ಶುಕ್ರವಾರ, ಮೇ 27, 2022
27 °C

ಚಾಕುವಿನಿಂದ ಇರಿದು ಇಬ್ಬರ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಶುಕ್ರವಾರ ನಸುಕಿನಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.ವಾಟರ್ ಟ್ಯಾಂಕರ್ ಮಾಲೀಕ ಉದಯಶಂಕರ್ ರೆಡ್ಡಿ (52) ಎಂಬುವರ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಎಚ್‌ಎಸ್‌ಆರ್ ಲೇಔಟ್ ಸಮೀಪದ ಬೆಳ್ಳಂದೂರಿನಲ್ಲಿ ನಡೆದಿದೆ.ರಾಮಕೃಷ್ಣ ಮತ್ತು ಮಂಜುನಾಥರೆಡ್ಡಿ ಎಂಬುವರು ಉದಯಶಂಕರ್ ಅವರ ಬಳಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಅವರಿಬ್ಬರನ್ನೂ ಉದಯಶಂಕರ್ ಕೆಲಸದಿಂದ ತೆಗೆದು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಉದಯಶಂಕರ್ ಅವರ ಬಳಿ ಸಂತೋಷ್ ಎಂಬುವರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಉದಯಶಂಕರ್ ಅವರ ಮನೆ ಮೇಲೆಯೇ ಇರುವ ಕೊಠಡಿಯಲ್ಲಿ ಅವರು ಉಳಿದುಕೊಂಡಿದ್ದಾರೆ. ಸಂತೋಷ್ ಬೆಳಗಿನ ಜಾವ 2.30ರ ಸುಮಾರಿಗೆ ನೀರು ಸರಬರಾಜು ಮಾಡಲು ಹೋಗಬೇಕಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ರಾಮಕೃಷ್ಣ, ಸಂತೋಷ್ ಕೊಠಡಿಯನ್ನು ಹೊರಗಿನಿಂದ ಬಂದ್ ಮಾಡಿದ್ದ.ಬಾಗಿಲು ತೆಗೆಯಲು ಆಗದಿದ್ದಾಗ ಸಂತೋಷ್ ಅವರು ಮಾಲೀಕನಿಗೆ ಕರೆ ಮಾಡಿ ಬಾಗಿಲು ತೆರೆಯುವಂತೆ ಹೇಳಿದ್ದಾರೆ. ಉದಯಶಂಕರ್ ಅವರು ಮನೆಯಿಂದ ಹೊರ ಬಂದು ಮಹಡಿ ಮೇಲೆ ಹೋಗುತ್ತಿದ್ದ ವೇಳೆ ರಾಮಕೃಷ್ಣ ಹಲ್ಲೆ ನಡೆಸಿದ್ದಾನೆ. ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಕೊಲೆಯಲ್ಲಿ ಮಂಜುನಾಥರೆಡ್ಡಿ ಸಹ ಭಾಗಿಯಾಗಿದ್ದಾನೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಡಿವಾಳ ಉಪ ವಿಭಾಗದ ಎಸಿಪಿ ಸುಬ್ಬಣ್ಣ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ.ತಿಲಕ್‌ನಗರ: ಜಯನಗರ ಒಂಬತ್ತನೇ ಬ್ಲಾಕ್‌ನಲ್ಲಿರುವ ಶ್ರೀಸಾಯಿ ಲಾಡ್ಜ್‌ನ ವ್ಯವಸ್ಥಾಪಕ ಬಿನೋದ್ ಪ್ರದಾನ್ (35) ಎಂಬುವರಿಗೆ ಚಾಕುವಿನಿಂದ ಬರ್ಬರವಾಗಿ ಇರಿದು ಕತ್ತು ಕೊಯ್ದು ಕೊಲೆ ಮಾಡಲಾಗಿದೆ.ಇದೇ ಲಾಡ್ಜ್‌ನಲ್ಲಿ ರೂಂ ಬಾಯ್ ಆಗಿದ್ದ ಟಿಬೆಟನ್ ಮೂಲದ ಲೋಕ್‌ಸಾಂಗ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಸರಿಯಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ಆತನನ್ನು ಕೆಲ ದಿನಗಳ ಹಿಂದೆ ಬಿನೋದ್ ಕೆಲಸದಿಂದ ತೆಗೆದು ಹಾಕಿದ್ದರು.ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಲಾಡ್ಜ್‌ಗೆ ಬಂದಿರುವ ಲೋಕ್‌ಸಾಂಗ್, ಬಿನೋದ್ ಅವರು ಮಲಗಿದ್ದ ಕೊಠಡಿ ಸಂಖ್ಯೆ ಎರಡಕ್ಕೆ ನುಗ್ಗಿ ಚಾಕುವಿನಿಂದ ಇರಿದಿದ್ದಾನೆ. ಸುಮಾರು 32 ಬಾರಿ ಇರಿದಿರುವ ಆತ ನಂತರ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ.ಆತ ಲಾಡ್ಜ್‌ಗೆ ಬಂದಿದ್ದ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಬೆಳಗಿನ ಜಾವ ಆಗಿದ್ದರಿಂದ ಲಾಡ್ಜ್‌ನಲ್ಲಿ ಯಾರೂ ಇರಲಿಲ್ಲ. ಒಮ್ಮೆಲೆ ಆತ ಕತ್ತು ಕೊಯ್ದ ಪರಿಣಾಮ ಬಿನೋದ್ ಅವರಿಗೆ ಕೂಗಿಕೊಳ್ಳಲು ಸಾಧ್ಯವಾಗಿಲ್ಲ. ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅಸ್ಸಾಂ ಮೂಲದ ಬಿನೋದ್ ನಾಲ್ಕು ವರ್ಷಗಳಿಂದ ಲಾಡ್ಜ್‌ನಲ್ಲಿಲಾಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದರು. ಲೋಕ್‌ಸಾಂಗ್ ಸಹ ಮೂರು ವರ್ಷಗಳಿಂದ ಅದೇ ಲಾಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ತಿಲಕ್‌ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.