ಗುರುವಾರ , ಮೇ 28, 2020
27 °C

ಚಂಬಾ ಎಂಬ ಹಿಮದುಂಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಗಿರಿಧಾಮಗಳಿಗೆ ಪ್ರವಾಸಕ್ಕೆ ಹೋಗಬೇಕೆಂಬ ಆಸೆಯೇನೋ ಇದೆ. ಆದರೆ ಅದಕ್ಕೆ ತಕ್ಕಂತೆ ಹಣ ಇರಬೇಕಲ್ವ? ಜತೆಗೆ ಪ್ರವಾಸಿಗರ ದಟ್ಟಣೆ ಬೇರೆ...’ ಎಂದು ಗೊಣಗುವವರೇ ಅಧಿಕ. ಇತ್ತ ವೆಚ್ಚ ಕಡಿಮೆಯಾಗಬೇಕು; ಗಿರಿಧಾಮಗಳ ಸುಖವನ್ನೂ ಅನುಭವಿಸಬೇಕು ಎಂಬುವವರು ‘ಚಂಬಾ’ ಪಟ್ಟಣಕ್ಕೆ ಬರಬೇಕು.‘ಪರ್ವತಗಳ ರಾಣಿ’ ಎಂದೇ ಖ್ಯಾತಿ ಪಡೆದ ಮಸೂರಿ ಪಟ್ಟಣದ ಸಮೀಪದಲ್ಲೇ ಇರುವ ಇನ್ನೊಂದು ಗಿರಿಧಾಮ- ಚಂಬಾ. ಉತ್ತರಾಖಂಡ ರಾಜ್ಯದ ತೆಹ್ರಿ ಘರ್ವಾಲ್ ಜಿಲ್ಲೆಯ ಈ ಪಟ್ಟಣ ಇನ್ನೂ ಪ್ರವಾಸಿಗರ ‘ಹಾವಳಿಗೆ’ ತುತ್ತಾಗಿಲ್ಲ.ದೆಹಲಿಯಿಂದ ಮುನ್ನೂರು ಕಿಲೋಮೀಟರ್ ಅಥವಾ ಮಸೂರಿಯಿಂದ ಕೇವಲ 50 ಕಿಲೋ ಮೀಟರ್ ದೂರವಿದೆ ಚಂಬಾ. ಸಮುದ್ರ ಮಟ್ಟದಿಂದ 1676 ಮೀಟರ್ ಮೇಲ್ಮಟ್ಟದಲ್ಲಿರುವ ಈ ಪಟ್ಟಣ ಹಿಮಾಲಯದ ತಪ್ಪಲಲ್ಲೇ ಅಡಗಿಕೊಂಡಿದೆ. ಪ್ರಸಿದ್ಧ ಯಾತ್ರಾಸ್ಥಳಗಳಾದ ಉತ್ತರಕಾಶಿ, ರುದ್ರಪ್ರಯಾಗದಂಥ ತಾಣಗಳು ಚಂಬಾಕ್ಕೆ ಸನಿಹದಲ್ಲಿವೆ.ಪರ್ವತದೊಳಗೆ ರಚನೆಗೊಂಡ ಈ ಪಟ್ಟಣದ ಯಾವ ಮೂಲೆಯಲ್ಲಿ ನಿಂತರೂ ಹಿಮಾಲಯದ ಮನಮೋಹಕ ದೃಶ್ಯಗಳು ಕಾಣಸಿಗುತ್ತವೆ. ಚಂಬಾದ ಸುತ್ತಲಿನ ಕಾಡುಗಳಲ್ಲಿ ಪೈನ್ ಹಾಗೂ ದೇವದಾರ್ ಮರಗಳು ಲಕ್ಷಾಂತರ ಸಂಖ್ಯೆಯಲ್ಲಿವೆ. ರಾಫ್ಟಿಂಗ್, ಚಾರಣದಂಥ ಸಾಹಸಕ್ರೀಡೆಗಳಿಗೆ ತಂಡಗಳು ಇಲ್ಲಿಂದಲೇ ಮುಂದೆ ಸಾಗುತ್ತವೆ.ಹಿಮಾಲಯದ ವಾತಾವರಣದಲ್ಲಿ ಕಾಣಸಿಗುವ ಅದ್ಭುತ ವೈವಿಧ್ಯಮಯ ಸಸ್ಯಸಂಪತ್ತು ಇಲ್ಲಿದೆ. ಅಭಿವೃದ್ಧಿ ಯೋಜನೆಗಳ ಕಾಕದೃಷ್ಟಿ ಇವುಗಳತ್ತ ಬೀಳದೇ ಇರುವುದರಿಂದ ಈ ಕಾಡುಗಳು ಇನ್ನೂ ಅದೇ ಸ್ಥಿತಿಯಲ್ಲಿ ಉಳಿದುಕೊಂಡಿರುವುದು ಸಮಧಾನದ ಸಂಗತಿ. ಅಷ್ಟಕ್ಕೂ ಇದೊಂದು ಪ್ರವಾಸಿ ತಾಣವೆಂದು ಹೆಚ್ಚಿನ ಖ್ಯಾತಿ ಪಡೆಯದ ಕಾರಣ, ಮೋಜು-ಮಸ್ತಿ ಮಾಡುವ ಪ್ರವಾಸಿಗರು ಇಲ್ಲಿಗೆ ‘ದಾಳಿ’ ಮಾಡಿಲ್ಲ!1913ರಲ್ಲಿ ನಡೆದ ಒಂದನೇ ಪ್ರಪಂಚ ಯುದ್ಧದಲ್ಲಿ ಘರ್ವಾಲ್ ರೈಫಲ್ಸ್‌ನ ತುಕಡಿ ಅಸಾಧಾರಣ ಶೌರ್ಯ ತೋರಿತ್ತು. ಇದರ ನೇತೃತ್ವ ವಹಿಸಿ, ಹುತಾತ್ಮನಾದ ಗಬ್ಬರ್ ಸಿಂಗ್ ನೇಗಿ ಎಂಬ ಯೋಧ ಚಂಬಾ ಪಟ್ಟಣದವನು. ಆತನ ಸೇವೆಯನ್ನು ಪರಿಗಣಿಸಿ, ಅತ್ಯುನ್ನತ ಗೌರವವಾದ ‘ವಿಕ್ಟೋರಿಯಾ ಕ್ರಾಸ್’ಅನ್ನು ಮರಣೋತ್ತರವಾಗಿ ನೀಡಲಾಗಿತ್ತು. 1925ರಲ್ಲಿ ಗಬ್ಬರ್ ಸಿಂಗ್ ಸ್ಮರಣಾರ್ಥ ಚಂಬಾ ಪಟ್ಟಣದ ಮಧ್ಯಭಾಗದಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಘರ್ವಾಲ್ ರೆಜಿಮೆಂಟ್ ಪ್ರತಿವರ್ಷ ಏಪ್ರಿಲ್ 21ರಂದು (ಗಬ್ಬರ್ ಹುತಾತ್ಮನಾದ ದಿನ) ಇಲ್ಲಿಗೆ ಭೇಟಿ ನೀಡಿ, ಗೌರವ ಸಲ್ಲಿಸುತ್ತದೆ.ಚಂಬಾದಲ್ಲಿ ವಸತಿಗಾಗಿ ಕೆಲವೇ ಲಾಡ್ಜ್‌ಗಳಿವೆ. ದರ ಕೈಗೆಟುಕುವಂತಿದೆ. ಮಾರ್ಚ್‌ನಿಂದ ಮುಂದಿನ ಆರೇಳು ತಿಂಗಳು ಪ್ರವಾಸಿಗರು ಬರುತ್ತಿರುತ್ತಾರೆ. ಅಕ್ಟೋಬರ್‌ನಿಂದ ಚಳಿ ಶುರುವಾಗುವುದರಿಂದ ಲಾಡ್ಜ್‌ಗಳಲ್ಲಿ ಶೂನ್ಯಮಾಸದ ವಾತಾವರಣ. ಚಳಿಗಾಲದ ಅವಧಿಯಲ್ಲಿ ಇತರ ಗಿರಿಧಾಮಗಳಲ್ಲಿ ಪ್ರವಾಸಿಗರು ಕನಿಷ್ಠ ಸಂಖ್ಯೆಯಲ್ಲಿಯಾದರೂ ಭೇಟಿ ಕೊಡುತ್ತಾರೆ. ಆದರೆ ಚಂಬಾದಲ್ಲಿ ಅದು ಅಸಾಧ್ಯ. ‘ಯಾಕೆಂದರೆ, ಬೆಳಗಾಗುವುದರಲ್ಲಿ ಮನೆಯೊಳಗೇ ಒಂದೆರಡು ಅಡಿ ಹಿಮ ಸಂಗ್ರಹವಾಗಿರುತ್ತದೆ. ಕಿಟಕಿ ಬಾಗಿಲು ಸ್ವಲ್ಪ ತೆರೆದಿದ್ದರೂ ಅದರೊಳಗೆ ಹಿಮ ನುಗ್ಗಿಬಿಡುತ್ತದೆ. ಅದನ್ನು ಬಳಿದು ಹೊರಗೆ ಹಾಕುವುದೇ ಕಷ್ಟ...’ ಎಂದು ನಾವು ಉಳಿದುಕೊಂಡಿದ್ದ ‘ಶುಭಂ’ ಲಾಡ್ಜ್‌ನ ಮಾಲೀಕ ಎಸ್.ಜಿ.ನೇಗಿ ಹೇಳಿದಾಗ, ಆ ದೃಶ್ಯ ನೆನೆದೇ ಮೈ ಗಡಗಡ ನಡುಗಿತು! ಇನ್ನೊಂದು ವಾರದ ಬಳಿಕ ಹಿಮ ಸುರಿಯುವಿಕೆ ಆರಂಭವಾಗುತ್ತದೆ ಎಂದು ನೇಗಿ ತಿಳಿಸಿದಾಗ, ಅದನ್ನು ನೋಡುವ ಆಸೆ ಉಂಟಾಗಿದ್ದಂತೂ ನಿಜ!ಮರುದಿನ ಬೆಳಿಗ್ಗೆ ಸೂರ್ಯ ಮೂಡಿದ ನಂತರ ದಪ್ಪನೆಯ ರಜಾಯಿ ಹೊದ್ದುಕೊಂಡು ತುಸು ಧೈರ್ಯದಿಂದ ಬಾಗಿಲು ತೆಗೆದು ಹೊರಬಂದಾಗ ತಾಪಮಾನ 4 ಡಿ. ಸೆಂ. ಇತ್ತು. ಸೂರ್ಯನ ಎಳೆಬಿಸಿಲ ಕಿರಣಗಳಲ್ಲಿ ಥಳಥಳ ಹೊಳೆಯುತ್ತಿದ್ದ ಹಿಮಾಲಯದ ರಮಣೀಯ ದೃಶ್ಯಗಳು ವಿರಾಟ ರೂಪದಲ್ಲಿ ತೆರೆದುಕೊಂಡು ನಮ್ಮನ್ನು ಮುದಗೊಳಿಸಿದವು.

ವ್ಹಾ... ಚಂಬಾ..!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.