ಮಂಗಳವಾರ, ಜನವರಿ 31, 2023
18 °C

ಚಿನ್ನದ ಹುಡುಗಿಗೆ ಪದ್ಮಶ್ರೀ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿನ್ನದ ಹುಡುಗಿಗೆ ಪದ್ಮಶ್ರೀ ಗೌರವ

ಒಂದು ಸಾಧನೆಗೆ ದೊರೆತ ಗೌರವ ಜವಾಬ್ದಾರಿ ಯನ್ನು ಹೆಚ್ಚಿಸುತ್ತದೆ ಎನ್ನುವ ಮಾತಿದೆ. ಆ ಗೌರವ ಮತ್ತೆ ಹೊಸ ಹೊಸ ದಾಖಲೆಗಳನ್ನು ಮಾಡಲು ಪ್ರೋತ್ಸಾಹಿಸುತ್ತದೆ, ಪ್ರೇರಣೆಯಾಗುತ್ತದೆ ಎನ್ನುವ ಮಾತನ್ನು ಅಲ್ಲಗೆಳೆಯುವಂತಿಲ್ಲ. ಈ ಮಾತು ನವದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಕೊಟ್ಟ ಹರಿಯಾಣದ ಕೃಷ್ಣ ಪೂನಿಯಾ ಅವರ ಪಾಲಿಗಂತೂ ಸತ್ಯ.ಈ ಸಲದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಶೂಟರ್ ಗಗನ್ ನಾರಂಗ್, ಕುಸ್ತಿಪಟು ಸುಶೀಲ್ ಕುಮಾರ್, ವೇಟ್‌ಲಿಫ್ಟರ್ ಎನ್. ಕುಂಜುರಾಣಿದೇವಿ, ಪ್ಯಾರಾಜಂಪ್ ಸ್ಪರ್ಧಿ ಶೀತಲ್ ಮಹಾಜನ್, ಪರ್ವತಾರೋಹಿ ಹರಭಜನ್‌ಸಿಂಗ್ ಹಾಗೂ ಕ್ರಿಕೆಟಿಗೆ ವಿ.ವಿ.ಎಸ್. ಲಕ್ಷ್ಮಣ್ ಅವರಿಗೂ ಈ ಸಲದ ಪದ್ಮಶ್ರೀ ಗೌರವ ದೊರೆತಿರುವುದು ಹೆಮ್ಮೆಯ ಸಂಗತಿಯೇ ಸರಿ.28 ವರ್ಷದ ಪೂನಿಯಾ ಚಿಕ್ಕ ವಯಸ್ಸಿನಲ್ಲಿಯೇ ಹಲವು ಪ್ರಶಸ್ತಿಗಳನ್ನು ತಮ್ಮ ಮಡಿಗೇರಿಸಿ ಕೊಂಡಿ ಾರೆ. ಈ ಸಲದ ಕ್ರೀಡಾಕೂಟದಲ್ಲಿ ಪಡೆದ ಚಿನ್ನದ ಪದಕಕ್ಕೆ ತುಂಬಾ ಮಹತ್ವವಿದೆ. ಏಕೆಂದರೆ ಪೂನಿಯಾ 52 ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಕಾಮನ್‌ವೆಲ್ತ್ ಕೂಟದ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. 1958ರ ಕ್ರೀಡಾಕೂಟದಲ್ಲಿ ಮಿಲ್ಖಾ ಸಿಂಗ್ ಭಾರತಕ್ಕೆ ಪದಕವನ್ನು ದೊರಕಿಸಿ ಕೊಟ್ಟಿದ್ದರು. ಅದರ ನಂತರ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಚಿನ್ನದ ಪದಕ ಬರಲು ಐದು ದಶಕಗಳೇ ಕಾಯಬೇಕಾಗಿ ಬಂದಿತು. ಆದ್ದರಿಂದಲೇ ಈ ಪದಕಕ್ಕೆ ತುಂಬಾ ಮಹತ್ವ.ಪೂನಿಯಾ 46ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರದ ಪದಕ, 2006 ಹಾಗೂ 2010ರ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಸಹ ಪಡೆದಿದ್ದಾರೆ.ಹೀಗೆ ಬದುಕಿನಲ್ಲಿ ಹಲವು ಸಾಧನೆಗಳನ್ನು ದೇಶಕ್ಕೆ ಉಡಗೊರೆಯಾಗಿ ನೀಡಿದ ಕೃಷ್ಣ ಪೂನಿಯಾಗೆ ‘ಪದ್ಮಶ್ರೀ’ ಗೌರವ ಜವಾಬ್ದಾರಿಯನ್ನು ಹೆಚ್ಚಿಸಿದೆ.ಇದಕ್ಕೂ ಮೊದಲು 2010ರಲ್ಲಿ ಅರ್ಜುನ ಪ್ರಶಸ್ತಿಯ ಗರಿಮೆಯೂ ಅವರ ಹೆಸರಲ್ಲಿದೆ. ಹರಿಯಾಣ ರಾಜ್ಯ ಸರ್ಕಾರ ನೀಡುವ ‘ಮಹಾರಾಣ ಪ್ರತಾಪ’ ಹಾಗೂ ‘ಭೀಮ್’ ಪ್ರಶಸ್ತಿ ಕೂಡ ಅವರಿಗೆ ಲಭಿಸಿದೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ನಂತರ ಹರಿಯಾಣ ಸರ್ಕಾರ 10 ಲಕ್ಷ ರೂಪಾಯಿ ಬಹುಮಾನ ನೀಡಿ ಮುಂದಿನ ಒಲಿಂಪಿಕ್‌ಗೆ ಪ್ರೋತ್ಸಾಹ ಸೂಚಿಸಿದೆ.‘ಈ ಸಲ ಬಂದ ಪ್ರಶಸ್ತಿ ನಮಗೆ ಸಂತೋಷ ನೀಡಿದೆ. ನಮ್ಮ ಜವಾಬ್ದಾರಿ ಹೆಚ್ಚಿಸಿದೆ. ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲಲು ಪ್ರೇರಣೆಯಾಗಿದೆ’ ಎಂದು ಗಗನ್ ನಾರಂಗ್, ಸುಶೀಲ್ ಕುಮಾರ್, ಕೃಷ್ಣ ಪೂನಿಯಾ ಅವರು ಪ್ರತಿಕ್ರಿಯಿಸಿದ್ದರು. ಕೃಷ್ಣ ಪೂನಿಯಾ 2008ರ ಬೀಜಿಂಗ್ ಒಲಿಂಪಿಕ್‌ನಲ್ಲಿಯೂ ಪದಕ ಗೆಲ್ಲುವ ವಿಶ್ವಾಸದೊಂದಿಗೆ ಪಾಲ್ಗೊಂಡಿದ್ದರು. ಆದರ ಅವರ ಕನಸು ಈಡೇರಿರಲಿಲ್ಲ. ಆದರೆ 2012ರಲ್ಲಿ ನಡೆಯುವ ಲಂಡನ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕದ ಕನಸು ಈಡೇರಲಿ ಜೀವನದ ದೊಡ್ಡ ಕನಸೊಂದು ನನಸಾಗಲಿ ಎನ್ನುವ ಹಾರೈಕೆಯೊಂದಿಗೆ...

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.