ಗುರುವಾರ , ಮೇ 13, 2021
22 °C

`ಗ್ರಾ.ಪಂ.ಗೆ ರೂ 50 ಸಾವಿರ ಬಿಡುಗಡೆಗೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: `ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿರುವ ಡೆಂಗೆ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕು. ಗ್ರಾಮಗಳ ನೈರ್ಮಲ್ಯ ಕಾಪಾಡಲು ಪ್ರತಿ ಗ್ರಾ.ಪಂ.ಗೆ ತಕ್ಷಣವೇ 50 ಸಾವಿರ ರೂಪಾಯಿ ಬಿಡುಗಡೆ ಮಾಡಬೇಕು' ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ಕೈಗಾರಿಕೆ, ಮುಜರಾಯಿ ಮತ್ತು ಸಕ್ಕರೆ ಸಚಿವ ಸಚಿವ ಪ್ರಕಾಶ ಹುಕ್ಕೇರಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಗೆ ಪ್ರಥಮ ಬಾರಿಗೆ ಭೇಟಿ ನೀಡಿ ಮಂಗಳವಾರ ಜಿ.ಪಂ.ಸಭಾಭವನದಲ್ಲಿ ಆಯೋಜಿಸಿದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.ಡೆಂಗೆ ನಿಯಂತ್ರಣಕ್ಕೆ ಇಲ್ಲಿಯವರೆಗೆ ಯಾವ ಕ್ರಮ ಕೈಗೊಂಡಿದ್ದೀರಿ ಗೊತ್ತಿಲ್ಲ. ಆದರೆ, ಇನ್ನು ಮುಂದೆ ಡೆಂಗೆ ಪ್ರಕರಣಗಳು ಕಾಣಿಸಿಕೊಳ್ಳದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಮುಂಬರುವ ದಿನಗಳಲ್ಲಿ ಡೆಂಗೆ ನಿಯಂತ್ರಣಕ್ಕೆ ಬಾರದೇ ಹೋದರೆ, ಅದಕ್ಕೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.ಈಗಾಗಲೇ ಜಿಲ್ಲೆಯಲ್ಲಿ 105 ಡೆಂಗೆ, 71 ಮಲೇರಿಯಾ ಪ್ರಕರಣಗಳು ಕಂಡು ಬಂದಿವೆ. ಇದರಲ್ಲಿ ಡೆಂಗೆದಿಂದ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿಸಿದ ಅವರು, ಜ್ವರದಿಂದ ಬಳಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗೆ ತಕ್ಷಣವೇ ಚಿಕಿತ್ಸೆ ಒಳಪಡಿಸಬೇಕಲ್ಲದೇ, ಅವರ ರಕ್ತದ ಮಾದರಿ ಸಂಗ್ರಹಿಸಿ ಹುಬ್ಬಳ್ಳಿ ಇಲ್ಲವೇ ಬೆಳಗಾವಿಯ ಪ್ರಯೋಗಾಲಯಗಳಿಗೆ ಕಳುಹಿಸಬೇಕು. ಆ ಪ್ರಯೋಗಾಲಯಗಳಲ್ಲಿ ಬೇಗನೆ ರಕ್ತ ಪರೀಕ್ಷೆ ಮಾಡಿ ವರದಿ ನೀಡುವಂತೆ ತಾವು ತಿಳಿಸಿವುದಾಗಿ ಹೇಳಿದರು.ರೋಗಿಗಳ ರಕ್ತ ಪರೀಕ್ಷೆ ಜವಾಬ್ದಾರಿಯನ್ನು ರೋಗಿಗಳಿಗೆ ಅಥವಾ ಅವರ ಸಂಬಂಧಿಕರಿಗೆ ಹಚ್ಚದೇ ಖುದ್ದಾರಿ ವೈದ್ಯರು ಇಲ್ಲವೇ ಆರೋಗ್ಯ ಇಲಾಖೆ ಅಧಿಕಾರಿಗಳೇ ವಹಿಸಿಕೊಳ್ಳಬೇಕು, ಜ್ವರದ ತೀವ್ರತೆಯಿಂದ ಬಳಲು ಡೆಂಗೆ ರೋಗಿಗಳಿಗೆ ನಿಮ್ಮ ಬಳಿ ಚಿಕಿತ್ಸೆ ನೀಡಲು ಸಾಧ್ಯವಾಗದಿದ್ದರೆ, ತಕ್ಷಣವೇ ಆಸ್ಪತ್ರೆ ಅಂಬ್ಯುಲೆನ್ಸ್ ಮೂಲಕ ಹುಬ್ಬಳ್ಳಿ, ದಾವಣಗೆರೆ ಇಲ್ಲವೇ ಬೆಳಗಾವಿ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆಯನ್ನು ಸಹ ಸಂಬಂಧಿಸಿದ ವೈದ್ಯಾಧಿಕಾರಿಗಳೇ ಮಾಡಬೇಕು ಸೂಚಿಸಿದರು.ಡೆಂಗೆ ಲಕ್ಷಣ ಕಂಡ ಕೂಡಲೇ ಅದನ್ನು ಖಚಿತಪಡಿಸಿಕೊಂಡು ಜಿಲ್ಲಾಧಿಕಾರಿಗಳಿಗೆ ಪ್ರತಿದಿನ ವರದಿ ನೀಡಬೇಕು. ಯಾವುದನ್ನು ಮುಚ್ಚಿಡದೇ ನಿಖರವಾದ ವರದಿ ನೀಡುವಂತೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ ಅವರು, ಡೆಂಗೆಯಿಂದ ಬಲಿಯಾದವರ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು. ಈಗಾಗಲೇ ಶಂಕಿತ ಡೆಂಗೆಯಿಂದ ಮೃತಪಟ್ಟವರ ವರದಿಯನ್ನೂ ತರಿಸಿಕೊಂಡು ಅವರಿಗೆ ಯಾವ ರೀತಿ ಪರಿಹಾರ ನೀಡಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.ಜಿಲ್ಲೆಯಲ್ಲಿ ರಕ್ತ ತಪಾಸಣೆ ಘಟಕ: ಡೆಂಗೆ ರೋಗಿಗಳ ರಕ್ತ ತಪಾಸಣೆಗೆ ಹುಬ್ಬಳ್ಳಿ, ಇಲ್ಲವೇ ಬೆಳಗಾವಿ ಹೋಗುವುದು ಅನಿವಾರ್ಯವಾಗಿದೆ.ಪ್ರತಿಯೊಂದು ರಕ್ತದ ಮಾದರಿ ತಪಾಸಣೆಗೆ ಕನಿಷ್ಠ 76 ಗಂಟೆಗಳು ಬೇಕಾಗುತ್ತದೆ. ಇದನ್ನು ತಪ್ಪಿಸಿ ಆದಷ್ಟು ಬೇಗ ರಕ್ತದ ತಪಾಸಣೆ ನಡೆಸುವ ಸಲುವಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿಯೇ ರಕ್ತ ಪರೀಕ್ಷಾ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಬೇಕಾದ ಯಂತ್ರೋಪಕರಣ, ತಂತ್ರಜ್ಞರು ಹಾಗೂ ಘಟಕ ಸ್ಥಾಪನೆಗೆ ಆಗುವ ಖರ್ಚಿನ ಬಗ್ಗೆ ಕ್ರಿಯಾ ಯೋಜನೆ ನೀಡುವಂತೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ತಿಳಿಸಲಾಗಿದೆ ಎಂದರು.ಅವರು ಕ್ರಿಯಾ ಯೋಜನೆ ನೀಡಿದ ತಕ್ಷಣವೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅದಕ್ಕೆ ಬೇಕಾದ ಹಣಕಾಸಿನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.ಇವೆಲ್ಲವುಗಳ ಜತೆಗೆ ಡೆಂಗೆ ಹಾಗೂ ಸಂಶಯಾಸ್ಪದ ಪ್ರಕರಣಗಳು ಕಂಡು ಬಂದ ಪ್ರದೇಶದಲ್ಲಿ ಸೊಳ್ಳೆಗಳ ಸಮೀಕ್ಷೆ ಮತ್ತು ನಿರ್ಮೂಲನೆಗೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು. ಪ್ರತಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತರನ್ನೊಳಗೊಂಡ ತಂಡವನ್ನು ರಚಿಸಿ ಪ್ರತಿ ಮನೆ ಮನೆಗೆ ಭೇಟಿ ನೀಡುವ ಮೂಲಕ ರೋಗ ಹತೋಟಿಗೆ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಫಾಗಿಂಗ ಮಾಡಬೇಕು. ಜನರಿಗೆ ಡೆಂಗೆ ಹರಡುವ ಸೊಳ್ಳೆಗಳ ಬಗ್ಗೆ ತಿಳುವಳಿಕೆ ಮೂಡಿಸಿ ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಸಲಹೆ ಹಾಗೂ ಮಾಹಿತಿ ನೀಡಬೇಕು ಅಧಿಕಾರಿಗಳಿಗೆ ಸೂಚಿಸಿದರು.ಇದಕ್ಕೂ ಮುನ್ನ ಜಿಲ್ಲೆಯಲ್ಲಿ ಡೆಂಗೆ ಜ್ವರದಿಂದ ಮೃತಪಟ್ಟವರ ಹಾಗೂ ಜ್ವರಕ್ಕೆ ತುತ್ತಾದವರ ಬಗ್ಗೆ ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ರಾಘವೇಂದ್ರಸ್ವಾಮಿ ಅವರು, ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳನ್ನು ವಿವರಿಸಿದರು.ಸಭೆಯಲ್ಲಿ ಜಿ.ಪಂ.ಅಧ್ಯಕ್ಷ ಶಂಕ್ರಣ್ಣ ಮಾತನವರ, ಉಪಾಧ್ಯಕ್ಷ ಗೀತಾ ಅಂಕಸಖಾನಿ, ಶಾಸಕರಾದ ಮನೋಹರ ತಹಸೀಲ್ದಾರ್, ಬಸವರಾಜ ಶಿವಣ್ಣನವರ, ಯು.ಬಿ.ಬಣಕಾರ, ರುದ್ರಪ್ಪ ಲಮಾಣಿ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಜಿಲ್ಲಾಧಿಕಾರಿ ಪಾಂಡುರಂಗ ನಾಯಕ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚೇತನಸಿಂಗ್ ರಾಠೋರ್, ಜಿ.ಪಂ.ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ ಕುಸಗಲ್ ಅಲ್ಲದೇ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.