ಬುಧವಾರ, ಜನವರಿ 22, 2020
24 °C

ಚಳಿಯಲ್ಲಿ ಚರ್ಮದ ಆರೈಕೆ

–ಆರ್.ಎಸ್‌ Updated:

ಅಕ್ಷರ ಗಾತ್ರ : | |

ಚಳಿಯಲ್ಲಿ ಚರ್ಮದ ಆರೈಕೆ

ಚಳಿಗಾಲದಲ್ಲಿ ಚರ್ಮದಲ್ಲಿರುವ ತೇವಾಂಶ ಕಡಿಮೆಯಾಗುತ್ತ ಹೋಗುವುದರಿಂದಲೇ ಚರ್ಮ ಒಣಗಿದಂತೆ ಆಗುತ್ತದೆ. ತನ್ನ ತಾಜಾತನ ಕಳೆದುಕೊಳ್ಳುವುದು ಇದೇ ಕಾರಣದಿಂದ.ಆಯ್ಲಿ ಸ್ಕಿನ್‌, ನಾರ್ಮಲ್‌ನಂತೆ, ನಾರ್ಮಲ್‌ ಟೋನ್‌, ಡ್ರೈ ಸ್ಕಿನ್‌ನಂತೆ, ಡ್ರೈ ಸ್ಕಿನ್‌, ಇನ್ನೂ ಒಣ ಚರ್ಮದಂತೆ ಕಾಣತೊಡಗುತ್ತದೆ.

ಎಣ್ಣೆ ಚರ್ಮವಾಗಿದ್ದರೆ, ತೇವಾಂಶ ಉಳಿಸುವ ಲೇಪನವನ್ನು ಹಚ್ಚಿಕೊಳ್ಳುವುದು ಮರೆಯಬಾರದು. ಇನ್ನು ಸಾಮಾನ್ಯ ಹಾಗೂ ಒಣ ಚರ್ಮದವರಾಗಿದ್ದರೆ ಮತ್ತೆ ಮತ್ತೆ ಲೇಪಿಸಿಕೊಳ್ಳುತ್ತಿರಬೇಕು.ಚಳಿಗಾಲದಲ್ಲಿ ನೀರನ್ನು ಹೆಚ್ಚು ಕುಡಿಯುವುದಿಲ್ಲ. ಆದರೆ ಟೀ, ಕಾಫಿಯನ್ನು ಹೆಚ್ಚುಹೆಚ್ಚಾಗಿ ಸೇವಿಸುತ್ತೇವೆ. ಕನಿಷ್ಠಪಕ್ಷ 2 ಲೀಟರ್‌ ನೀರನ್ನಾದರೂ ಕುಡಿಯಲೇಬೇಕು.ಹವಾನಿಯಂತ್ರಿತ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ತೇವಾಂಶ ಸಂರಕ್ಷಕವನ್ನು ಬಳಸಲು ಮರೆಯದಿರಿ. ಅದು ಸಾಧ್ಯವಾಗದಿದ್ದರೆ ಇನ್ನೊಂದು ಸರಳ ಪ್ರಯೋಗವನ್ನೂ ಮಾಡಬಹುದು. ನೀವು ಕೂರುವ ಸ್ಥಳದ ಆಸುಪಾಸಿನಲ್ಲಿ ಒಂದು ತೆರೆದ ಪಾತ್ರೆಯಲ್ಲಿ ನೀರು ತುಂಬಿಡಿ. ಇದೂ ಸಹ ತೇವಾಂಶ ರಕ್ಷಣೆಯ ಕೆಲಸ ಮಾಡುತ್ತದೆ.ಚರ್ಮ ತೀರ ಒಣ ಒಣ ಅನುಭವ ನೀಡುವಂತಾದರೆ ವಿಟಾಮಿನ್‌ ಇ, ಒಮೆಗಾ ಮಾತ್ರೆಗಳನ್ನು ವೈದ್ಯರ ಸಲಹೆಯ ಮೇರೆಗೆ ಸೇವಿಸಬಹುದಾಗಿದೆ. ವಿಟಾಮಿನ್‌ ಸಿ ಇರುವ ಹಣ್ಣುಗಳ ಋತು ಇದಾಗಿರುವುದರಿಂದ ಹಣ್ಣುಗಳನ್ನು ಹೇರಳವಾಗಿ ಸೇವಿಸಿ. 35 ವರ್ಷ ಮೇಲ್ಪಟ್ಟ ಮಹಿಳೆಯರಾಗಿದ್ದರೆ ಸಿಒಕ್ಯು10 ಕ್ರೀಮ್‌ ಬಳಸುವುದು ಒಳಿತು.ಅದು ಚರ್ಮವನ್ನು ಪೋಷಣೆ ಮಾಡುವುದರೊಂದಿಗೆ ಆರೈಕೆಯನ್ನೂ ಮಾಡುತ್ತದೆ. ಚರ್ಮದ ಸಂರಕ್ಷಣೆಯ ಕೆಲಸವನ್ನೂ ಮಾಡುತ್ತದೆ. ಎಣ್ಣೆ ಚರ್ಮದವರು ಫ್ಲೂಡ್‌ ಬಗೆಯ ಮಾಯಿಶ್ಚರೈಸರ್‌ ಅನ್ನು, ಸಾಮಾನ್ಯ ಚರ್ಮದವರು ವಿಟಮಿನ್‌ ‘ಇ’ ಅಂಶವುಳ್ಳ ಮಾಯಿಶ್ಚರೈಸರ್‌ ಅನ್ನು ಪ್ರತಿದಿನ ಹಾಗೂ ರಾತ್ರಿ ಬಳಸಬೇಕು. ಒಣ ಚರ್ಮದವರು ಬಾಮ್‌ ಅಥವಾ ಜೆಲ್ಲಿಯಂಥ ಹೆವಿ ಮಾಯಿಶ್ಚರೈಸರ್‌ ಅನ್ನು ಪ್ರತಿ ರಾತ್ರಿ ತಪ್ಪದೇ ಬಳಸಬೇಕು. ದಿನದ ಹೊತ್ತಿನಲ್ಲಿ ಮಾಯಿಶ್ಚರೈಸರ್‌ ಬಳಸುವುದು ಒಳಿತು.ಸ್ನಾನವಾದ ಕೂಡಲೇ ದೇಹಕ್ಕೆ ಮಾಯಿಶ್ಚರೈಸರ್‌ ಅಥವಾ ತೈಲದ ಅಂಶವಿರುವ ಯಾವುದೇ ಕ್ರೀಮ್‌ ಲೇಪಿಸುವುದರಿಂದ ದೇಹದ ತೇವಾಂಶವನ್ನು ಇದು ಕಾಪಿಡುತ್ತದೆ. ತೇವಾಂಶದ ರಕ್ಷಣೆಯಾಗುವುದರಿಂದ ಒಣ ಚರ್ಮವಾಗುವುದನ್ನು ತಡೆಯಬಹುದಾಗಿದೆ.

ಸಾಮಾನ್ಯವಾಗಿ ಕೈ ಹಾಗೂ ಕಾಲುಗಳು ಬೇಗನೆ ಶುಷ್ಕಗೊಳ್ಳುತ್ತವೆ. ಕೈ ಹಾಗೂ ಕಾಲುಗಳಿಗೆ ಗಾಢವಾಗಿ ಲೇಪಿಸುವುದು ಅತ್ಯಗತ್ಯ. ವಾರಕ್ಕೆ ಒಮ್ಮೆಯಾದರೂ ಒಣ ಚರ್ಮದವರಾದರೆ ಆಲಿವ್‌ ಆಯಿಲ್‌ ಅನ್ನು ಹಚ್ಚಿಕೊಂಡು ಸ್ನಾನ ಮಾಡಬೇಕು. ಸ್ನಾನಕ್ಕೆ ಸೋಪಿನ ಬದಲು ಕಡಲೆಹಿಟ್ಟನ್ನು ಬಳಸುವುದು ಉತ್ತಮ. ಸಾಮಾನ್ಯ ಹಾಗೂ ಎಣ್ಣೆ ಚರ್ಮದವರು ಬಾದಾಮಿ ಎಣ್ಣೆಯನ್ನೂ ಬಳಸಬಹುದು. ಎಣ್ಣೆ ಬಳಸುವುದಕ್ಕೆ ಮುನ್ನ ಒಂಚೂರು ಬಿಸಿ ಮಾಡುವುದು ಒಳಿತು.ಒಂದು ವೇಳೆ ಕೈ ಕಾಲುಗಳು ಅತಿಯಾಗಿ ಒಡೆದಿದ್ದರೆ ಅಥವಾ ಚರ್ಮ ಒಣಗಿರುವುದು ಅತಿಯಾಗಿದೆ ಎನಿಸುತ್ತಿದ್ದರೆ ನಸುಬಿಸಿಯ ಎಣ್ಣೆಯಲ್ಲಿ ಅದ್ದಿಟ್ಟು ತೊಳೆಯುವುದು ವಾಸಿ.ಮುಖಕ್ಕೆ ಆಗಾಗ ಕೆನೆಯನ್ನು ಬಳಸಿ ಮಸಾಜ್‌ ಮಾಡುವುದರಿಂದ ಚರ್ಮದಿಂದ ಒಣ ಕೋಶಗಳನ್ನು ತೆಗೆದು, ಚರ್ಮಕ್ಕೆ ಹೊಳಪು ನೀಡುವ ಕೆಲಸವನ್ನು ಹಾಲಿನಲ್ಲಿರುವ ಲ್ಯಾಕ್ಟಿಕ್‌ ಆ್ಯಸಿಡ್‌ ಮಾಡುತ್ತದೆ.ವಾರಕ್ಕೆ ಒಮ್ಮೆಯಾದರೂ ಅರ್ಧ ಚಮಚ ಬದಾಮಿ ಪುಡಿಗೆ, ಅರ್ಧ ಚಮಚ ಜೇನು ಹಾಗೂ 2 ಚಮಚ ಹಾಲು ಬೆರೆಸಿದ ಲೇಪನವನ್ನು ಹಚ್ಚಿ ಹತ್ತು ನಿಮಿಷದ ನಂತರ ತಣ್ಣೀರಿನಲ್ಲಿ ಮುಖ ತೊಳೆಯಬೇಕು. ಇದರಿಂದ ಚರ್ಮದ ತೇವಾಂಶವೂ ಉಳಿಯುತ್ತದೆ. ಸುಲಭವೂ ಸರಳವೂ ಆಗಿರುವ ಈ ವಿಧಾನದಿಂದ ಚರ್ಮದ ಹೊಳಪನ್ನೂ ಹೆಚ್ಚಿಸಿಕೊಳ್ಳಬಹುದು.ಚಳಿಗಾಲದಲ್ಲಿ ಸನ್‌ಸ್ಕ್ರೀನ್‌ ಲೋಷನ್‌ ಬಳಸಬಹುದೇ ಎಂಬುದು ಬಹುತೇಕ ಜನರ ಪ್ರಶ್ನೆ. ದಿನವು ಮೋಡದಿಂದ ಕೂಡಿದ್ದರೂ, ಬಿಸಿಲು ಪ್ರಖರವಾಗಿರದಿದ್ದರೂ ಮನೆಯಿಂದಾಚೆ ಹೊರಡುವ 20 ನಿಮಿಷಗಳ ಮುನ್ನ ಸನ್‌ಸ್ಕ್ರೀನ್‌ ಲೋಷನ್‌ ಬಳಸುವುದು ಅತಿ ಮುಖ್ಯ. ಇದರಿಂದ ಚರ್ಮ ಟ್ಯಾನ್‌ ಆಗುವುದನ್ನು ತಡೆಯಬಹುದು. ನಿರಂತರ ಬಳಕೆಯಿಂದ ಪಿಗ್ಮೆಂಟೇಷನ್‌ ಸಹ ಕಡಿಮೆಯಾಗುವುದು.ದಿನಕ್ಕೆ ಎಷ್ಟು ಸಲ ಲಿಪ್‌ ಬಾಮ್‌ ಬಳಸಬೇಕು ಎನ್ನುವುದೂ ಮಹತ್ವದ ಪ್ರಶ್ನೆಯಾಗಿದೆ. ಅಗತ್ಯವಿದ್ದಾಗಲೆಲ್ಲ ಬಳಸಬಹುದು. ಆದರೆ ನಿಮ್ಮ ಬಾಮ್‌ನಲ್ಲಿ ವಿಟಾಮಿನ್‌ ಇ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ. ಎಷ್ಟು ಸಲ ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಲೇ ಇರುತ್ತದೆ. ತುಟಿ ಒಣಗಿದಂತೆ ಎನಿಸಿದಾಗಲೆಲ್ಲ ಬಳಸಬಹುದು.ಚಳಿಗಾಲದಲ್ಲಿ ಎದುರಾಗುವ ಇನ್ನೊಂದು ಸಾಮಾನ್ಯ ಪ್ರಶ್ನೆ ಸ್ನಾನ ಯಾವಾಗ ಮಾಡಬೇಕು? ಸ್ನಾನ ಯಾವಗಲಾದರೂ ಮಾಡಿ, ಬೆಳಿಗ್ಗೆ ಸಂಜೆ ಆದರೆ ಸುಡುನೀರಿನ ಸ್ನಾನ ಬೇಡ. ಚಳಿಗಾಲದಲ್ಲಿ ಸುಡುನೀರು ಸ್ನಾನಕ್ಕೆ ಮನಸು ಹಾತೊರೆದರೂ ಬಿಸಿನೀರಿನ ಸ್ನಾನವನ್ನೇ ಮಾಡಿ.ಸುಡು ನೀರು ನಿಮ್ಮ ಸ್ವೇದಗ್ರಂಥಿಯನ್ನು ಸಾಕಷ್ಟು ತೆರೆಯುವುದರಿಂದ ಚರ್ಮ ಒಣಗುವ ಸಾಧ್ಯತೆ ಇನ್ನುಷ್ಟು ಹೆಚ್ಚುತ್ತದೆ.

ಚರ್ಮದ ಗ್ರಂಥಿಗಳು ತೆರೆದುಕೊಂಡರೆ ಅವು ಮುಚ್ಚಿಕೊಳ್ಳಲು ಕನಿಷ್ಟವೆಂದರೂ ಒಂದೂವರೆ ಗಂಟೆ ಬೇಕು. ಸೋಪುಗಳ ಬದಲು ಕ್ಲೆನ್ಸಿಂಗ್‌, ಕ್ಲೆನ್ಸರ್‌ಗಳನ್ನು ಬಳಸುವುದು ಒಳಿತು. ಚರ್ಮದ ಹೊಳಪು ಮತ್ತು ನುಣುಪು ಉಳಿಯಲು ಅಕ್ಕರೆಯ ಆರೈಕೆಯಂತೂ ಅತ್ಯಗತ್ಯ.   

ಪ್ರತಿಕ್ರಿಯಿಸಿ (+)