ಗುರುವಾರ , ಜೂನ್ 24, 2021
29 °C

ಚುನಾವಣೆ ಬಹಿಷ್ಕರಿಸಲು ಸಿಪಿಐಎಂಎಲ್ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಬೆಲೆ ಏರಿಕೆ, ಬರ ಪರಿಸ್ಥಿತಿ, ನಿರುದ್ಯೋಗ ಸಮಸ್ಯೆ ನಡುವೆಯೂ ಈಗ ಚುನಾವಣೆ ಹೊರೆಯನ್ನು ಜನರು ಹೊರಬೇಕಾಗಿದೆ. ಜನವಿರೋಧಿ ಚುನಾವಣೆಯನ್ನು ಜನರು ತಿರಸ್ಕರಿಸಬೇಕು ಎಂದು ಸಿಪಿಐಎಂಎಲ್ ಜಿಲ್ಲಾ ಘಟಕ ಕಾರ್ಯದರ್ಶಿ ಐ.ಎಂ.ಪೂರ್ಣೇಶ್ ಮನವಿ ಮಾಡಿದ್ದಾರೆ.ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದಾಗಿನಿಂದ ಇದುವರೆಗೆ ಅಧಿಕಾರದ ಆಸೆಗಾಗಿ ದಿನಕ್ಕೊಬ್ಬ ನಾಯಕರನ್ನು ಆರಿಸುತ್ತಿದ್ದಾರೆ. ಗೊಂದಲದಿಂದಲೇ ಅಧಿಕಾರದ ಚುಕ್ಕಾಣಿ ಹಿಡಿದ ಸರ್ಕಾರ ಕಳೆದ ಮೂರೂವರೆ ವರ್ಷದಲ್ಲಿ ಅಭಿವೃದ್ಧಿಗೆ ಗಮನ ಹರಿಸದೆ ಗೊಂದಲದಲ್ಲಿಯೇ ದಿನದೂಡುತ್ತಿದೆ ಎಂದು ಟೀಕಿಸಿದ್ದಾರೆ.ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆ ಜನ ಬಯಸಿದ ಚುನಾವಣೆಯಲ್ಲ. ಸರ್ಕಾರ ಗೊಂದಲಗಳಿಗೆ ಪರಿಹಾರ ಕಾಣದೆ ಹುಟ್ಟಿಕೊಂಡ ಚುನಾವಣೆ. ಇದುವರೆಗೆ ಆಯ್ಕೆಯಾದ ಸಂಸದರು ಜಿಲ್ಲೆಗೆ ಮಾಡಿದ ಕೆಲಸಗಳೇನು? ಬಾಲಸುಬ್ರಹ್ಮಣ್ಯ ವರದಿಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ನಿಲುವೇನು? ಎಂಬುದನ್ನು ಸ್ಪಷ್ಟಪಡಿಸುವಂತೆ ಒತ್ತಾಯಿಸಿದ್ದಾರೆ.ಜಾತ್ಯತೀತ ಹೆಸರಿನಲ್ಲಿ ಚುನಾವಣೆ ಎದುರಿಸುತ್ತಿರುವ ಎಲ್ಲ ಪಕ್ಷಗಳಲ್ಲೂ ಜಾತ್ಯತೀತ ಪದ ಅರ್ಥ ಕಳೆದುಕೊಂಡಿದೆ. ಈ ಪಕ್ಷಗಳ ಬಾವುಟ ಬೇರೆಯಾದರು ನೀತಿಗಳು ಮಾತ್ರ ಒಂದೇ ಆಗಿವೆ. ರೈತರು, ಕಾರ್ಮಿಕರು, ದಲಿತ, ಆದಿವಾಸಿಗಳ ಪರಿಸ್ಥಿತಿ ಹದಗೆಟ್ಟಿದೆ.ಜೀವನ ನಿರ್ವಹಣೆ ಕಷ್ಟ ಸಾಧ್ಯ. ಕೂಲಿ ಅರಸಿ ಜನರು ನಗರದತ್ತ ಮುಖಮಾಡುತ್ತಿದ್ದಾರೆ. ಭೀಕರ ಬರಪರಿಸ್ಥಿತಿಯಲ್ಲೂ ಜನರ ಮೇಲೆ ಚುನಾವಣಾ ಹೊರೆ ಹೇರುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.ಈ ಉಪಚುನಾವಣೆಗೆ ಪಕ್ಷ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು  ನಿರ್ಧರಿಸಿದೆ. ಚುನಾವಣೆ ಕುರಿತು ಪಕ್ಷದ ರಾಜಕೀಯವನ್ನು ಕಾರ್ಯಕರ್ತರಿಗೆ ಮುಂದಿನ ದಿನಗಳಲ್ಲಿ ಕೊಡಲಿದ್ದೇವೆ. ಚುನಾವಣಾ ಹೆಸರಿನಲ್ಲಿ ರಾಜಕೀಯ ಪಕ್ಷಗಳು ಜನರನ್ನು ಹೇಗೆ ಸುಲಿಗೆ ಮಾಡುತ್ತವೆ ಎಂದು ಜನರಲ್ಲಿ ಜಾಗೃತಿ ಮೂಡಿಸಲು ಚುನಾವಣೆ ಬಳಸಿಕೊಕೊಳ್ಳಲಾಗುವುದು ಎಂದಿದ್ದಾರೆ.ಜನತೆಗೆ ಆರ್ಥಿಕ ಹೊರೆ ಹೊರಿಸುತ್ತಿರುವ ರಾಜಕೀಯ ಪಕ್ಷಗಳಿಗೆ ಈ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.