ಗುರುವಾರ , ಏಪ್ರಿಲ್ 22, 2021
29 °C

ಚಂಪಕಧಾಮ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದ ಹೊರವಲಯದ ಬನ್ನೇರುಘಟ್ಟ, ರಾಷ್ಟ್ರೀಯ ಉದ್ಯಾನದಿಂದಾಗಿ ಅತಿ ಜನಪ್ರಿಯ ಪ್ರವಾಸಿ ತಾಣವಾಗಿದೆ. ಬನ್ನೇರುಘಟ್ಟ ಅರ್ಧ ಕಿ.ಮೀ. ದೂರದಲ್ಲಿದ್ದಾಗಲೇ ಪಶ್ಚಿಮ ದಿಕ್ಕಿನಲ್ಲಿ ಬೃಹತ್ ಏಕಶಿಲಾ ಬೆಟ್ಟ (ವಹ್ನಿಗಿರಿ) ಕಾಣುತ್ತದೆ. ಇದರ ತಪ್ಪಲಿನಲ್ಲಿ ಇರುವುದೇ ಚಂಪಕಧಾಮ ಸ್ವಾಮಿ ದೇವಸ್ಥಾನ. ಇದಕ್ಕೆ ಐತಿಹಾಸಿಕ ಹಿನ್ನೆಲೆ ಇದೆ.ಸುಮಾರು ಮೂವತ್ತು ಅಡಿ ಎತ್ತರದ ಗುಡ್ಡದಲ್ಲಿನ ಈ ಸುಂದರ ದೇವಸ್ಥಾನದಲ್ಲಿ ಚಂಪಕಧಾಮ ಸ್ವಾಮಿ ಶ್ರೀದೇವಿ, ಭೂದೇವಿಯವರೊಡನೆ ವಿರಾಜಿಸಿದ್ದಾನೆ. ಇಲ್ಲಿನ ಮಹಾದ್ವಾರದ ಮೇಲೆ ಸುಮಾರು ಎಂಬತ್ತು ಅಡಿಗಳ ಬೃಹತ್ ರಾಜಗೋಪುರವಿದ್ದು, ಬಹುದೂರದಿಂದಲೆ ಭಕ್ತರನ್ನು ಆಕರ್ಷಿಸುತ್ತಿದೆ. ಈ ದೇವಾಲಯವನ್ನು ಚೋಳರು ಅಥವಾ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲಾಗಿದೆ ಎನ್ನಲಾಗಿದೆ. ಸಭಾಮಂಟಪದ ಒಂದು ಸ್ತಂಭದಲ್ಲಿ ವಿಜಯನಗರದ ರಾಜಲಾಂಛನದ ಕೆತ್ತನೆಯಿದೆ. ಬೃಹತ್ ಶಿಲೆಗಳಿಂದ ಕಟ್ಟಿರುವ ದೇವಾಲಯ ಸಪ್ತದ್ವಾರಗಳಿಂದ ಕೂಡಿದ್ದು, ದೇವಾಲಯದ ಹೊರಭಾಗದಲ್ಲಿ ಮಹಾಲಕ್ಷ್ಮೀ ದೇವಾಲಯ, ಧ್ವಜಸ್ತಂಭ, ಬಲಿಪೀಠ, ಗರುಡಗಂಬವಿದೆ. ಯಾಗಶಾಲೆ, ಪಾಕಶಾಲೆ, ಕಲ್ಯಾಣ ಮಂಟಪಗಳಿವೆ.ಪ್ರತಿವರ್ಷ ಫಾಲ್ಗುಣ ಮಾಸದ ಅನುರಾಧ ನಕ್ಷತ್ರದಲ್ಲಿ ಇಲ್ಲಿ ಬ್ರಹ್ಮೋತ್ಸವದ ಜತೆ ಒಂಬತ್ತು ದಿನದ ಜಾತ್ರೆ ಆರಂಭ. ಈ ಅವಧಿಯಲ್ಲಿ ನಡೆಯುವ ರಾಜಬೀದಿ ಉತ್ಸವಗಳು ನಯನ ಮನೋಹರ. ಅವುಗಳಲ್ಲಿ ಗರುಡೋತ್ಸವ, ಶೇಷವಾಹನೋತ್ಸವ, ಗಜೇಂದ್ರಮೋಕ್ಷ, ಹನುಮಂತ ವಾಹನೋತ್ಸವ ಹಾಗೂ ಹಂಸ ವಾಹನೋತ್ಸವ ವಿಜೃಂಭಣೆಯಿಂದ ಜರುಗುತ್ತವೆ.ಬಹ್ಮರಥೋತ್ಸವ ಮತ್ತು ಅಂದು ರಾತ್ರಿ ನಡೆಯುವ ಪಲ್ಲಕ್ಕಿಗಳ ಉತ್ಸವಗಳನ್ನು ನೋಡಲು ಸಾವಿರಾರು ಭಕ್ತರು ನೆರೆಯುತ್ತಾರೆ, ಜಾತ್ರೆಯ ಕಾಲದಲ್ಲಿ ವಿವಿಧ ಛತ್ರಗಳಲ್ಲಿ ಅನ್ನದಾನ ನಡೆಯುತ್ತದೆ. ಯಾತ್ರಿಕರು ಉಳಿದುಕೊಳ್ಳಲು ಖಾಸಗಿ ಛತ್ರಗಳಿವೆ. ಇಲ್ಲಿ ಉತ್ತಮ ಸಾರಿಗೆ ಸೌಲಭ್ಯವಿದ್ದು, ನಗರ ಸಾರಿಗೆ, ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಜತೆ ಪ್ರತಿ ಹತ್ತು ನಿಮಿಷಕ್ಕೊಂದು ಖಾಸಗಿ ಬಸ್ಸುಗಳು ಓಡಾಡುತ್ತವೆ.ಆಕರ್ಷಣೆ: ದೇವಸ್ಥಾನದ ಹಿಂಭಾಗದಲ್ಲಿರುವ ವಹ್ನಿಗಿರಿ ಮೇಲಿಂದ ವಿಸ್ತಾರವಾದ ಅರಣ್ಯವನ್ನು ಮತ್ತು ದೂರದ ಸಾವನದುರ್ಗ, ಶಿವಗಂಗೆ, ನಂದಿದುರ್ಗ, ಹೊಸೂರ ಬೆಟ್ಟ, ರಾಮನಗರ ಮತ್ತು ಕನಕಪುರದ ಬೆಟ್ಟಗಳು ಹಾಗೂ ಕೋಲಾರ ಬೆಟ್ಟಗಳನ್ನು ವೀಕ್ಷಿಸಬಹುದು. ಇಲ್ಲಿಂದ ಸೂರ್ಯೋದಯ, ಸೂರ್ಯಾಸ್ತವನ್ನು ವೀಕ್ಷಿಸುವುದು ಕಣ್ಣಿಗೆ ಹಬ್ಬ. ಬೆಟ್ಟದ ಮೇಲ್ಭಾಗದ ಲಕ್ಷ್ಮಿನರಸಿಂಹ ದೇವಾಲಯ ಬಹು ಸುಂದರವಾಗಿದೆ. ಬೆಟ್ಟವನ್ನು ಹತ್ತಲು ವಿಶಾಲವಾದ ಸೋಪಾನಗಳಿದ್ದು ಆಶ್ರಯಕ್ಕಾಗಿ ರೈಲಿಂಗ್ಸ್ ಕಂಬಿಗಳನ್ನು ಹಾಕಲಾಗಿದೆ.ಈ ಬೆಟ್ಟದ ಮೇಲಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿ ಅರಣ್ಯದ ಕಾಲುದಾರಿಯಲ್ಲಿ ಸಾಗಿದರೆ ಪ್ರಸಿದ್ಧವಾದ ಸುವರ್ಣಮುಖಿ ಎಂಬ ಕಲ್ಯಾಣಿಯಿದ್ದು ಯಾತ್ರಿಕರ, ಭಕ್ತರ ಪಾಲಿಗೆ ಪವಿತ್ರ ಪಾಪನಾಶಿನಿಯಾಗಿದೆ. ಇತ್ತೀಚೆಗೆ ಅಮಾವಾಸ್ಯೆ, ಹುಣ್ಣಿಮೆಯ ದಿನ ಸಾವಿರಾರು ಜನ ಬರುತ್ತಿದ್ದಾರೆ.ಮಳೆಗಾಲದಲ್ಲಿ ಈ ಕಲ್ಯಾಣಿ ಭರ್ತಿಯಾಗಿ ಹೊರಗಡೆ ಹರಿಯುವ ನೀರೆ ಸುವರ್ಣಮುಖಿ ಹೊಳೆಯಾಗಿ ಹರಿದು ಅರ್ಕಾವತಿ ನದಿಗೆ ವಿಲೀನವಾಗಿ ಮುಂದೆ ಕಾವೇರಿ ನದಿಗೆ ಸೇರ್ಪಡೆಯಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.