ಗುರುವಾರ , ಮೇ 6, 2021
33 °C

`ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಾಮಾಜಿಕ ತಪಾಸಣೆ ಅಗತ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಾಮಾಜಿಕ ತಪಾಸಣೆ ಅಗತ್ಯ'

ಬೆಂಗಳೂರು: `ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅನುಷ್ಠಾನಗೊಳ್ಳುವ ಕಾರ್ಯಕ್ರಮಗಳ ಕುರಿತು ಲೋಕಾಯುಕ್ತ ಮಾದರಿಯಲ್ಲಿ ಸಾಮಾಜಿಕ ತಪಾಸಣೆ ಮಾಡುವಂತೆ ಹಿರಿಯ ಗಾಂಧಿ ಅನುಯಾಯಿಗಳಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರು ಮನವಿ ಮಾಡಿದರು.ಕರ್ನಾಟಕ ಗಾಂಧಿ ಸ್ಮಾರಕನಿಧಿ ಹಾಗೂ ಹಾವೇರಿಯ ಹುತಾತ್ಮ ಮೈಲಾರ ಮಹಾದೇವಪ್ಪ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಸಹಯೋಗದಲ್ಲಿ ಏರ್ಪಡಿಸಿದ್ದ ಮೈಲಾರ ಮಹಾದೇವಪ್ಪ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.`ಗಾಂಧೀಜಿ ಅವರ ಕನಸಿನ ರಾಮರಾಜ್ಯವನ್ನು ಹಳ್ಳಿಗಳಲ್ಲಿ ನನಸಾಗಿಸಲು ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಲು ಗಾಂಧಿವಾದಿಗಳು  ಒಂದು ಸಮಿತಿಯನ್ನು ಮಾಡಿಕೊಳ್ಳಬೇಕು. ಅದರ ಮುಖ್ಯಸ್ಥರಾಗಿ ನಾಡೋಜ ಡಾ.ಪಾಟೀಲ ಪುಟ್ಟಪ್ಪ, ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಬಿ.ಜಿ.ಬಣಕಾರ್ ಹಾಗೂ ಗಾಂಧಿ ಸ್ಮಾರಕನಿಧಿಯ ಅಧ್ಯಕ್ಷ ಡಾ.ಹೊ. ಶ್ರೀನಿವಾಸಯ್ಯ ಅವರು ಇರಬೇಕು' ಎಂದರು.`ಗ್ರಾಮ ಪಂಚಾಯಿತಿ ವ್ಯವಸ್ಥೆಯನ್ನು ಬಲಗೊಳಿಸಿ, ಸದಸ್ಯರಲ್ಲಿ ನೈತಿಕ ಧೈರ್ಯವನ್ನು ತುಂಬಬೇಕಿದೆ. ಈ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ಹಾಗೂ ನಾನು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ನಿಗಾವಹಿಸಿ ಇಲಾಖೆಯ ಗಮನಕ್ಕೆ ತರಬೇಕು. ಮೂರು ತಿಂಗಳಿಗೊಮ್ಮೆ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಅವರಿಗೆ ಸಲಹೆಗಳನ್ನು ನೀಡಬೇಕು' ಎಂದು ಮನವಿ ಮಾಡಿದರು.  ಮೈಲಾರ ಮಹಾದೇವಪ್ಪ ಟ್ರಸ್ಟ್ ಆಧುನಿಕ ಸಂಪರ್ಕ ಮಾಧ್ಯಮಗಳನ್ನು ಬಳಸಿ, ಮಹಾದೇವಪ್ಪ ಅವರ ಮಾಹಿತಿಯನ್ನು ಪ್ರಕಟಿಸಬೇಕು ಎಂದು ಸಲಹೆ ನೀಡಿದರು.ಅಕ್ಟೋಬರ್ 2ರ ಒಳಗಾಗಿ ಬೆಂಗಳೂರಿನಲ್ಲಿ ಗಾಂಧಿ ವಸ್ತುಸಂಗ್ರಹಾಲಯದ ಸ್ಥಾಪನೆ ಬಗ್ಗೆ ಪ್ರಾರಂಭಿಕ ಹಂತದ ಕೆಲಸಗಳನ್ನು ಆರಂಭಿಸಲು ಅದರ ರೂಪುರೇಷೆಗಳನ್ನು ತಯಾರಿಸಲಾಗುವುದು. ಹಾಗೂ ಗಾಂಧಿ ಸ್ಮಾರಕನಿಧಿಗೆ ಹೆಚ್ಚಿನ ಅನುದಾನ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು.ಡಾ.ಪಾಟೀಲ ಪುಟ್ಟಪ್ಪ ಅವರು ಮಾತನಾಡಿ, ವಿಧಾನ ಸಭೆಯ ಮಾಜಿ ಸಭಾಧ್ಯಕ್ಷ ಬಿ.ಜಿ.ಬಣಕಾರ್ ಅವರು ರಾಜಕಾರಣದಿಂದ ಶಾಶ್ವತವಾಗಿ ಹೊರ ಬರಬೇಕು. ಬೇರೆಯವರಿಂದ ಅಪೇಕ್ಷೆ ಮಾಡುವವರ ಧ್ವನಿ ಸದಾ ಕುಗ್ಗುತ್ತದೆ. ಹೀಗಾಗಿ ರಾಜಕೀಯ ಪಕ್ಷಗಳಿಂದ  ಅಪೇಕ್ಷೆ ಮಾಡುವ ಬದಲು ಬೇರೆಯವರಿಗೆ ಕೊಡುವ ಸ್ಥಿತಿಗೆ ಅವರು ಬರಬೇಕು ಎಂದು ಸಲಹೆ ನೀಡಿದರು. ಹುತಾತ್ಮ ಮೈಲಾರ ಮಹಾದೇವಪ್ಪ ಅವರ ಹೋರಾಟದ ಬದುಕಿನ ಕುರಿತು ಸಂಕಮ್ಮ ಜಿ. ಸಂಕಣ್ಣ ಅವರು ರಚಿಸಿರುವ `ಹೋರಾಟದ ಒಂದು ನೋಟ' ಪುಸ್ತಕವನ್ನು ಬಿಡುಗಡೆ ಮಾಡಿದ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರು, ಕಳೆದು ಹೋದ ಜೀವನದ ಮೌಲ್ಯಗಳನ್ನು ಪುನಶ್ಚೇತನಗೊಳಿಸುವಲ್ಲಿ ಈ ಕಥನ ಸಹಕಾರಿಯಾಗಿದೆ. ಹೀಗಾಗಿ ಪ್ರತಿಯೊಂದು ಯುವ ಮನಸ್ಸು ಇದನ್ನು ಓದಲೇಬೇಕು ಎಂದು ಹೇಳಿದರು.ಹಾವೇರಿಯ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ್, ಲೇಖಕಿ ಸಂಕಮ್ಮ ಜಿ. ಸಂಕಣ್ಣ, ವಿಧಾನ ಸಭೆಯ ಮಾಜಿ ಸಭಾಧ್ಯಕ್ಷ ಬಿ.ಜಿ.ಬಣಕಾರ್, ಕರ್ನಾಟಕ ಗಾಂಧಿ ಸ್ಮಾರಕನಿಧಿಯ ಅಧ್ಯಕ್ಷ ಡಾ.ಹೊ.ಶ್ರೀನಿವಾಸಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಆಯುಕ್ತ ಡಾ. ಮನು ಬಳಿಗಾರ್ ಉಪಸ್ಥಿತರಿದ್ದರು.`ಮೈಸೂರಿಗಷ್ಟೇ ಮುಖ್ಯಮಂತ್ರಿ ಅಲ್ಲ'

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ಮತ್ತು ಮೈಸೂರನ್ನು ಮಾತ್ರ ಕರ್ನಾಟಕ ಎಂದು ಭಾವಿಸಿದಂತೆ ಕಾಣುತ್ತಿದೆ. ಅವರು ಉತ್ತರ ಕರ್ನಾಟಕದ ಜಿಲ್ಲೆಗಳತ್ತ ತಿರುಗಿಯೂ ನೋಡುತ್ತಿಲ್ಲ ಎಂದು ಪಾಟೀಲ ಪುಟ್ಟಪ್ಪ ಅಸಮಾಧಾನ ವ್ಯಕ್ತಪಡಿಸಿದರು.ಮುಖ್ಯಮಂತ್ರಿಗಳು ವಿಜಾಪುರ, ಬೆಳಗಾವಿ, ಹುಬ್ಬಳ್ಳಿ ಹಾಗೂ ಧಾರವಾಡಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಅರಿಯಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.