ಶನಿವಾರ, ಮೇ 8, 2021
26 °C

ಚಿನ್ನ:ಹೊಸ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಚಿನ್ನದ ಬೆಲೆಯ ನಾಗಾಲೋಟ ಮುಂದುವರೆದಿದ್ದು, ಮಂಗಳವಾರದ ವಹಿವಾಟಿನಲ್ಲಿ 10 ಗ್ರಾಂಗಳಿಗೆ ರೂ 470 ಏರಿಕೆ ಕಂಡು, ಹೊಸ ದಾಖಲೆ ಮಟ್ಟ ರೂ 28,750 ತಲುಪಿದೆ. ಕಳೆದ ಆಗಸ್ಟ್ 22ರಂದು 10 ಗ್ರಾಂಗಳಿಗೆ ರೂ 28,540 ತಲುಪಿದ್ದು, ಇದುವರೆಗಿನ ಗರಿಷ್ಠ ದಾಖಲೆಯಾಗಿತ್ತು. 

ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಯೂರೋಪ್ ಸಾಲದ ಬಿಕ್ಕಟ್ಟಿನಿಂದ   ಆತ್ಮವಿಶ್ವಾಸ ಕಳೆದುಕೊಂಡಿರುವ ಹೂಡಿಕೆದಾರ, ಷೇರುಪೇಟೆಗಳಿಂದ ಹಣವನ್ನು ವಾಪಾಸು ಪಡೆದು, ಹಳದಿ ಲೋಹದ ಮೇಲೆ ಹೂಡಿಕೆಗೆ ಮುಂದಾಗಿರುವುದೇ  ಬೆಲೆ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.  ಹಬ್ಬಗಳ ಬೆನ್ನಲ್ಲೇ, ಮದುವೆ ಕಾಲ  ಪ್ರಾರಂಭವಾಗಿರುವುದೂ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಪುಷ್ಟಿ ನೀಡಿದೆ.    ಬೆಲೆ ಏರಿಕೆ ಪ್ರವೃತ್ತಿ ಮುಂದುವರೆದರೆ, ಜಗತ್ತಿನಲ್ಲೇ ಅತಿ ಹೆಚ್ಚು ಚಿನ್ನದ ಗ್ರಾಹಕರನ್ನು ಹೊಂದಿರುವ ಎರಡು ದೊಡ್ಡ ಚಿನಿವಾರ ಮಾರುಕಟ್ಟೆಗಳಾದ ಭಾರತ ಮತ್ತು ಚೀನಾದಲ್ಲಿ ಚಿನ್ನದ ಮತ್ತೊಂದು ಸಾರ್ವಕಾಲಿಕ ದಾಖಲೆ ಮಟ್ಟ ತಲುಪಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.   ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ ಶೇ 1.1ರಷ್ಟು ಏರಿಕೆ ಕಂಡಿದ್ದು, 1,921 ಡಾಲರ್ ತಲುಪಿದೆ.  ಆದರೆ, ಬೆಳ್ಳಿ ಧಾರಣೆ ಕೆ.ಜಿಗೆ ರೂ 400 ಇಳಿಕೆ ಕಂಡಿದ್ದು, ರೂ 65,100 ರಷ್ಟಾಗಿದೆ. ಮಂಗಳವಾರ ದೇಶಿಯ ಮಾರುಕಟ್ಟೆಯಲ್ಲಿ 99.9 ಮತ್ತು 99.5 ಶುದ್ಧತೆ ಚಿನ್ನದ ಧಾರಣೆ ಕ್ರಮವಾಗಿ 10 ಗ್ರಾಂಗಳಿಗೆ ರೂ 470 ಮತ್ತು ರೂ 460 ರಷ್ಟು ಹೆಚ್ಚಿದ್ದು, ರೂ 28,750 ಮತ್ತು ರೂ 28,600ರಷ್ಟಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.