ಮಂಗಳವಾರ, ಮೇ 18, 2021
22 °C

`ಗ್ರಾಮೀಣ ನಗರೀಕರಣದಿಂದ ಮಲೇರಿಯ ಉಲ್ಬಣ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರ ಪ್ರದೇಶಗಳಿಗಿಂತಲೂ ಇದೀಗ ನಗರಗಳ ಸಮೀಪ ಇರುವ ಗ್ರಾಮೀಣ ಪ್ರದೇಶಗಳಲ್ಲಿ ಮಲೇರಿಯ, ಡೆಂಗೆಯಂತಹ ಕಾಯಿಲೆಗಳು ಹೆಚ್ಚಾಗಿ  ಕಾಣಿಸಿಕೊಳ್ಳತೊಡಗಿದೆ. ಗ್ರಾಮೀಣ ಪ್ರದೇಶಗಳು ನಗರ ಪ್ರದೇಶಗಳಂತೆ ಅಭಿವೃದ್ಧಿಗೊಳ್ಳುತ್ತಿರುವುದು ಮತ್ತು ಅಭಿವೃದ್ಧಿಯ ಓಟದಲ್ಲಿ ನಿಯಮಗಳನ್ನು ಪಾಲಿಸದೆ ಇರುವುದೇ ಇದಕ್ಕೆ ಕಾರಣ ಎಂದು ಮಂಗಳೂರು ಉಪವಿಭಾಗಾಧಿಕಾರಿ ಸದಾಶಿವ ಪ್ರಭು ಹೇಳಿದರು.ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಮಲೇರಿಯ, ಡೆಂಗೆಯಂತಹ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಡೆದ ಮಂಗಳೂರು ಮತ್ತು ಬಂಟ್ವಾಳ ತಾಲ್ಲೂಕುಗಳ ಕಂದಾಯ ಅಧಿಕಾರಿಗಳು, ಪಂಚಾಯಿತಿ ಅಧಿಕಾರಿಗಳ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.ನಗರ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣಗಾರರು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸತೊಡಗಿದ್ದಾರೆ. ನೈರ್ಮಲ್ಯ ಅಧಿಕಾರಿಗಳು ಸಹ ಜನರಲ್ಲಿ ನೈರ್ಮಲ್ಯದ ಅರಿವು ಮೂಡಿಸುವಲ್ಲಿ ಸಫಲರಾಗತೊಡಗಿದ್ದಾರೆ. ಆದರೆ ನಗರಕ್ಕೆ ತಾಗಿಗೊಂಡಿರುವ ದೇರಳಕಟ್ಟೆ, ಮೂಲ್ಕಿ, ಕಿನ್ನಿಗೋಳಿ, ಉಳ್ಳಾಲ ಮೊದಲಾದೆಡೆ ಮಲೇರಿಯ, ಡೆಂಗೆ ರೋಗಗಳನ್ನು ಹರಡುವ ಸೊಳ್ಳೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಇನ್ನೂ ಕೈಗೊಳ್ಳದೆ ಇರುವುದರಿಂದ ಇದೀಗ ಈ ಭಾಗಗಳಲ್ಲಿ ಕಾಯಿಲೆಗಳು ಹೆಚ್ಚುವಂತಾಗಿದೆ ಎಂದರು.ಗ್ರಾಮಾಂತರ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಅಗತ್ಯದ ಸೊಳ್ಳೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪಿಡಿಒಗಳು ಮತ್ತು ಕಂದಾಯ ಅಧಿಕಾರಿಗಳಿಗೆ ಸೂಚಿಸಿದ ಅವರು, ಆರೋಗ್ಯ ಸಚಿವರು ನಮ್ಮ ಜಿಲ್ಲೆಯವರಾಗಿರುವುದರಿಂದ ಅಧಿಕಾರಿಗಳ ಹೊಣೆಗಾರಿಕೆ ಇನ್ನಷ್ಟು ಹೆಚ್ಚಿದೆ ಎಂದರು.ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಡ ಪರವಾನಗಿ ನೀಡುವಲ್ಲಿ ಕೆಲವು ಅಧಿಕಾರಿಗಳು ಬೇಕಾಬಿಟ್ಟಿಯಾಗಿ ವರ್ತಿಸುವುದನ್ನು ಅವರು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಮಲೇರಿಯ ಅಧಿಕಾರಿ ಡಾ.ಎಸ್.ಬಿ.ಅರುಣ್ ಕುಮಾರ್ ಅವರು ಮಲೇರಿಯ, ಡೆಂಗೆ, ಇಲಿಜ್ವರ, ಆನೆಕಾಲು ರೋಗ ಸಹಿತ ಇತರ ಸಾಂಕ್ರಾಮಿಕ ರೋಗಗಳ ಲಕ್ಷಣ, ಅವುಗಳ ನಿಯಂತ್ರಣ ಕ್ರಮಗಳ ಕುರಿತು ಅವರು ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.