ಭಾನುವಾರ, ಜೂಲೈ 5, 2020
23 °C

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಗುಡ್ ಬೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಗುಡ್ ಬೈ

ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಟೂರ್ನಿ ಕೊನೆಗೊಳ್ಳಲು ಇನ್ನೂ ಮೂರು ವಾರಗಳಿವೆ. ಆದರೆ ಉದ್ಯಾನನಗರಿಯ ಚಿನ್ನಸ್ವಾಮಿ ಕ್ರೀಡಾಂಗಣ ಈ ‘ಮಹಾ ಮೇಳ’ಕ್ಕೆ ಬುಧವಾರ ‘ಗುಡ್ ಬೈ’ ಹೇಳಿತು. ಹತ್ತನೇ ವಿಶ್ವಕಪ್ ಟೂರ್ನಿಯ ಯಾವುದೇ ಪಂದ್ಯ ಇನ್ನು ಇಲ್ಲಿ ನಡೆಯುತ್ತಿಲ್ಲ. ಬುಧವಾರ ಆಸ್ಟ್ರೇಲಿಯಾ- ಕೆನಡಾ ನಡುವಿನ ಹೋರಾಟ ಇಲ್ಲಿನ ಕೊನೆಯ ಪಂದ್ಯವಾಗಿತ್ತು.ಟೂರ್ನಿಯ ಲೀಗ್ ಹಂತದ ಒಟ್ಟು ಐದು ಪಂದ್ಯಗಳಿಗೆ ವೇದಿಕೆಯಾಗುವ ಅದೃಷ್ಟ ಈ ಕ್ರೀಡಾಂಗಣಕ್ಕೆ ಒಲಿದಿದೆ. ಅದರಲ್ಲಿ ಭಾರತದ ಎರಡು ಪಂದ್ಯಗಳು ನಡೆದಿವೆ. ಭಾರತದ ಎರಡು ಲೀಗ್ ಪಂದ್ಯಗಳಿಗೆ ಆತಿಥ್ಯ ವಹಿಸುವ ಅವಕಾಶ ಲಭಿಸಿದ್ದು ಈ ಕ್ರೀಡಾಂಗಣಕ್ಕೆ ಮಾತ್ರ. ಮಹೇಂದ್ರ ಸಿಂಗ್ ದೋನಿ ಬಳಗ ಇಲ್ಲಿ ಇಂಗ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳ ಜೊತೆ ಪೈಪೋಟಿ ನಡೆಸಿದೆ. ಅದೇ ರೀತಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಪರಸ್ಪರ ಸೆಣಸಾಟ ನಡೆಸಿವೆ. ಆಸ್ಟ್ರೇಲಿಯಾ ತಂಡ ಇಲ್ಲಿ ಕೀನ್ಯಾ ಮತ್ತು ಕೆನಡಾ ತಂಡವನ್ನು ಎದುರಿಸಿದೆ.ಭಾರತ- ಇಂಗ್ಲೆಂಡ್ ಪಂದ್ಯ ನಿಗದಿತ ವೇಳಾಪಟ್ಟಿಯಂತೆ ಕೋಲ್ಕತ್ತದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಕ್ರೀಡಾಂಗಣದ ನವೀಕರಣ ಕಾಮಗಾರಿ ನಿಗದಿತ ಗಡುವಿನ ಒಳಗಾಗಿ ಪೂರ್ಣಗೊಳ್ಳದ ಕಾರಣ ಐಸಿಸಿ ಈ ಪಂದ್ಯವನ್ನು ಬೆಂಗಳೂರಿಗೆ ಸ್ಥಳಾಂತರಿಸಿತ್ತು. ಕೋಲ್ಕತ್ತಕ್ಕೆ ಉಂಟಾದ ‘ನಷ್ಟ’ ಬೆಂಗಳೂರಿಗೆ ‘ಲಾಭ’ವಾಗಿ ಪರಿಣಮಿಸಿತು.ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ ರೋಚಕ ‘ಟೈ’ನಲ್ಲಿ ಅಂತ್ಯ ಕಂಡರೆ, ಐರ್ಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಅಚ್ಚರಿಯ ಗೆಲುವು ಪಡೆಯಿತು. ಈ ಎರಡು ಪಂದ್ಯಗಳನ್ನು ಕ್ರಿಕೆಟ್ ಪ್ರಿಯರು ಮತ್ತೆ ಮತ್ತೆ ಮೆಲುಕು ಹಾಕುವುದು ಖಂಡಿತ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ (120) ಅವರ ಭರ್ಜರಿ ಶತಕದ ನೆರವಿನಿಂದ ಭಾರತ 338 ರನ್ ಪೇರಿಸಿತ್ತು. ಆದರೆ ಆ್ಯಂಡ್ರ್ಯೂ ಸ್ಟ್ರಾಸ್ (158) ಅದಕ್ಕಿಂತಲೂ ಮಿಗಿಲಾದ ಪ್ರದರ್ಶನ ನೀಡಿದ ಕಾರಣ ಇಂಗ್ಲೆಂಡ್ ಪಂದ್ಯವನ್ನು ‘ಟೈ’ ಮಾಡಿಕೊಂಡಿತ್ತು.ಐರ್ಲೆಂಡ್ ಎದುರಿನ ಪಂದ್ಯದಲ್ಲಿ ಇಂಗ್ಲೆಂಡ್ 327 ರನ್ ಪೇರಿಸಿತ್ತು. ಆದರೆ ಕೆವಿನ್ ಒಬ್ರಿಯನ್ 63 ಎಸೆತಗಳಲ್ಲಿ 113 ರನ್ ಗಳಿಸಿ ಐರ್ಲೆಂಡ್‌ಗೆ ಅಚ್ಚರಿಯ ಗೆಲುವು ತಂದಿತ್ತಿದ್ದರು. ಮಾತ್ರವಲ್ಲ ವಿಶ್ವಕಪ್‌ನಲ್ಲಿ ಅತಿವೇಗದ ಶತಕ ಗಳಿಸಿದ ಸಾಧನೆಯನ್ನೂ ತಮ್ಮದಾಗಿಸಿಕೊಂಡಿದ್ದರು. ಈ ಎರಡು ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಇತಿಹಾಸದ ಪುಟಗಳಲ್ಲಿ ಸ್ಥಾನವನ್ನು ಕಲ್ಪಿಸಿದೆ.ಬುಧವಾರ ನಡೆದ ಆಸ್ಟ್ರೇಲಿಯಾ- ಕೆನಡಾ ಪಂದ್ಯವನ್ನು ಹೊರತುಪಡಿಸಿ ಉಳಿದ ನಾಲ್ಕು ಪಂದ್ಯಗಳಿಗೂ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಆಗಮಿಸಿದ್ದರು. ಭಾರತದ ಪಂದ್ಯಗಳಿದ್ದ ಸಂದರ್ಭ ಕ್ರೀಡಾಂಗಣ ಕಿಕ್ಕಿರಿದು ತುಂಬಿತ್ತು.ಭಾರತ- ಇಂಗ್ಲೆಂಡ್ ಪಂದ್ಯದ ಟಿಕೆಟ್ ಕೊಳ್ಳುವ ಪ್ರಯತ್ನದಲ್ಲಿದ್ದ ಸಾಮಾನ್ಯ ಕ್ರಿಕೆಟ್ ಪ್ರೇಮಿಗಳಿಗೆ ಪೊಲೀಸರ ಲಾಠಿ ಏಟು ಬಿದ್ದಿತ್ತು. ಇದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಘನತೆಗೆ ಅಲ್ಪ ಹಿನ್ನಡೆ ಉಂಟುಮಾಡಿದ್ದು ನಿಜ.ಈ ಒಂದು ಕಹಿ ಘಟನೆಯನ್ನು ಮರೆತರೆ ಟೂರ್ನಿಯ ಎಲ್ಲ ಪಂದ್ಯಗಳು ಸುಸೂತ್ರವಾಗಿ ನಡೆದಿವೆ. ಎಲ್ಲ ಐದು ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳ ಮೇಲಾಟ ಕಂಡುಂಬಂತು. ಇಲ್ಲಿ ಆಡಿದ ಆರು ತಂಡಗಳ ನಾಯಕರೂ ಪಿಚ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನೇ ಆಡಿದ್ದಾರೆ.ವಿಶ್ವಕಪ್ ಟೂರ್ನಿಯ ಪಂದ್ಯಗಳಿಗೆ ಯಶಸ್ವಿಯಾಗಿ ಆತಿಥ್ಯ ವಹಿಸಿದ ಚಿನ್ನಸ್ವಾಮಿ ಕ್ರೀಡಾಂಗಣ ಇನ್ನು ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲಿದೆ. ಆ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೇಳೆ ಮತ್ತೆ ‘ಬ್ಯುಸಿ’ ಎನಿಸಲಿದೆ. ಐಪಿಎಲ್‌ನ ಏಳು ಪಂದ್ಯಗಳು ಇಲ್ಲಿ ನಡೆಯಲಿವೆ. ಏಪ್ರಿಲ್ 12 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ಜೊತೆ ಪೈಪೋಟಿ ನಡೆಸಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.