸರಗೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವಿಗೆ ಅಳಿಯನೇ ಕಾರಣ' ಎಂದು ಅರುಣಾದೇವಿ ಅವರ ತಾಯಿ ಶಾಂತಿ ಅವರು ದೂರು ಕೊಟ್ಟಿದ್ದಾರೆ ಎಂದು ವಿದ್ಯಾರಣ್ಯಪುರ ಪೊಲೀಸರು ತಿಳಿಸಿದ್ದಾರೆ.ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ಶರಣ್‌ಬಾಬುನನ್ನು ಬಂಧಿಸಲಾಗಿದೆ. ತಮಿಳುನಾಡು ಮೂಲದ ಆತ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.ಅಪಘಾತ: ಸಾವು: ಆಡುಗೋಡಿ ಸಮೀಪದ ಹೊಸೂರು ಲಷ್ಕರ್ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ಬಿಎಂಟಿಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಟೀಫನ್ ರಾಜ್ (23) ಎಂಬುವರು ಸಾವನ್ನಪ್ಪಿದ್ದಾರೆ.ಬೊಮ್ಮನಹಳ್ಳಿ ನಿವಾಸಿಯಾದ ಸ್ಟೀಫನ್, ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಅವರು ಸ್ನೇಹಿತ ಸುನಿಲ್ ಜತೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬಸ್, ಅವರ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಆಗ ನಿಯಂತ್ರಣ ತಪ್ಪಿ ರಸ್ತೆಯ ಬಲ ಭಾಗಕ್ಕೆ ಬಿದ್ದ ಸ್ಟೀಫನ್ ಅವರ ಮೇಲೆ ಬಸ್‌ನ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಹಿಂಬದಿ ಸವಾರ ಸುನಿಲ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ ಚಾಲಕನನ್ನು ಬಂಧಿಸಿ ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆಡುಗೋಡಿ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.ಬಂಧನ: ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ನಕಲಿ ಪ್ಯಾಂಟ್ ಮತ್ತು ಶರ್ಟ್‌ಗಳನ್ನು ಮಾರುತ್ತಿದ್ದ ಆರೋಪದ ಮೇಲೆ ಜಯನಗರದ ಅಶೋಕ್‌ಕುಮಾರ್ ಜೈನ್ (47) ಎಂಬಾತನನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು ರೂ. 17 ಲಕ್ಷ ಮೌಲ್ಯದ ಶರ್ಟ್ ಹಾಗೂ ಪ್ಯಾಂಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಸುಧಾಮನಗರದಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ ಆರೋಪಿಯು ನಕಲಿ ಪ್ಯಾಂಟ್ ಮತ್ತು ಶರ್ಟ್‌ಗಳನ್ನು ಮಾರುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.ಗೃಹಿಣಿ ಆತ್ಮಹತ್ಯೆ: ಕಾಮಾಕ್ಷಿಪಾಳ್ಯ ಸಮೀಪದ ಕಾವೇರಿಪುರದಲ್ಲಿ ಗುರುವಾರ ರಾತ್ರಿ ವಿದ್ಯಾ (21) ಎಂಬುವರು ನೇಣು ಹಾಕಿಕೊಂಡಿದ್ದಾರೆ. ಆಟೊ ಚಾಲಕ ಆನಂದ್ ಎಂಬಾತನ ಪತ್ನಿ ವಿದ್ಯಾ, ರಾತ್ರಿ ಮನೆಯಲ್ಲೇ ನೇಣು ಹಾಕಿ ಕೊಂಡಿದ್ದಾರೆ. ಪತಿ ಎಚ್ಚರಗೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.