ಭಾನುವಾರ, ಜೂನ್ 13, 2021
25 °C

ಚುನಾವಣೆ ವೇಳೆ ಜೆಡಿಎಸ್, ಬಿಜೆಪಿ ಜಾತ್ಯತೀತ ಮಂತ್ರ ಜಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: `ಕಾಂಗ್ರೆಸ್ ಬಿಟ್ಟರೆ ಜಾತ್ಯತೀತ ಎಂದು ಬಿಂಬಿಸಿಕೊಂಡಿರುವ ಯಾವ ಪಕ್ಷವೂ ಜಾತ್ಯತೀತವಾಗಿ ಕೆಲಸ ಮಾಡಿಲ್ಲ. ಅಲ್ಪ ಸಂಖ್ಯಾತರ ಮತಗಳಿಸಿದ ಇಂಥ ಪಕ್ಷಗಳು ಅವರ ಯಾವ ಸಮಸ್ಯೆಯನ್ನೂ ಬಗೆಹರಿಸಿಲ್ಲ~ ಎಂದು ರಾಜ್ಯಸಭೆಯ ಉಪಸಭಾಪತಿ ಕೆ. ರೆಹಮಾನ್ ಖಾನ್ ನುಡಿದರು.ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಚಿಕ್ಕಮಗಳೂರಿನ ಕಡೆಗೆ ಹೊರಟಿದ್ದ ಅವರು ಹಾಸನದಲ್ಲಿ ತಮ್ಮನ್ನು ಭೇಟಿಮಾಡಿದ ಪತ್ರಕರ್ತರ ಜತೆ ಮಾತನಾಡಿದರು.`ಚುನಾವಣೆ ಬಂದಾಗ ಜೆಡಿಎಸ್ ಸೇರಿದಂತೆ ಬಿಜೆಪಿಯೇತರ ಪಕ್ಷಗಳೆಲ್ಲ ಜಾತ್ಯತೀತತೆಯ ಮಂತ್ರ ಜಪಿಸುತ್ತವೆ. ಜಾತ್ಯತೀತ ಪಕ್ಷಗಳೆಲ್ಲ ಒಂದಾಗಿ ಬಿಜೆಪಿಯನ್ನು ಸೋಲಿಸಬೇಕು ಎಂದು ಕರೆ ನೀಡುತ್ತಾರೆ.ಮಾಜಿ ಪ್ರಧಾನಿ ದೇವೇಗೌಡರೂ ಹಲವು ಬಾರಿ `ಕಾಂಗ್ರೆಸ್ ಸಹಕಾರ ನೀಡಿದ್ದರೆ ಬಿಜೆಪಿಯನ್ನು ಸೋಲಿಸಬಹುದಾಗಿತ್ತು~ ಎಂಬ ಅರ್ಥದ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಭ್ಯರ್ಥಿಯ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಜೆಡಿಎಸ್‌ಗೆ ಮನವಿ ಮಾಡಿದ್ದೇವೆಯೇ ವಿನಾ ಚುನಾವಣೆಯಲ್ಲಿ ಸೋಲುವ ಭಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.`ಉಡುಪಿ ಚಿಕ್ಕಮಗಳೂರು ಭಾಗದಲ್ಲಿ ನಾವು ಕೇಂದ್ರ ಸರ್ಕಾರದ ಯೋಜನೆಗಳನ್ನು ಮುಂದಿಟ್ಟುಕೊಂಡೇ ಮತ ಯಾಚಿಸುತ್ತೇವೆ. ಕಾಫಿ ಬೆಳೆಗಾರರಿಗೆ 450 ಕೋಟಿ ರೂಪಾಯಿಯ ಪ್ಯಾಕೇಜ್, ಅಡಿಕೆ ಬೆಳೆಗಾರರಿಗೆ ಪರಿಹಾರ, ಸಾಲಮನ್ನಾ ಹೀಗೆ ಎಲ್ಲ ವರ್ಗದವರಿಗೆ ಅನುಕೂಲವಾಗುವಂಥ ಹತ್ತು ಹಲವು ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿದೆ. ಆದರೆ ಕೇಂದ್ರದ ಯೋಜನೆಗಳನ್ನೇ ರಾಜ್ಯ ಸರ್ಕಾರ ತನ್ನ ಯೋಜನೆಗ ಳೆಂದು ಬಿಂಬಿಸುತ್ತ ಬಂದಿದೆ. ಇದರಲ್ಲಿ ರಾಜ್ಯದ ಪಾಲಿಲ್ಲ ಎಂದು ಜನರಿಗೆ ತಿಳಿಸುವ ಕಾರ್ಯವನ್ನು ನಮ್ಮ ಕಾರ್ಯಕರ್ತರು ಮಾಡಬೇಕಿತ್ತು, ಅಲ್ಲಿ ನಾವು ಸ್ವಲ್ಪ ಹಿಂದೆಬಿದ್ದಿದ್ದೇವೆ ಎಂದರು.`ಸದ್ಯದ ಸ್ಥಿತಿಯಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಯೇ ಮುಂಚೂಣಿಯಲ್ಲಿದ್ದಾರೆ. ಈ ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಉಂಟುಮಾಡುವುದಿಲ್ಲ. ಆದರೆ ಇಂಥ ಉಪಚುನಾವಣೆಗಳ ಮೂಲಕ ಸರ್ಕಾರಕ್ಕೆ ಒಂದು ಸಂದೇಶ ರವಾನೆಯಾಗುವುದು ಖಚಿತ ಎಂದು ರೆಹಮಾನ್ ಖಾನ್ ನುಡಿದರು.ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಕುರಿತು ತನಿಖೆಗೆ ಸದನ ಸಮಿತಿ ನಿರ್ಮಿಸುವ ಅಗತ್ಯವೇ ಇರಲಿಲ್ಲ ಎಂದು ಅಭಿಪ್ರಾಯಪಟ್ಟ ಅವರು, `ನಿಯಮಪ್ರಕಾರ ಅಧಿವೇಶನ ನಡೆಯುತ್ತಿದ್ದಾಗ ಸದನದೊಳಗೆ ದಿನಪತ್ರಿಕೆಯನ್ನೂ ಓದಬಾರದು. ಈ ಸಚಿವರು ಅಶ್ಲೀಲ ಚಿತ್ರ ವೀಕ್ಷಿಸಿದ್ದಾರೆ. ನೋಡಿರುವುದಾಗಿ ಅವರೇ ಒಪ್ಪಿಕೊಂಡಿರುವಾಗ ನೇರವಾಗಿ ಕ್ರಮ ಕೈಗೊಳ್ಳಬಹುದಾಗಿತ್ತು. ಸ್ಪೀಕರ್ ರಚಿಸಿರುವ ಸಮಿತಿಯೂ ಏಕಪಕ್ಷೀಯವಾಗಿದೆ.

 

ತಪ್ಪು-ಸರಿ ಎನ್ನುವುದಕ್ಕಿಂತ ಇದು ನೈತಿಕತೆಯ ಪ್ರಶ್ನೆ. ಆ ದೃಷ್ಟಿಯಲ್ಲೇ ಇಡೀ ಪ್ರಕರಣವನ್ನು ನೋಡಬೇಕು~ ಎಂದರು. ಕಾಂಗ್ರೆಸ್ ಜಿಲ್ಲಾಘಟಕದ ಅಧ್ಯಕ್ಷ ಬಿ.ಶಿವರಾಮು, ಮುಖಂಡರಾದ ಡಾ. ನಾಗರಾಜ್. ಮಹೇಶ್  ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.