ಭಾನುವಾರ, ಜೂನ್ 20, 2021
28 °C

ಚಿದಂಬರಂ ಪುತ್ರನಿಗೆ ಕಾಂಗ್ರೆಸ್‌ ಟಿಕೆಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ನಿರೀಕ್ಷೆಯಂತೆ ಲೋಕಸಭಾ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿರುವ ಕೇಂದ್ರ ಸಚಿವ ಪಿ. ಚಿದಂಬರಂ  ತಮ್ಮ ಪುತ್ರನಿಗೆ ಶಿವಗಂಗಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಕಾಂಗ್ರೆಸ್‌ ಗುರುವಾರ ರಾತ್ರಿ ೫೦ ಅಭ್ಯರ್ಥಿಗಳ ಪಟ್ಟಿ­ಬಿಡು­ಗಡೆ ಮಾಡಿದ್ದು, ತಮಿಳುನಾಡಿನ ಶಿವಗಂಗಾ ಕ್ಷೇತ್ರ­ದಿಂದ ಚಿದಂಬರಂ ಪುತ್ರ ಕಾರ್ತಿ ಚಿದಂಬರಂಗೆ ಟಿಕೆಟ್‌ ನೀಡಿದೆ.ಕೇಂದ್ರ ಸಚಿವ ಗುಲಾಮ್ ನಬಿ ಆಜಾದ್‌ ಅವರಿಗೆ ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ್ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ನೀಡಲಾಗಿದೆ ಎಂದು  ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈಚೆಗಷ್ಟೇ ಕಾಂಗ್ರೆಸ್‌ಗೆ ಸೇರಿದ ಮಾಜಿ ಸಚಿವ ಕೀರ್ತಿ ಪಟೇಲ್ ಅವರು ಗಾಂಧಿ ನಗರದಿಂದ ಎಲ್‌.ಕೆ. ಅಡ್ವಾಣಿ ಅವರ ವಿರುದ್ಧ ಸ್ಪರ್ಧಿಸಲಿದ್ದಾರೆ. ತಮಿಳುನಾಡಿನಲ್ಲಿ ಬಹುತೇಕ ಹಾಲಿ ಸಂಸದರಿಗೆ ಟಿಕೆಟ್‌ ನೀಡಲಾಗಿದ್ದು, ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ತಮ್ಮ ಸ್ವಕ್ಷೇತ್ರ ಮಯಿಲಾಡತುರೈನಿಂದ ಹಾಗೂ ಆರ್.ಪ್ರಭು ಅವರು ಕೊಯಮತ್ತೂರು ಕ್ಷೇತ್ರ­ದಿಂದ ಸ್ಪರ್ಧಿಸಲಿದ್ದಾರೆ. ರಾಜ್‌ಬಬ್ಬರ್‌ ಗಾಜಿಯಾಬಾದ್‌ನಿಂದ ಸ್ಪರ್ಧಿಸುತ್ತಿರುವ ಕಾರಣ ಅವರು ಪ್ರತಿನಿಧಿಸುತ್ತಿದ್ದ ಉತ್ತರ ಪ್ರದೇಶದ ಫಿರೋಜಾಬಾದ್‌ ಕ್ಷೇತ್ರದಿಂದ ಅತುಲ್‌ ಚತುರ್ವೇದಿ ಅವರಿಗೆ ಅವಕಾಶ ನೀಡಲಾಗಿದೆ.ದಿಗ್ವಿಜಯ ಸಿಂಗ್‌ ಅವರ ಅಳಿಯ ಪರಂಜಯಾದಿತ್ಯ ಸಿಂಗ್‌ ಪಾರ್‌ಮರ್‌ ಅವರಿಗೆ ಗುಜ­ರಾತಿನ ಪಂಚಮಹಲ್‌ ಕ್ಷೇತ್ರಕ್ಕೆ ಟಿಕೆಟ್‌ ನೀಡಲಾಗುವುದು ಎಂಬ ಮಾತು ಆರಂಭ­ದಲ್ಲಿ ಕೇಳಿಬಂದಿತ್ತಾದರೂ, ಕಾಂಗ್ರೆಸ್‌  ಎರಡನೇ ಪಟ್ಟಿ­ಯಲ್ಲಿ ಅವರ ಹೆಸರನ್ನು ಕೈಬಿಡಲಾಗಿದೆ. ರಾಮ್‌ಸಿಂಗ್ ಪಾರ್‌ಮರ್‌ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.