ಭಾನುವಾರ, ಜೂನ್ 20, 2021
20 °C

ಚೈತನ್ಯರ ಆ ದಿನಗಳು

ನಿರೂಪಣೆ: ಡಿ.ಕೆ.ರಮೇಶ್ Updated:

ಅಕ್ಷರ ಗಾತ್ರ : | |

ಅಜ್ಜ ಜಿ.ಎಸ್.ಶಿವರುದ್ರಪ್ಪ. ಅಪ್ಪ ಕೆ. ಮರುಳಸಿದ್ದಪ್ಪ ಇಬ್ಬರೂ ಸಾಹಿತ್ಯದ ಲೋಕದಲ್ಲಿ ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡವರು. ದ.ರಾ.ಬೇಂದ್ರೆ, ಡಿ.ಆರ್.ನಾಗರಾಜ್, ಲಂಕೇಶ್, ಪ್ರಸನ್ನ ಮುಂತಾದವರನ್ನು ಬಹಳ ಹತ್ತಿರದಿಂದ ಕಂಡಿದ್ದೆ.ಅವರೆಲ್ಲಾ ದೊಡ್ಡ ಲೇಖಕರು, ರಂಗಕರ್ಮಿಗಳು ಎಂದು ತಿಳಿಯುವ ಮೊದಲೇ ನನ್ನ ಪ್ರೀತಿಯ ಮಾಮ, ಅಂಕಲ್‌ಗಳಾಗಿದ್ದರು! ಮನೆಯಲ್ಲಿ ಅಂಥ ವಾತಾವರಣವಿದ್ದರೂ ಆರಂಭದ ದಿನಗಳಲ್ಲಿ ನನಗೆ ಸಾಹಿತ್ಯದ ಗಂಧಗಾಳಿಯೂ ಇರಲಿಲ್ಲ.ಆರಂಭದಲ್ಲಿ ಕೆಟ್ಟ ಕೆಟ್ಟ ಕವನಗಳನ್ನು ಬರೆದದ್ದು ಇದೆ. ಎಲ್ಲಾ ಇಂಗ್ಲಿಷ್‌ನಲ್ಲೇ ಇರುತ್ತಿದ್ದವು. ಗಣಿತದಲ್ಲಿ ಎಲ್ಲಿಲ್ಲದ ಆಸಕ್ತಿ. ಆ ಕಾರಣಕ್ಕಾಗಿಯೇ ಪಿಯುಸಿಯಲ್ಲಿ ವಿಜ್ಞಾನ ಆಯ್ಕೆ ಮಾಡಿಕೊಂಡೆ. ಇಂಗ್ಲೆಂಡ್‌ನಲ್ಲಿದ್ದ ನಮ್ಮ ಮಾವ ಜಿ.ಎಸ್.ಶಿವಪ್ರಸಾದ್ ಅವರಿಗೆ ನನ್ನನ್ನು ವೈದ್ಯನನ್ನಾಗಿ ಮಾಡುವ ಆಸೆ.ಆದರೆ ಅವರಂದುಕೊಂಡಂತೆ ಆಗಲಿಲ್ಲ. ಮನಸ್ಸು ಪತ್ರಿಕೋದ್ಯಮದತ್ತ ಹರಿಯಿತು. ಶಾಲಾ ದಿನಗಳಲ್ಲಿ ಗೋಡೆ ಪತ್ರಿಕೆ ಮಾಡುತ್ತಿದ್ದೆ. ಕೈ ಬರಹದಲ್ಲೇ ಅದು `ಪ್ರಕಟ~ಗೊಳ್ಳುತ್ತಿತ್ತು. `ಚೈತನ್ಯ ಡೈಲಿ~ ಎಂದು ಸ್ನೇಹಿತರು ಅದಕ್ಕೆ ಹೆಸರಿಟ್ಟಿದ್ದರು.ನನ್ನ ತಂದೆ ಅನೇಕ ನಾಟಕಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಆಗ `ನಟರಂಗ~ ತುಂಬಾ ಕ್ರಿಯಾಶೀಲವಾಗಿತ್ತು. ಅಲ್ಲಿ ಗಿರೀಶ ಕಾರ್ನಾಡರ `ತಲೆದಂಡ~ ನಾಟಕದ ತಾಲೀಮು. `ಸುಮ್ಮನೆ ಕಾಲ ಕಳೆಯುವುದರ ಬದಲು ಅಲ್ಲಿಗೆ ಹೋಗಿ ಬಾ. ಆಡಿಷನ್‌ನಲ್ಲಿ ಆಯ್ಕೆಯಾದರೆ ನಾಟಕ ಮಾಡು~ ಎಂದು ಅಪ್ಪ ಸೂಚಿಸಿದರು. ಅಲ್ಲಿಗೆ ಹೋದೆ. ಮೂರು ಗಂಟೆ ಅವಧಿಯ ನಾಟಕ. ಒಂದು ಪಾತ್ರ ಕೊಟ್ಟರು.ಕೇವಲ ಒಂದೇ ಒಂದು ಸಾಲಿನ ಡೈಲಾಗು! ಕ್ರಮೇಣ ನಾಟಕದ ಹುಚ್ಚು ಬಲವಾಯಿತು. ಕೇವಲ ನಾಟಕ ಮಾತ್ರವಲ್ಲದೆ ಎಲ್ಲಾ ವಿಭಾಗಗಳಲ್ಲೂ ತೊಡಗಿಕೊಂಡೆ. ಜತೆಗೆ ಓದು ಕೂಡ ಸಾಗಿತ್ತು. ಪದವಿಗಾಗಿ ಕ್ರೈಸ್ಟ್ ಕಾಲೇಜಿನಲ್ಲಿ ಪ್ರವೇಶ ಪಡೆದೆ. ಇಂಗ್ಲಿಷ್, ಮನಃಶಾಸ್ತ್ರ, ಪತ್ರಿಕೋದ್ಯಮ ನನ್ನ ಆಯ್ಕೆಯ ವಿಷಯಗಳು. ಕ್ರೈಸ್ಟ್ ಕಾಲೇಜಿನಲ್ಲಿ ಕನ್ನಡ ಮಾತನಾಡುವವರು ಸಿಗುವುದೇ ಅಪರೂಪ. ಅಲ್ಲಿದ್ದರು ನಾಟಕಕಾರ, ಚಿ.ಶ್ರೀನಿವಾಸರಾಜು ಮೇಷ್ಟ್ರು. ಕನ್ನಡ ಹುಡುಗರ ಪಾಲಿಗೆ ಅವರು ಸರ್ವಸ್ವ.ಕೆ.ವೈ.ನಾರಾಯಣ ಸ್ವಾಮಿ ಅವರೂ ನನ್ನ ಗುರುಗಳು. ತುಂಬಾ ಯಂಗ್. ಒಂದು ದಿನ ಅವರ ಬಳಿ ಹೋಗಿ `ಲಂಕೇಶರ ತೆರೆಗಳು ನಾಟಕವನ್ನು ಆಡಿಸೋಣ ಅಂತಿದ್ದೀನಿ~ ಎಂದೆ. ಕ್ರೈಸ್ಟ್ ಕಾಲೇಜಿನಲ್ಲಿ ಕನ್ನಡಿಗರ ಸಂಖ್ಯೆ ಎಷ್ಟು ವಿರಳವಾಗಿತ್ತೋ ಅಷ್ಟೇ ವಿರಳವಾಗಿದ್ದವು ಅಲ್ಲಿನ ಪಾತ್ರಗಳು! ಕೇವಲ ನಾಲ್ಕು ಪಾತ್ರಗಳ ಸುತ್ತ ಹೆಣೆದ ಕತೆ ಅದು. ಆದರೆ ಕೆವೈಎನ್ ಒಪ್ಪಲಿಲ್ಲ. `ಇದೇ ಮೊದಲ ಬಾರಿಗೆ ಕಾಲೇಜು ಕನ್ನಡ ನಾಟಕ ಆಡುತ್ತಿದೆ. ಹಾಕುವುದಿದ್ದರೆ ದೊಡ್ಡದಕ್ಕೇ ಕೈ ಹಾಕು~ ಅನ್ನುತ್ತ ನನ್ನ ಆಸೆಗೆ ತಣ್ಣೀರೆರಚಿದರು.ಸರಿ ಪ್ರಸನ್ನ ಅವರು ಬರೆದ `ದಂಗೆಯ ಮುಂಚಿನ ದಿನಗಳು~ ನಾಟಕವನ್ನು ಆಯ್ದುಕೊಂಡೆ. ಬರೋಬ್ಬರಿ ಅರವತ್ತು ಪಾತ್ರಗಳು! ಎಲ್ಲಿಂದ ತರುವುದು ಅಷ್ಟು ಕನ್ನಡಿಗರನ್ನು? ಕಡೆಗೆ ಇಬ್ಬರೂ ಸೇರಿ ಕನ್ನಡ ಬಾರದವರ ಕೈಯಲ್ಲೂ ನಾಟಕ ಮಾಡಿಸಿದೆವು. ನಾಟಕ ಉಳ್ಳಾಲ ಶೀಲ್ಡ್ ಪ್ರಶಸ್ತಿ ಬಾಚಿಕೊಂಡಿತು. ಕಾಲೇಜಿನಲ್ಲಿ ಓದುತ್ತಿರುವಾಗಲೇ `ಸಂಕ್ರಾಂತಿ~ ನಾಟಕ ಆಡಿಸಿದೆ. ಅಲ್ಲಿನ ಬಸವಣ್ಣ ಬಿಜ್ಜಳರು ಮಲಯಾಳಿಗಳು!ಸ್ನಾತಕೋತ್ತರ ಪದವಿಗಾಗಿ ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಅರ್ಜಿ ಹಾಕಿದೆ. ಕಮ್ಯುನಿಕೇಷನ್ ನನ್ನ ವಿಷಯವಾಗಿತ್ತು.ಎನ್‌ಡಿಟಿವಿಯ ಪ್ರಣಯ್‌ರಾಯ್ ಅಂತಹ ಪ್ರಮುಖರೆಲ್ಲಾ ಸಂದರ್ಶನ ನಡೆಸುತ್ತಿದ್ದರು. ಅಂತೂ ಅಲ್ಲಿ ಪ್ರವೇಶ ಪಡೆದೆ. ಎರಡು ವರ್ಷಗಳ ನಂತರ ಮುಂಬೈಗೆ ಸೇರುವ ಮನಸ್ಸು ಮಾಡಿದೆ.ಅಲ್ಲಿನ ಚಾನೆಲ್ ಒಂದಕ್ಕೆ ಅರ್ಜಿ ಗುಜರಾಯಿಸಿ ಬೆಂಗಳೂರಿಗೆ ಬಂದೆ. ಕಾರ್ನಾಡರು ಮುಂಬೈನಲ್ಲಿದ್ದು ಬಂದವರು. ಮುಂಬೈ ಬಗ್ಗೆ ತಿಳಿಯಲು ಅವರ ಬಳಿಗೆ ಹೋದೆ. ಆದರೆ ನನ್ನ ಯಾತ್ರೆಗೆ ಅವರು ಒಪ್ಪಲಿಲ್ಲ. `ಕಾನೂರು ಹೆಗ್ಗಡತಿ~ ಕಾದಂಬರಿಯನ್ನು ಸಿನಿಮಾ ಮಾಡುತ್ತಿದ್ದೇನೆ. ನೀನು ಇಲ್ಲಿಯೇ ಇರಬೇಕಾಗುತ್ತದೆ~ ಎಂದರು.ಕುವೆಂಪು ಅವರ ಕಾದಂಬರಿಯ ಹೆಸರು ಕೇಳುತ್ತಿದ್ದಂತೆ ರೋಮಾಂಚನ. ಅವರ ನೇರ ಶಿಷ್ಯರಲ್ಲಿ ನನ್ನಜ್ಜ ಕೂಡ ಒಬ್ಬರು. ಕುವೆಂಪು ಎಂದರೆ ದೇವರ ಸಮಾನ ಎಂದೇ ಮನೆಯಲ್ಲಿ ಬಿಂಬಿತ. ಅಂತಹವರ ಕಾದಂಬರಿ ಸಿನಿಮಾ ಆಗುತ್ತಿದೆ. ಮನಸ್ಸಿಗೆ ಹೇಗಾಗಬೇಡ! ಗಿರೀಶರ  ಸಹಾಯಕನಾಗಿ ಕೆಲಸ ಮಾಡಿದೆ. ಜತೆಗೆ ಅವರ `ಸ್ವರಾಜ್ ನಾಮ~ ಸಾಕ್ಷ್ಯಚಿತ್ರಗಳ ಸರಣಿ, ಮನಶಾಸ್ತ್ರವನ್ನು ಕುರಿತ `ಅಂತರಾಳ~ದಲ್ಲಿಯೂ ಅವರೊಡನೆ ದುಡಿದೆ.ಇತ್ತ ನನ್ನ ಸಾಕ್ಷ್ಯಚಿತ್ರಗಳ ಪ್ರಯೋಗ ಮುಂದುವರಿದಿತ್ತು. ದೂರದರ್ಶನದ `ಸುರಭಿ~ಗಾಗಿ ಸರಣಿ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದೆ. ಅಷ್ಟರಲ್ಲಿ ಯುಟಿವಿಯಿಂದ ಕರೆಬಂತು. ಮಾಹಿತಿ ತಂತ್ರಜ್ಞಾನ ಕುರಿತು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿಕೊಟ್ಟೆ. ಅಂಥದ್ದೇ ಕಾರ್ಯಕ್ರಮ ಬಿಬಿಸಿಯ `ಬ್ಯಾಕ್ ಟು ದಿ ಫ್ಲೋರ್~. ಅದು ಭಾರತೀಯ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿಗೆ ಪಾತ್ರವಾಯಿತು.ಹೀಗಿರುವಾಗ ಒಮ್ಮೆ ಇಂಗ್ಲೆಂಡ್‌ಗೆ ತೆರಳಬೇಕಾಯಿತು. ಅಲ್ಲಿದ್ದ ಕಾರ್ನಾಡರು ತಮ್ಮ ಮನೆಯಲ್ಲೇ ಉಳಿದುಕೊಳ್ಳುವಂತೆ ಆಜ್ಞಾಪಿಸಿದರು. ಬ್ರಿಟನ್‌ನ ಆರೋಗ್ಯ ಇಲಾಖೆ ಕ್ಯಾನ್ಸರ್ ಕುರಿತು ಸಾಕ್ಷ್ಯಚಿತ್ರ ನಿರ್ಮಿಸುತ್ತಿತ್ತು. ಕಾರ್ನಾಡರ ಸೂಚನೆ ಮೇರೆಗೆ ನಾನೂ ಅರ್ಜಿ ಹಾಕಿದೆ. ದಕ್ಷಿಣ ಏಷ್ಯಾದ ಕ್ಯಾನ್ಸರ್ ಕುರಿತು ಕೂಡ ಚಿತ್ರಿಸಬೇಕಿತ್ತು.ಆ ಕಾರಣಕ್ಕೆ ಪ್ರವೇಶ ದೊರೆಯಿತು. ಅಲ್ಲಿ ಏಳೆಂಟು ತಿಂಗಳು ಉಳಿಯುವ ಅವಕಾಶ. ಹಲವು ಸಾವಿರ ಪೌಂಡ್‌ಗಳ ಸಂಬಳ ಬೇರೆ! ಅಷ್ಟೂ ಹಣವನ್ನು ಇಂಗ್ಲೆಂಡ್‌ನಲ್ಲೇ ಖರ್ಚು ಮಾಡಬೇಕೆಂದು ನಿರ್ಧರಿಸಿದೆ. ಆಗ ನೋಡಿದ ನಾಟಕ, ಸಂಗೀತ ಗೋಷ್ಠಿ, ಸಿನಿಮಾಗಳಿಗೆ ಲೆಕ್ಕವಿಲ್ಲ.ಅಲ್ಲಿಂದ ಮತ್ತೆ ಯುಕೆಟಿವಿಯತ್ತ ಮುಖ ಮಾಡಿದೆ. `ಬ್ಯುಸಿನೆಸ್ ಬಿಹ್ಜಾರ್~ಗಾಗಿ ಮುಂಬೈನ ಡಬ್ಬಾವಾಲಾಗಳು, ಸುಲಭ್ ಶೌಚಾಲಯದ ಕಾರ್ಯವೈಖರಿ, ಹಿಮಾಲಯ ಡ್ರಗ್ಸ್‌ನ ಆಯುರ್ವೇದ ಮಂತ್ರ ಮುಂತಾದ ಸೋಜಿಗದ ವಸ್ತುಗಳನ್ನಿಟ್ಟುಕೊಂಡು ಸಾಕ್ಷ್ಯಚಿತ್ರ ಮಾಡಿದೆ. ಅದಕ್ಕೆ ಉತ್ತಮ ಮನ್ನಣೆಯೂ ದೊರೆಯಿತು.ಹೀಗೆ ಮುಂಬೈ ದೆಹಲಿ ಎಂದು ಸುತ್ತಿಕೊಂಡಿದ್ದೆ. ಮಗು ಹುಟ್ಟಿದ ನಂತರ ಬೆಂಗಳೂರಿನಲ್ಲೇ ನೆಲೆಸಬೇಕೆಂದು ನನ್ನ ಹೆಂಡತಿ ರಾಧಿಕಾ ಒತ್ತಾಯಿಸಿದಳು.

ಆಗ ಕಾರ್ನಾಡರು ದೂರದರ್ಶನಕ್ಕಾಗಿ ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳನ್ನು ಕಿರುತೆರೆಗೆ ಅಳವಡಿಸುವ ತಯಾರಿಯಲ್ಲಿದ್ದರು. ಪೂರ್ಣಚಂದ್ರ ತೇಜಸ್ವಿಯವರ `ಚಿದಂಬರ ರಹಸ್ಯ~ ಮಾಡಲು ಒಪ್ಪಿದ ಅವರು ದೇವನೂರರ `ಕುಸುಮಬಾಲೆ~ ಹಾಗೂ ಶಾಂತಿನಾಥ ದೇಸಾಯಿ ಅವರ`ಓಂ ಣಮೋ~ವನ್ನು ನನಗೆ ವಹಿಸಿದರು. ಆಮೇಲೆ ಈಟಿವಿಗಾಗಿ `ಕಿಚ್ಚು~ ಧಾರಾವಾಹಿ ನಿರ್ದೇಶಿಸಿ ಸುಮ್ಮನಿದ್ದೆ.ಒಂದು ದಿನ ಅಗ್ನಿ ಶ್ರೀಧರ್ ಫೋನ್ ಮಾಡಿದರು. `ಒಂದು ಸಿನಿಮಾ ಮಾಡುತ್ತಿದ್ದೇವೆ. ಹೆಸರು `ಕಪ್ಪು ಮಳೆ~ ಅಂತ. ಅದು ಭೂಗತ ಜಗತ್ತನ್ನು ಕುರಿತಾದದ್ದು. ನೀನು ಆಯಿಲ್ ಕುಮಾರ್ ಪಾತ್ರ ನಿರ್ವಹಿಸಲು ಆಗುತ್ತದಾ?~ ಎಂದು ಕೇಳಿದರು. ನನಗೆ ಅಭಿನಯ ಗೊತ್ತಿಲ್ಲ ಎಂದೆ. ಆದರೂ ಅವರು ಕತೆ ಹೇಳಿದರು. ಇಬ್ಬರು ಭೂಗತ ನಾಯಕರ ನಡುವಣ ಸಂಘರ್ಷವನ್ನು ವಿವರಿಸಿದರು.ನಾನು ಪಾತ್ರಗಳಲ್ಲಿ ಕೊಂಚ ಬದಲಾವಣೆ ತರುವಂತೆ ಸಲಹೆ ನೀಡಿದೆ. ಇಬ್ಬರೂ ಭೂಗತ ನಾಯಕರು ಜನರಿಂದ ದೂರ ಉಳಿದವರು. ಅದರ ಬದಲು ವರದ ಎಂಬ ಹುಡುಗನ ಪ್ರೀತಿಯನ್ನೇ ಮುನ್ನೆಲೆಗೆ ತಂದು ಅದರೊಳಗೆ ಈ ಕತೆ ಸೇರಿಸುವಂತೆ ಸೂಚಿಸಿದೆ. ಒಂದು ವಾರ ಬಿಟ್ಟು ಮತ್ತೆ ಫೋನು. `ನಿರ್ದೇಶಕರನ್ನಾಗಿ ಯಾರನ್ನು ಆಯ್ಕೆ ಮಾಡಬಹುದು?~ ಎಂಬ ಪ್ರಶ್ನೆ ಅವರಿಂದ. ನಾಗಾಭರಣ, ಕಾಸರವಳ್ಳಿ ಹಾಗೂ ಕಾರ್ನಾಡರ ಹೆಸರನ್ನು ಸೂಚಿಸಿದೆ. `ಕಾರ್ನಾಡರನ್ನು ಭೇಟಿ ಮಾಡಿಸಲು ಸಾಧ್ಯವೇ? ಎಂದರು. ಏರ್ಪಾಟಾಯಿತು.ಗಿರೀಶರು ನಿರ್ದೇಶನದಿಂದ ದೂರ ಸರಿದಿರುವುದಾಗಿ ಸೂಚಿಸಿದರು. ಇಂಥ ಕತೆಗೆ ಒಬ್ಬ ಯುವ ನಿರ್ದೇಶಕ ಸೂಕ್ತ ಎಂದು ನನ್ನತ್ತ ಕೈ ತೋರಿಸಿದರು. ಹೀಗೆ ಚಿತ್ರ ನಿರ್ದೇಶನಕ್ಕೆ ಮುನ್ನುಡಿ ಸಿಕ್ಕಿತು. ಕಪ್ಪು ಮಳೆ ಹೆಸರನ್ನು ಬದಲಿಸಿ `ಆ ದಿನಗಳು~ ಎಂದಿಟ್ಟೆ; `ದಾದಾಗಿರಿಯ ದಿನಗಳು~ ಕೃತಿಯನ್ನು ನೆನಪಿಸುವ ಉದ್ದೇಶದಿಂದ.ಆಮೇಲೆ ಮಾಡಿದ್ದು `ಸೂರ್ಯಕಾಂತಿ~ ಚಿತ್ರ. ಮತ್ತೆ ಕಿರುತೆರೆಯತ್ತ ಪಯಣ. `ಮುಗಿಲು~ ಧಾರಾವಾಹಿ ನಿರ್ಮಿಸಿದೆ. ನಂತರ `ಒಂದಾನೊಂದು ಕಾಲದಲ್ಲಿ~ ಧಾರಾವಾಹಿಗೆ ಕೈ ಹಾಕಿದೆ. ಯುನೆಸ್ಕೊ ವಿಶ್ವ ಪಾರಂಪರಿಕ ಸ್ಥಳದಂತೆ ವಿಶ್ವಪಾರಂಪರಿಕ ಕಲೆಯನ್ನು ಗುರುತಿಸುವ ಯೋಜನೆ ಕೈಗೆತ್ತಿಕೊಂಡಿದೆ.ಅದರ ಅಂಗವಾಗಿ ಯಕ್ಷಗಾನ ಕುರಿತು ಸಾಕ್ಷ್ಯಚಿತ್ರ ತಯಾರಿಸುತ್ತಿದ್ದೇನೆ. ಕೇರಳದ ಕೂಡಿಯಾಟ್ಟಂ ಕುರಿತು ಪ್ರಸಿದ್ಧ ನಿರ್ದೇಶಕ ಅಡೂರು ಗೋಪಾಲ ಕೃಷ್ಣ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ಯುನೆಸ್ಕೊ ಯಕ್ಷಗಾನಕ್ಕೆ ಮನ್ನಣೆ ನೀಡಿದರೆ ಆ ಕಲೆಗಾಗಿ ಅಳಿಲು ಸೇವೆ ಸಲ್ಲಿಸಿದ ತೃಪ್ತಿ ನನ್ನದಾಗುತ್ತದೆ. ಮಾರ್ಚ್ ಅಂತ್ಯದ ವೇಳೆಗೆ ರಂಗಶಂಕರ `ದಿ ಗ್ರೇಟ್ ಗಲಾಟಾ~ ರಂಗ ಕಾರ್ಯಕ್ರಮ ಹಮ್ಮಿಕೊಂಡಿದೆ.ಹತ್ತು ನಾಟಕಗಳು, ಹತ್ತು ನಾಟಕಕಾರರು ಹಾಗೂ ಹತ್ತು ನಿರ್ದೇಶಕರು ನಡೆಸುವ ಪ್ರಯೋಗ ಅದು. ಆ ಪ್ರಯೋಗದಲ್ಲಿ ನಾನೂ ಭಾಗಿಯಾಗುತ್ತಿರುವುದು ಹೆಮ್ಮೆಯ ವಿಚಾರ. ಆಕಸ್ಮಿಕವಾಗಿ ಸಂಭವಿಸುವ ಅಪರಾಧ ವನ್ನು ಆಧರಿಸಿ ಸಿನಿಮಾ ಮಾಡಬೇಕು ಎಂದು ಕೊಂಡಿದ್ದೇನೆ. ಶೀಘ್ರದಲ್ಲಿಯೇ ಅದು ಅಂತಿಮ ಸ್ವರೂಪ ಪಡೆದುಕೊಳ್ಳಲಿದೆ. ಹಿಂದಿ ಚಿತ್ರರಂಗ ದಿಂದಲೂ ನಿರ್ದೇಶನಕ್ಕೆ ಆಹ್ವಾನ ಬಂದಿದೆ.ಮಾರ್ಕ್ವೆಜ್ ಮತ್ತು ತೇಜಸ್ವಿ ನನ್ನ ನೆಚ್ಚಿನ ಲೇಖಕರು. ಫ್ರಾನ್ಸಿಸ್ ಫೋರ್ಡ್ ಕಪೋಲ ಹಾಗೂ ರಾಮಗೋಪಾಲ ವರ್ಮ ನಾನು ಇಷ್ಟಪಡುವ ಸಿನಿಮಾ ಮಂದಿ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.