ಬುಧವಾರ, ಏಪ್ರಿಲ್ 14, 2021
32 °C

ಚರ್ಚೆ ಬೇಡವೆಂದ ಸಿ.ಎಂ, ಶೇಮ್ ಎಂದ ಪ್ರತಿಪಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೋಕಾಯುಕ್ತರ ನೇಮಕ ಪ್ರಕ್ರಿಯೆ ವಿಳಂಬವಾಗುತ್ತಿರುವ ಕುರಿತು ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡಬೇಕೆಂಬ ಜೆಡಿಎಸ್‌ನ ಎಂ.ಸಿ.ನಾಣಯ್ಯ ಅವರ ಬೇಡಿಕೆ ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಕೋಲಾಹಲಕ್ಕೆ ಕಾರಣವಾಯಿತು. ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಜೆಡಿಎಸ್ ಮನವಿಯನ್ನು ತಿರಸ್ಕರಿಸಿದಾಗ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ವಿರೋಧ ಪಕ್ಷಗಳ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.`ಕಾಯ್ದೆಯ ಅನುಸಾರ ಲೋಕಾಯುಕ್ತರ ನೇಮಕ ಆಗಬೇಕು. ನೇಮಕದಲ್ಲಿ ವಿಳಂಬ ನೀತಿ ಮುಂದುವರಿದರೆ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ರಾಜ್ಯಪಾಲರಿಗೆ ತಿಳಿಸಬೇಕಾಗುತ್ತದೆ~ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ವೇಳೆ ಹೇಳಿದ್ದಾರೆ. ಈ ಕುರಿತು ಸದನದಲ್ಲಿ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ನಾಣಯ್ಯ ಮನವಿ ಮಾಡಿದರು.`ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವ ವಿಷಯ ಕುರಿತು ಸದನದಲ್ಲಿ ಚರ್ಚೆ ನಡೆಸುವುದಕ್ಕೆ ಅವಕಾಶ ನೀಡಬಾರದು~ ಎಂದು ವಾದಿಸಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್, `ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಸೂಚನೆಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರ ಈಗಾಗಲೇ ಪ್ರಶ್ನಿಸಿದೆ. ಅದರ ವಿಚಾರಣೆ ಆಗಸ್ಟ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಸಂಬಂಧಿಸಿದ ವಿಚಾರಣೆ ಹೈಕೋರ್ಟ್‌ನಲ್ಲೂ ನಡೆಯುತ್ತಿದೆ~ ಎಂದರು.ಲೋಕಾಯುಕ್ತರ ನೇಮಕಕ್ಕೆ ಸರ್ಕಾರ ಬದ್ಧ. ಹೈಕೋರ್ಟ್‌ನಲ್ಲಿ ಇದೇ 23ರಂದು ನಡೆಯಲಿರುವ ವಿಚಾರಣೆ ವೇಳೆ ಸರ್ಕಾರ ಈ ಕುರಿತು ತನ್ನ ನಿಲುವು ಸ್ಪಷ್ಟಪಡಿಸಲಿದೆ. ಕೋರ್ಟ್ ತೀರ್ಪಿನ ಮೇಲೆ ಪರಿಣಾಮ ಬೀರುವಂಥ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚಿಸುವುದು ಸರಿಯಲ್ಲ ಎಂದು ಶೆಟ್ಟರ್ ಸಭಾಪತಿಗಳಲ್ಲಿ ಮನವಿ ಮಾಡಿದರು.`ಕೋರ್ಟ್ ತೀರ್ಪಿನ ಮೇಲೆ ಪ್ರಭಾವ ಬೀರುವ ವಿಷಯದ ಬಗ್ಗೆ ನಾನು ಮಾತನಾಡಲಾರೆ. ಆದರೆ, ಲೋಕಾಯುಕ್ತರ ನೇಮಕದಲ್ಲಿ ಸರ್ಕಾರ ಅನುಸರಿಸುತ್ತಿರುವ ವಿಳಂಬ ಧೋರಣೆ ಕುರಿತು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನಿಮ್ಮ ವಿರುದ್ಧ ಕಟುವಾದ ಟೀಕೆ ಮಾಡಿದರೆ, ನೀವು ಮುಖ್ಯಮಂತ್ರಿ ಸ್ಥಾನ ಬಿಡಬೇಕಾದ ಸ್ಥಿತಿ ಎದುರಾಗುತ್ತದೆ. ಹಾಗಾಗದಿರಲಿ ಎಂಬ ಉದ್ದೇಶದಿಂದ ಚರ್ಚೆಗೆ ಅವಕಾಶ ಕೋರುತ್ತಿದ್ದೇನೆ~ ಎಂದು ನಾಣಯ್ಯ ಹೇಳಿದರು.ನಾಣಯ್ಯ ಅವರ ಕೋರಿಕೆ ಮಾನ್ಯ ಮಾಡದ ಸಭಾಪತಿಗಳು, ಚರ್ಚೆಗೆ ಅವಕಾಶ ನೀಡದೆ ಸದನವನ್ನು ಸೋಮವಾರಕ್ಕೆ ಮುಂದೂಡಿದರು.ಇದರಿಂದ ಕುಪಿತರಾದ ಪ್ರತಿಪಕ್ಷಗಳ ಸದಸ್ಯರು, ಸರ್ಕಾರದ ವಿರುದ್ಧ `ಶೇಮ್ ಶೇಮ್~ ಎಂದು ಘೋಷಣೆ ಕೂಗಿದರು.`ಹಾಗಾದ್ರೆ ಸ್ವಾಮೀಜಿ...!~

ನಿಲುವಳಿ ಸೂಚನೆಗೆ ಅವಕಾಶ ಕೋರಿ ಮಾತನಾಡುತ್ತಿದ್ದ ನಾಣಯ್ಯ, `ಲೋಕಾಯುಕ್ತ ನ್ಯಾಯಾಲಯದಲ್ಲಿ ಆರೋಪಿ ಸ್ಥಾನದಲ್ಲಿ ನಿಂತವರಿಂದ ಲೋಕಾಯುಕ್ತ ನೇಮಕ ಕುರಿತು ಕಳಕಳಿಯ ಮಾತು ಬೇಕಿಲ್ಲ. ಈ ಕುರಿತು ಮುಖ್ಯಮಂತ್ರಿಯವರ ಕಳಕಳಿ ಏನೆಂಬುದು ಗೊತ್ತಾಗಬೇಕು~ ಎಂದರು.ಆಗ ಆಕ್ಷೇಪ ವ್ಯಕ್ತಪಡಿಸಿದ ಸಭಾನಾಯಕ ವಿ. ಸೋಮಣ್ಣ, `ನಾಣಯ್ಯ ಅವರು ತಮ್ಮ ಹಿರಿತನದ ಘನತೆ ಕಾಪಾಡಬೇಕು. ಪ್ರಚಾರಕ್ಕಾಗಿ ಹೇಳಿಕೆ ನೀಡಬಾರದು~ ಎಂದರು. `ಸೋಮಣ್ಣ ಅವರನ್ನು ಉದ್ದೇಶಿಸಿ ನಾನು ಏನನ್ನೂ ಹೇಳಿಲ್ಲ. ಆದರೂ ಅವರು ಪ್ರತಿಕ್ರಿಯೆ ನೀಡುತ್ತಿದ್ದಾರೆ~ ಎಂದು ನಾಣಯ್ಯ ಮಾತಿನಲ್ಲೇ ತಿವಿದರು.ಸಭಾಪತಿಗಳು ಈ ಸಂರ್ಭದಲ್ಲಿ ಮಧ್ಯಪ್ರವೇಶಿಸಿ ವಾಕ್ಸಮರ ನಿಲ್ಲಿಸಲು ಮುಂದಾದರು. ಆಗ ಸಭಾಪತಿಗಳತ್ತ ತಿರುಗಿದ ಸೋಮಣ್ಣ, `ಹಾಗಾದರೆ ಸ್ವಾಮೀಜಿ ಒಂದು ಕೆಲಸ ಮಾಡೋಣ...~ ಎಂದು ಏನೋ ಹೇಳಲು ಮುಂದಾದರು. ತಮ್ಮನ್ನು `ಸ್ವಾಮೀಜಿ~ ಎಂದು ಸಂಬೋಧಿಸಿದ್ದನ್ನು ಕೇಳಿದ ಶಂಕರಮೂರ್ತಿ ಅರೆಕ್ಷಣ ಅವಾಕ್ಕಾದರು.

 

ಪ್ರತಿಪಕ್ಷಗಳ ಸಾಲಿನಿಂದ ನಗು ಕೇಳಿಬಂತು. `ಸಣ್ಣಪುಟ್ಟ ವಿಷಯಕ್ಕೂ ಮಠಗಳಿಗೆ ಭೇಟಿ ನೀಡಿ ಅಭ್ಯಾಸವಾಗಿರುವ ಕಾರಣ, ಸಭಾಪತಿಯವರೂ ಸ್ವಾಮೀಜಿಯಂತೆ ಕಂಡಿರಬೇಕು~ ಎಂದು ಆಡಳಿತ ಮತ್ತು ಪ್ರತಿಪಕ್ಷಗಳ ಕೆಲವು ಸದಸ್ಯರು ಪರಿಷತ್ತಿನ ಮೊಗಸಾಲೆಯಲ್ಲಿ ನಂತರ ಮಾತನಾಡಿಕೊಂಡ ದೃಶ್ಯ ಕಂಡುಬಂತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.