ಶನಿವಾರ, ಮೇ 8, 2021
22 °C

ಗ್ರಾಮೀಣ ಸೊಗಡಿದ್ದರೆ ಮೇಳ ಇನ್ನೂ ಚೆನ್ನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಕೃಷಿ ವಿಶ್ವವಿದ್ಯಾಲಯ ಪ್ರತಿ ವರ್ಷ ಆಯೋಜಿಸುವ ಕೃಷಿ ಮೇಳ ಬೆಳ್ಳಿ ಹಬ್ಬ ಆಚರಿಸಿಕೊಂಡಿದೆ. ಹೊಲಗಳಲ್ಲಿ ವರ್ಷವಿಡೀ ಜೀವ ತೇಯುವ ರೈತರ ಪಾಲಿಗೆ ವಸ್ತುಶಃ ಹಬ್ಬವೇ ಆಗಿರುವ ಈ ಮೇಳ ರೈತರಿಗೆ ಇನ್ನಷ್ಟು ಹತ್ತಿರ ಆಗಬೇಕಿದೆ.ಹಾಗೆಂದ ಮಾತ್ರಕ್ಕೆ ಅದು ರೈತರಿಂದ ದೂರವಾಗಿದೆ ಎಂದು ಹೇಳುತ್ತಿಲ್ಲ. ರೈತರನ್ನು ಇನ್ನಷ್ಟು ಸಕ್ರಿಯವಾಗಿ ಇದರಲ್ಲಿ ಯಾವ ರೀತಿ ತೊಡಗಿಸಿಕೊಳ್ಳಬೇಕು. ಅವರ ಹೃದಯ ತಟ್ಟಲು ಯಾವ ರೀತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂಬುದರ ಬಗ್ಗೆ ಚರ್ಚಿಸುವ ಉದ್ದೇಶ ಇಲ್ಲಿದೆ.1970ರ ದಶಕದಲ್ಲಿ ಕ್ಷೇತ್ರೋತ್ಸವದ ಮಾದರಿಯಲ್ಲಿ ಆರಂಭವಾದ ಕೃಷಿ ವಿಶ್ವವಿದ್ಯಾಲಯದ ಈ ಪ್ರಯತ್ನ ಮೇಳದ ರೂಪು ಪಡೆದು ಧಾರವಾಡವಲ್ಲದೇ ಸುತ್ತ ಮುತ್ತಲಿನ ಹತ್ತಾರು ಜಿಲ್ಲೆಗಳ ಮಣ್ಣಿನ ಮಕ್ಕಳನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.ಕೃಷಿ ವಿಶ್ವವಿದ್ಯಾಲಯ ತನ್ನ ಇತಿ ಮಿತಿಯಲ್ಲಿ ಕಳೆದ ಎರಡೂವರೆ ದಶಕದಿಂದ ಅಚ್ಚುಕಟ್ಟಾಗಿ ಮೇಳವನ್ನು ನಡೆಸುತ್ತ ಬಂದಿದೆ. ಅದರ ಪ್ರಯತ್ನಕ್ಕೆ ಮೊದಲು ಹ್ಯಾಟ್ಸ್ ಆಫ್ ಹೇಳೋಣ. ಜತೆಗೆ ಅನ್ನದಾತನ ಈ ಮೇಳವನ್ನು ಇನ್ನಷ್ಟು ಅರ್ಥಪೂರ್ಣವಾಗಿಸುವ ದಿಸೆಯಲ್ಲಿ ವಿಶ್ವವಿದ್ಯಾಲಯ ಮುಖ್ಯವಾಗಿ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ತೋಟಗಾರಿಕೆ, ಪಶುಸಂಗೋಪನೆ ಇಲಾಖೆಗಳ ಸಹಕಾರ ಪಡೆದುಕೊಂಡು  ಮೇಳದ ಹರಹನ್ನು ಇನ್ನಷ್ಟು ವಿಸ್ತೃತಗೊಳಿಸಬೇಕು ಎಂಬ ಬಗ್ಗೆ ಯೋಚಿಸಬೇಕಿದೆ.ಜತೆಗೆ ರೈತರಿಗೆ ಚಕ್ಕಡಿ ಓಡಿಸುವ ಸ್ಪರ್ಧೆ, ರೈತರ ರಾಸುಗಳ ಸ್ಪರ್ಧೆ, ಹಾಲು ಕರೆಯುವ ಸ್ಪರ್ಧೆ ಮೊದಲಾದವನ್ನು ಏರ್ಪಡಿಸಬಹುದು. ಕೃಷಿ ಮೇಳ ನಡೆದ ಕೃಷಿ ವಿಶ್ವವಿದ್ಯಾಲಯದ ಆವರಣವನ್ನೇ ತೆಗೆದುಕೊಳ್ಳಿ. ಒಂದೆಡೆ ಕೃಷಿಕರ ಜಾತ್ರೆಯೇ ನೆರೆದಿದ್ದರೆ ಇನ್ನೊಂದೆಡೆ ಫಲಪುಷ್ಪ ಪ್ರದರ್ಶನವಿದ್ದ ಕಟ್ಟಡ ಹೊರತುಪಡಿಸಿದರೆ ವಿ.ವಿ.ಯ ವಿವಿಧ ವಿಭಾಗಗಳಿದ್ದ ಕಟ್ಟಡಗಳು ಬಿಕೋ ಎನ್ನುತ್ತಿದ್ದವು.

 

ವಿ.ವಿ. ಆವರಣದಲ್ಲಿ ಇರುವ ಇತರೆ ಕಟ್ಟಡ (ವಿಭಾಗ) ಗಳನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುವ ಕಾರ್ಯವೂ ಆಗಬೇಕು. ಜತೆಗೆ ಜನಪದ ಕಲೆಗಳ ಸ್ಪರ್ಧೆ, ಪ್ರದರ್ಶನ ಕಾರ್ಯಕ್ರಮಗಳನ್ನು ಯೋಚಿಸಬಹುದು.

 

ಗ್ರಾಮೀಣ ಜನರಲ್ಲಿ ಇನ್ನೂ ಉಳಿದುಕೊಂಡು ಬಂದಿರುವ ಭಜನಾ ಮೇಳ, ವಿವಿಧ ವಾದ್ಯಗಳ ಮೇಳಗಳನ್ನು ಪ್ರದರ್ಶಿಸುವತ್ತ ಸಹ ಯೋಚಿಸಬಹುದು. ಈ ಬಾರಿ ರೈತ ವರ್ಗದ ಮನೋಲ್ಲಾಸಕ್ಕೆ ಕರಡಿ ಮಜಲು ಕಾರ್ಯಕ್ರಮ ಏರ್ಪಡಿಸಲಾಗಿತ್ತು.ರೈತರಿಂದ ರೈತರಿಗಾಗಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ರೈತರಿಗೆ, ಅವರ ಅನಿಸಿಕೆಗಳಿಗೆ ಈ ಬಾರಿ ಮನ್ನಣೆ ನೀಡಿರುವುದು ಶ್ಲಾಘನೀಯ. ಇಂಥ ಕಾರ್ಯಕ್ರಮಗಳಿಗೆ ಇನ್ನಷ್ಟು ಪ್ರಾಮುಖ್ಯ ನೀಡುವ ಅವಶ್ಯಕತೆ ಇದೆ.ಬರೀ ವಿ.ವಿ. ವಿಜ್ಞಾನಿಗಳು ಹೇಳಿದ್ದನ್ನು ರೈತಾಪಿ ಜನರು ಕೇಳಿಕೊಂಡು ಹೋಗುವ ಕಾರ್ಯಕ್ರಮ ಇದಾಗದೇ ಹೊಲ, ಗದ್ದೆಗಳಲ್ಲಿ ಬೆವರು ಹರಿಸುವ ಕೃಷಿಕರು, ಕೃಷಿ ಕಾರ್ಮಿಕರ ಅನುಭವವನ್ನೂ ಕೃಷಿ ವಿವಿ ವಿಜ್ಞಾನಿಗಳು ಅರಿಯುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಅದಕ್ಕೆ ರೈತರಿಂದ ರೈತರಿಗಾಗಿ ಕಾರ್ಯಕ್ರಮ ಸ್ವಲ್ಪ ಮಟ್ಟಿಗೆ ಸಹಕಾರಿಯಾಯಿತು.ಕಾರ್ ಶೋ ರೂಮ್‌ಗೆ ಕಾಲಿಟ್ಟರೆ ನಮ್ಮ ಕಾರ್ ಪ್ರತಿ ಲೀಟರ್‌ಗೆ ಇಷ್ಟು ಕಿ.ಮೀ ಕೊಡುತ್ತದೆ ಎಂದು ಅಲ್ಲಿನ ಸಿಬ್ಬಂದಿ ಹೇಳುತ್ತಾರೆ. ಅವರು 10 ಎಂ.ಎಲ್. ಪೆಟ್ರೋಲ್ ಅನ್ನು ಆದರ್ಶ ಸ್ಥಿತಿಯಲ್ಲಿ ಬಳಸಿ ಅದು ಎಷ್ಟು ಮೈಲೇಜ್ ಕೊಡುತ್ತದೆ ಎಂದು ಲೆಕ್ಕ ಹಾಕಿ ಹೇಳುತ್ತಾರೆ.ವಾಸ್ತವವಾಗಿ ರಸ್ತೆಯ ಮೇಲೆ (ರಸ್ತೆಯ ಸ್ಥಿತಿ ಅಥವಾ ದುಃಸ್ಥಿತಿ ಪರಿಗಣಿಸಿ, ಕಲಬೆರಕೆ ಪೆಟ್ರೋಲ್ ಬಳಸಿ) ಆ ವಾಹನ ಎಷ್ಟು ಮೈಲೇಜ್ ಕೊಡುತ್ತದೆ ಎಂಬುದನ್ನು ವಾಹನ ಖರೀದಿಸಿ ಒಂದಷ್ಟು ದಿನ ಓಡಿಸಿದ ಮೇಲೆಯೇ ಗ್ರಾಹಕನಿಗೆ ಅರಿವಿಗೆ ಬರುತ್ತದೆ.ಅಂತೆಯೇ ಕೃಷಿ ವಿ.ವಿ. ವಿಜ್ಞಾನಿಗಳು ಐಡಿಯಲ್ ಕಂಡೀಷನ್‌ನಲ್ಲಿ ತಮ್ಮ ವಿವಿ. ವ್ಯಾಪ್ತಿಯ ಹೊಲಗಳಲ್ಲಿ ಬೆಳೆದ ಬೆಳೆ ರೈತನ ಹೊಲದಲ್ಲಿ (ಪದೇ ಪದೇ ಬಳಸಿ ಸತ್ವ ಕಡಿಮೆಯಾದ, ಹೊತ್ತು ಹೊತ್ತಿಗೆ ನೀರು, ವಿದ್ಯುತ್ ದೊರೆಯದ ಸ್ಥಿತಿ) ಅದು ಎಷ್ಟರಮಟ್ಟಿಗೆ ಫಲಕಾರಿ ಆದೀತು ಎಂಬ ಬಗ್ಗೆ ಚಿಂತಿಸುವ ಅಗತ್ಯವಿದೆ.ಕುದುರೆಯ ಕಣ್ಣಿಗೆ ಕಟ್ಟಿರುವ ಕಣ್‌ಕಾಪು ನೋಟ ಬಿಟ್ಟು ಅದರಾಚೆಗೂ ಯೋಚಿಸಿ, 25 ವಸಂತಗಳನ್ನು ಪೂರೈಸಿರುವ ಕೃಷಿಕರ ಈ ಹಬ್ಬವನ್ನು ಇನ್ನಷ್ಟು ಅರ್ಥಪೂರ್ಣ ಮಾಡುವ ದಿಸೆಯಲ್ಲಿ ಯೋಚಿಸಲು ಇದು ಸಕಾಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.