ಶುಕ್ರವಾರ, ಮೇ 27, 2022
25 °C

ಚಿತ್ರ ಕಲಾವಿದರನ್ನು ಮರೆತ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಿತ್ರಕಲಾ ಪ್ರದರ್ಶನಕ್ಕೆ ಅನುವು ಮಾಡಿಕೊಡದೇ ಇರುವ ಬಗ್ಗೆ ಕಲಾವಿದರ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಮುಂದಿನ ಸಾಹಿತ್ಯ ಸಮ್ಮೇಳನಗಳಾದರೂ ಕಲೆಗಳನ್ನು ಪ್ರಚುರ ಪಡಿಸುವ ಸಂಸ್ಕೃತಿ ಮೇಳಗಳಾಗಿ ರೂಪುಗೊಳ್ಳುವಂತಾಗಬೇಕು ಎಂಬ ಅಭಿಪ್ರಾಯ ಕೇಳಿ ಬಂದಿದೆ.ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯ ಜಾತ್ರೆಯ ಜತೆಗೆ ಚಿತ್ರ ಪ್ರದರ್ಶನ ಗ್ಯಾಲರಿಗಳು ಕೂಡ ಇರುತ್ತಿದ್ದವು. ಆದರೆ ಈಗ ಆ ಸಂಪ್ರದಾಯ ನಿಂತು ಹೋಗಿದೆ. ಆಧುನಿಕ ಕಲೆಗೆ ಪ್ರೋತ್ಸಾಹ ನೀಡುತ್ತಿರುವ ದೇಶದ ಪ್ರಮುಖ ತಾಣಗಳಲ್ಲಿ ಬೆಂಗಳೂರು ಕೂಡ ಒಂದು. ಇಂಥ ಮಹತ್ವದ ಸ್ಥಳದಲ್ಲಿಯೇ ಸಮ್ಮೇಳನ ನಡೆಯುತ್ತಿದ್ದರೂ ಕಲಾವಿದರನ್ನು ಕಡೆಗಣಿಸಿರುವುದು ಏಕೆ ಎಂಬ ಪ್ರಶ್ನೆ ಎದ್ದಿದೆ.ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಕಲಾ ವಿಮರ್ಶಕ ಎಚ್.ಎ.ಅನಿಲ್ ಕುಮಾರ್ ‘ಇಂತಹ ನಿರ್ಲಕ್ಷ್ಯ ಇದೇ ಮೊದಲಲ್ಲ. ಸಾಹಿತ್ಯ ಹಾಗೂ ಕಲೆ ಒಂದೆಡೆ ಬೆರೆಯಬಾರದು ಎನ್ನುವ ತಂತ್ರ ಇದರ ಹಿಂದೆ ಇದೆ. ಪುಸ್ತಕ ವಿನ್ಯಾಸ, ಮುಖಪುಟ ವಿನ್ಯಾಸದ ವಿಷಯದಲ್ಲಿ ಕಲಾವಿದರನ್ನು ದುಡಿಸಿಕೊಳ್ಳುವವರು ನಂತರ ಅವರನ್ನು ಮರೆತು ಬಿಡುತ್ತಾರೆ’ ಎಂದಿದ್ದಾರೆ.ಸಮ್ಮೇಳನದಲ್ಲಿ ಕಲೆ ಕುರಿತು ಕನಿಷ್ಠ ಒಂದು ಗೋಷ್ಠಿಯನ್ನಾದರೂ ಏರ್ಪಡಿಸಬಹುದಿತ್ತು. ನಗರಾಲಂಕಾರಕ್ಕೆ ಸಂಬಂಧಿಸಿದಂತೆ ಚಿತ್ರ ಕಲಾವಿದರ ಸಲಹೆ ಸೂಚನೆ ಪಡೆಯಬಹುದಿತ್ತು ಎಂಬ ಮಾತುಗಳು ಕೇಳಿ ಬಂದಿವೆ.‘ಸಾಹಿತ್ಯ ಸಮ್ಮೇಳನದಂತಹ ಬೃಹತ್ ಸಮಾವೇಶಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಇಂಥ ವೇದಿಕೆಗಳು ಸಾಹಿತ್ಯಕ್ಕೆ ಪೂರಕವಾದ ಕಲಾ ಪ್ರಕಾರಗಳ ಬಗ್ಗೆ ಚರ್ಚಿಸಬೇಕಿದೆ. ಅವುಗಳಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಜನರಿಗೆ ಪರಿಚಯಿಸುವ ಕಾರ್ಯವನ್ನು ನಿರಂತರವಾಗಿ ಮಾಡಬೇಕಿದೆ. ಶಿವರಾಮ ಕಾರಂತ, ಅ.ನ.ಕೃಷ್ಣರಾಯ ಮುಂತಾದ ಹಳೆಯ ತಲೆಮಾರು ಕಲೆಯ ಬಗ್ಗೆ ಹೊಂದಿದ್ದ ಹೃದಯ ವೈಶಾಲ್ಯ ಈಗಿನ ತಲೆಮಾರಿನಲ್ಲಿ ಕಡಿಮೆಯಾಗಿದೆ ಅನ್ನಿಸುತ್ತಿದೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಚ್.ಕೃಷ್ಣಯ್ಯ ಅಭಿಪ್ರಾಯಪಟ್ಟಿದ್ದಾರೆ.‘ಬೆಂಗಳೂರಿನಲ್ಲಿ ಸಂಸ್ಕೃತಿಗೆ ಸಂಬಂಧಿಸಿದ ಹತ್ತಾರು ಅಕಾಡೆಮಿಗಳಿದ್ದರೂ ಅವುಗಳನ್ನು ಬಳಸಿಕೊಂಡು ಸಮ್ಮೇಳನ ರೂಪಿಸಲು ಸಂಘಟಕರು ಯತ್ನಿಸಲಿಲ್ಲ. ಸಮ್ಮೇಳನದ ಸನ್ಮಾನಿತರಲ್ಲಿ ಕೂಡ ಕುಂಚ ಕಲಾವಿದರು ಹಾಗೂ ಶಿಲ್ಪಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯಲಿಲ್ಲ. ಮುಂದಿನ ಸಮ್ಮೇಳನಗಳು ಕಲೆಗೆ ಪೂರಕವಾಗಿ ತೊಡಗಿಕೊಳ್ಳಬೇಕು’ ಎಂದು ಹೆಸರು ತಿಳಿಸಲು ಬಯಸದ ಹಿರಿಯ ಕಲಾವಿದರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.