ಬುಧವಾರ, ಮೇ 12, 2021
24 °C

ಚಿನಕುರಳಿ ಅಪಘಾತ: ಶವವಿಟ್ಟು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಚಿನಕುರಳಿ ಬಳಿ ಟೆಂಪೋ ಮತ್ತು ಸರ್ಕಾರಿ ಬಸ್ ನಡುವೆ ಡಿಕ್ಕಿ ಸಂಭವಿಸಿ 9 ಜನ ಮೃತಪಟ್ಟ ಹಿನ್ನೆಲೆಯಲ್ಲಿ ಮೃತರ ಕುಟುಂಬಗಳಿಗೆ ರೂ. 5 ಲಕ್ಷ ಪರಿಹಾರ ಕೊಡಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಮೃತರ ವಾರಸುದಾರರು ಹೈವೆ ವೃತ್ತದಲ್ಲಿ ಶವವಿಟ್ಟು ಪ್ರತಿಭಟನೆ ಮಾಡಿದರು.ಇದರಿಂದಾಗಿ ಸ್ಥಳದಲ್ಲಿ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಶಾಸಕ ಎಚ್.ಎಸ್.ಶಂಕರಲಿಂಗೇಗೌಡ ಪ್ರತಿಭಟನಾಕಾರರ ಮನವೊಲಿಸಲು ಮುಂದಾದರು. ಇದರಿಂದ ರೊಚ್ಚಿಗೆದ್ದ ಮೃತರ ಸಂಬಂಧಿಕರು 5 ಲಕ್ಷ ರೂಪಾಯಿ ಕೊಡಿಸುವಂತೆ ಶಾಸಕ ಶಂಕರಲಿಂಗೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು.ಮೈಸೂರು ಹಾಗೂ ಮಂಡ್ಯ ಜಿಲ್ಲೆಯಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಅಲ್ಲದೆ, ಅಪಘಾತ ತಡೆಗೆ ಯಾವುದೇ ಕ್ರಮಕೈಗೊಂಡಿಲ್ಲ. ರಸ್ತೆ ಇಕ್ಕೆಲಗಳಲ್ಲಿ ರಸ್ತೆ ಡುಬ್ಬ ಹಾಕಿಸಿಲ್ಲ. ವಾಹನ ದಟ್ಟಣೆ ಹಾಗೂ ಅತಿಯಾದ ವೇಗದಿಂದ ಅಪಘಾತಗಳು ಸಂಭವಿಸುತ್ತಲೇ ಇವೆ. ಇವುಗಳ ಬಗ್ಗೆ ಸರ್ಕಾರ ಗಂಭೀರವಾಗಿ ಆಲೋಚಿಸಿ, ಕ್ರಮಕೈಗೊಳ್ಳಬೇಕು. ಮೃತರ ಕುಟುಂಬಗಳಿಗೆ ತಲಾ ರೂ. 5 ಲಕ್ಷ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಸ್ಥಳಕ್ಕೆ ಭೇಟಿ ನೀಡದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ವಿರುದ್ಧ ಶಾಸಕ ಸೋಮಶೇಖರ್ ಹಾಗೂ ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಬಸವರಾಜ್ ಮಾಲಗತ್ತಿ ಅವರು ಕೆಎಸ್‌ಆರ್‌ಟಿಸಿ ಡಿಸಿ ಜೊತೆ ಮಾತನಾಡಿ, 1 ಲಕ್ಷ ರೂಪಾಯಿ ಪರಿಹಾರ ಕೊಡುವ ಭರವಸೆ ನೀಡಿದರು. ಬಳಿಕ ಬನ್ನಿಮಂಟಪದ ಜೋಡಿ ತೆಂಗಿನ ಮರದ ಬಳಿ ಶವಸಂಸ್ಕಾರ ನಡೆಸಲಾಯಿತು. ಪ್ರತಿಭಟನೆಯಿಂದಾಗಿ ಮೈಸೂರು-ಬೆಂಗಳೂರು ರಸ್ತೆ ಮಧ್ಯೆ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.