ಶನಿವಾರ, ಜೂನ್ 19, 2021
28 °C
ಕಳೆದ ವರ್ಷಕ್ಕಿಂತ ₨ 68 ಕೋಟಿ ಕಡಿಮೆ ವರಮಾನ -– ತೆರಿಗೆ ವಸೂಲಿಗೆ ಇಲ್ಲ ಸಿಬ್ಬಂದಿ

ಚುನಾವಣೆ ಮುಂದೆ ತೆರಿಗೆ ಸಂಗ್ರಹ ಹಿಂದೆ!

ಪ್ರವೀಣ ಕುಲಕರ್ಣಿ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ವರಮಾನದ ದೃಷ್ಟಿಯಿಂದ ಅತ್ಯಂತ ಮಹತ್ವದ ತಿಂಗಳು ಮಾರ್ಚ್‌. ಈ ತಿಂಗಳಲ್ಲೇ ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆ ಆರಂಭವಾಗಿರುವ ಕಾರಣ ಆಸ್ತಿ ತೆರಿಗೆ ಸಂಗ್ರಹಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ.ಆಸ್ತಿ ತೆರಿಗೆ ಸಂಗ್ರಹದಲ್ಲಿ ತೊಡಗಿಕೊಳ್ಳಬೇಕಿದ್ದ ಕಂದಾಯ ಅಧಿಕಾರಿಗಳೆಲ್ಲ ಈಗ ಚುನಾವಣಾ ಕರ್ತವ್ಯದ ಮೇಲೆ ನಿಯೋಜನೆ ಆಗಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಬಿಬಿಎಂಪಿ ₨ 2,000 ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿ ಹಾಕಿಕೊಂಡಿತ್ತು. ಮಾ. 15ರ ವೇಳೆಗೆ

₨ 1,290 ಕೋಟಿ ಸಂಗ್ರಹವಷ್ಟೇ ಆಗಿದೆ. ಅಂದರೆ ₨ 710 ಕೋಟಿಯಷ್ಟು ಖೋತಾ ಬಿದ್ದಿದೆ.ಕಳೆದ ವರ್ಷ ಇದೇ ಅವಧಿಯಲ್ಲಿ (2012-–13) ₨ 1,358 ಕೋಟಿ ತೆರಿಗೆ ಸಂಗ್ರಹವಾಗಿತ್ತು. ಆದರೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ (ಅವಧಿ ಮುಗಿಯಲು ಕೆಲವೇ ದಿನಗಳಷ್ಟೇ ಬಾಕಿ ಇದೆ) ಅದರ ಪ್ರಮಾಣ ₨ 1,290 ಕೋಟಿಗೆ ಕುಸಿದಿದೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಬಿಬಿಎಂಪಿಗೆ ಈ ಖೋತಾ ಮತ್ತೊಂದು ದೊಡ್ಡ ಹೊಡೆತವಾಗಿದೆ.ಕಂದಾಯ ಇಲಾಖೆ ಕೆಲಸವನ್ನು ಕಾಲಕಾಲಕ್ಕೆ ಪರಿಶೀಲಿಸಿ, ತೆರಿಗೆ ಸಂಗ್ರಹವನ್ನು ಚುರುಕುಗೊಳಿಸಬೇಕಿದ್ದ ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮಿನಾರಾಯಣ, ನಗರ ಜಿಲ್ಲಾ ಮುಖ್ಯ ಚುನಾವಣಾ ಅಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಚುನಾವಣಾ ಕೆಲಸಗಳ ಹೊಣೆಯೇ ಹೆಚ್ಚಾಗಿರುವ ಕಾರಣ ಅವರಿಗೆ ಮೊದಲಿನಂತೆ ನಿತ್ಯದ ಕೆಲಸಗಳ ಮೇಲೆ ಗಮನಹರಿಸುವುದು ಸಾಧ್ಯವಾಗುತ್ತಿಲ್ಲ ಎಂಬುದು ಬಿಬಿಎಂಪಿ ಮೂಲಗಳು ನೀಡುವ ಮಾಹಿತಿಯಾಗಿದೆ.ಚುನಾವಣೆ ಘೋಷಣೆ ಆಗುವ ಮುನ್ನ ವಲಯವಾರು ಕಂದಾಯ ಅಧಿಕಾರಿಗಳ ಸಭೆ ನಡೆಸಿದ್ದ ಆಯುಕ್ತರು, ಪ್ರತಿ ತಿಂಗಳ ಗುರಿ ನಿಗದಿಮಾಡಿ ಅದರಂತೆ ತೆರಿಗೆ ವಸೂಲಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಆ ಮೂಲಗಳು ಹೇಳುತ್ತವೆ.

‘ಆರ್ಥಿಕ ವರ್ಷದ ಮೊದಲ ಹಾಗೂ ಕೊನೆಯ ತಿಂಗಳಲ್ಲಿ ಆಸ್ತಿ ತೆರಿಗೆ ಅಧಿಕ ಪ್ರಮಾಣದಲ್ಲಿ ಸಂಗ್ರಹವಾಗುತ್ತದೆ. ಆದರೆ, ಈ ಸಲ ಎರಡೂ ತಿಂಗಳಲ್ಲಿ ಚುನಾವಣೆಯದ್ದೇ ಕಾರುಬಾರು. ಹೀಗಾಗಿ ಹೊಸ ಆರ್ಥಿಕ ವರ್ಷದ ಆರಂಭದಲ್ಲೂ ವರಮಾನ ಕಡಿಮೆ ಆಗಲಿದೆ’ ಎಂದು ವಿವರಿಸುತ್ತವೆ.ಬಿಬಿಎಂಪಿ ವ್ಯಾಪ್ತಿಯಲ್ಲಿ 25 ಲಕ್ಷ ವಸತಿ ಹಾಗೂ 3.5 ಲಕ್ಷ ವಾಣಿಜ್ಯ ಕಟ್ಟಡಗಳು ಇವೆ ಎಂಬುದು ಬಿಬಿಎಂಪಿ ಅಧಿಕಾರಿಗಳೇ ಮಾಡಿರುವ ಅಂದಾಜು. ಆದರೆ, ಇದುವರೆಗೆ ಆಸ್ತಿ ತೆರಿಗೆ ಜಾಲಕ್ಕೆ ಒಳಪಟ್ಟಿರುವುದು ಕೇವಲ 16.19 ಲಕ್ಷ ಆಸ್ತಿಗಳು (ವಸತಿ–ವಾಣಿಜ್ಯ ಕಟ್ಟಡಗಳು ಸೇರಿ) ಮಾತ್ರ. ‘ಕಂದಾಯ ವಿಭಾಗದಲ್ಲಿ ಲಭ್ಯವಿರುವ ಸಿಬ್ಬಂದಿಯಿಂದ ಹೊಸ ಆಸ್ತಿಗಳನ್ನು ತೆರಿಗೆ ವ್ಯಾಪ್ತಿ ತರುವುದು ಕಷ್ಟದ ಕೆಲಸ. ಸದ್ಯ ತೆರಿಗೆ ಜಾಲದಲ್ಲಿರುವ ಆಸ್ತಿಗಳ ಮಾಲೀಕರಿಂದ ಬಾಕಿ ವಸೂಲಿ ಮಾಡುವುದೂ ಸಾಧ್ಯವಾಗುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.‘ಸಿಬ್ಬಂದಿ ಮಾತ್ರವಲ್ಲದೆ ವಾಹನಗಳನ್ನೂ ಚುನಾವಣಾ ಕೆಲಸಕ್ಕೆ ನಿಯೋಜನೆ ಮಾಡಲಾಗಿದೆ. ಉಳಿದ ಅಲ್ಪ ಸಂಪನ್ಮೂಲದಿಂದ ನಾವುತಾನೇ ಏನು ಮಾಡಬೇಕು’ ಎಂದು ಪ್ರಶ್ನಿಸುತ್ತಾರೆ. ‘ಜವಾಬ್ದಾರಿ ಅರಿತ ನಾಗರಿಕರು ಬೆಂಗಳೂರು ಒನ್‌ ಮತ್ತು ಆನ್‌ಲೈನ್‌ ಮೂಲಕ ಪಾವತಿ ಮಾಡುತ್ತಿರುವ ತೆರಿಗೆಯಷ್ಟೇ ಸದ್ಯ ಬೊಕ್ಕಸಕ್ಕೆ ಜಮೆ ಆಗುತ್ತಿರುವ ವರಮಾನವಾಗಿದೆ’ ಎಂದು ಅವರು ಸ್ಪಷ್ಟಪಡಿಸುತ್ತಾರೆ.‘ಬಿಬಿಎಂಪಿ ವ್ಯಾಪ್ತಿಯಲ್ಲಿ ಅತ್ಯಧಿಕ ತೆರಿಗೆಯನ್ನು ತರುವ 2,000ಕ್ಕೂ ಅಧಿಕ ಆಸ್ತಿಗಳಿದ್ದು, ಅವುಗಳಲ್ಲೂ ಬಾಕಿ ದೊಡ್ಡ ಪ್ರಮಾಣದಲ್ಲಿ ಉಳಿದಿದೆ. ವ್ಯಾಪಾರ ಮಳಿಗೆಗಳು, ಪೇಯಿಂಗ್‌ ಗೆಸ್ಟ್‌ ಹಾಸ್ಟೆಲ್‌ಗಳು, ಮಾಲ್‌ಗಳು ಹಾಗೂ ಇತರ ವಾಣಿಜ್ಯ ಕಟ್ಟಡಗಳ ಬಾಕಿ ವಸೂಲಿ ಮಾಡಬೇಕಿದೆ. ಜತೆಗೆ ತೆರಿಗೆಯನ್ನೂ ಪರಿಷ್ಕರಿಸಬೇಕಿದೆ’ ಎಂದು ಮಾಹಿತಿ ನೀಡುತ್ತಾರೆ.ತೆರಿಗೆ ಸಂಗ್ರಹ ಕಾರ್ಯಾಚರಣೆಯಲ್ಲಿ ಎದುರಾದ ಎಲ್ಲ ಸಮಸ್ಯೆ ಹೋಗಲಾಡಿಸಲು ಬಿಬಿಎಂಪಿ, ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಮೂಲಕ ಆಸ್ತಿ ದಾಖಲೆ ನಿರ್ವಹಿಸಲು ಮುಂದಾಗಿದೆ. ಅದಕ್ಕೆ ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ ಅಭಿವೃದ್ಧಿ ನಿಗಮ (ಕಿಯೋನಿಕ್ಸ್)ನಿಂದ ತಾಂತ್ರಿಕ ನೆರವು ಸಿಕ್ಕಿದೆ.ಪ್ರತಿಯೊಂದು ಆಸ್ತಿಯನ್ನು ಜಿಐಎಸ್‌ಗೆ ಅಳವಡಿಸುವ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಕಂದಾಯ ವಿಭಾಗದಿಂದ ಈ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ. ಹಲವು ಆಸ್ತಿಗಳಿಗೆ ಸಂಬಂಧಿಸಿದಂತೆ ಪಿಐಡಿ ಸಂಖ್ಯೆಗಳು ತಾಳೆ ಆಗದಿರುವುದು ಅಧಿಕಾರಿಗಳಿಗೆ ತಲೆನೋವು ತಂದಿದೆ.‘ಚುನಾವಾಣಾ ಪ್ರಕ್ರಿಯೆಯಿಂದ ಆಸ್ತಿ ತೆರಿಗೆ ವಸೂಲಿಗೆ ಯಾವುದೇ ತೊಂದರೆ ಆಗದಂತೆ ನಿಗಾ ವಹಿಸುತ್ತಿದ್ದೇವೆ. ಇನ್ನೂ ಎರಡು ವಾರ ಕಾಲಾವಕಾಶ ಇದ್ದು, ಕಳೆದ ವರ್ಷಕ್ಕಿಂತ ಅಧಿಕ ತೆರಿಗೆ ವಸೂಲಿ ಮಾಡುತ್ತೇವೆ’ ಎಂಬುದು ಉಪ ಆಯುಕ್ತ (ಕಂದಾಯ)

ಐ.ರಮಾಕಾಂತ್‌ ಭರವಸೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.