ಚುನಾವಣೆಯಿಂದ ದೂರವಿರಿ: ಮನವಿ

ನರಗುಂದ: ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆ ನಡೆಯದಂತೆ ನೋಡಿಕೊಳ್ಳಲು ಹೋರಾಟ ಸಮಿತಿ ಸದಸ್ಯರು ಗಂಭೀರ ಚಿಂತನೆ ನಡೆಸಿದ್ದಾರೆ. ಆದ್ದರಿಂದ ಚುನಾವಣೆಗೆ ರಾಜಕೀಯ ಪಕ್ಷಗಳಿಗೆ ಅಭ್ಯರ್ಥಿಗಳನ್ನು ಹಾಕದಂತೆ ಮನವಿ ಮೂಲಕ ಒತ್ತಡ ಹೇರಲಾಗುತ್ತಿದೆ ಎಂದು ಮಹಾದಾಯ ಹೋರಾಟ ಸಮಿತಿ ಉಪಾಧ್ಯಕ್ಷ ಪರಶುರಾಮ ಜಂಬಗಿ ಹೇಳಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ 195ನೇ ದಿನವಾದ ಮಂಗಳವಾರ ಮಾತನಾಡಿ, ಮಹಾದಾಯಿ ಹೋರಾಟಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ. ಆದ್ದರಿಂದ ಈ ಭಾಗದಲ್ಲಿ ಚುನಾವಣೆಯಿಂದ ದೂರವಿರಲು ಜನರಿಗೆ ಮನವಿ ಮಾಡುತ್ತೇವೆ ಎಂದರು.
ಹೋರಾಟ ಸಮಿತಿ ಸದಸ್ಯರು ಶಾಸಕ ಬಿ.ಆರ್.ಯಾವಗಲ್ ಅವರನ್ನು ಭೇಟಿ ಮಾಡಲಾಗಿತ್ತು. ಅವರಿಂದ ಭರವಸೆ ದೊರೆತಿದೆ. ಇದರ ಬಗ್ಗೆ ನಮ್ಮ ಮುಖಂಡರ ಜೊತೆ ಚರ್ಚೆ ಮಾಡಿ ನಂತರ ತಮಗೆ ತಿಳಿಸುವುದಾಗಿ ಹೇಳಿದ್ದಾರೆ, ಅದೇ ರೀತಿ ಬಿಜೆಪಿಯ ಮತಕ್ಷೇತ್ರದ ಅಧ್ಯಕ್ಷರನ್ನು ಸಂಪರ್ಕಿಸಲಾಗಿದೆ. ಜೊತೆಗೆ ಜೆಡಿಎಸ್ ಅಧ್ಯಕ್ಷರಿಗೂ ಮನವಿ ಮಾಡಲಾಗಿದೆ. ಅವರು ಚರ್ಚೆ ಮಾಡಿ ನಿರ್ಧಾರ ಹೇಳುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಮೂರು ಪಕ್ಷದವರು ಅಭ್ಯರ್ಥಿಗಳನ್ನು ನಿಲ್ಲಿಸದೇ ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು. ಇದರ ಬಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮುಟ್ಟಿಸಬೇಕು ಎಂದರು. ಅಭ್ಯರ್ಥಿಗಳು ನಿಂತಲ್ಲಿ ಅವರಿಗೆ ಮಾತ್ರ ನೋಟಾ ಚಲಾಯಿಸುವ ಮೂಲಕ ಚುನಾವಣೆ ರದ್ದಾಗುವಂತೆ ಪ್ರಯತ್ನಿಸಲಾಗುವುದು ಎಂದರು.
ಶ್ರೀಶೈಲ ಮೇಟಿ ಮಾತನಾಡಿ ರೈತರು ರಾಜಕೀಯದಿಂದ ದೂರವಿರುವ ಮೂಲಕ ಮಹಾದಾಯಿ ಹೋರಾಟಕ್ಕೆ ಬಲ ತುಂಬಬೇಕು. ರೈತರು ಒಗ್ಗಟ್ಟಾದರೆ ಯಾವ ರಾಜಕಾರಣಿಯೂ ಏನು ಮಾಡಲಾಗುವುದಿಲ್ಲ. ಚುನಾವಣೆ ಸಮಯದಲ್ಲಿ ಹಣ, ಹೆಂಡದ ಆಸೆಗೆ ರಾಜಕೀಯ ನಾಯಕರ ದುಂಬಾಲು ಬೀಳದೇ ನಿಜವಾದ ರೈತರಾದವರು ಅದನ್ನು ತಿರಸ್ಕರಿಸಿ ಮಹಾದಾಯಿ ಯೋಜನೆಗೆ ಆಗ್ರಹಿಸಬೇಕು. ಈ ಭಾಗದ ಜೀವನಾಡಿ ಹರಿದು ಬರುವಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದರು.
ತೃತೀಯ ರಂಗ ಅಸ್ತಿತ್ವ : ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಸಾಬಳೆ ಮಾತನಾಡಿ ರಾಜಕೀಯ ಪಕ್ಷಗಳು ಈಗ ನಮ್ಮ ಹೋರಾಟಕ್ಕೆ ಬೆಲೆ ನೀಡದೇ ಹೋದಲ್ಲಿ ದಿನಗಳನ್ನು ಮತ್ತೊಂದು, ಪರ್ಯಾಶಕ್ತಿ ರೂಪಗೊಂಡ ತೃತೀಯ ರಂಗ ಈ ಭಾಗದಲ್ಲಿ ಸ್ಥಾಪಿತವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದರು. ಆದ್ದರಿಂದ ವಾಸ್ತವ ಸ್ಥಿತಿ ಅರಿತು ಮಹಾದಾಯಿ ಈಡೇರಿಸುವಂತೆ ಆಗ್ರಹಿಸಿದರು.
ಚಿಣ್ಣರ ಕಲರವ : ಸ್ವಾತಂತ್ರ್ಯ ಮಹಿಳಾ ಹೋರಾಟಗಾರರ ವೇಷದಲ್ಲಿ ಬಂದ ಚಿಣ್ಣರು ವಿವಿಧ ಸಂಭಾಷಣೆ ಹಾಗೂ ಹಾಡುಗಳ ಮೂಲಕ ಹೋರಾಟಕ್ಕೆ ಹುರುಪು ತುಂಬಿದರು. ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ , ಉಲ್ಲಾಳ ಅಬ್ಬಕ್ಕ ಸೇರಿದಂತೆ ವಿವಿಧ ಹೋರಾಟಗಾರರ ವೇಷದಲ್ಲಿ ಬಂದು ಮಹಾದಾಯಿ ಹೋರಾಟಕ್ಕೆ ಜಯವಾಗಬೇಕು ಎಂದು ಕೂಗಿದರು. ರಿಯಾಜ್ ಕೊಣ್ಣೂರು, ಎಸ್.ಬಿ.ಜೋಗಣ್ಣವರ ಮಾತನಾಡಿದರು. ಧರಣಿಯಲ್ಲಿ ಎಸ್.ಬಿ.ಕೊಣ್ಣೂರು, ವ್ಹಿ.ಡಿ.ಮೊರಬ,ರುದ್ರಯ್ಯ ಕುರವತ್ತಿಮಠ, ಪುಂಡಲೀಕ ಯಾದವ, ಅರ್ಜುನ ಮಾನೆ, ಚನ್ನಬಸಪ್ಪ ಕತ್ತಿ, ಈರಣ್ಣ ಗಡಗಿ, ಎಲ್.ಬಿ.ಮುನೇನಕೊಪ್ಪ, ಸಿ.ಎಸ್.ಪಾಟೀಲ, ಭೀಮಪ್ಪ ತಿಗಡಿ, ಮಾದೇವಪ್ಪ ಮುಳ್ಳೂರು, ದೇವೇಂದ್ರ ಮುಳ್ಳೂರು, ಎಸ್.ಕೆ.ಗಿರಿಯಣ್ಣವರ, ಎಂ.ಎಂ.ನಂದಿ, ನಿಂಗಪ್ಪ ಲಿಂಗದಾಳ, ಕಾಡಪ್ಪ ಕಾಕನೂರ,ಯಲ್ಲಪ್ಪ ತೆಗ್ಗಿನಮನಿ, ವೀರಣ್ಣ ಸೊಪ್ಪಿನ ಇತರರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.