ಗುರುವಾರ , ಮೇ 6, 2021
25 °C
ನೀರು ಪೂರೈಕೆ ಸ್ಥಗಿತಕ್ಕೆ ಚೀರನಹಳ್ಳಿ ಗ್ರಾ.ಪಂ. ಮುಂದೆ ಧರಣಿ

ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಜ್ಜಂಪುರ: ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಪಟ್ಟಣ ಸಮೀಪದ ಚೀರನಹಳ್ಳಿ ಗ್ರಾಮ­ಸ್ಥರು ಖಾಲಿ ಕೊಡ ಹಿಡಿದು ಗ್ರಾಮ ಪಂಚಾಯಿತಿ ಮುಂದೆ ಶನಿವಾರ ಪ್ರತಿಭಟಿಸಿದರು.500ಕ್ಕೂ ಅಧಿಕ ಮನೆ, 2000ಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದಲೂ ಕುಡಿಯುವ ನೀರಿನ ಸಮಸ್ಯೆ ತಲೆ­ದೋರಿದೆ. ನೀರಿನ ಬವಣೆಗೆ ಸಿಲುಕಿ­ರುವ ಮಹಿಳೆಯರು ಮಕ್ಕಳೊಂದಿಗೆ ಬಿಂದಿಗೆ ಹಿಡಿದು ದೂರದ ತೋಟದ ಕೊಳವೆ ಬಾವಿಗಳತ್ತ ತೆರಳಿ ನೀರು ತರುವುದು ಸಾಮಾನ್ಯವಾಗಿದೆ. ನಾಲ್ಕಾರು ಕಿಲೋ ಮೀಟರ್‌ ದೂರದ ಕೆರೆ­ಕಟ್ಟೆಗಳಿಗೆ ಜಾನುವಾರುಗಳನ್ನು ಕೊಂಡೊ­ಯ್ಯುವ ಅನಿವಾರ್ಯತೆ ಒದಗಿದೆ. ನೀರಿನ ಕೊರತೆಯಿಂದ ಸಿಗುವ ಅಶುದ್ದ ನೀರನ್ನೇ ಕುಡಿಯುವ ಗ್ರಾಮಸ್ಥರಲ್ಲಿ ಹಾಗೂ ನೈರ್ಮಲ್ಯದ ಸಮಸ್ಯೆಯೂ ಉಂಟಾಗಿರುವ ಗ್ರಾಮ­ದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಕಾಡುತ್ತಿದೆ.ಕಳೆದೆರಡು ವರ್ಷದಿಂದಲೂ ತಲೆ­ದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾ.­ಪಂ. ಅಧ್ಯಕ್ಷರು, ಶಾಸ­ಕರು, ತಹಶೀ­ಲ್ದಾರ್‌, ಜಿಲ್ಲಾಧಿಕಾ­ರಿಗೂ ಮನವಿ ಮಾಡಲಾಗಿದೆ. ಆದರೆ ಗ್ರಾಮದ ನೀರಿನ ಸಮಸ್ಯೆಯ ತೀವ್ರತೆ­ಯನ್ನು ಹಗುರವಾಗಿ ಪರಿಗಣಿಸಿರುವ ಅಧಿಕಾರಿ­ಗಳು ಹಾಗೂ ಜನಪ್ರತಿ­ನಿಧಿ­ಗಳು ಶಾಶ್ವ­ತ­ವಾಗಿ ಸಮಸ್ಯೆ ಪರಿಹರಿ­ಸಲು ಮುಂದಾ­ಗಿಲ್ಲ. ಸಮಸ್ಯೆ ಹೀಗೆ ಮುಂದು­ವರೆದರೆ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾನಿಸ­ಲಾಗಿದೆ ಎಂದು ಗ್ರಾಮದ ವಿಜಯ್‌­ಕುಮಾರ್‌, ಪರ­ಮೇ­ಶ್ವರಪ್ಪ, ನಿಂಗ­ದಾಸಪ್ಪ ತಿಳಿಸಿದರು.ಸಮಸ್ಯೆ ಬಗೆಹರಿಸುವುದಾಗಿ ಚುನಾ­ವಣೆ ಸಮಯದಲ್ಲಿ ಮತ ಕೇಳಲು ಬರುವ ಜನಪ್ರತಿನಿಧಿಗಳು ನಂತರ ಇತ್ತ ಸುಳಿಯುವುದಿಲ್ಲ. ನೀರು ಪೂರೈಸಲು ಕ್ರಮ ಕೈಗೊಳ್ಳುವಂತೆ  ಶಿವನಿ ಗ್ರಾಮಕ್ಕೆ ಇತ್ತೀಚೆಗೆ ಬಂದಿದ್ದ ಜಿಲ್ಲಾಧಿಕಾರಿ­ಗಳನ್ನು ಕೋರಿದ್ದರೂ ಪ್ರಯೋಜನ ಆಗಿಲ್ಲ.  ಒಂದೆರಡು ದಿನಗಳಲ್ಲಿ ನೀರು ಪೂರೈಸದಿದ್ದರೆ ಲೋಕಸಭಾ ಚುನಾ­ವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.ಗ್ರಾಮ ಪಂಚಾಯಿತಿ ಅಧ್ಯಕ್ಷ ನಂಜುಂಡಪ್ಪ, ಎರಡು ತಿಂಗಳಲ್ಲಿ 650 ಅಡಿ ಆಳದವರೆಗೆ ನಾಲ್ಕು ಕೊಳವೆ ಬಾವಿ ಕೊರೆಸಿದರೂ ನೀರು ಸಿಗದಿರು­ವುದು ಸಮಸ್ಯೆಗೆ ಕಾರಣವಾಗಿದೆ. ಸಮೀ­ಪದ ಬೇರೊಂದು ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸಿ, ಅಲ್ಲಿಂದ ನೀರು ತರುವಂತೆ ತಾಲ್ಲೂಕು ತಹಶೀ­ಲ್ದಾರ್ ಹಾಗೂ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.