ಶನಿವಾರ, ಮೇ 28, 2022
26 °C

ಗ್ರಾಹಕರಿಗೆ ಉತ್ತಮ ಸೇವೆ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: “ಮಹಾತ್ಮಾ ಗಾಂಧೀಜಿ ಅವರು ವ್ಯಾಪಾರಿಗಳಿಗೆ ಹೇಳುತ್ತಿದ್ದ ಗ್ರಾಹಕರು ನಮ್ಮ ಸಲುವಾಗಿ ಅಲ್ಲ, ನಾವು ಗ್ರಾಹಕರ ಸಲುವಾಗಿದ್ದೇವೆ ಎನ್ನುವ ಮಾತಿನಂತೆ ಉತ್ತಮ ಸೇವೆ ನೀಡಲು ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಮುಂದಾಗಬೇಕು” ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ಹೇಳಿದರು.ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಹಾರ ಇಲಾಖೆ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.ಅವಳಿನಗರದಲ್ಲಿ ಎಲ್‌ಪಿಜಿ ಸಿಲಿಂಡರ್ ವಿತರಣೆ ವ್ಯವಸ್ಥೆ ಪಾರದರ್ಶಕವಾಗಿಸಲು ಪ್ರತಿಯೊಬ್ಬ ಡೀಲರ್‌ಗಳ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮಹಿಳಾ ತಂಡಗಳ ರಚನೆಗೆ ಆಹಾರ ಇಲಾಖೆ ಸಿದ್ಧವಿದೆ.   ಪಡಿತರ ಅಂಗಡಿಗಳ ವ್ಯವಹಾರ ಪರಿಶೀಲನೆಗೆ ಈಗಾಗಲೇ ಜಾಗೃತಿ ಸಮಿತಿಗಳು ಅಸ್ತಿತ್ವದಲ್ಲಿವೆ ಎಂದರು.ಪಾರದರ್ಶಕ ವ್ಯವಹಾರ ನಡೆಯಲು ಎಲ್ಲರೂ ಜಾಗೃತರಾಗಿ ಕಾರ್ಯನಿರ್ವಹಿಸಬೇಕು. ಗ್ರಾಹಕರ ರಕ್ಷಣಾ ಕಾಯ್ದೆಗಳ ಮಾಹಿತಿ ಹೊಂದುವ ಅಗತ್ಯವಿದೆ. ಇಂದಿನ ದಿನಗಳಲ್ಲಿ ಖಾಸಗಿ ಸಹಭಾಗಿತ್ವದಿಂದಾಗಿ ಬಹಳಷ್ಟು ಸೇವೆಗಳು ಜನರಿಗೆ ಸುಲಭವಾಗಿ ಸಿಗುವಂತಾಗಿವೆ. ವಿಶ್ವದ ಯಾವುದೇ ಮೂಲೆಯ ಉತ್ಪನ್ನಗಳಿಂದು ದೇಶಿ ಮಾರುಕಟ್ಟೆಯಲ್ಲಿ ಸಿಗುವಂತಾಗಿದೆ.  ನ್ಯಾಯಬದ್ಧ ವ್ಯವಹಾರ, ರಸೀದಿ ಪಡೆಯುವ ಬಗ್ಗೆ ಜಾಗೃತರಾಗಬೇಕು ಎಂದು ಹೇಳಿದರು.ಧಾರವಾಡ ಗ್ರಾಹಕರ ವೇದಿಕೆ ಅಧ್ಯಕ್ಷ ಎನ್.ಪಿ.ಭಟ್ ಮಾತನಾಡಿ, ಆಹಾರದಲ್ಲಿನ ಕಲಬೆರಕೆ ಸಮಸ್ಯೆ ತಡೆಯಲು ಧಾರವಾಡದಲ್ಲಿ ಆಹಾರ ವಸ್ತು ಪರಿಶೀಲನಾ ಪ್ರಯೋಗಶಾಲೆ ಸ್ಥಾಪಿಸಬೇಕು. ಪಡಿತರ ಆಹಾರ ಧಾನ್ಯಗಳಲ್ಲಿ ಆಗುವ ವಿಪರೀತ ಕಲಬೆರಕೆ ತಡೆಯಲು ಮಹಿಳಾ ತಂಡಗಳ ರಚನೆಗೆ ಹಾಗೂ ಅವಳಿನಗರದ ಸುಪರ್ ಮಾರುಕಟ್ಟೆ ಪ್ರದೇಶಗಳಲ್ಲಿ ಸ್ತ್ರೀಯರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಲು ಪಾಲಿಕಗೆಗೆ ಸೂಚಿಸಬೇಕು. ಎಂದರು. ವಕೀಲ ಬಸವಪ್ರಭು ಹೊಸಕೇರಿ ಉಪನ್ಯಾಸ ನೀಡಿದರು. ಎಸ್.ಎಲ್. ಮಟ್ಟಿ, ಎಂ.ವಿಜಯಲಕ್ಷ್ಮೀ, ಪಾಟೀಲ ಮಾತನಾಡಿದರು.ಗ್ರಾಹಕ ದೂರುಗಳ ಪರಿಹಾರ ವೇದಿಕೆ ಅಧ್ಯಕ್ಷ ಶೇಖರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಂ. ನೂರಮನ್ಸೂರ  ಉಪಸ್ಥಿತರಿದ್ದರು. ಗ್ರಾಹಕ ಉಪಯುಕ್ತ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಆಹಾರ ಇಲಾಖೆ ಉಪನಿರ್ದೇಶಕ ಶರಣಬಸಪ್ಪ ಸ್ವಾಗತಿಸಿದರು. ಬೇವೂರ ವಂದಿಸಿದರು.  ಗ್ರಾಹಕ ಜಾಗೃತಿ ಜಾಥಾ ನಡೆಯಿತು. ಸಿ.ಎಂ.ನೂರಮನ್ಸೂರ ಚಾಲನೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.