ಬುಧವಾರ, ಏಪ್ರಿಲ್ 14, 2021
32 °C

ಚಿಂಚೋಳಿ: ಅಂದ ಹೆಚ್ಚಿಸಿದ ವಿದ್ಯುತ್ ಕಂಬಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಅಂದ ಹೆಚ್ಚಿಸಿದ ವಿದ್ಯುತ್ ಕಂಬಗಳು

ಚಿಂಚೋಳಿ: ಅಗಲವಾದ ರಸ್ತೆ, ಮಧ್ಯೆ ವಿಭಜಕ ಅದರಲ್ಲಿ ಸಾಲು ಸಾಲು ವಿದ್ಯುತ್ ಕಂಬಗಳಿಂದ ಅಂದವಾಗಿ ಗೋಚರಿಸುತ್ತಿರುವ ಪಟ್ಟಣದ ಮುಖ್ಯರಸ್ತೆ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ.ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದ ರಸ್ತೆ ಮಧ್ಯೆ ಹೈಮಾಸ್ಟ್ ವಿದ್ಯುತ್ ದೀಪ ಸಹಿತ ಜೋಡು ದೀಪದ ಕಂಬಗಳನ್ನು ನಿಲ್ಲಿಸಲಾಗಿದೆ. ಜತೆಗೆ ಚಂದಾಪುರ ಬೀಜೋತ್ಪಾದನಾ ಕೇಂದ್ರದ ವರೆಗೆ ರಸ್ತೆಯ ಬದಿಯಲ್ಲಿ ವಿದ್ಯುತ್ ಕಂಬಗಳನ್ನು ನಿಲ್ಲಿಸಿದ್ದು, ವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿವೆ.ರಾಜ್ಯ ಸರ್ಕಾರದ ಚಿಂಚೋಳಿಯಿಂದ ತಾಲ್ಲೂಕಿನ (ಬೀದರ್ ಮಾರ್ಗದ ತುಮಕುಂಟಾ) ಗಡಿವರೆಗೆ ರಸ್ತೆ ಸುಧಾರಣೆಗೆ 17 ಕೋಟಿ ರೂ. ಮಂಜೂರು ಮಾಡಿದೆ. ಇದರಲ್ಲಿ ಚಿಂಚೋಳಿ ಪಟ್ಟಣದಲ್ಲಿ ಒಂದು ಕೀ.ಮೀ ರಸ್ತೆಗೆ ಹೆಚ್ಚಿನ ಅನುದಾನ ಒದಗಿಸಿ 14 ಮೀಟರ ಅಗಲದ ರಸ್ತೆ ನಿರ್ಮಿಸಲಾಗಿದೆ. ಜತೆಗೆ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸಚಿವ ಸುನೀಲ ವಲ್ಯ್‌ಪುರ ಅವರ ವಿಶೇಷ ಮುತುವರ್ಜಿಯಿಂದ 40 ಲಕ್ಷ ರೂ.ಗಳ ವೆಚ್ಚದಲ್ಲಿ ವಿದ್ಯುತ್ ಕಂಬ ನಿಲ್ಲಿಸಲಾಗಿದೆ. ಉಳಿಕೆಯ ಹಣದಲ್ಲಿ ವಿಭಜಕ ನಿರ್ಮಿಸಲು ಉದ್ದೇಶಿಸಲಾಗಿದೆ.`ಈ ವಿದ್ಯುತ್ ಕಂಬಗಳಿಗೆ ವಿದ್ಯುತ್ ಪೂರೈಸಲು ಪ್ರತ್ಯೇಕ 3 ವಿದ್ಯುತ್ ಪರಿವರ್ತಕಗಳ ಅಗತ್ಯವಿದ್ದು ಇವುಗಳಿಗಾಗಿ ರಾಜ್ಯ ಹಣಕಾಸು ಆಯೋಗ(ಎಸ್‌ಎಫ್‌ಸಿ) ಯೋಜನೆ ಅಡಿಯಲ್ಲಿ 9 ಲಕ್ಷ ರೂ. ಮಂಜೂರು ಮಾಡಿ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಮುಂಬರುವ ಒಂದೂವರೆ ತಿಂಗಳಲ್ಲಿ ಟೆಂಡರ್ ಕರೆದು ವಿದ್ಯುತ್ ಕಂಬಗಳಿಗೆ ವಿದ್ಯುತ್ ಪ್ರಹಿಸಲಾಗುವುದು~ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಬಾಷೀತ್ ಪ್ರಜಾವಾಣಿಗೆ ತಿಳಿಸಿದರು.ಕಳೆದ 1999ರಲ್ಲಿ ಚಿಂಚೋಳಿ ಪಟ್ಟಣದ ರಸ್ತೆ ಅಗಲೀಕರಣಕ್ಕೆ ಅಂದಿನ ಶಾಸಕ ಕೈಲಾಸನಾಥ ಪಾಟೀಲ ಚಾಲನೆ ನೀಡಿದ್ದರು. ಪಟ್ಟಣದ ಸೌಂದರ್ಯಿಕರಣಕ್ಕಾಗಿ ಅಂದು ಸಂಸದರಾಗಿದ್ದ ಸಿ.ಎಂ. ಇಬ್ರಾಹಿಂ 10 ಲಕ್ಷ ರೂಪಾಯಿಗಳನ್ನು ತಮ್ಮ ಪ್ರದೇಶಾಭಿವೃದ್ದಿ ನಿಧಿಯಿಂದ ನೀಡಿದ್ದರು. ಆದರೆ ಆ ಹಣ ಗುತ್ತಿಗೆದಾರರ ನಿರ್ಲಕ್ಷದಿಂದ ಬಳಕೆಯಾಗದೇ ವಾಪಸ್ಸಾಯಿತು. ಹೀಗೆ ನೆನೆಗುದಿಗೆ ಬಿದ್ದ ಅಗಲೀಕರಣ ಮತ್ತು ಸೌಂದರ್ಯಿಕರಣ ದಶಕದ ನಂತರ ಶಾಸಕರಾಗಿ ಆಯ್ಕೆಯಾದ ಬಿಜೆಪಿಯ ಸುನೀಲ ವಲ್ಯ್‌ಪುರ ಮುತುವರ್ಜಿ ವಹಿಸಿದ್ದರಿಂದ ಪಟ್ಟಣದ ನಾಗರಿಕರ ಬಹುದಿನಗಳ ಕನಸು ನನಸಾಗುವಂತೆ ಆಗಿದೆ.ಇದೀಗ ವಿದ್ಯುತ್ ಕಂಬಗಳಲ್ಲಿ ಬೆಳಗಲು ಸಿದ್ಧವಾದ ದೀಪಗಳು ವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿವೆ. ಎಲ್ಲವೂ ಅಂದಕೊಂಡಂತೆ ನಡೆದರೆ ಮುಂಬರುವ ವಿಜಯ ದಶಮಿ ಒಳಗಾಗಿ ಪಟ್ಟಣ ಅಂದವಾಗಿ ನಳನಳಿಸಲಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.