ಶುಕ್ರವಾರ, ಏಪ್ರಿಲ್ 16, 2021
31 °C

ಚುಟುಕು ಚೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುವು ಕ್ಯಿ ಎಂಬ ದೀಪ

ಮ್ಯಾನ್ಮಾರ್‌ನಲ್ಲಿ ‘ದಿ ಲೇಡಿ’ ಎಂದೇ ಜನಪ್ರಿಯರಾಗಿರುವ ಆಂಗ್ ಸ್ಯಾನ್ ಸುವು ಕ್ಯಿ 15 ವರ್ಷ ಗೃಹಬಂಧನ ಅನುಭವಿಸಿ, ಕಳೆದ ನವೆಂಬರ್ 13ರಂದು ಬಿಡುಗಡೆಯ ಬೆಳಕು ಕಂಡರು. ಆಂಗ್ ಸ್ಯಾನ್ ಸುವು ಕ್ಯಿ ಹುಟ್ಟಿದ್ದು 1945, ಜೂನ್ 19ರಂದು. ‘ಬರ್ಮಾ ಇಂಡಿಪೆಂಡೆಂಟ್ ಆರ್ಮಿ’ಯಲ್ಲಿ ಕೆಲಸ ಮಾಡುತ್ತಿದ್ದ ತಂದೆ ಜನರಲ್ ಆಂಗ್ ಸ್ಯಾನ್ ಅವರ ಹತ್ಯೆ ನಡೆದಾಗ ಸುವು ಕ್ಯಿ ಇನ್ನೂ ಎರಡು ವರ್ಷದ ಮಗು.

ಬಾಲ್ಯ ಕಳೆದದ್ದು ರಂಗೂನ್‌ನಲ್ಲಿ. ಅಮ್ಮನ ಜೊತೆ ಭಾರತಕ್ಕೆ ಬಂದದ್ದು 1960ರಲ್ಲಿ. ದೆಹಲಿ ಹಾಗೂ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಗಳಲ್ಲಿ ಪದವಿಗಳನ್ನು ಪಡೆದ ನಂತರ ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡಿದರು. ಬ್ರಿಟಿಷ್ ಸಂಶೋಧಕ ಡಾ. ಮೈಕಲ್ ಆ್ಯರಿಸ್ ಅವರನ್ನು 1972ರಲ್ಲಿ ಮದುವೆಯಾದರು.ಮತ್ತೆ ಬರ್ಮಾದಲ್ಲಿ ನೆಲೆಸಿದ್ದ ತಾಯಿ ವೃದ್ಧಾಪ್ಯದ ವೇಳೆಯಲ್ಲಿ ಅನಾರೋಗ್ಯದಿಂದ ಬಳಲಿದರು. ಸುವು ಕ್ಯಿ 1988ರಲ್ಲಿ ಅಮ್ಮನ ಆರೈಕೆಗೆಂದು ಬರ್ಮಾಗೆ ಹೋದಾಗ, ಅಲ್ಲಿ ಪ್ರಜಾಪ್ರಭುತ್ವದ ಪರವಾಗಿ ದೊಡ್ಡ ದನಿಯೆದ್ದಿತ್ತು. ಎಲ್ಲೆಡೆ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದವು.

ಮಿಲಿಟರಿ ಪಡೆಗಳು ಗಲಭೆ ಹತ್ತಿಕ್ಕಲು ಹೆಣಗಾಡುತ್ತಿದ್ದವು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವವನ್ನು ಬೆಂಬಲಿಸಿ ಸುವು ಕ್ಯಿ ಕಣಕ್ಕಿಳಿದರು. ಬಲು ಬೇಗ ಅವರು ರಾಷ್ಟ್ರ ನಾಯಕಿಯೂ ಆದರು.

 

ಹೊಸದಾಗಿ ರಚಿತವಾದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ)ಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಬರ್ಮಾದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಅವರು ನಿರ್ಭಿಡೆಯಿಂದ ಹೋರಾಡಿದರು. 1989ರಲ್ಲಿ ಮಿಲಿಟರಿಯವರು ಗೃಹಬಂಧನದಲ್ಲಿಟ್ಟರು.

 

ಆದಾಗ್ಯೂ 1990ರಲ್ಲಿ ನಡೆದ ಚುನಾವಣೆಯಲ್ಲಿ ಎನ್‌ಎಲ್‌ಡಿ ಜಯಭೇರಿ ಬಾರಿಸಿತು. ಅಂತರ್‌ರಾಷ್ಟ್ರೀಯ ಸಂಬಂಧಗಳ ನೆಪವೊಡ್ಡಿ ಆ ಪಕ್ಷವು ಆಡಳಿತದ ಚುಕ್ಕಾಣಿ ಹಿಡಿಯದಂತೆ ಮಿಲಿಟರಿಯವರು ಹುನ್ನಾರ ಮಾಡಿದರು.

 

ಮ್ಯಾನ್ಮಾರ್‌ನಲ್ಲಿ ಸುವು ಕ್ಯಿ 22 ವರ್ಷ ಕಳೆದಿದ್ದಾರೆ. ಇದರಲ್ಲಿ 15 ವರ್ಷ ಗೃಹಬಂಧನದಲ್ಲೇ ಕಳೆದುಹೋಯಿತು. 1999ರಲ್ಲಿ ಅವರ ಪತಿ ಕ್ಯಾನ್ಸರ್‌ನಿಂದ ಮೃತಪಟ್ಟಾಗಲೂ ನೋಡಲು ಸಾಧ್ಯವಾಗಲಿಲ್ಲ. ಮಕ್ಕಳ ಮುಖವನ್ನೂ ಹತ್ತು ವರ್ಷ ನೋಡಲಾಗಲಿಲ್ಲ. ಇಂಥ ಹೋರಾಟಕ್ಕೆ ಮನ್ನಣೆಯಾಗಿ ಅನೇಕ ಅಂತರ್‌ರಾಷ್ಟ್ರೀಯ ಪುರಸ್ಕಾರ, ಪ್ರಶಸ್ತಿಗಳು ಸುವು ಕ್ಯಿ ಅವರನ್ನು ಹುಡುಕಿಕೊಂಡು ಬಂದವು. 1991ರಲ್ಲಿ ಸಿಕ್ಕ ನೋಬೆಲ್ ಶಾಂತಿ ಪ್ರಶಸ್ತಿ ಎಲ್ಲ ಸಾಧನೆಗಳಿಗೂ ಕಳಸವಿದ್ದಂತೆ.

 

ಇಪ್ಪತ್ತು ವರ್ಷಗಳ ನಂತರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವೊಂದು ಗದ್ದುಗೆ ಹಿಡಿಯಲು ಮಿಲಿಟರಿ ಅನುಮತಿ ಕೊಟ್ಟಿತು. ಹಾಗಾಗಿ ನವೆಂಬರ್ 13, 2010ರಂದು ಸುವು ಕ್ಯಿ ಗೃಹಬಂಧನದಿಂದ ಮುಕ್ತರಾದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.