ಭಾನುವಾರ, ಮೇ 9, 2021
19 °C
ಲೋಕಾಯುಕ್ತರ ಭೇಟಿ ಸಂದರ್ಭದಲ್ಲಿ ಬಯಲಾದ ಭ್ರಷ್ಟಾಚಾರ

ಚಿಕಿತ್ಸೆಗೆ ಹಣ: ವಾಪಸ್ ನೀಡಲು ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಗೆ ನಗರದ ಮಲ್ಲೇಶ್ವರದಲ್ಲಿರುವ ಕೆ.ಸಿ. ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಯೊಬ್ಬರು, ವೈದ್ಯ ರವಿಕುಮಾರ್ ಎಂಬುವರ ಸಹಾಯಕರಿಗೆ 5 ಸಾವಿರ ರೂಪಾಯಿ ನೀಡಬೇಕಾಯಿತು ಎಂಬ ಸಂಗತಿ ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ ರಾವ್ ಅವರು ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿದ ವೇಳೆ ಬಯಲಾಯಿತು.ಈ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ಸಾರ್ವಜನಿಕರು ಮತ್ತು ಮಾಧ್ಯಮಗಳಿಂದ ದೂರು ಸ್ವೀಕರಿಸಿದ್ದ ನ್ಯಾ. ರಾವ್ ಅವರು ಆಸ್ಪತ್ರೆಗೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಜೊತೆ ಭೇಟಿ ನೀಡಿದರು. ಶಸ್ತ್ರಚಿಕಿತ್ಸೆಗೆ ದಾಖಲಾದವರು ಹಣ ನೀಡಬೇಕಾದ ಸಂದರ್ಭ ಎದುರಾಗಿತ್ತು ಎಂಬುದನ್ನು ವಿಚಾರಣೆ ವೇಳೆ ಖಚಿತಪಡಿಸಿಕೊಂಡ ನ್ಯಾ. ರಾವ್ `ಹಣ ಹಿಂದಿರುಗಿಸಬೇಕು' ಎಂದು ಡಾ. ರವಿಕುಮಾರ್ ಅವರಿಗೆ ಸ್ಥಳದಲ್ಲೇ ನಿರ್ದೇಶನ ನೀಡಿದರು.ನ್ಯಾ. ರಾವ್ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು, ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ, ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ರೋಗಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದರು. `ಇಲ್ಲಿನ ಬಹುತೇಕ ನರ್ಸ್‌ಗಳು ರೋಗಿಗಳಿಂದ ಲಂಚ ಪಡೆಯುತ್ತಾರೆ ಎಂಬ ದೂರು ನಮಗೆ ಬಂದಿದೆ. ಇದು ನಿಜಕ್ಕೂ ದುರದೃಷ್ಟಕರ. ಆಸ್ಪತ್ರೆಯ ಸಿಬ್ಬಂದಿ ಮೇಲೆ ಇಂದಿನಿಂದ ತೀವ್ರ ನಿಗಾ ಇಡಲಾಗುವುದು. ತಪ್ಪಿತಸ್ಥರನ್ನು ಜೈಲಿಗೆ ಅಟ್ಟಲಾಗುವುದು' ಎಂದು ನ್ಯಾ. ರಾವ್ ಅವರು ಆಸ್ಪತ್ರೆಯ ನರ್ಸ್‌ಗಳನ್ನು ಉದ್ದೇಶಿಸಿ ಹೇಳಿದರು. ಆಸ್ಪತ್ರೆಯ ಸ್ಥಿತಿ ಉತ್ತಮವಾಗಿದೆ. ಆದರೆ ರೋಗಿಗಳಿಗೆ ಕುಳಿತುಕೊಳ್ಳಲು ಸೂಕ್ತ ಸೌಲಭ್ಯ ಇಲ್ಲ. ಈ ಕುರಿತು ಆಸ್ಪತ್ರೆಯ ಅಧಿಕಾರಿಗಳು ಗಮನ ನೀಡಬೇಕು ಎಂದು ಸೂಚಿಸಿದರು.ಈ ವೇಳೆ ಹಾಜರಿದ್ದ ಆಸ್ಪತ್ರೆ ಅಧೀಕ್ಷಕಿ ಡಾ.ಆರ್.ಎಲ್.ಚಂದ್ರಪ್ರಭಾ ಅವರು ಇನ್ನು ಮುಂದೆ ಯಾವುದೇ ನರ್ಸ್‌ಗಳು ಲಂಚ ಸ್ವೀಕರಿಸದಂತೆ ಎಚ್ಚರ ವಹಿಸಲಾಗುವುದು ಎಂದು ಭರವಸೆ ನೀಡಿದರು. ನ್ಯಾ. ರಾವ್ ಅವರು, ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳಿಗೆ `ಭ್ರಷ್ಟಾಚಾರ ರಹಿತ ಸೇವೆ'ಯ ಪ್ರತಿಜ್ಞಾ ವಿಧಿ ಬೋಧಿಸಿದರು.ನಂತರ ಸುದ್ದಿಗಾರರ ಜೊತೆ ಮಾತನಾಡಿದ ನ್ಯಾ. ರಾವ್, `ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಿಗಳಾಗಿರುವ 130 ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಸರ್ಕಾರ ಅನುಮತಿ ನೀಡಬೇಕು. ಈ ಸಂಬಂಧ ನಾನು ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರ ಜೊತೆ ಈಗಾಗಲೇ ಮಾತನಾಡಿದ್ದೇನೆ' ಎಂದರು.ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 19ರ ಅನ್ವಯ, ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಸರ್ಕಾರದ ಅನುಮತಿ ಬೇಕು ಎಂದು ಸ್ಪಷ್ಟಪಡಿಸಿದರು.`ಲೋಕಾಯುಕ್ತದಲ್ಲಿ ದಾಖಲಾಗುವ ದೂರುಗಳನ್ನು ವರ್ಷದಲ್ಲಿ ವಿಲೇವಾರಿ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ನಾನು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿ ಒಟ್ಟು 4,558 ದೂರುಗಳು ಬಾಕಿ ಇದ್ದವು. ಅವುಗಳ ಪೈಕಿ 1,100 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ' ಎಂದು ಅವರು ತಿಳಿಸಿದರು.ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳ ಕಾರ್ಯಚಟುವಟಿಕೆ ಮೇಲೆ ಕಣ್ಗಾವಲಿಡಲು ಆಂತರಿಕ ದಳವೊಂದನ್ನು ಸ್ಥಾಪಿಸಲು ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅನುಮತಿ ದೊರೆತರೆ ದಳ ರಚಿಸಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.