ಗುರುವಾರ , ಜೂನ್ 17, 2021
21 °C

ಗೋಡೆಯ ವೆಚ್ಚ-ಉಳಿತಾಯದ ಕಥೆ

ನಿರೂಪಣೆ: ಮಹೇಶ್ ಚಂದ್ರ Updated:

ಅಕ್ಷರ ಗಾತ್ರ : | |

ಕಳೆದ ವಾರ ನಾವು `ಶೆಲ್~ ಅಂದರೆ ಕಟ್ಟಡ ನಿರ್ಮಾಣದ ಮೊದಲ ಹಂತವಾದ ತಳಪಾಯದ ವಿವಿಧ ಪ್ರಕಾರಗಳ ಬಗ್ಗೆ ತಿಳಿದುಕೊಂಡೆವು. ಈಗ ಅದರ ಮುಂದುವರಿದ ಭಾಗವಾದ `ಕಟ್ಟಡ~ ನಿರ್ಮಾಣ ಮತ್ತು ವಿವಿಧ ಹಂತಗಳು(ಗೋಡೆ, ಸಜ್ಜಾ, ತಾರಸಿ) ಮತ್ತು ಗೋಡೆಗಳಿಗೆ ಆಯ್ಕೆ ಮಾಡಿಕೊಳ್ಳಬಹುದಾದಂತಹ ಕೆಲವು ಸಾಮಗ್ರಿಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.ಸದ್ಯ ಲಭ್ಯವಿರುವ ಸಾಂಪ್ರದಾಯಿಕ ಶೈಲಿಯ ಇಟ್ಟಿಗೆ(ಸುಟ್ಟ ಇಟ್ಟಿಗೆ), ಸಿಮೆಂಟ್ ಇಟ್ಟಿಗೆ, ನೈಸರ್ಗಿಕವಾಗಿ ಸಿಗುವ ಕಲ್ಲಿನಿಂದ(ಸೈಜುಗಲ್ಲು) ಗೋಡೆ ನಿರ್ಮಿಸಬಹುದು. ಅಲ್ಲದೆ, ಹೊಸತಾದ ಕ್ಲೇಬ್ಲಾಕ್ ಸಹ ಗೋಡೆ ಮತ್ತು ತಾರಸಿ ನಿರ್ಮಾಣಕ್ಕೆ ಒದಗುತ್ತದೆ.ಕ್ಲೇಬ್ಲಾಕ್‌ಗಳಲ್ಲಿ ವಾಲ್‌ಬ್ಲಾಕ್, ಹುರುಡಿ ಬ್ಲಾಕ್, ರೂಫ್ ಬ್ಲಾಕ್ ಎಂದು ಮೂರು ಬಗೆಯವು ಇವೆ.

ಸೈಜುಗಲ್ಲು(ಡ್ರೆಸಿಂಗ್ ಮಾಡಿರುವಂತಹುದು) ಅಥವಾ ಕ್ಲೇ ಬಾಕ್‌ನಿಂದ ಗೋಡೆ ನಿರ್ಮಿಸಿದರೆ ಸಿಮೆಂಟ್ ಪ್ಲಾಸ್ಟರಿಂಗ್ ಅಗತ್ಯ ಇರುವುದಿಲ್ಲ.ಇವೆರಡನ್ನೂ ಜತೆಗೂಡಿಸಿಯೂ ಗೋಡೆ ನಿರ್ಮಿಸಬಹುದು. ಅದರಿಂದ ಮನೆಯ ಒಳಾಂಗಣ ಮತ್ತು ಹೊರ ಭಾಗ ಸುಂದರವಾಗಿ ಕಾಣುತ್ತದೆ.ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಗೋಡೆ ನಿರ್ಮಾಣದ ವೆಚ್ಚ. ಸುಟ್ಟ ಇಟ್ಟಿಗೆಯಿಂದ ಗೋಡೆ ಕಟ್ಟಿದಲ್ಲಿ ಪ್ಲಾಸ್ಟರಿಂಗ್ ಮತ್ತು ಬಣ್ಣದ ಕೆಲಸ ಅಗತ್ಯ ಹಾಗೂ ಅನಿವಾರ್ಯ.

ಕ್ಲೇಬ್ಲಾಕ್‌ನಿಂದ ಗೋಡೆ ನಿರ್ಮಿಸಿದರೆ ಈ ಎರಡೂ ವೆಚ್ಚ ಇರುವುದಿಲ್ಲ. ರೆಡ್ ಆಕ್ಸೈಡ್ ಮಾತ್ರ ಬಳಸಬೇಕಾಗಿ ಬರುತ್ತದೆ. ಹಾಗಾಗಿ ಸುಟ್ಟ ಇಟ್ಟಿಗೆಯ ಗೋಡೆಗಿಂತ ಕ್ಲೇಬ್ಲಾಕ್ ಗೋಡೆ ಕಡಿಮೆ ವೆಚ್ಚದ್ದು. ಶೇ. 25ರಷ್ಟು ಹಣ ಉಳಿಸುವಂತಹುದು.ಕ್ಲೇ ಬ್ಲಾಕ್ ಮತ್ತು ಕಲ್ಲಿನಿಂದ ಕಟ್ಟಡ ನಿರ್ಮಿಸಿದಲ್ಲಿ ಮನೆಯ ಒಳಾಂಗಣ ಅಲಂಕಾರದ ಕೆಲಸ, ವೆಚ್ಚ ಎರಡೂ ಕಡಿಮೆ ಆಗುತ್ತದೆ.ಸುಟ್ಟ ಇಟ್ಟಿಗೆಯಿಂದ ನಿರ್ಮಿಸಿದ ಗೋಡೆ ಸಾಮಾನ್ಯವಾಗಿ 8ರಿಂದ 9 ಇಂಚು ದಪ್ಪವಾಗಿರುತ್ತದೆ. ಕ್ಲೇಬ್ಲಾಕ್‌ಗಳಲ್ಲಿ 6 ಮತ್ತು 8 ಇಂಚು ಗಾತ್ರದ ವಾಲ್‌ಬ್ಲಾಕ್‌ಗಳು ಲಭ್ಯವಿದ್ದು, ಗೋಡೆಯ ಗಾತ್ರವನ್ನೂ ಅಗತ್ಯಕ್ಕೆ ತಕ್ಕಂತೆ ಹೆಚ್ಚು ಅಥವಾ ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ಮನೆಯೊಳಗೆ ಸಣ್ಣ ಪ್ರಮಾಣದಲ್ಲಿಯಾದರೂ ಜಾಗದ ಉಳಿತಾಯವಾಗುತ್ತದೆ ಎಂಬುದು ಗಮನಾರ್ಹ.ಕ್ಲೇಬ್ಲಾಕ್ ಕಂಬ

ಕ್ಲೇಬ್ಲಾಕ್‌ನಲ್ಲಿ ರಂದ್ರಗಳು ಇರುವುದರಿಂದ ಅದರೊಳಗೆ ಕಬ್ಬಿಣದ ಸರಳು ಹಾಗೂ ಕಾಂಕ್ರೀಟ್ ಮಿಶ್ರಣ ತುಂಬಿಸಿ ತಾರಸಿಯನ್ನು ಹೊತ್ತು ನಿಲ್ಲುವ ಕಂಬದ ರೀತಿಯೂ (ಕಾಂಕ್ರೀಟ್ ಪಿಲ್ಲರ್‌ಗೆ ಬದಲಾಗಿ) ಬಳಸಿಕೊಳ್ಳಬಹುದು.

 

ಕ್ಲೇಬ್ಲಾಕ್ ಭಾರವಾದ ತಾರಸಿಯನ್ನೂ ಹೊರುವಷ್ಟು ಶಕ್ತಿಯುತವಾಗಿರುತ್ತದೆ ಎಂಬುದರಲ್ಲಿ ಅನುಮಾನವೇನೂ ಇಲ್ಲ. ಅಗತ್ಯ ಎನಿಸಿದರೆ ಅದರ ಮೇಲೆ ಒಂದು-ಎರಡು ಅಂತಸ್ತುಗಳನ್ನೂ ನಿರ್ಮಿಸಬಹುದು.ಈ ಬ್ಲಾಕ್ ಉದ್ದ ಹಾಗೂ ಅಗಲವಾಗಿಯೂ ನಮ್ಮ ಇಚ್ಚೆ, ವಿನ್ಯಾಸಕ್ಕೆ ತಕ್ಕಂತೆ ಬಳಸಬಹುದು. ಹುರುಡಿ ಬ್ಲಾಕ್ 3 ಇಂಚು ಗಾತ್ರದಲ್ಲಿಯೂ ಲಭ್ಯವಿದೆ. ಇದನ್ನು ದಪ್ಪ ಕಡಿಮೆ ಇರುವ ಮನೆಯ ಒಳಾಂಗಣ ಗೋಡೆಗಳಿಗೆ ಹಾಗೂ ಸಣ್ಣ ಸ್ಥಳಗಳ ಪ್ರತ್ಯೇಕತೆಗೆ (ಪಾರ್ಟಿಷನ್) ಬಳಸಿಕೊಳ್ಳಬಹುದು.ಕ್ಲೇಬ್ಲಾಕ್ ರೀತಿಯದೇ ಆದ 4 ಇಂಚು ಗಾತ್ರದ ರೂಫ್ ಬ್ಲಾಕ್ ಬಳಸಿಕೊಂಡಲ್ಲಿ ವಿವಿಧ ವಿನ್ಯಾಸದಲ್ಲಿ ತಾರಸಿ ನಿರ್ಮಿಸಬಹುದು. ಇದನ್ನೇ `ಫಿಲ್ಲರ್ಸ್‌ ಸ್ಲ್ಯಾಬ್~ ಎನ್ನಲಾಗುತ್ತದೆ. `ಫಿಲ್ಲರ್ಸ್‌ ಸ್ಲ್ಯಾಬ್~ ಶೈಲಿಯ ತಾರಸಿ ನಿರ್ಮಾಣದಲ್ಲಿ ಕಬ್ಬಿಣದ ಸರಳುಗಳ ಬಳಕೆ ಬಹುತೇಕ ಅರ್ಧದಷ್ಟು ಕಡಿಮೆ ಇರುತ್ತದೆ.

 

ಇಲ್ಲಿ ಬಳಸುವ ಚಾನೆಲ್ ಮತ್ತು ಚಾನೆಲ್ ಬ್ಲಾಕ್‌ಗಳು ತ್ವರಿತಗತಿಯಲ್ಲಿ ತಾರಸಿ  ಪೂರ್ಣಗೊಳ್ಳಲು ನೆರವಾಗುತ್ತವೆ. ಜತೆಗೆ ಸೆಂಟ್ರಿಂಗ್ ಅಗತ್ಯವನ್ನೂ ಈ ತಾರಸಿ ನಿರ್ಮಾಣ ಕೇಳುವುದಿಲ್ಲ. ಹಾಗಾಗಿ ಇದರಿಂದ ಒಟ್ಟು ತಾರಸಿ ವೆಚ್ಚದಲ್ಲಿ ಶೇ 50ರಷ್ಟು ಉಳಿತಾಯ ಖಂಡಿತ.ನಗರಗಳಲ್ಲಿ ಮನೆ ನಿರ್ಮಿಸುವಾಗ ಸೆಟ್‌ಬ್ಯಾಕ್ಸ್ (ಮನೆ ಹೊರಭಾಗ ಇಂತಿಷ್ಟು ಎಂದು ನಿರ್ಧಿಷ್ಟ ಪ್ರಮಾಣದ ಜಾಗ) ಬಿಡಬೇಕಿದೆ. ಆದರೆ, ಚಿಕ್ಕ ನಿವೇಶನಗಳಿರುವ ಬಡಾವಣೆಗಳಲ್ಲಿ ಮನೆ ನಿರ್ಮಿಸುವವರು ಸಾಮಾನ್ಯವಾಗಿ ನಾಲ್ಕೂ ಪಾರ್ಶ್ವಗಳಲ್ಲಿ ನಿಗದಿಯಷ್ಟು ಜಾಗ ಬಿಡುವುದೇ ಇಲ್ಲ.

 

ಮನೆಯ ಎಡ-ಬಲ ಮತ್ತು ಹಿಂದಿನ ಗೋಡೆಗಳಿಗೆ ಅಕ್ಕಪಕ್ಕದ ಮನೆಗಳು ತಾಗಿ ನಿಂತಂತೆ ಇರುತ್ತವೆ. ಎಷ್ಟೇ ಕಿಟಕಿಗಳನ್ನು ಇಟ್ಟು ಮನೆ ನಿರ್ಮಿಸಿದರೂ ಗಾಳಿ-ಬೆಳಕಿನ ಕೊರತೆ ಎದುರಾಗುತ್ತದೆ. ಹಗಲು ವೇಳೆಯೇ ಉತ್ತಮ ಬೆಳಕಿಗಾಗಿ ಮನೆಯೊಳಗೆ ವಿದ್ಯುತ್ ದೀಪ ಉರಿಸಬೇಕಾಗಿ ಬರುತ್ತದೆ.ತಾರಸಿಯಿಂದಲೇ ಬೆಳಕು ಬರುವಂತೆ ಮಾಡುವಂತಿದ್ದರೆ? ಅದಕ್ಕೂ ಅವಕಾಶವಿದೆ. ಕ್ಲೇಬ್ಲಾಕ್ ಅಳತೆ-ಆಕಾರದಲ್ಲಿಯೇ `ಗ್ಲಾಸ್ ಬ್ಲಾಕ್~(ದಪ್ಪ ಹಾಗೂ ಗಟ್ಟಿಯಾದ ಗಾಜಿನಿಂದ ಮಾಡಿದ ಇಟ್ಟಿಗೆ) ಸಹ ಮಾರುಕಟ್ಟೆಯಲ್ಲಿ ಲಭ್ಯವಿವೆ. ರೂಫ್‌ಬ್ಲಾಕ್‌ನಿಂದ ತಾರಸಿ ನಿರ್ಮಿಸಿದರೆ ಅಗತ್ಯವಿರುವೆಡೆ ಗಾಜಿನ ಇಟ್ಟಿಗೆ ಬಳಸಬಹುದು. ಇದರಿಂದ ತಾರಸಿ ಮೂಲಕವೇ ಮನೆಯೊಳಕ್ಕೆ ನೈಸರ್ಗಿಕ ಬೆಳಕು ದಾರಾಳವಾಗಿ ಬರುತ್ತದೆ.ಇವಲ್ಲದೆ ಇನ್ನೊಂದು ಬಗೆಯ ಕ್ಲೇಬ್ಲಾಕ್ ಇವೆ. ಅವನ್ನೇ ಚಾನೆಲ್ಸ್ ಮತ್ತು ಚಾನೆಲ್  ಬ್ಲಾಕ್ ಎನ್ನುವುದು. ಇವನ್ನು ರೂಫ್ ಬ್ಲಾಕ್ ಜತೆ ಬಳಸಿದಲ್ಲಿ ತಾರಸಿ ನಿರ್ಮಿಸುವಾಗ `ಸೆಂಟ್ರಿಗ್ ಬಳಕೆ~ ಅಗತ್ಯವೇ ಇರುವುದಿಲ್ಲ. ಹಾಗಾಗಿ ತಾರಸಿ ನಿರ್ಮಾಣದ ವೇಳೆ ಅನಿವಾರ್ಯ ಎನ್ನುವಂತಾಗಿದ್ದ ಸೆಂಟ್ರಿಗ್ ವೆಚ್ಚದಲ್ಲಿಯೂ ಉಳಿತಾಯ ಮಾಡಬಹುದು.ಕಡೆಮಾತು:


ಸುಟ್ಟ ಇಟ್ಟಿಗೆಯಿಂದ ನಿರ್ಮಿಸುವ ಗೋಡೆಗೂ ಕ್ಲೆಬ್ಲಾಕ್‌ನಿಂದಾದ ಗೋಡೆಗೂ ವೆಚ್ಚದಲ್ಲಿ ಏನು ವ್ಯತ್ಯಾಸ? ಎಷ್ಟು ಹಣ ಉಳಿಸಬಹುದು?

ಯಾವುದೇ ಒಂದು ಮನೆಯ ಒಟ್ಟಾರೆ ನಿರ್ಮಾಣ ವೆಚ್ಚದಲ್ಲಿ ಗೋಡೆ ಕಟ್ಟುವುದಕ್ಕೇ ಶೇ 30ರಷ್ಟು ಹಣ ವಿನಿಯೋಗಿಸಬೇಕು. ಉದಾಹರಣೆಗೆ ರೂ.13 ಲಕ್ಷ ಅಂದಾಜು ಬಜೆಟ್‌ನ ಮನೆ ನಿರ್ಮಾಣದಲ್ಲಿ ಸುಟ್ಟ ಇಟ್ಟಿಗೆಯಿಂದ ಮಾಡಿದ ಗೋಡೆಗೆ ರೂ.4 ಲಕ್ಷ ವೆಚ್ಚವಾಗುತ್ತದೆ ಎಂದಿಟ್ಟುಕೊಂಡರೆ, ಕ್ಲೇಬ್ಲಾಕ್‌ನಿಂದ ಗೋಡೆ ನಿರ್ಮಿಸಿದರೆ  ರೂ.1 ಲಕ್ಷದವರೆಗೂ ಹಣ ಉಳಿಸಬಹುದು.ವಿವಿಧ ಕ್ಲೇ ಬ್ಲಾಕ್‌ಗಳ ದರ

ವಾಲ್ ಬ್ಲಾಕ್(6 ಇಂಚು ಮತ್ತು 8 ಇಂಚು)                  ರೂ.45

ಹುರುಡಿ ಬ್ಲಾಕ್(3 ಇಂಚು ದಪ್ಪ-1.5 ಅಡಿ ಅಗಲ)          ರೂ.58

ರೂಫ್ ಬ್ಲಾಕ್ (4 ಇಂಚು ದಪ್ಪ-10/12 ಇಂಚು ಅಗಲ)    ರೂ.25

ಚಾನೆಲ್ ಬ್ಲಾಕ್ ಮತ್ತು ಚಾನೆಲ್                               ರೂ. 65

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.