ಗುರುವಾರ , ಜೂನ್ 17, 2021
22 °C

ಚಿಕ್ಕು ಬೆಳೆ ತಂದ ಲಕ್!

ತುರುವೇಕೆರೆ ಪ್ರಸಾದ್ Updated:

ಅಕ್ಷರ ಗಾತ್ರ : | |

ಪ್ರಗತಿಪರ ರೈತ ಟಿ.ಎಸ್.ಬೋರೇಗೌಡ ಅವರು ತುರುವೇಕೆರೆ ತಾಲ್ಲೂಕಿನ ದೊಡ್ಡೇನಹಳ್ಳಿ ಸಮೀಪ ಇರುವ ತಮ್ಮ 8 ಎಕರೆ ಜಮೀನಿನಲ್ಲಿ ಹನಿ ನೀರಾವರಿ ಮೂಲಕ 500ಕ್ಕೂ ಹೆಚ್ಚು ಸಪೋಟ (ಚಿಕ್ಕು) ಗಿಡಗಳನ್ನು ಬೆಳೆದು ಯಶಸ್ಸು ಕಂಡಿದ್ದಾರೆ. 6 ವರ್ಷದ ಹಿಂದೆ ಅವರು ಬೆಂಗಳೂರಿನ ಹುಳಿಮಾವಿನಿಂದ ಸಪೋಟ ಸಸಿಗಳನ್ನು ತಂದು ನೆಟ್ಟರು.

 

4 ವರ್ಷ ಗಿಡಗಳು ಬೆಳೆದವೇ ಹೊರತು ಯಾವ ಫಲವೂ ದೊರೆಯಲಿಲ್ಲ. ಈ ತಳಿಯ ಬಗ್ಗೆಯೇ ಹಲವರು ಅನುಮಾನ ವ್ಯಕ್ತಪಡಿಸಿದರು. ಆದರೂ ಗೌಡರು ಛಲ ಬಿಡದೆ ನೀರುಣಿಸಿ ಅಕ್ಕರೆಯಿಂದ ಕಾಪಾಡಿದರು. ಅದರ ಫಲವಾಗಿ ಕಳೆದೆರಡು ವರ್ಷಗಳಿಂದ ತೋಟದ ತುಂಬಾ ಸಪೋಟ ಗಿಜಿಗುಡುತ್ತಿದೆ. ಕೊಂಬೆ ಕೊಂಬೆಗಳು ಮಾಗಿದ ಹಣ್ಣುಗಳಿಂದ ಬಾಗಿ ಬೀಗುತ್ತಿವೆ. ಬೋರೇಗೌಡರ ಮುಖದಲ್ಲೂ ಸಾರ್ಥಕತೆಯ ತೃಪ್ತಿ ಮನೆ ಮಾಡಿದೆ.ಸಪೋಟ ಮೂಲತಃ ಮೆಕ್ಸಿಕೋ, ಮಧ್ಯ ಅಮೆರಿಕದ ಹಣ್ಣಿನ ಬೆಳೆಯಾದರೂ ಭಾರತದಲ್ಲಿ ಅದರಲ್ಲೂ ಕರ್ನಾಟಕದ ಹವಾಮಾನದಲ್ಲಿ ಸೊಗಸಾಗಿ ಬೆಳೆಯುತ್ತದೆ. ಕೆಂಪು ಮಿಶ್ರಿತ ಮರಳು ಭೂಮಿಯಿದ್ದರೆ ಒಳ್ಳೆಯದು. ಸಪೋಟದಲ್ಲಿ ಸ್ಥಳೀಯವಾಗಿ ಕ್ರಿಕೆಟ್ ಬಾಲ್, ಜಾಮೂನು, ಆಂಧ್ರಚಿಕ್ಕು ಮುಂತಾದ ಹಲವು ಜಾತಿಗಳಿವೆ.ಆಕಾರ ಹಾಗೂ ರುಚಿಯ ದೃಷ್ಟಿಯಿಂದ ಕ್ರಿಕೆಟ್ ಬಾಲ್ ತಳಿಯನ್ನು ಬೋರೇಗೌಡರು ಬೆಳೆದಿದ್ದಾರೆ. 30 ಅಡಿ ಅಂತರದಲ್ಲಿ ಗಿಡಗಳನ್ನು ನಾಟಿ ಮಾಡಿದ್ದಾರೆ. ಸಾಮಾನ್ಯವಾಗಿ 15- 45 ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ಗಿಡಗಳು ಬೋರೇಗೌಡರ ತೋಟದಲ್ಲಿ ಈಗಾಗಲೇ ಸಮೃದ್ಧವಾಗಿ  ಬೆಳೆದಿವೆ. ಹಣ್ಣುಗಳು ಬಾಯಲ್ಲಿ ನೀರೂರಿಸುತ್ತವೆ.

 

ಇದನ್ನು ಬೆಳೆಯಲು ಅವರು ಪೂರಾ ಸಾವಯವ ಪದ್ಧತಿಯನ್ನೇ ಅನುಸರಿಸಿದ್ದಾರೆ. ಕೊಟ್ಟಿಗೆ ಗೊಬ್ಬರ ಬಿಟ್ಟರೆ ಬೇರೆ ಯಾವುದೇ ರಾಸಾಯನಿಕ ಗೊಬ್ಬರವನ್ನಾಗಲೀ, ಔಷಧಿಯನ್ನಾಗಲೀ ಗಿಡಗಳಿಗೆ ಸಿಂಪಡಿಸಿಲ್ಲ. ತೆಂಗು, ಅಡಿಕೆಯ ಮಧ್ಯೆ ಸಪೋಟವನ್ನು ಅಂತರ ಬೆಳೆಯನ್ನಾಗಿಯೂ ಬೆಳೆಯಬಹುದು ಎನ್ನುವುದು ಅವರ ಅನುಭವದ ಮಾತು.ಒಮ್ಮೆ ಶ್ರಮಪಟ್ಟರೆ, ಸಮರ್ಪಕ ನೀರಿನ ವ್ಯವಸ್ಥೆ ಮಾಡಿಕೊಂಡರೆ ಪ್ರತಿ ವರ್ಷ ಸಪೋಟ ನಿಮ್ಮನ್ನು ಕೈ ಹಿಡಿಯುತ್ತದೆ ಎನ್ನುವುದನ್ನು ಅವರು  ಅಂಕಿಅಂಶಗಳ ಮೂಲಕ ವಿವರಿಸುತ್ತಾರೆ.

 

ಕಳೆದ ವರ್ಷ ಅವರಿಗೆ ಸಪೋಟ ಮಾರಾಟದಿಂದ ಕೇವಲ 18 ಸಾವಿರ ರೂಪಾಯಿ ಬಂದಿತ್ತು. ಈ ಬಾರಿ ಬಂಪರ್ ಬೆಳೆ ಬಂದಿದೆ. ಈಗಾಗಲೇ 60 ಸಾವಿರ ರೂಪಾಯಿಗೂ ಹೆಚ್ಚಿನ ಹಣ್ಣು ಮಾರಿದ್ದಾರೆ. ಒಟ್ಟು ಸುಮಾರು 7 ಕ್ವಿಂಟಾಲ್ ಹಣ್ಣಿನ ಇಳುವರಿ ನಿರೀಕ್ಷೆಯಿದ್ದು 1.25 ಲಕ್ಷ ರೂಪಾಯಿ ಆದಾಯ ಬರಬಹುದು ಎಂದು ಅಂದಾಜು ಮಾಡಿದ್ದಾರೆ.ಸುತ್ತಮುತ್ತಲ ಪ್ರದೇಶದಲ್ಲಿ ಬೋರೇಗೌಡರ ಚಿಕ್ಕುಗೆ ಭಾರಿ ಬೇಡಿಕೆಯಿದೆ. ಮಾರಾಟಗಾರರೇ ತೋಟಕ್ಕೆ ಬಂದು ಹಣ್ಣುಗಳನ್ನು ಕಟಾವು ಮಾಡಿಕೊಂಡು ಹೋಗುವುದರಿಂದ ಸಾಗಣೆ ವೆಚ್ಚವೂ ಇಲ್ಲ. ಪಟ್ಟಣದಲ್ಲಿ ಎಂಸಿಎ ಓದುತ್ತಿರುವ ಗೌಡರ ಮಗ ವೇಣುಗೋಪಾಲ್ ಸಹ ವಾರಕ್ಕೊಮ್ಮೆ ತೋಟಕ್ಕೆ ಬಂದು ಸಪೋಟ ಕೃಷಿಯಲ್ಲಿ ಅಪ್ಪನಿಗೆ ಸಾಥ್ ನೀಡುತ್ತಿದ್ದಾರೆ.

ಬೋರೇಗೌಡರ ಸಂಪರ್ಕ ಸಂಖ್ಯೆ: 94486 59327.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.