ಗುರುವಾರ , ಜನವರಿ 23, 2020
27 °C

ಚುನಾವಣಾ ಪೂರ್ವ ಸಮೀಕ್ಷೆ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್ (ಪಿಟಿಐ): ದೇಶದ ಐದು ರಾಜ್ಯಗಳಲ್ಲಿ ಇದೇ 28ರಿಂದ ಮಾರ್ಚ್ 3ರವರೆಗೆ ನಡೆಯಲಿರುವ ವಿಧಾನಸಭಾ ಚುನಾವಣೆಯ ಅವಧಿಯಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸುವುದನ್ನು ಭಾರತೀಯ ಚುನಾವಣಾ ಆಯೋಗ ನಿಷೇಧಿಸಿದೆ. `1951ರ ಪ್ರಜಾಪ್ರತಿನಿಧಿಗಳ ಕಾಯ್ದೆಯ ಅನುಸಾರ ಭಾರತೀಯ ಚುನಾವಣಾ ಆಯೋಗ ಜ. 28ರ ಮುಂಜಾನೆ 7ರಿಂದ ಮಾರ್ಚ್ 3ರ ಸಂಜೆ 5.30ರವರೆಗಿನ ಅವಧಿಯಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಡೆಸುವುದನ್ನು ಮತ್ತು ಅದರ ಫಲಿತಾಂಶವನ್ನು ಬಹಿರಂಗಪಡಿಸುವುದಕ್ಕೆ ನಿಷೇಧ ಹೇರಿದೆ~ ಎಂದು ಉತ್ತರಾಖಂಡದ ಮುಖ್ಯ ಚುನಾವಣಾಧಿಕಾರಿ ರಾಧಾ ರಟೂರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಪ್ರಕರಣ ತಳ್ಳಿಹಾಕಿದ ಆಯೋಗ: ಉತ್ತರಾಖಂಡ ಮುಖ್ಯಮಂತ್ರಿ ಬಿ.ಸಿ. ಖಂಡೂರಿ ಅವರು ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ವಕ್ತಾರ ಸುರೇಂದ್ರ ಕುಮಾರ್ ಅವರು ಸಲ್ಲಿಸಿದ್ದ ದೂರನ್ನು ಚುನಾವಣಾ ಆಯೋಗ ತಳ್ಳಿಹಾಕಿದೆ.ಖಂಡೂರಿ ಅವರು ತಾವೇ ಚುನಾವಣಾ ಅಭ್ಯರ್ಥಿ ಎನ್ನುವುದನ್ನು ಮರೆತು ಸ್ಥಳೀಯ ಹಾಗೂ ರಾಷ್ಟ್ರ ಮಟ್ಟದ ಪತ್ರಿಕೆಗಳಲ್ಲಿ ತಮ್ಮ ಭಾವಚಿತ್ರ ಇರುವ ಹಾಗೂ `ಖಂಡೂರಿ ಹೈ ಜರೂರಿ~ ಎಂಬ ಘೋಷಣೆ ಹೊಂದಿರುವ ಲಕ್ಷಗಟ್ಟಲೆ ರೂಪಾಯಿ ಮೌಲ್ಯದ ಜಾಹೀರಾತುಗಳನ್ನು ಪ್ರಕಟಿಸಿದ್ದಾರೆ. ಪ್ರತಿಯೊಬ್ಬ ಅಭ್ಯರ್ಥಿ ಸುಮಾರು 11 ಲಕ್ಷ ರೂಪಾಯಿಯಷ್ಟು ಮೊತ್ತವನ್ನು ಮಾತ್ರ ಜಾಹೀರಾತಿಗಾಗಿ ಖರ್ಚು ಮಾಡಬಹುದೆಂದು ಚುನಾವಣಾ ಆಯೋಗ ಘೋಷಿಸಿದ್ದರೂ ಅವರು ಸುಮಾರು ಒಂದು ಕೋಟಿಯಷ್ಟು ಮೊತ್ತವನ್ನು ವ್ಯಯಿಸಿದ್ದಾರೆ ಎಂದು ಸುರೇಂದ್ರ ಕುಮಾರ್ ದೂರಿನಲ್ಲಿ ಆರೋಪಿಸಿದ್ದರು.ಕಣಕ್ಕಿಳಿದ ಬಂಧು ಬಾಂಧವರು: ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಂತೆಯೇ ರಾಜ್ಯದ ಅಭ್ಯರ್ಥಿಗಳ ಸಮೀಪದ ಬಂಧುಗಳು ಮುಂಚೂಣಿಯಲ್ಲಿ ನಿಂತು ಚುನಾವಣಾ ಪ್ರಚಾರ ಕೈಗೊಳ್ಳುತ್ತಿದ್ದಾರೆ.

ಮುಖ್ಯಮಂತ್ರಿ ಬಿ.ಸಿ.ಖಂಡೂರಿ ಅವರ ಪತ್ನಿ ಅರುಣಾ ಖಂಡೂರಿ ತಮ್ಮ ಪತಿ ಸ್ಪರ್ಧಿಸಲಿರುವ ಕೋಟ್‌ವಾರ್ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದರೆ, ದೊಯ್‌ವಾಲಾ ಕ್ಷೇತ್ರದಿಂದ ಸ್ಪರ್ಧೆಗಿಳಿದಿರುವ ಮಾಜಿ ಮುಖ್ಯಮಂತ್ರಿ ರಮೇಶ್ ಪೋಖ್ರಿಯಾಲ್ ಪರವಾಗಿ ಅವರ ಪುತ್ರಿ ಆರುಶಿ ಪೋಖ್ರಿಯಾಲ್ ಪ್ರಚಾರ ಕಣಕ್ಕಿಳಿದಿದ್ದಾರೆ.ಕುಟುಂಬ ರಾಜಕೀಯ

ಪಣಜಿ (ಐಎಎನ್‌ಎಸ್): ಗೋವಾದಲ್ಲಿ ಮಾರ್ಚ್ 3ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ನಾಲ್ಕು ರಾಜಕೀಯ ಕುಟುಂಬಗಳು ಕಾಂಗ್ರೆಸ್‌ನಿಂದ ಸುಮಾರು 10 ಸ್ಥಾನಗಳನ್ನು ಪಡೆದುಕೊಳ್ಳಲು ಹವಣಿಸುತ್ತಿವೆ. ಇದು ವಿರೋಧಿ ಬಣಗಳ ಟೀಕೆಗೆ ಉತ್ತಮ ಅಸ್ತ್ರವನ್ನು ಒದಗಿಸಿಕೊಟ್ಟಂತಾಗಿದೆ.2007ರಲ್ಲಿ ಅನುಸರಿಸಲಾಗಿದ್ದ `ಒಂದು ಕುಟುಂಬಕ್ಕೆ ಒಂದು ಸ್ಥಾನ~ ತತ್ವವನ್ನು ಈ ಬಾರಿ ಪಾಲಿಸಲು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸುಭಾಷ್ ಶಿರೋಡ್‌ಕರ್ ಹಿಂದೇಟು ಹಾಕುತ್ತಿದ್ದಾರೆ.

 

ಮುಸ್ಲಿಮರ ಮೇಲೆ ಕಣ್ಣು

ಲಖನೌ (ಐಎಎನ್‌ಎಸ್): ಭಾರತದಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಮುಸ್ಲಿಂ ಮತಗಳತ್ತಲೇ ದೃಷ್ಟಿ ಹರಿಸಿದ್ದು ಇದೀಗ ಸುಸ್ಪಷ್ಟವಾಗಿದೆ.ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ಇತ್ತೀಚೆಗಷ್ಟೇ ಹೊಸದಾಗಿ ರೂಪುಗೊಂಡ ರಾಜಕೀಯ ಪಕ್ಷ ಕೂಡ ಶೇ 19ರಷ್ಟು ಜನಸಂಖ್ಯೆ ಹೊಂದಿರುವ ಮುಸ್ಲಿಂ ಮತಗಳತ್ತಲೇ ಕಣ್ಣಿಟ್ಟಿದೆ. ಇತ್ತೀಚಿನ ಕೆಲವು ದಿನಗಳವರೆಗೂ ರಾಹುಲ್ ಗಾಂಧಿ ಅವರ ಚುನಾವಣಾ ಪ್ರಚಾರದಿಂದಾಗಿ ಮುಸ್ಲಿಂ ಮತಗಳು ಕಾಂಗ್ರೆಸ್‌ನತ್ತ ವಾಲಿದ್ದವು. ಆದರೆ ವಿವಿಧ ಕಾರಣಗಳಿಂದ ಮುಸ್ಲಿಮರು ತಮ್ಮ ನಿರ್ಧಾರ ಬದಲಾಯಿಸಿ ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷದತ್ತ ವಾಲಿದ್ದಾರೆ ಎಂಬ ವದಂತಿ ಕೇಳಿಬರುತ್ತಿದೆ. ಅಷ್ಟೇ ಅಲ್ಲದೆ ಅಜಂ ಖಾನ್ ಅವರನ್ನು ಮರಳಿ ತರುವ ಮೂಲಕ ಸಮಾಜವಾದಿ ಪಕ್ಷ ಮುಸ್ಲಿಮರ ಮನಸ್ಸು ಗೆಲ್ಲಲು ಪ್ರಯತ್ನ ನಡೆಸಿರುವುದೂ ಸಾಬೀತಾಗಿದೆ.ಅಣ್ಣನ ಮಗನ ವಿರುದ್ಧ ಚಿಕ್ಕಪ್ಪನ ಪ್ರಚಾರ

ಪಟಿಯಾಲ (ಪಿಟಿಐ): ಪಂಜಾಬ್‌ನಲ್ಲಿ ಚುನಾವಣಾ ಜ್ವರ ಏರುತ್ತಿರುವಂತೆಯೇ ರಾಜ್ಯ ಕಾಂಗ್ರೆಸ್ ಮುಖಂಡ ಅಮರೀಂದ್ರ ಅವರ ಕಿರಿಯ ಸಹೋದರ ಹಾಗೂ ಕಾಂಗ್ರೆಸ್‌ನ ಬದ್ಧ ವೈರಿ ಮಾಳವೇಂದ್ರ ಸಿಂಗ್, ತಮ್ಮ ಅಣ್ಣನ ಮಗನ ವಿರುದ್ಧ ತೀವ್ರ ಸೆಣಸಾಟಕ್ಕೆ ಮುಂದಾಗಿದ್ದಾರೆ.ಸಮಾನ್ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಪಡೆಯಲು ವಿಫಲರಾದ ಮಾಳವೇಂದ್ರ ಇದೀಗ ಅದೇ ಕ್ಷೇತ್ರದ ಶಿರೋಮಣಿ ಅಕಾಲಿ ದಳದ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಲು ಸಿದ್ಧತೆ ನಡೆಸುವ ಮೂಲಕ ತಮ್ಮ ಅಣ್ಣನ ಮಗನ ವಿರುದ್ಧ ಕತ್ತಿ ಮಸೆಯಲು ಮುಂದಾಗಿದ್ದಾರೆ.ಕಳೆದ 35 ವರ್ಷಗಳ ಕಾಲ ಪಕ್ಷದೊಂದಿಗೆ ಹೊಂದಿದ್ದ ಬಾಂಧವ್ಯವನ್ನು ಮುರಿದುಕೊಂಡಿರುವ ಮಾಳವೇಂದ್ರ, ರಾಜ್ಯದಾದ್ಯಂತ ಕಾಂಗ್ರೆಸ್ ವಿರುದ್ಧ ಪ್ರಚಾರ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ.

 

ಪ್ರತಿಕ್ರಿಯಿಸಿ (+)