ಗುರುವಾರ , ಮೇ 19, 2022
21 °C

ಗೋವಿನಿಂದ ಸವಿಗಾನ

ಕೆ. ವಾಸುದೇವ್ Updated:

ಅಕ್ಷರ ಗಾತ್ರ : | |

ಇಟ್ಟರೆ ಸಗಣಿಯಾದೆ... ತಟ್ಟಿದರೆ ಬೆರಣಿಯಾದೆ... ಕಟ್ಟಿದರೆ ಗೊಬ್ಬರವಾದೆ... ಉತ್ತಿದರೆ ಬೆಳೆಯಾದೆ... ನೀನಾರಿಗಾದೆಯೋ ಎಲೆ ಮಾನವ... ಎಂದು ಗೋವಿನ ಪರ ಕವಿವಾಣಿ ಇದೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಗೋಮಾತೆ ಇಹಲೋಕ ತ್ಯಜಿಸದ ಮೇಲೂ ಪರೋಪಕಾರಿಯಾಗಬಲ್ಲುದು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಗ್ರಾಮದ ಪಶು ಆಸ್ಪತ್ರೆಯ ಹಿರಿಯ ಪಶು ಪರೀಕ್ಷಕ ಕ.ದಾ. ಕೃಷ್ಣರಾಜ್.ಗೋವಿನ ಮಹತ್ವವನ್ನು ಸಮಾಜಕ್ಕೆ ತೋರಿಸಿ, ಅದರ ಸಾಕಾಣಿಕೆಯನ್ನು ಪ್ರೋತ್ಸಾಹಿಸಬೇಕೆಂಬ ನಿಲುವು ಇವರದ್ದು. ಗೋವಿನಿಂದ ತಯಾರಿಸಬಹುದಾದ ಸರಳ ಗ್ಯಾಸ್ ವ್ಯವಸ್ಥೆ, ವಿಶೇಷ ಮಾದರಿಯ ಗೊಬ್ಬರ ಸಂಗ್ರಹ ವ್ಯವಸ್ಥೆ, ಗೋವಿನ ಗಂಜಲದಿಂದ ತಯಾರಿಸಬಹುದಾದ ಕೃಷಿ ಔಷಧಿಗಳು, ಗೋವುಗಳ ಉತ್ಪನ್ನದಿಂದ ಹಲವು ರೋಗಗಳಿಗೆ ಬಳಸಬಹುದಾದ ಔಷಧಿಗಳು ಇವರ ಬಳಿ ಇವೆ. ಅಷ್ಟೇ ಅಲ್ಲ, ಸಗಣಿಯಿಂದ ಕೃಷಿ ಬೀಜ ಸಂರಕ್ಷಣೆ ವಿಧಾನ, ಸೊಳ್ಳೆ ನಿಯಂತ್ರಣಕ್ಕೆ ಸಗಣಿಯಿಂದ ತಯಾರಿಸಿದ ಸೊಳ್ಳೆ ಬತ್ತಿ ಹೀಗೆ ಹಲವಾರು ಮಾದರಿಯನ್ನು ತಮ್ಮ ಗೋಶಾಲೆಯಲ್ಲಿ ತಯಾರಿಸಿ ಪ್ರದರ್ಶನಕ್ಕಿಟ್ಟ್ದ್ದಿದಾರೆ. ಈಗ ಗೋವಿನಿಂದ ತಯಾರಿಸಬಹುದಾದ ಸಂಗೀತ ಪರಿಕರಗಳನ್ನು ಸಿದ್ಧಗೊಳಿಸಿ ಗೋವು ಸತ್ತ ನಂತರವೂ ಉಪಯುಕ್ತ ಪ್ರಾಣಿ ಎಂಬುದನ್ನು ಸಾಬೀತು ಪಡಿಸಿದ್ದಾರೆ.ಸಂಗೀತ ಸುಧೆ

ಕೃಷ್ಣರಾಜು ಗೋವಿನ ಕೊಂಬುಗಳಿಂದ ಕಹಳೆ, ಶಹನಾಹಿ, ಬೊಂಬಾರು ಹೀಗೆ ನಾನಾ ಪ್ರಕಾರದ ಪರಿಕರಗಳನ್ನು ಸಿದ್ಧಪಡಿಸಿ ಅವುಗಳ ನಾದದಿಂದ ಸಂಗೀತ ಸುಧೆಯನ್ನು ಹೊರಹೊಮ್ಮಿಸುತ್ತಿದ್ದಾರೆ. ಇವರು ಕೆಲವು ಮಠ ಮಂದಿರಗಳಿಗೆ ಭೇಟಿ ನೀಡಿದಾಗ ಅಲ್ಲಿ ಪೂಜಾ ಕೈಂಕಾರ್ಯಗಳಿಗೆ ಬಳಸುವ ಸಂಗೀತ ಪರಿಕರಗಳನ್ನು ಕಂಡು ಇಂತಹ ಪರಿಕರಗಳನ್ನು ಗೋವಿನಿಂದಲೂ ಪಡೆಯಲು ಸಾಧ್ಯ ಎಂದು ನಿಶ್ಚಯಿಸಿ ಹೊರರಾಜ್ಯಗಳಲ್ಲಿ ದೊರೆಯುವ ಗೋವಿನ ಕೊಂಬುಗಳನ್ನು ತಂದು ಪಟ್ಟಣದ ಪಾಪಣ್ಣಾಚಾರ್ ಎಂಬುವವರ ಬಳಿ  ತಮ್ಮ ಚಿಂತನೆಯ ಪ್ರಕಾರ ಕೊಂಬುಗಳಿಗೆ ರೂಪು ನೀಡಿ ಸಂಗೀತ ಪರಿಕರಗಳಾಗಿ ಮಾರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.`ಗೋವಿನಿಂದ ಮಾನವನಿಗೆ ಬಹು ಉಪಯೋಗವಿದೆ. ಗೋವುಗಳು ಮಾನವನಿಗೆ ಬೇಕಾದ ಎಲ್ಲಾ ವಸ್ತುಗಳನ್ನು ನೀಡುವ ಶಕ್ತಿ ಹೊಂದಿರುವುದರಿಂದಲೇ ಗೋವನ್ನು ಪುರಾಣಗಳಲ್ಲಿ ಕಾಮಧೇನು ಎಂದು ಕರೆಯಲಾಗಿದ್ದು, ಅದು ಇಂದಿಗೂ ಪ್ರಸ್ತುತ. ಇಂತಹ ಗೋವುಗಳ ಮಹತ್ವದ ಅರಿವಿಲ್ಲದೇ ಇಂದು ಗೋಪಾಲಕರ ಸಂತತಿ ಕಡಿಮೆಯಾಗುತ್ತಿದ್ದು, ಮುಂದೊಂದು ದಿನ ಗೋವುಗಳ ಸಂತತಿ ಅಳಿದರೆ ಆಶ್ಚರ್ಯ ಪಡಬೇಕಾಗಿಲ್ಲ.ಯಾವ ಮನೆಯಲ್ಲಿ ಗೋವಿದೆಯೂ ಅದು ನಂದನವನ ಎಂಬುದು ಪುರಾಣ ಪ್ರಸಿದ್ಧ ಮಾತಾಗಿದ್ದು, ಇಂದು ಗೋವುಗಳನ್ನು ಸಾಕಿರುವ ಕುಟುಂಬಗಳಿಗೆ ಅದರ ಸತ್ಯಾಂಶ ತಿಳಿದಿದೆ. ತ್ಯಾಗವೇ ಜೀವನ ಎಂಬ ಪ್ರತೀಕದೊಂದಿಗೆ ಮಾನವನ ಜೀವನಕ್ಕೆ ಅಪೂರ್ವ ಕೊಡುಗೆಗಳನ್ನು ನೀಡಿ ಮಾನವನನ್ನು ಸಲಹುತ್ತಿರುವ ಗೋವು ಸಂತತಿ ಅಳಿವಿನಂಚಿನಲ್ಲಿದ್ದು, ಪ್ರತಿಯೊಬ್ಬರೂ ಇಂತಹ ಪುಣ್ಯಕೋಟಿಯ ಮಹತ್ವವನ್ನು ಅರಿತು, ಅದರ ಸಂರಕ್ಷಣೆ ಮತ್ತು ಪೋಷಣೆಗೆ ಮುಂದಾಗಬೇಕು' ಎಂಬುದು ಕ.ದಾ. ಕೃಷ್ಣರಾಜು ಅವರ ಅಂತರಾಳದ ಮಾತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.