ಭಾನುವಾರ, ಜೂನ್ 20, 2021
25 °C

ಚುನಾವಣಾ ತಯಾರಿಗೆ ಕಾಂಗ್ರೆಸ್‌ ಪಾದಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೋಕಸಭಾ ಚುನಾವಣೆ ಪೂರ್ವ­ತಯಾರಿಯ ಭಾಗವಾಗಿ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಒಂದು ದಿನದ ಪಾದಯಾತ್ರೆ ನಡೆಸು­ವಂತೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.­ಪರ­ಮೇಶ್ವರ್‌ ಅವರು ಜಿಲ್ಲಾ ಉಸ್ತು­ವಾರಿ ಸಚಿವರು ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ನಿರ್ದೇಶನ ನೀಡಿದ್ದಾರೆ.ಚುನಾವಣಾ ಸಿದ್ಧತೆ ಸಂಬಂಧ ಅವರು ಶನಿವಾರ ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಪದಾಧಿಕಾರಿಗಳು ಮತ್ತು ಜಿಲ್ಲಾ  ಸಮಿತಿ ಅಧ್ಯಕ್ಷರ ಸಭೆ ನಡೆಸಿದರು. ಲೋಕಸಭಾ ಚುನಾವಣೆಗೆ ಪಕ್ಷದತ್ತ ಜನರನ್ನು ಸೆಳೆಯಲು ಎಲ್ಲ ಕ್ಷೇತ್ರಗಳಲ್ಲಿ ಪಾದಯಾತ್ರೆ ನಡೆಸುವ ನಿರ್ಧಾರವನ್ನು ಈ ಸಭೆಯಲ್ಲಿ ಕೈಗೊಳ್ಳಲಾಗಿದೆ.ಎಐಸಿಸಿ ಕಾರ್ಯದರ್ಶಿ ಡಾ.ಚೆಲ್ಲ­ಕುಮಾರ್‌, ಸಚಿವರಾದ ಡಿ.ಕೆ.­ಶಿವ­ಕುಮಾರ್‌, ಕೆ.ಜೆ.ಜಾರ್ಜ್‌, ಖಮರುಲ್‌ ಇಸ್ಲಾಂ, ಕೃಷ್ಣ ಬೈರೇಗೌಡ, ಶಾಸಕರಾದ ಸಿ.ಎಸ್‌.ನಾಡಗೌಡ, ಡಾ.ಎ.­ಬಿ.­ಮಾಲಕ­ರಡ್ಡಿ, ಮಾಜಿ ಸಚಿವೆ ರಾಣಿ ಸತೀಶ್‌ ಮತ್ತಿತರರು ಭಾಗವಹಿಸಿದ್ದರು.ಪತ್ರದ ಮೂಲಕ ಸೂಚನೆ: ದೇಶದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಒಂದು ವಾರದ ಅವಧಿಯ ಪಾದಯಾತ್ರೆ ನಡೆಸಬೇಕು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇತ್ತೀಚೆಗೆ ನಡೆದ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಮಿತಿ ಸಭೆಯಲ್ಲಿ ಆದೇಶ ನೀಡಿದ್ದರು. ಅದರ ಭಾಗವಾಗಿಯೇ ರಾಜ್ಯದ ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಒಂದು ದಿನದ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ಇದೇ 9ರಿಂದ 16ರೊಳಗೆ ಎಲ್ಲ ಕ್ಷೇತ್ರಗಳಲ್ಲಿ 10ರಿಂದ 15 ಕಿ.ಮೀ. ಉದ್ದದ ಪಾದಯಾತ್ರೆ ನಡೆಸುವಂತೆ ಪರಮೇಶ್ವರ್‌ ಅವರು ಶನಿವಾರ ಸಂಜೆಯೇ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.ಯುಪಿಎ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ಪಾದಯಾತ್ರೆಯನ್ನು ಬಳಸಿಕೊಳ್ಳಬೇಕು. ರಾಜ್ಯ ಸರ್ಕಾರದ ಸಾಧನೆಗಳು ಮತ್ತು ಜನಪರ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.