ಶುಕ್ರವಾರ, ಜನವರಿ 17, 2020
22 °C

ಚಳಿ ಅಬ್ಬರಕ್ಕೆ ಕುಂದಾನಗರಿ ಜನ ತತ್ತರ!

ಪ್ರಜಾವಾಣಿ ವಾರ್ತೆ/ ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

ಚಳಿ ಅಬ್ಬರಕ್ಕೆ ಕುಂದಾನಗರಿ ಜನ ತತ್ತರ!

ಬೆಳಗಾವಿ: ಬೆಳಿಗ್ಗೆ ಎಂಟಾದರೂ ಮುದುಡಿಕೊಂಡು ಬೆಚ್ಚಗೆ ಮಲಗಿ­ಕೊಳ್ಳಲು ಹಾತೊರೆಯುವ ಜನ; ಸೂರ್ಯ ನೆತ್ತಿಯ ಮೇಲೆ ಬಂದರೂ ತೇಲಿ ಬರುತ್ತಿರುವ ತಂಗಾಳಿ... ಸಂಜೆಯಾಗುತ್ತಲೇ ಬೆಚ್ಚಗಿನ ಗೂಡು (ಮನೆ) ಸೇರಿಕೊಳ್ಳಲು ತವಕಿಸುವ ಮನ...!



ಕಳೆದ ಮೂರ್ನಾಲ್ಕು ದಿನಗಳಿಂದ ಚಳಿರಾಯ ಅಬ್ಬರಿಸುತ್ತಿರುವುದರಿಂದ ಕುಂದಾನಗರಿಯ ಜನರು ಗಡ ಗಡ ನಡುಗುತ್ತಿದ್ದಾರೆ. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಭಾನುವಾರ (ಡಿ. 8) ಕನಿಷ್ಠ ಉಷ್ಣಾಂಶವು 9.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಈ ವರ್ಷದ ಇದುವರೆಗಿನ ಕನಿಷ್ಠ ತಾಪಮಾನ ಇದಾಗಿದೆ.



ಚಳಿಯಿಂದಾಗಿ ಮುಂಜಾನೆ ಐದು ಗಂಟೆಗೆ ಅಲಾರಾಮ್‌ ಹೊಡೆಯು­ತ್ತಿದ್ದಂತೆ ಎದ್ದು ವಾಕಿಂಗ್‌ ಮಾಡಿ ಬೆವರು ಹರಿಸಲು ಉತ್ಸಾಹದಿಂದ ನಿತ್ಯ ಹೊರಡುತ್ತಿದ್ದವರು ಇನ್ನೂ ಸ್ವಲ್ಪ ಹೊತ್ತು ಹೋಗಲಿ ಎಂದು ಮಗ್ಗಲು ಬದಲಾಯಿಸಿ ಮಲಗಿಕೊಳ್ಳುತ್ತಿದ್ದಾರೆ. ಕಪಾಟಿನಲ್ಲಿ ಮುದುಡಿ ಕುಳಿತಿದ್ದ ಬೆಚ್ಚನೆಯ ಉಡುಪುಗಳು ಹೊರಗೆ ಬೀಳುತ್ತಿವೆ. ವಾಕಿಂಗ್‌ಗೆ ಹೊರಡುವಾಗ ಸ್ವೆಟರ್‌– ಜಾಕೆಟ್‌, ಮಂಕಿ ಕ್ಯಾಪ್‌– ಮಫ್ಲರ್‌ಗಳನ್ನು ಸುತ್ತಿಕೊಂಡೇ ಮನೆಯಿಂದ ಹೊರಗೆ ಬೀಳುತ್ತಿದ್ದಾರೆ.



ಹಗಲಿನ ಹೊತ್ತು ತಣ್ಣನೆಯ ವಾತಾವರಣವಿದ್ದು, ಆಗಾಗ ತೇಲಿ ಬರುವ ತಂಗಾಳಿ ಕಚಗುಳಿ ಇಡುತ್ತಿದೆ. ಸಂಜೆಯಾಗುತ್ತಲೆ ಚಳಿರಾಯನ ಮಹಿಮೆ ಶುರುವಾಗುತ್ತಿರುವುದರಿಂದ ಬೇಗನೆ ಗೂಡು ಸೇರಿಕೊಳ್ಳಲು ತವಕಿಸು­ತ್ತಿದ್ದಾರೆ. ರಾತ್ರಿಯ ಹೊತ್ತು ಬೈಕ್‌ ಹೊಡೆಯುವ ಸವಾರರು ಗಡ ಗಡ ನಡುಗುತ್ತ ಸಂಚರಿಸುವಂತಾಗಿದೆ.



ನವೆಂಬರ್‌ 21ರಂದು 9.8 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ಆದ ಬಳಿಕ ಮತ್ತೆ ಬಿಸಿಲಿನ ತಾಪ ಹೆಚ್ಚಾಗಿತ್ತು. ಆದರೆ, ಡಿಸೆಂಬರ್‌ 5ರಿಂದ ನಗರದಲ್ಲಿ ಉಷ್ಣಾಂಶವು ಇಳಿಮುಖವಾಗುತ್ತಿದೆ.



ಕಳೆದ ವರ್ಷ ನವೆಂಬರ್‌ 8ರಂದು 7.7 ಡಿಗ್ರಿ ಸೆಲ್ಸಿಯಸ್‌, ಡಿಸೆಂಬರ್‌ 26ರಂದು 8.2 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. 2011ರ ಜನವರಿ 16ರಂದು 7.2 ಕನಿಷ್ಠ ಉಷ್ಣಾಂಶ ವರದಿಯಾಗಿತ್ತು. ಲಭ್ಯ ಇರುವ ಮಾಹಿತಿ ಪ್ರಕಾರ 1994ರಂದು ಡಿಸೆಂಬರ್‌ 23ರಂದು ದಾಖಲಾದ 6.5 ಡಿಗ್ರಿ ಸೆಲ್ಸಿಯಸ್‌ ಇದುವರೆಗಿನ ಕನಿಷ್ಠ ಉಷ್ಣಾಂಶವಾಗಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.



ಸ್ವೆಟರ್‌, ಜಾಕೆಟ್‌ಗೆ ಬೇಡಿಕೆ:  ಚಳಿ ಕಾಣಿಸಿಕೊಂಡಿದ್ದರಿಂದ ಸ್ವೆಟರ್‌, ಜಾಕೆಟ್‌­ನಂತಹ ಬೆಚ್ಚಗಿನ ಉಡುಪನ್ನು ಖರೀದಿಸಲು ಅಂಗಡಿಗಳಿಗೆ ಜನರು ಮುಗಿ ಬೀಳುತ್ತಿದ್ದಾರೆ. ನಗರದ ಕಡೋಲ್ಕರ್‌ ಗಲ್ಲಿಯಲ್ಲಿನ ಟಿಬೇಟಿಯನ್‌ರ ಅಂಗಡಿ ಎದುರು ಸ್ವೆಟರ್‌, ಜಾಕೆಟ್‌ ಖರೀದಿಗಾಗಿ ಭಾನು­ವಾರ ಜನಜಂಗುಳಿಯೇ ನೆರೆದಿತ್ತು. ನಗರದ ಮಾರುಕಟ್ಟೆಯಲ್ಲಿ ರಸ್ತೆ ಬದಿಯ ಅಂಗಡಿಗಳಲ್ಲಿ ಖರೀದಿ ಭರಾಟೆ ಜೋರಾಗಿ ನಡೆದಿದೆ.



ಮಹಿಳೆಯರು, ವೃದ್ಧರು ಸ್ವೆಟರ್‌­ಗಳನ್ನು ಖರೀದಿಸುತ್ತಿದ್ದರೆ, ಯುವಕ–ಯುವತಿಯರು ಬಗೆ ಬಗೆಯ ಜಾಕೆಟ್‌ನ ಮೊರೆ ಹೋಗುತ್ತಿದ್ದಾರೆ.



‘ಕಳೆದ ವರ್ಷ ನವೆಂಬರ್‌ ತಿಂಗಳಿ­ನಿಂದಲೇ ಚಳಿ ಬೀಳಲು ಆರಂಭ­ವಾಗಿತ್ತು. ಈ ಬಾರಿ ಕಳೆದ ಮೂರ್ನಾಲ್ಕು ದಿನಗಳಿಂದ ಚಳಿ ಬೀಳುತ್ತಿರುವುದರಿಂದ ಸ್ವೆಟರ್‌, ಜಾಕೆಟ್‌ ಹುಡ್‌, ಹ್ಯಾಂಡ್‌ ಗ್ಲೌಸ್‌, ಮಂಕಿ ಕ್ಯಾಪ್‌ಗಳನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರು­ತ್ತಿದ್ದಾರೆ’ ಎನ್ನುತ್ತಾರೆ ಖಡೆಬಜಾರ್‌ನ ‘ಕ್ಲಾಸಿಕ್‌ ಕಲೆಕ್ಷನ್ಸ್‌’ ಅಂಗಡಿಯ ವಿಶಾಲ್‌ ಮೋಹನ್‌ ಕಬಾಡಿ.



‘₨ 300ರಿಂದ 2,400ರವರೆಗಿನ ಸ್ವೆಟರ್‌, ₨ 290ರಿಂದ 1,200ವರೆಗಿನ ಜಾಕೆಟ್‌ ಹುಡ್‌; ₨ 180ರಿಂದ ₨ 1,200ವರೆಗಿನ ಮಕ್ಕಳ ಸ್ವೆಟರ್‌ಗಳು ನಮ್ಮಲ್ಲಿ ಇವೆ. ₨ 60ರಿಂದ 180ರ­ವರೆಗಿನ ಮಂಕಿಕ್ಯಾಪ್‌, ₨ 50ರಿಂದ 280ರವರೆಗಿನ ಹ್ಯಾಂಡ್‌ ಗ್ಲೌಸ್‌ಗಳಿವೆ. ಜನವರಿ ತಿಂಗಳ ಕೊನೆಯವರೆಗೂ ಉತ್ತಮವಾಗಿ ಮಾರಾಟವಾಗುತ್ತದೆ. ಚಳಿ ಹೆಚ್ಚಿರುವ ಉತ್ತರ ಭಾರತದಲ್ಲಿ ಪ್ರವಾಸ ಕೈಗೊಳ್ಳುವವರು ಅಲ್ಲಿ ದುಬಾರಿಯಾಗುತ್ತದೆ ಎಂಬ ಕಾರಣಕ್ಕೆ ಇಲ್ಲಿಯೇ ಖರೀದಿಸುತ್ತಿದ್ದಾರೆ’ ಎಂದು ವಿಶಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)