ಶನಿವಾರ, ಮೇ 15, 2021
24 °C
ಸಮ್ಮೇಳನಾಧ್ಯಕ್ಷೆ ಗುಡಿಬಂಡೆ ಪೂರ್ಣಿಮಾ ನುಡಿ

`ಚಿಕ್ಕಬಳ್ಳಾಪುರ- ಕೋಲಾರ ಸಂಸ್ಕೃತಿಯೇ ವಿಶೇಷ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತನೂರು ರಾಜಮ್ಮ ಮಂಟಪ (ಶಿಡ್ಲಘಟ್ಟ): `ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ಆಡಳಿತಾತ್ಮಕವಾಗಿ ಬೇರೆಬೇರೆಯಾಗಿದ್ದರೂ ಎರಡೂ ಜಿಲ್ಲೆಗಳ ಸಂಸ್ಕೃತಿ, ಜೀವನಶೈಲಿ, ಬದುಕು ಭಿನ್ನವಾಗಿಲ್ಲ. ಜಿಲ್ಲೆಗಳು ಪ್ರತ್ಯೇಕವಾಗಿದ್ದರೂ ಇಲ್ಲಿನ ಜನರ ಜೀವನಶೈಲಿ ಮತ್ತು ಸಂಸ್ಕೃತಿ ಒಂದೇ' ಎಂದು ಜಿಲ್ಲಾ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಗುಡಿಬಂಡೆ ಪೂರ್ಣಿಮಾ ಅಭಿಪ್ರಾಯಪಟ್ಟರು.ಜಿಲ್ಲಾ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ನುಡಿಗಳನ್ನಾಡಿದ ಅವರು, ಎಷ್ಟೇ ಅಡ್ಡಿ-ಆತಂಕ ಎದುರಾದರೂ ಬದಲಾವಣೆ ಗಾಳಿ ಬೀಸಿದರೂ ಜೀವನಶೈಲಿ, ಸಂಸ್ಕೃತಿ ಮೇಲೆ ತೀವ್ರ ಪರಿಣಾಮ ಬೀರುವುದಿಲ್ಲ. ಹೀಗಾಗಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಅಳಿಸಲಾಗದ ಜೀವನಶೈಲಿ ಮತ್ತು ಸಂಸ್ಕೃತಿ ಗಟ್ಟಿಯಾಗಿ ಉಳಿದುಕೊಂಡಿದೆ ಎಂದರು.ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮತ್ತು ಗುಡಿಬಂಡೆ ತಾಲ್ಲೂಕುಗಳಲ್ಲಿ ಕಳೆದ ಸಮಯವನ್ನು ಸ್ಮರಿಸಿದ ಅವರು, ನನ್ನ ಜೀವನದ ಪ್ರಮುಖ ಘಟ್ಟಗಳು ಶಿಡ್ಲಘಟ್ಟ, ಗುಡಿಬಂಡೆ ತಾಲ್ಲೂಕುಗಳಲ್ಲಿ ದಾಖಲಾಗಿವೆ. ಹಾಸನದ ಶ್ರವಣಬೆಳಗೊಳ ನನ್ನ ಹುಟ್ಟೂರಾಗಿದ್ದರೂ ಈ ಎರಡು ತಾಲ್ಲೂಕು ನನಗೆ ಹೆಚ್ಚು ಆಪ್ತವಾಗಿವೆ ಎಂದರು.ಆಂಧ್ರಪ್ರದೇಶ ಸಮೀಪದಲ್ಲೇ ಇದ್ದರೂ ತೆಲುಗು ಭಾಷೆ ಮತ್ತು ಸಂಸ್ಕೃತಿಯ ದಟ್ಟ ಪ್ರಭಾವವಿದ್ದರೂ ಇಲ್ಲಿ ಕನ್ನಡ ಗಟ್ಟಿಯಾಗಿ ಉಳಿದಿದೆ. ಪರಭಾಷೆ ಮತ್ತು ಪರಭಾಷಿಕರಿಂದ ಕನ್ನಡಕ್ಕೆ ಧಕ್ಕೆಯಾಗುತ್ತಿದೆ ಎಂಬ ಮಾತು ಪದೇ ಪದೇ ಕೇಳಿ ಬರುತ್ತದೆ. ಆದರೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಅಂತಹ ಸಮಸ್ಯೆ ಯಾವತ್ತೂ ತಲೆದೋರಿಲ್ಲ. ತೆಲುಗು ಭಾಷೆ ಬಳಕೆಯಲ್ಲಿದ್ದರೂ ಇಲ್ಲಿ ಕನ್ನಡ ಆಳವಾಗಿ  ಬೇರೂರಿದೆ ಎಂದು ಅವರು ಹೇಳಿದರು.ಜನರ ಜೀವನಶೈಲಿಯನ್ನು ವ್ಯಾಖ್ಯಾನಿಸಿದ ಅವರು, ಜಗತ್ತಿನ ಯಾವುದೇ ಮೂಲೆಗೆ ಹೋದರೂ ಜನರು ಒಂದೇ ರೀತಿಯಲ್ಲಿ ಇರುತ್ತಾರೆ. ಅವರ ಸಂತೋಷ, ಸಂಭ್ರಮ, ನೋವು ಮತ್ತು ನಲಿವು ಎಲ್ಲವೂ ಒಂದೇ ರೀತಿಯಲ್ಲಿರುತ್ತವೆ. ಆದರೆ ಆಯಾ ಪ್ರದೇಶದ ಜನರ ಬಣ್ಣ, ಆಹಾರ ಪದ್ಧತಿ ಮತ್ತು ಸಂಸ್ಕೃತಿ ಬೇರೆ ಬೇರೆಯಾಗಿರುತ್ತದೆ ಎಂದರು.ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಅವರದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಮತ್ತು ತಮ್ಮದೇ ಆದ ಛಾಪು ಮೂಡಿಸಲು ಅವಕಾಶ ಮಾಡಿಕೊಡಬೇಕು. ಮಕ್ಕಳೆಲ್ಲ ಎಂಜಿನಿಯರ್, ಡಾಕ್ಟರ್‌ಗಳಾಗಬೇಕೆಂದು ಬಯಸುವ ಬದಲು ಅವರು ಆಸಕ್ತಿ ಹೊಂದಿರುವ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯಲ್ಲಿ ಬೆಳೆಯಲು ಅವಕಾಶ ಮಾಡಿಕೊಡಬೇಕು ಎಂದು ಸಲಹೆ ಮಾಡಿದರು.ಕೆಲ ವರ್ಷಗಳಿಂದ ಗುಡಿಬಂಡೆಯಲ್ಲಿ ವಾಸವಿರದಿದ್ದರೂ ಜಿಲ್ಲೆಯ ಜನರು ಆಪ್ತ ಮತ್ತು ಸಹೃದಯತೆಯಿಂದ ಕಂಡಿದ್ದಾರೆ ಎಂದು ಹೇಳಿದ ಅವರು, ನಾನು ಅಧ್ಯಕ್ಷತೆ ವಹಿಸಿಕೊಂಡಿರುವ ಸಮ್ಮೇಳನಕ್ಕೆ ಜನರು ಭಾರಿ ಸಂಖ್ಯೆಯಲ್ಲಿ ಬಂದಿರುವುದು ತುಂಬ ಖುಷಿ ತಂದಿದೆ. ನನಗೆ ಇದು ಅತ್ಯಂತ ಅವಿಸ್ಮರಣೀಯ ಕ್ಷಣಗಳು ಎಂದರು.ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಎಲ್.ಹನುಮಂತರಾವ್, ಶಾಸಕ ಎಂ.ರಾಜಣ್ಣ, ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ `ಕೈಪು' ಲಕ್ಷ್ಮಿನರಸಿಂಹ ಶಾಸ್ತ್ರಿ, ಚಿಕ್ಕಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಪಿ.ನವಮೋಹನ್, ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಕೃಷ್ಣ, ಗೌರಿಬಿದನೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಜೆ.ಚಂದ್ರಮೋಹನ್, ಬಾಗೇಪಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಆರ್.ಕೃಷ್ಣ ಮತ್ತಿತರರು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮಹಿಳೆ ಎಂದರೆ ಯಾರು?

ಎಲ್ಲರಂತೆಯೇ ಮಹಿಳೆಗೂ ಸಮಾನವಾಗಿ ಬಾಳಬೇಕೆಂಬ ಆಸೆಯಿರುತ್ತದೆ. ಆದರೆ ಹಲವು ಸಲ ಆಕೆ ನೆಲೆ ತಪ್ಪುತ್ತದೆ. ತಂದೆ, ತಾಯಿ ಆಶ್ರಯ ತಪ್ಪಬಹುದು, ಸೋದರರ ಕರ್ತವ್ಯಹೀನತೆಗೆ ಕಾರಣವಾಗಬಹುದು. ಗಂಡನ ಮನೆಯ ಬುನಾದಿ ಅಲುಗಬಹುದು. ಮಕ್ಕಳು ಹಾದಿಗೆಟ್ಟು ಅಥವಾ ಅಲಕ್ಷ್ಯವೂ ಸೇರಬಹುದು. ಅವಳದೇ ಆರ್ಥಿಕ ಭದ್ರತೆಯಾಗಲಿ, ವಿದ್ಯೆಯಾಗಲಿ, ವೃತ್ತಿಯಾಗಲಿ, ವ್ಯವಸ್ಥೆಯಾಗಲಿ ಇರುವುದಿಲ್ಲ. ಆದರೆ ಹೆಣ್ಣು ಎಂಬ ಚಿತ್ರ ಸಿಕ್ಕರೆ ಹುರಿದು, ಮುಕ್ಕಲು ಹರಿಹಾಯುವ ಗಂಡಿನ ಕಾಮುಕ ತೃಷೆಗಳೂ ಛಿದ್ರಗೊಳಿಸಬಹುದು.

-ಗುಡಿಬಂಡೆ ಪೂರ್ಣಿಮಾ,  ಸಮ್ಮೇಳನಾಧ್ಯಕ್ಷೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.