ಶುಕ್ರವಾರ, ಮೇ 14, 2021
27 °C
ಎಂಪಿಎಂ ಕಾರ್ಖಾನೆ; ವ್ಯವಸ್ಥಾಪಕ ನಿರ್ದೇಶಕರ ನೇಮಕ ಸಭೆ ಜುಲೈನಲ್ಲಿ ನಡೆಯುವ ಸಾಧ್ಯತೆ

ಚಿಗುರೊಡೆದ ಐಎಎಸ್ ಅಧಿಕಾರಿ ಬೇಡಿಕೆ

ಪ್ರಜಾವಾಣಿ ವಾರ್ತೆ / ಕೆ.ಎನ್. ಶ್ರೀಹರ್ಷ Updated:

ಅಕ್ಷರ ಗಾತ್ರ : | |

ಭದ್ರಾವತಿ: ಇಲ್ಲಿನ ಎಂಪಿಎಂ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಐಎಎಸ್ ಅಧಿಕಾರಿ ನೇಮಿಸುವಂತೆ ಒತ್ತಾಯದ ಕೂಗು ಅಂತೂ, ಇಂತೂ ಈಗ ವೇಗ ಪಡೆದಿದೆ.ಒಂದೂವರೆ ವರ್ಷದಿಂದ ಈ ಸ್ಥಾನದ ಭಾರವನ್ನು ಹೊತ್ತು ಕೆಲಸ ಮಾಡುತ್ತಿರುವರು ಐಪಿಎಸ್ ಅಧಿಕಾರಿ ಕೆ.ಪಿ.ಗರ್ಗ್. ಈಗ ಈ ಜಾಗಕ್ಕೆ ಐಎಎಸ್ ಅಧಿಕಾರಿ ನೇಮಕ ಮಾಡುವ ಒತ್ತಡ ಹೇರಲಾಗುತ್ತಿದೆ.ಹಲವು ದಶಕದ ಇತಿಹಾಸ ಹೊಂದಿರುವ ಕಾರ್ಖಾನೆಯಲ್ಲಿ 2004ಕ್ಕೂ ಹಿಂದೆ ಕಾರ್ಖಾನೆ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸ್ಥಾನವನ್ನು ಐಎಎಸ್ ಅಧಿಕಾರಿ ಹೊತ್ತು ಕಾರ್ಯಭಾರ ನಡೆಸಿದ್ದರು.ಆದರೆ, 2004ರಲ್ಲಿ ಸರ್ಕಾರದ ಒತ್ತಾಯದ ಮೇರೆಗೆ ಕಾರ್ಖಾನೆ ಆಡಳಿತಕ್ಕೆ ತಿದ್ದುಪಡಿ ತಂದ ಆಡಳಿತ ಮಂಡಳಿ ನಿರ್ದೇಶಕರು, ಸರ್ಕಾರದಿಂದ ನೇಮಕರಾದ ಅಧ್ಯಕ್ಷರ ಜತೆಗೆ ವ್ಯವಸ್ಥಾಪಕ ನಿರ್ದೇಶಕರು ಕೆಲಸ ಮಾಡುವ ವಿನೂತನ ಕಾರ್ಯ ಆರಂಭಿಸಿತು.ಇದರಿಂದಾಗಿ ಒಂದು ಹುದ್ದೆಯಿದ್ದ ಕಾರ್ಖಾನೆಯಲ್ಲಿ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಎಂಬ ಎರಡು ಹುದ್ದೆಗಳ ಸೃಷ್ಟಿ ಆರಂಭವಾಯಿತು. ಈ ಹೊಸ ಬದಲಾವಣೆಯಿಂದ ಮೊದಲ ಬಾರಿಗೆ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರಿಂದ ನೇಮಿತವಾದ ಅಧ್ಯಕ್ಷರು ಎನ್.ಎ.ಹ್ಯಾರಿಸ್.ಆಗ ಕಾರ್ಖಾನೆಗೆ ಒಂದಿಷ್ಟು ಹೊಸ ಹುರುಪು ತುಂಬುವ ಕೆಲಸ ಮಾಡಿದ್ದ ಐಎಎಸ್ ಅಧಿಕಾರಿ ಸಿಎಂಡಿ ಕುಟಿನ್ಹೊ ಅಧ್ಯಕ್ಷ ನೇಮಕ  ತಿದ್ದುಪಡಿ ಯನ್ನು ಪರೋಕ್ಷವಾಗಿ ವಿರೋಧಿಸಿ, ಸರ್ಕಾರದ ಮತ್ತು ಕೆಲವು ರಾಜಕೀಯ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದರು.ಕುಟಿನ್ಹೊ ವರ್ಗಾವಣೆ:  ಸರ್ಕಾರದಿಂದ ಅಧ್ಯಕ್ಷರ ನೇಮಕವಾದ ಕೆಲವೇ ದಿನದಲ್ಲಿ ಮುಂಬಡ್ತಿ ನೆಪದಲ್ಲಿ ಕುಟಿನ್ಹೊ ಬೇರೆಡೆ ವರ್ಗಾವಣೆಯಾದರು. ಅದೇ ಸಮಯಕ್ಕೆ ಧರ್ಮಸಿಂಗ್ ಸರ್ಕಾರ ಕೊನೆಗೊಂಡ ನಂತರ ಹೊಸ ಅಧ್ಯಕ್ಷರ ನೇಮಕ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನಡೆಯಿತು.ಹ್ಯಾರಿಸ್ ನಂತರ ನೇಮಕಗೊಂಡ ಸುರೇಶ್‌ಗೌಡ ಸಮ್ಮಿಶ್ರ ಸರ್ಕಾರದ ಅವಧಿ ಪೂರ್ಣ ಅಧ್ಯಕ್ಷರಾಗಿ ಕೆಲಸ ಮಾಡಿದರು. ಈ ಅವಧಿ ನಡುವೆ ಇಬ್ಬರು ಐಎಎಸ್ ಅಧಿಕಾರಿಗಳು ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದರು.2008ರಲ್ಲಿ ಅಧಿಕಾರ ಹಿಡಿದ ಬಿಜೆಪಿ ಸರ್ಕಾರ ಆರಗಜ್ಞಾನೇಂದ್ರ ಅವರನ್ನು ಕಾರ್ಖಾನೆ ಅಧ್ಯಕ್ಷರಾಗಿ ನೇಮಕ ಮಾಡಿತು.  ಸರ್ಕಾರದ ಅವಧಿಯಲ್ಲಿ ಮೂವರು ವ್ಯವಸ್ಥಾಪಕ ನಿರ್ದೇಶಕರು ಬದಲಾದರು. ಅವರಲ್ಲಿ ಅಂತಿಮವಾಗಿ ನೇಮಕಗೊಂಡವರು ಐಪಿಎಸ್ ಅಧಿಕಾರಿ ಕೆ.ಪಿ.ಗರ್ಗ್.ಈ ಅವಧಿಯ್ಲ್ಲಲಿ ಐಎಎಸ್ ಅಧಿಕಾರಿ ಸುಧೀರ್‌ಕುಮಾರ್ ಅವರನ್ನು ಹೊರತುಪಡಿಸಿ ಮತ್ಯಾವುದೇ ಅಧಿಕಾರಿ ಬಹಳ ದಿನಗಳ ಕಾಲ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಲಿಲ್ಲ. ಆ ಸಂದರ್ಭದಲ್ಲಿ ನಡೆದ ಕಾರ್ಮಿಕರ ಹೋರಾಟ, ಅಧಿಕಾರಿಗಳ ಜತೆ ನಡೆದ ಕೆಲವು ಸಂಘರ್ಷ ಕಾರಣವೋ ಏನೋ ಸರ್ಕಾರ ಐಪಿಎಸ್ ಅಧಿಕಾರಿಯನ್ನು ನೇಮಿಸಿತು.ಅಧಿಕಾರಿಗಳ ಹಿಂದೇಟು: 2004ರ ನಂತರ ಬದಲಾದ ಸನ್ನಿವೇಶದಲ್ಲಿ ಸರ್ಕಾರ ನೇಮಕ ಅಧ್ಯಕ್ಷ ಸ್ಥಾನದ ಪ್ರಭಾವ ಕಾರಣವೋ ಏನೋ ಅಧಿಕಾರಿಗಳು ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾಗಲು ಹಿಂಜರಿಯುತ್ತಾರೆ ಎಂಬ ಮಾತು ಕಾರ್ಮಿಕ ವಲಯದಲ್ಲಿದೆ.ಅಷ್ಟೇ ಅಲ್ಲದೆ ಹಲವು ಪ್ರಮುಖ ಹುದ್ದೆಗಳು ಖಾಲಿ ಇದ್ದರೂ ಅಲ್ಲಿಗೆ ಬರಲು ಹಿರಿಯ ಅಧಿಕಾರಿಗಳು ಹಿಂದೇಟು ಹಾಕುವ ಸ್ಥಿತಿ ಇದೆ. ಈ ಬೇಡಿಕೆ ಜತೆಗೆ ಹಲವು ಆಶೋತ್ತರಗಳ ಮನವಿ ಹೊತ್ತ ಶಾಸಕ ಎಂ.ಜೆ.ಅಪ್ಪಾಜಿ ನೇತೃತ್ವದ ಕಾರ್ಮಿಕ ಮುಖಂಡರ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಪೀಕರ್ ಅವರನ್ನು ಭೇಟಿ ಮಾಡಿದ್ದಾರೆ. ಇದರಿಂದಾಗಿ ಈ ತಿಂಗಳ ಅಂತ್ಯ ಅಥವಾ ಜುಲೈ ಮೊದಲ ವಾರದಲ್ಲಿ ಸಭೆ ನಡೆಸುವ ಭರವಸೆ ನಿಯೋಗಕ್ಕೆ ಸಿಕ್ಕಿದೆ.ಒಟ್ಟಿನಲ್ಲಿ ಹಲವು ಏಳುಬೀಳಿನ ನಡುವೆ ಸದಾ ಸುದ್ದಿಯಲ್ಲಿರುವ ಜಿಲ್ಲೆಯ ಏಕೈಕ ಸರ್ಕಾರಿ ಸ್ವಾಮ್ಯದ ಎಂಪಿಎಂ ಕಾರ್ಖಾನೆ ಐಎಎಸ್ ಅಧಿಕಾರಿ ನೇಮಕದೊಂದಿಗೆ ತನ್ನ ಅಭಿವೃದ್ಧಿಯ ಕನಸನ್ನು, ನನಸು ಮಾಡಿಕೊಳ್ಳಲಿ ಎಂಬುದು ಇಲ್ಲಿನ ನಾಗರಿಕರ ಒತ್ತಾಸೆಯಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.