ಶುಕ್ರವಾರ, ಮೇ 7, 2021
24 °C

ಚುಂಗಡಿಪುರ: ಸಮಸ್ಯೆಗಳ ಆಗರ

ಮಹದೇವ್ ಹೆಗ್ಗವಾಡಿಪುರ Updated:

ಅಕ್ಷರ ಗಾತ್ರ : | |

ಸಂತೇಮರಹಳ್ಳಿ: ಸಮೀಪದ ಚುಂಗಡಿಪುರ ಗ್ರಾಮದಲ್ಲಿ ಮನೆಗಳ ತ್ಯಾಜ್ಯ ನೀರು ಹೊರಹೋಗುವ ವ್ಯವಸ್ಥೆ ಇಲ್ಲದೆ ಬಡಾವಣೆಯನ್ನೇ ಸುತ್ತುವರಿದಿದೆ. ಇದರಿಂದ ಕೊಳಚೆ ಪ್ರದೇಶದಲ್ಲಿ ಗ್ರಾಮಸ್ಥರು ವಾಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಗ್ರಾಮದಲ್ಲಿರುವ ಬಡಾವಣೆಗಳಿಗೆ ಸೂಕ್ತ ಚರಂಡಿ ವ್ಯವಸ್ಥೆ ನಿರ್ಮಿಸಿಲ್ಲ. ಪರಿಶಿಷ್ಟರ ಬಡಾವಣೆಯಲ್ಲಿ ಚರಂಡಿ ನಿರ್ಮಿಸದಿರುವ ಪರಿಣಾಮ ಮನೆಗಳ ಮುಂಭಾಗವೇ ತ್ಯಾಜ್ಯ ನೀರು ಹರಿಯುತ್ತದೆ. ಜನರು ಈ ಕಲ್ಮಷ ನೀರು ತುಳಿದುಕೊಂಡು ಮನೆಗೆ ಹೋಗಬೇಕಿದೆ. ಇತರೇ ಬಡಾವಣೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಬಡಾವಣೆಗಳಿಂದ ಹರಿಯುವ ಚರಂಡಿ ನೀರು ಗ್ರಾಮದಿಂದ ಹೊರಹೋಗುವ ವ್ಯವಸ್ಥೆ ಇಲ್ಲ. ಇದರಿಂದ ಗ್ರಾಮದ ಸುತ್ತಲೂ ಅನೈರ್ಮಲ್ಯ ಸೃಷ್ಟಿಯಾಗಿದೆ.ಜತೆಗೆ, ನೀರು ಹರಿಯುವ ಪ್ರದೇಶದಲ್ಲಿ ಕಳೆ ಗಿಡಗಳು ಬೆಳೆದು ನಿಂತಿವೆ. ಹುಳುಹುಪ್ಪಟೆ ಕಾಟಕ್ಕೆ ಜನರು ತತ್ತರಿಸುವಂತಾಗಿದೆ.ಮನೆ ಮುಂದೆ ಮಳೆ ನೀರು

ಈಗ ಮಳೆಗಾಲ ಆರಂಭವಾಗಿದೆ. ಚರಂಡಿ ನೀರಿನೊಂದಿಗೆ ಮಳೆ ನೀರು ಕೂಡ ಮನೆಗಳ ಮುಂಭಾಗವೇ ಸಂಗ್ರಹಗೊಳ್ಳುತ್ತಿದೆ. ಇದರಿಂದ ಜನರು ಸಂಚರಿಸಲು ಸಂಕಷ್ಟಪಡುವಂತಾಗಿದೆ. ಬಡಾವಣೆಯನ್ನು ಆವರಿಸಿರುವ ಚರಂಡಿ ನೀರಿನಿಂದ ಮನೆಗಳ ಗೋಡೆಗಳು ಕುಸಿಯುವ ಹಂತ ತಲುಪಿವೆ ಎನ್ನುವುದು ನಿವಾಸಿಗಳ ಅಳಲು.ಗ್ರಾಮದಲ್ಲಿ ಸುಮಾರು 900 ಜನಸಂಖ್ಯೆ ಇದೆ. ಇಷ್ಟು ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಗ್ರಾಮಕ್ಕೆ ನೀರು ಸರಬರಾಜು ಮಾಡುತ್ತಿದ್ದ 2 ಕೊಳವೆ ಬಾವಿಗಳಲ್ಲಿ 1 ಕೊಳವೆಬಾವಿ ಕೆಟ್ಟು ನಿಂತಿದೆ. ಇನ್ನೊಂದರಲ್ಲಿ ಸಾಧಾರಣವಾಗಿ ನೀರು ಬರುತ್ತಿದೆ. ಕಿರುನೀರು ಸರಬರಾಜು ಘಟಕದ 2 ತೊಂಬೆಗಳಿಗೆ ಮಾತ್ರ ನೀರು ತುಂಬುತ್ತಿದೆ. 5 ತೊಂಬೆಗಳು ನೀರು ಕಾಣದೆ ನಿಂತಿವೆ! ಓವರ್‌ಹೆಡ್ ಟ್ಯಾಂಕ್‌ಗೆ ಕಳೆದ 6 ತಿಂಗಳಿನಿಂದಲೂ ನೀರು ತುಂಬಿಸಿಲ್ಲ. ಇದರಿಂದ ಮನೆಗಳಿಗೆ ಅಳವಡಿಸಿರುವ ನಲ್ಲಿಗಳು ನೀರು ಕಂಡು ಸಾಕಷ್ಟು ದಿನ ಕಳೆದಿವೆ. ಗ್ರಾಮದಲ್ಲಿ 5 ಕೈಪಂಪ್‌ಗಳಿವೆ. ಎಲ್ಲವೂ ಕೆಟ್ಟುನಿಂತಿವೆ. ದುರಸ್ತಿಪಡಿಸಲು ಅಥವಾ ಅಂತರ್ಜಲ ಮರುಪೂರಣ ಮಾಡಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಿಲ್ಲ ಎನ್ನುವುದು ಗ್ರಾಮಸ್ಥರ ದೂರು.ನೀರಿಗಾಗಿ ಇನ್ನೂ ಸಿಗದ ಪರಿಹಾರ

`ಕೆಟ್ಟು ನಿಂತಿರುವ ಕೊಳವೆಬಾವಿಯ ನೀರೆತ್ತುವ ಮೋಟಾರ್ ಅನ್ನು ಕೂಡಲೇ ದುರಸ್ತಿಗೊಳಿಸಿ ಓವರ್‌ಹೆಡ್ ಟ್ಯಾಂಕ್‌ಗೆ ನೀರು ತುಂಬಿಸಬೇಕು. ಆಗ ಮಾತ್ರ ಪ್ರತಿ ಮನೆಗಳಿಗೂ ನಲ್ಲಿ ಸಂಪರ್ಕದ ಮೂಲಕ ನೀರು ಲಭಿಸುತ್ತದೆ. ಹೆಚ್ಚುವರಿಯಾಗಿ ಕೊಳವೆಬಾವಿ ಕೊರೆಯಿಸಿ ಕಿರುನೀರು ಸರಬರಾಜು ಘಟಕದ ತೊಂಬೆಗಳಿಗೆ ನೀರು ಪೂರೈಸಬೇಕು' ಎಂದು ಒತ್ತಾಯಿಸುತ್ತಾರೆ ಗ್ರಾಮಸ್ಥರಾದ ಮಹೇಶ್‌ಪ್ರಸಾದ್ ಹಾಗೂ ಮತ್ತು ಪ್ರಕಾಶ್.`ಗ್ರಾಮ ಪಂಚಾಯಿತಿ ಕಾರ್ಯದರ್ಶಿ ತರಬೇತಿಗೆ ತೆರಳಿದ್ದಾರೆ. ಇದರಿಂದ ಗ್ರಾಮದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ವಿಳಂಬವಾಗಿದೆ. ವಾರದೊಳಗೆ ಸಮಸ್ಯೆ ಬಗೆಹರಿಸಲಾಗುವುದು. ಅಗತ್ಯ ಮೂಲ ಸೌಕರ್ಯ  ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು' ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ `ಪ್ರಜಾವಾಣಿ'ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.