ಮಂಗಳವಾರ, ಮೇ 11, 2021
27 °C

ಚಿನ್ನ ಆಮದು ಇಳಿಕೆ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್‌ಬ್ಯಾಂಕ್ ತೆಗೆದುಕೊಂಡಿರುವ ನಿಯಂತ್ರಣ ಕ್ರಮಗಳಿಂದ ಹಾಗೂ ಮಾರುಕಟ್ಟೆಯಲ್ಲಿ ಒಟ್ಟಾರೆ ಬೇಡಿಕೆ ತಗ್ಗಿರುವುದರಿಂದ ಚಿನ್ನದ ಆಮದು ಜುಲೈ- ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 120ರಿಂದ 150 ಟನ್‌ಗಳಷ್ಟು ತಗ್ಗಲಿದೆ ಎಂದು ಮುಂಬೈ ಚಿನ್ನಾಭರಣ ವರ್ತಕರ ಒಕ್ಕೂಟ (ಬಿಬಿಎ) ಅಂದಾಜು ಮಾಡಿದೆ.ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ 350 ಟನ್ ಚಿನ್ನ ಆಮದು ಅಂದಾಜು ಮಾಡಲಾಗಿತ್ತು. ಬೇಡಿಕೆ ತಗ್ಗಿದ್ದರಿಂದ ಆಮದು ಪ್ರಮಾಣ ಅರ್ಧದಷ್ಟು ಕುಸಿಯಲಿದೆ ಎಂದು `ಬಿಬಿಎ' ಅಧ್ಯಕ್ಷ ಸುರೇಶ್ ಹುಂಡಿಯಾ ಸುದ್ದಿಸಂಸ್ಥೆಗೆ ಸೋಮವಾರ ಹೇಳಿದ್ದಾರೆ.ಭಾರತ ಚಿನ್ನದ ದೊಡ್ಡ ಗ್ರಾಹಕ ದೇಶ. ಕಳೆದ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 160 ಟನ್ ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು. ಸಾಮಾನ್ಯವಾಗಿ ಮುಂಗಾರು, ಜಾಗತಿಕ ಮಾರುಕಟ್ಟೆ ಬೆಲೆ, ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಚಿನ್ನದ ಆಮದು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದ್ದಾರೆ.

ಸದ್ಯ ಪ್ರತಿ ತಿಂಗಳು ಸರಾಸರಿ 40 ಟನ್ ಚಿನ್ನ ಆಮದಾಗುತ್ತಿದೆ. ಆಗಸ್ಟ್ ನಂತರ ಹಬ್ಬಗಳು ಪ್ರಾರಂಭವಾಗುವುದರಿಂದ ಬೇಡಿಕೆ ಮತ್ತೆ ಹೆಚ್ಚಬಹುದು. ಆದರೆ, ಚಾಲ್ತಿ ಖಾತೆ ಕೊರತೆ(ಸಿಎಡಿ) ತಗ್ಗಿಸಲು ಸರ್ಕಾರ ಹರಸಾಹಸ ಪಡುತ್ತಿರುವ ಸದ್ಯದ ಸಂದರ್ಭದಲ್ಲಿ ಚಿನ್ನದ ಬೇಡಿಕೆ ತಗ್ಗಲಿದೆ ಎನ್ನುವುದು ದೊಡ್ಡ ಸಮಾಧಾನದ ಸಂಗತಿ ಎಂದಿದ್ದಾರೆ.ಇದೇ ಏಪ್ರಿಲ್‌ನಲ್ಲಿ 142 ಟನ್ ಸೇರಿದಂತೆ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿಯೇ ಒಟ್ಟು 350 ಟನ್ ಚಿನ್ನ ಆಮದಾಗಿದೆ.ರೂ.27,000 ಗಡಿ ಇಳಿದ ಚಿನ್ನ

ಮುಂಬೈ/ನವದೆಹಲಿ(ಪಿಟಿಐ): ಚಿನ್ನದ ಧಾರಣೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಸೋಮವಾರ ದೇಶದ ಪ್ರಮುಖ ಚಿನಿವಾರ ಪೇಟೆಗಳೆರಡರಲ್ಲೂ ಬಂಗಾರದ ಬೆಲೆ ರೂ.300ರಿಂದ 340ರವರೆಗೂ ತಗ್ಗಿತು. ಫ್ಯೂಚರ್ ಟ್ರೇಡಿಂಗ್‌ನಲ್ಲಿಯೂ(ವಾಯಿದಾ ವಹಿವಾಟು) ಚಿನ್ನದ ಧಾರಣೆ ರೂ.335ರಷ್ಟು ಕೆಳಕ್ಕಿಳಿಯಿತು. ಬೆಳ್ಳಿ ಬೆಲೆಯೂ ಗಣನೀಯವಾಗಿ ತಗ್ಗಿತು.ಅಮೆರಿಕದ ಆರ್ಥಿಕತೆ ಸ್ಥಿರತೆಯತ್ತ ಸಾಗಿರುವುದು, ಡಾಲರ್ ಮೌಲ್ಯದಲ್ಲಿ ಹೆಚ್ಚಳ ಮೊದಲಾದ ಅಂಶಗಳ ಪರಿಣಾಮವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರ ಬೇಡಿಕೆ ಕಡಿಮೆಯಾಗಿ ಧಾರಯಲ್ಲಿ ಕುಸಿತವಾಗಿದೆ. ಸಿಂಗಪುರದಲ್ಲಿ ಶೇ 1.4ರಷ್ಟು ಬೆಲೆ ತಗ್ಗಿಸಿಕೊಂಡ ಔನ್ಸ್ ಚಿನ್ನ ಸೋಮವಾರ 1278.94 ಡಾಲರ್ ಲೆಕ್ಕದಲ್ಲಿ ವಹಿವಾಟು ನಡೆಸಿತು.ಲಂಡನ್‌ನಲ್ಲಿ ಚಿನ್ನದ ಧಾರಣೆ 20 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ(ಔನ್ಸ್‌ಗೆ 1285.05 ಡಾಲರ್) ಕುಸಿಯಿತು.  ಇದರ ಪರಿಣಾಮ ಭಾರತದ ಚಿನಿವಾರ ಪೇಟೆ ಮೇಲೂ ಆಗಿದ್ದು, ಬೆಲೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ.ಮುಂಬೈನಲ್ಲಿ ಸೋಮವಾರ 10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ರೂ.300ರಷ್ಟು ಬೆಲೆ ತಗ್ಗಿಸಿಕೊಂಡು ರೂ.26,840ಕ್ಕೂ, ಅಪರಂಜಿ ಚಿನ್ನ ರೂ.340ರಷ್ಟು ಮೌಲ್ಯ ಕಳೆದುಕೊಂಡು ರೂ.26,950ಕ್ಕೆ ಬಂದಿತು.ಸಿದ್ಧ ಬೆಳ್ಳಿ ಕೆ.ಜಿ.ಗೆ ರೂ.42,165ರಲ್ಲಿ ಮಾರಾಟವಾಯಿತು.ನವದೆಹಲಿಯಲ್ಲಿ ರೂ.320ರಷ್ಟು ಮೌಲ್ಯ ಕಳೆದುಕೊಂಡ 10 ಗ್ರಾಂ ಅಪರಂಜಿ ಚಿನ್ನ ರೂ.27,320ರಲ್ಲಿ, ಸ್ಟ್ಯಾಂಡರ್ಡ್ ಚಿನ್ನ ರೂ.27,120ರಲ್ಲಿ ಮಾರಾಟವಾಯಿತು. ಬೆಳ್ಳಿ ರೂ.800ರಷ್ಟು ಬೆಲೆ ಕಳೆದುಕೊಂಡು ಕೆ.ಜಿ.ಗೆ ರೂ.41,500ರಲ್ಲಿ ವಹಿವಾಟು ನಡೆಸಿತು.ವಾಯಿದಾ ವಹಿವಾಟು

ನವದೆಹಲಿಯಲ್ಲಿನ ಚಿನಿವಾರ ಪೇಟೆಯ ವಾಯಿದಾ ವಹಿವಾಟಿನಲ್ಲಿ ಆಗಸ್ಟ್ ವಿತರಣೆಯ ಚಿನ್ನ ರೂ.335ರಷ್ಟು ಕುಸಿತ ಕಂಡು 10 ಗ್ರಾಂಗೆ ರೂ.26,685ಕ್ಕೆ ಬೆಲೆ ನಿಗದಿಯಾಯಿತು. ಅಕ್ಟೋಬರ್ ವಿತರಣೆ ಚಿನ್ನ ರೂ.26,837ರಷ್ಟು ಬೆಲೆ ಪಡೆದುಕೊಂಡಿತು.  ಚಿನ್ನಾಭರಣ ತಯಾರಿಕೆ ಮತ್ತು ಮಾರಾಟ ಚಟುವಟಿಕೆಯ ಪ್ರಮುಖ ಕಂಪೆನಿಗಳ ಷೇರುಗಳು ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ(ಬಿಎಸ್‌ಇ) ಸೋಮವಾರ ಶೇ 20ರಷ್ಟು ಮೌಲ್ಯ ಕಳೆದುಕೊಂಡವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.