ಮಂಗಳವಾರ, ಮಾರ್ಚ್ 9, 2021
18 °C
ವ್ಯಕ್ತಿ

ಚುಟುಕು ರತ್ನ ಅಕಬರ ಅಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುಟುಕು ರತ್ನ ಅಕಬರ ಅಲಿ

ಚುಟುಕು ರತ್ನ ಡಾ. ಎಂ. ಅಕಬರ ಅಲಿ ಅವರಿಗೆ ಮಾರ್ಚ್ 3ರಂದು ೯೦ನೇ ಹುಟ್ಟುಹಬ್ಬ. ಕನ್ನಡದ ಶ್ರೇಷ್ಠ ವಿದ್ವಾಂಸರೂ, ವಾಗ್ಮಿಗಳೂ, ಧೀಮಂತ ಕವಿಗಳೂ ಆದ ಅಕಬರ ಅಲಿಯವರು ಚುಟುಕು ಕಾವ್ಯ ಪರಂಪರೆಯ ಅಧ್ವರ್ಯುವೂ ಆಗಿದ್ದಾರೆಂಬುದು ಕನ್ನಡದ ಭಾಗ್ಯ.ಕಾವ್ಯಮಯವಾಗಿರುವ ಆ ಚುಟುಕುಗಳಲ್ಲಿ ಸಾಂದ್ರವೂ ಪ್ರಾಮಾಣಿಕವೂ ಆದ ಜೀವನ ಶ್ರದ್ಧೆಯ ವಿಮರ್ಶೆ ಹಾಗೂ ಸಜ್ಜನರು ಮೆಚ್ಚಬಹುದಾದ ಸಾಮಾಜಿಕ ಬದ್ಧತೆಯಿರುವುದೇ ಒಂದು ವಿಶೇಷ. ಎಲ್ಲಿ ಕನ್ನಡದ ಶ್ರೇಷ್ಠ ಸಾಹಿತಿಗಳೆನಿಸಿಕೊಂಡಿರುವವರು ಸೋತಿದ್ದಾರೆಯೋ ಅಲ್ಲಿ ಈ ಕವಿ ಕೀರ್ತಿಯ ಪತಾಕೆಯನ್ನು ಹಾರಿಸಿದ್ದಾರೆ.ಸಮಾಜದ ಮೇಲೆ ಪ್ರತಿಭೆಯ ಕ್ಷ-ಕಿರಣ ಹಾಯಿಸಿ, ಅಲ್ಲಿರುವ ರೋಗರುಜಿನಗಳನ್ನು ಕಂಡುಹಿಡಿದು, ಬಯಲು ಮಾಡುವ ಕೆಚ್ಚು ಕಿಚ್ಚುಗಳೂ ಅವರಿಗೆ ಮಾತ್ರ ಸಾಧ್ಯವೇನೋ ಎನಿಸುತ್ತದೆ. ಅವರ ನಿಷ್ಕಪಟ ಎದೆಗಾರಿಕೆ, ಸದೃಢ ಚೈತನ್ಯ ಅನನ್ಯವೆಂದೇ ಹೇಳಬೇಕು.ಆದರ್ಶ ಸಮಾಜ ನಿರ್ಮಾಣವಾಗಬೇಕು, ಅದರಿಂದಾಗಿ ದೇಶದ ಕೀರ್ತಿ ಎಲ್ಲೆಡೆಯೂ ಹರಡಬೇಕೆಂಬ ಸಹಾನುಭೂತಿಯ ಸದಾಶಯ ಅವರ ನೇರನುಡಿಯ ಉದ್ದೇಶವಾಗಿದೆ. ಯಾವ ಕವಿಯೇ ಆಗಲಿ, ಸಮಾಜದ ಲೋಪ ದೋಷಗಳನ್ನು ಅರ್ಥಾತ್ ಜೀವನದ ಕುಂದುಕೊರತೆಗಳನ್ನು ಪ್ರಕಟ ಗೊಳಿಸಲಾರನೋ ಅವರು ಹೇಡಿಯೆಂದೇ ಹೇಳಬೇಕು. ಅದನ್ನೇ ಕುವೆಂಪು ನುಡಿದದ್ದು.ಎಂಜಲಿಗಂಜಲಿಯೊಡ್ಡುವ ಕವಿಯಿಂ

ಬಯಸುವಿರೇನನ್ನುಎಂದು ಸಮಾಜದ ನಿರ್ಮಲೀಕರಣ ನಿಜವಾದ ಕವಿಯ ಉದ್ದೇಶವಾಗಿರ­ಬೇಕು. ಈ ದೃಷ್ಟಿಯಿಂದ ಅಕಬರ ಅಲಿಯವರು ಅತ್ಯಂತ ಎತ್ತರದ ಕವಿ. ಜೀವನ ವಿಮರ್ಶೆಗೆ ಅನುಕೂಲಕವಾದ ಪ್ರಭಾವೀ ಸಾಹಿತ್ಯ ಸಾಧನವೆಂದರೆ ಚುಟುಕು. ಹಾಸ್ಯ ಚಟಾಕಿ, ಮಿತವ್ಯಯ, ವಿಡಂಬನೆ, ವಿನೋದಗಳ ಅಭಿವ್ಯಕ್ತಿಗೆ ಚುಟುಕು ಸುಂದರವಾದ ಪರಿಣಾಮಕಾರಿಯಾದ ಮಾಧ್ಯಮ. ಉಪಮೆ, ಪ್ರತಿಮೆ, ಪ್ರಾಸ, ಭಾಷೆಯ ಜಾದುಗಾರಿಕೆಯ ಮೂಲಕ ಅದು ತನ್ನತನವನ್ನು ಮೆರೆಯುತ್ತದೆ. ನಗಿಸುವುದು, ಕುಟುಕುವುದು, ಚುಚ್ಚುವುದು ಅದರ ರೂಢಿ. ಆದರೆ ಆ ರೂಢಿ ಆರೋಗ್ಯಕರವಾದದ್ದು. ಇವರ ವಿಡಂಬನೆಯ ಮೊನಚು ಹಲ್ಲುಗಳಲ್ಲಿ ಶುದ್ಧೀಕರಣದ ಅಮೃತತ್ವವಿದೆ ಹೊರತು ವಿಷವಿಲ್ಲ.ಪೂರ್ವಗ್ರಹ, ಮಾತ್ಸರ್ಯ, ದ್ವೇಷಗಳು ಮೊದಲಾದ ಅಸುರೀ ಭಾವಗಳು ಚುಟುಕುಗಳಿಂದ ಬಲುದೂರ. ಕರುಣೆ, ಅನುಕಂಪ, ಸಾತ್ವಿಕ ಸಿಟ್ಟು, ಧರ್ಮನಿಷ್ಠೆ, ನ್ಯಾಯಶ್ರದ್ಧೆ, ಸಮಾಜ ಕಲ್ಯಾಣಾಕಾಂಕ್ಷೆ ಅವುಗಳ ನಿತ್ಯ ಸಂಗಾತಿಗಳು. ಅದು ಸಾಹಿತ್ಯ ಕ್ಷೇತ್ರದಲ್ಲಿ ಕಾಣಿಸಿಕೊಂಡದ್ದು ಒಂದು ಅವತಾರವೆಂದೇ ಹೇಳಬಹುದು. ಆದರೆ ಅದನ್ನು ಬಳಸುವ ಕವಿಯ ಹೃನ್ಮನಗಳು ಮಾತ್ರ ದುಷ್ಟಭಾವಗಳಿಂದ ದೂರವಿರಬೇಕು.

ಅಕಬರ ಅಲಿಯವರು ಒಂದು ಅವಧಿ ಮೇಲ್ಮನೆಯ ಸದಸ್ಯರಾಗಿದ್ದರು. ಕರ್ನಾಟಕದ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಸವಿವರವಾಗಿ ಬಲ್ಲರು. ಆದ್ದರಿಂದ ಅವರ ಲೋಕಾನುಭವ ವಿಶಿಷ್ಟವಾದುದು, ಸಮೃದ್ಧವಾದದ್ದು.ಕನ್ನಡಿಗರ ಹುಂಬತನವನ್ನು ಅವರ ಅನೈಕ್ಯವನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡಿರುವ ಅಕಬರ ಅಲಿಯವರು ಕೇಂದ್ರ ಸರ್ಕಾರವನ್ನು ‘ಕೌರವ’ ಎಂದು ಕರೆದಿರುವುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. ಕೇಂದ್ರದ ಕುಯುಕ್ತಿ­ಯಿಂದಾಗಿ ಕನ್ನಡ ನಾಡಿಗೆ ಪರಭಾಷಿಗರಿಂದಾಗುತ್ತಿರುವ ನಷ್ಟ ಅಷ್ಟಿಷ್ಟಲ್ಲ.

ಕನ್ನಡ ನಾಡಿನ ಗೋವುಗಳ

ಒಯ್ಯುತ್ತಿರಲು ಪರಭಾಷೆ-– ದಳ

ನಮ್ಮ ಮುಖಂಡ

ದಿಳ್ಳಿಗೆ ಹೊಂಟ

ಆಗಿ ಉತ್ತರ ಕುಮಾರನಲ!

ಕೇಂದ್ರ ಸರ್ಕಾರದ ಅಟ್ಟಹಾಸಕ್ಕೆ ಬೆದರಿದ ಮುಖಂಡ ಮೆತ್ತನ ಮಳ್ಳಿಯಾಗುತ್ತಾನೆ. ಕೇಂದ್ರ ಸರ್ಕಾರ ರಾಜ್ಯಗಳ ಎಲ್ಲ ವ್ಯವಹಾರಗಳಲ್ಲಿಯೂ ತಲೆಹಾಕುತ್ತದೆ.

ಎಲೆ ಕನ್ನಡಿಗಾ, ಸಿಡಿದೇಳೊ!

ಬೃಹನ್ನಳೆ ವೇಷವ ತೊರೆದೇಳೊ!

ಎಂದು ಕವಿ ಕರೆ ಕೊಡುತ್ತಾರೆ, ‘ಕನ್ನಡ ಗೋಗ್ರಹಣ’ ಎಂಬ ಭಾವಗೀತೆಯಲ್ಲಿ!

ಹೀಗೆ ಕಾವ್ಯಾಮೃತದಿಂದ ಪುಷ್ಟಿಗೊಂಡಿರುವ ಅರ್ಥಗರ್ಭಿತವಾದ ವಿಡಂಬನಾತ್ಮಕವಾದ, ಮಂತ್ರಸದೃಶವಾದ ನಾನೂರು ಚುಟುಕುಗಳನ್ನು ಅಕಬರ ಅಲಿಯವರು ರಚಿಸಿದ್ದಾರೆ. ಕಾವ್ಯ ಶಕ್ತಿಯಂತೆಯೇ ಅವರ ಲೋಕಾನುಭವ ಶ್ರೀಮಂತಿಕೆಯೂ ವಿಸ್ಮಯಕಾರಿಯಾದದ್ದು. ಕನ್ನಡಿಗರು ಇವುಗಳನ್ನೋದಿ ಮನನ ಮಾಡಿಕೊಂಡರೆ ಸಾಕು. ನಾಡ ಹಾಗೂ ಸಮಾಜಗಳ ಗುಣಮಟ್ಟ ಔನ್ನತ್ಯಕ್ಕೇರುತ್ತದೆ.ಭಾವ ಸೌರಭವೂ, ಅರ್ಥ ದೀಪ್ತಿಯೂ, ಚಿಂತನಾಲಹರಿಯೂ ಸಂಗಮಗೊಂಡಿರುವ ಭಾವಗೀತೆಗಳಲ್ಲಿಯೂ ಅಕಬರ ಅಲಿಯವರ ಮುದ್ರೆಯನ್ನು ಕಾಣಬಹುದು. ಹಿರಿಯ ತಲೆಮಾರಿನ ಸಾಹಿತಿಗಳು ಅವರ ಕವಿತೆಗಳನ್ನು ಕುರಿತು ಮನಸಾರೆ ಹೊಗಳಿದ್ದಾರೆ. ‘ಅಕಬರ ಅಲಿಯವರಿಗೆ ಕವಿಯ ಸಹೃದಯತೆ ಇದೆ. ಬುದ್ಧಿವಂತಿಕೆಯ ನಿರೀಕ್ಷಣಾ ಶಕ್ತಿಯಿದೆ... ಆತ್ಮ ಬೋಧನೆಯ ಪ್ರಾಮಾಣಿಕ ಧೈರ್ಯವಿದೆ’ ಎಂಬುದು ಶ್ರೀರಂಗರ ಅಭಿಪ್ರಾಯ.‘ಉಚಿತ ಹಾಸ್ಯ ವಿಡಂಬನೆಗಳಿಂದ ಈ ಜೀವನ ವಿಮರ್ಶೆ ತನ್ನ ಮೊನೆಯನ್ನು ತೀಕ್ಷ್ಣವಾಗಿಸಿಕೊಂಡಿದೆ’ ಎಂದು ವಿ.ಕೃ ಗೋಕಾಕರು ಅವರ ಚುಟುಕುಗಳನ್ನು ಪ್ರಶಂಸಿಸಿದ್ದಾರೆ!‘ರಾಷ್ಟ್ರಪ್ರೇಮ, ಜನತೆಯ ಐಕ್ಯತೆ, ಸಮಗ್ರಕ್ಷೇಮ, ಸಾಧನೆಗಾಗಿ ಯೋಜನೆಗಳ ರಚನೆವ್ಯೂಹ, ಕನ್ನಡನಾಡು, ಭಾರತದ ಚೆಲುವು, ಚಾರಿತ್ರ್ಯ ಅವರನ್ನು ಸಹಜವಾಗಿ ಕೆರಳಿಸುತ್ತವೆ’ ಎಂದು ಪ್ರೊ. ವಿ.ಸೀತಾರಾಮಯ್ಯನವರು ಅಕಬರ ಅಲಿಯವರ ರಚನೆಗಳ ಹಿರಿಮೆಯನ್ನು ಎತ್ತಿಹಿಡಿದಿದ್ದಾರೆ-.ಭರತ ಖಂಡದ ಇತಿಹಾಸವನ್ನೂ, ಅಹಲ್ಯೆಯ ಕಥೆಯನ್ನೂ ಪ್ರತಿಧ್ವನಿಸುವ ‘ಜಗದ ಕಣ್ಣು-–ಗಾಂಧಿ’ ಕವನದ ಪ್ರತಿಮಾತ್ಮಕ ಪಂಕ್ತಿಗಳ ಮೋಡಿ ಓದುಗರನ್ನು ಚಕಿತಗೊಳಿಸದಿರಲಾರವು. ‘ಜಗದ ಕಣ್ಣು– -ಗಾಂಧಿ’ ಎಂಬ ತಲೆ ಹೆಸರೂ ಅರ್ಥಪೂರ್ಣವಾಗಿದೆ.

ಹೆಜ್ಜೆ ಹೆಜ್ಜೆಗೂ ರೋಮಾಂಚನಕಾರಿಯಾದ ಧ್ವನಿತರಂಗಗಳನ್ನೆಬ್ಬಿಸುವ ಮತ್ತೊಂದು ಕವನ ‘ಕನ್ನಡದ ಕಲ್ಪವೃಕ್ಷ’ನಕ್ಷತ್ರ ಲೋಕಕ್ಕೆ ಸಾಗಿ

ಸ್ವರ್ಗವನ್ನೇ ಸೂರೆಗೈದ ಸುಕುಮಾರ

ಬೆಳೆದು ನಿಂತಿಹುದಿಂದು ನೆಲಮುಗಿಲು ಒಂದಾಗುವಂತೆ ಬೀಗಿ!

ಏನೆಂಥ ಎದೆ, ಮನದ ಮಹತಿ ಇದಕ್ಕೆ

ಅಂತೆ ಕನ್ನಡದ

ಹಾಡಿ ಹೊಗಳಿತ್ತಲ್ಲ

ಇದು ಒಂದು ಮರವಲ್ಲ:

ಇದು ಕಲ್ಪವೃಕ್ಷ ಬಲ್ಲವನೆ ಬಲ್ಲ!

ಈ ಕವಿ ಯಾರೆಂದು ಸಹೃದಯರೇ ಗುರುತಿಸಲಿ!ಇಂಥ ಭಾವಗೀತೆಗಳು ಅವರ ಬೊಕ್ಕಣದಲ್ಲಿ ಹಲವಾರಿವೆ. ‘ಉಷೆಗೆ’ ‘ಕಾವ್ಯಮೇಘ’, ‘ಭಾವದೇವಿ’ ಇಂಥ ಅನೇಕ ರತ್ನಗಳು ಅಲ್ಲಿವೆ. ಅಕಬರ ಅಲಿ ಅವರ ಅಷ್ಟ ಷಟ್ಪದಿಗಳ ಶೈಲಿಯ ಬಿಗುವನ್ನೊ, ಭಾವ ನಿರ್ಭರತೆಯನ್ನೂ ರಸಿಕರು ಆಗಲೇ ಕಂಡುಕೊಂಡಿದ್ದಾರೆ ಎಂದು ವಿ.ಕೃ. ಗೋಕಾಕರು ಬಾಯ್ತುಂಬ ಹೊಗಳಿರುವಾಗ ಬೇರೆ ಪ್ರಮಾಣ ಪತ್ರ ಅನಾವಶ್ಯಕ. ಅಕಬರ ಅಲಿಯವರು ಬರೆದದ್ದು ಹೆಚ್ಚಿಲ್ಲವಾದರೂ ಬರೆದದ್ದೆಲ್ಲ ಅಪ್ಪಟ ಚಿನ್ನ ಎಂದು ಧಾರಾಳವಾಗಿ ಹೇಳಬಹುದಾಗಿದೆ.

ಇಂಥ ಕವಿಯನ್ನು ಪಡೆದ ಕನ್ನಡ ಧನ್ಯ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.