ಬುಧವಾರ, ಏಪ್ರಿಲ್ 14, 2021
26 °C

ಚೊಚ್ಚಲ ಪಂದ್ಯದಲ್ಲಿಯೇ ಮಿಂಚಿದ ಶರತ್

ಪ್ರಜಾವಾಣಿ ವಾರ್ತೆ/ಪ್ರಮೋದ್ ಜಿ.ಕೆ. Updated:

ಅಕ್ಷರ ಗಾತ್ರ : | |

ಮೀರತ್: `ಅನುಭವಿ ವೇಗದ ಬೌಲರ್‌ಗಳ ಅನುಪಸ್ಥಿತಿಯಿದ್ದರೂ, ಹೊಸ ಬೌಲರ್‌ಗಳು ಅವರ ಸ್ಥಾನ ತುಂಬಲಿದ್ದಾರೆ~ ಎಂದು ಕರ್ನಾಟಕದ ಬ್ಯಾಟಿಂಗ್ ತರಬೇತುದಾರ ಜೆ. ಅರುಣ್ ಕುಮಾರ್ ಶುಕ್ರವಾರ ಹೇಳಿದ್ದರು. ಅವರ ಮಾತು ಸುಳ್ಳಾಗಲಿಲ್ಲ. ಚೊಚ್ಚಲ ರಣಜಿ ಆಡಿದ ಮಂಡ್ಯ ಜಿಲ್ಲೆಯ ಎಚ್.ಎಸ್. ಶರತ್ ಅವರು ಅರುಣ್ ನಿರೀಕ್ಷೆಯನ್ನು ನಿಜ ಮಾಡಿಬಿಟ್ಟರು.ವಿಕ್ಟೋರಿಯ ಪಾರ್ಕ್ ಕ್ರೀಡಾಂಗಣದಲ್ಲಿ ಆರಂಭವಾದ ರಣಜಿ ಟ್ರೋಫಿಯ ಕ್ರಿಕೆಟ್ ಪಂದ್ಯದಲ್ಲಿ ಶನಿವಾರ ಕರ್ನಾಟಕದ ಬೌಲರ್‌ಗಳು ಮೇಲುಗೈ ಸಾಧಿಸಿದರು. ಪಿಚ್‌ನ ಮರ್ಮ ಅರಿತ ನಾಯಕ ಸ್ಟುವರ್ಟ್ ಬಿನ್ನಿ ಟಾಸ್ ಗೆದ್ದರೂ ಕ್ಷೇತ್ರರಕ್ಷಣೆ ಆಯ್ದುಕೊಂಡರು. ಮೇಲಿಂದ ಮೇಲೆ ಸಂಕಷ್ಟ ಅನುಭವಿಸಿದರೂ ಆತಿಥೇಯರು ಮಹಮ್ಮದ್ ಕೈಫ್ ಶತಕದ ಬಲದಿಂದ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರಾದರು. ಈ ತಂಡ ಮೊದಲ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 273 ರನ್ ಕಲೆ ಹಾಕಿದೆ. ಮಿಂಚಿದ ಶರತ್: ಸಿಕ್ಕ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ತೋರಿಸಿಕೊಟ್ಟ 18 ವರ್ಷದ ಶರತ್ ತಾವಾಡಿದ ಮೊದಲ ರಣಜಿ ಪಂದ್ಯದಲ್ಲಿಯೇ ಐದು ವಿಕೆಟ್ ಕಬಳಿಸಿದರು. ಕರ್ನಾಟಕ ತಂಡದವರು ಭೋಜನ ವಿರಾಮದ ವೇಳೆಗೆ 33 ಓವರ್‌ಗಳಲ್ಲಿ ನಾಲ್ಕು ಮಂದಿ ಪ್ರಮುಖ ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ಇದರಲ್ಲಿ ಶರತ್ ಪಡೆದದ್ದು ಮೂರು ವಿಕೆಟ್.ಉತ್ತರಪ್ರದೇಶ ತಂಡದ ನಾಯಕ ಸುರೇಶ್ ರೈನಾ (14), ಅಲಿ ಮುರ್ತೂಜಾ (4) ಹಾಗೂ ಪರ್ವಿಂದರ್ ಸಿಂಗ್ (0) ಅವರ ವಿಕೆಟ್ ಪಡೆದು ಶರತ್ ಖುಷಿಯಿಂದಲೇ ಭೋಜನಕ್ಕೆ ತೆರಳಿದರು. ಎಡಗೈ ಬ್ಯಾಟ್ಸ್‌ಮನ್ ಮುರ್ತುಜಾ ಅವರ `ಮಿಡ್‌ವಿಕೆಟ್~ ಅನ್ನು ತಮ್ಮ ಎರಡನೇ ಓವರ್‌ನಲ್ಲಿ ಎಗರಿಸಿದ ಶರತ್ ರಣಜಿಯಲ್ಲಿ ಚೊಚ್ಚಲ ವಿಕೆಟ್ ಪಡೆದರು. ನಂತರ ಈ `ವೇಗ~ದ ದಾಳಿಗೆ ಬಲಿಯಾಗಿದ್ದು ರೈನಾ. ರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವ ಹೊಂದಿರುವ ರೈನಾ ಅವರ `ಆಟ~ ಕರ್ನಾಟಕದ ಹುಡುಗನ ಮುಂದೆ ನಡೆಯಲಿಲ್ಲ.ಗಾಯಗೊಂಡಿರುವ ವೇಗಿ ಅಭಿಮನ್ಯು ಮಿಥುನ್ ಬದಲು ಸ್ಥಾನ ಗಳಿಸಿರುವ ಶರತ್ ಮೊದಲ ಸ್ಪೆಲ್‌ನಲ್ಲಿ ಒಂಬತ್ತು ಔವರ್ ಬೌಲಿಂಗ್ ಮಾಡಿ ಮೂರು ವಿಕೆಟ್ ಪಡೆದು ಕೇವಲ 21 ರನ್ ನೀಡಿದರು. ಮಧ್ಯಾಹ್ನದ ವಿರಾಮದ ನಂತರ ಮತ್ತೆ ದಾಳಿಗಿಳಿದ ಈ ಬಲಗೈ ವೇಗಿ ಪರ್ವಿಂದರ್ ಸಿಂಗ್ ಮತ್ತು ಆರೀಷ್ ಅಲಮ್ (27, 70 ಎಸೆತ, 4 ಬೌಂಡರಿ) ಅವರನ್ನು ಬಲಿ ಪಡೆದರು.ಆರ್. ವಿನಯ್ ಕುಮಾರ್ ಬದಲು ಸ್ಥಾನ ಗಿಟ್ಟಿಸಿರುವ ಬೆಳಗಾವಿಯ ರೋನಿತ್ ಮೋರೆ (38ಕ್ಕೆ1) ಮತ್ತು ಮಧ್ಯಮ ವೇಗಿ ಬಿನ್ನಿ (53ಕ್ಕೆ1) ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸುವಲ್ಲಿ ಯಶ ಕಂಡರು. ಎಡಗೈ ಸ್ಪಿನ್ನರ್ ಕೊಡಗಿನ ಕೆ.ಪಿ. ಅಪ್ಪಣ್ಣ ಕೂಡಾ ಪಿಯೂಷ್ ಚಾವ್ಲಾ (23, 40 ಎಸೆತ, 4 ಬೌಂಡರಿ) ಹಾಗೂ ಅಮೀರ್ ಖಾನ್ (10) ವಿಕೆಟ್ ಪಡೆದು ಎದುರಾಳಿ ತಂಡದ ರನ್ ಗಳಿಕೆಗೆ ತಡೆಯೊಡ್ಡಿದರು.ಕೈಫ್ ಶತಕ: ಆರಂಭಿಕ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಸಂಕಷ್ಟಕ್ಕೆ ಒಳಗಾದ ಆತಿಥೇಯ ತಂಡಕ್ಕೆ ತಂಡದ ಹಿರಿಯ ಆಟಗಾರ ಮಹಮ್ಮದ್ ಕೈಫ್ ಶತಕ ಗಳಿಸಿ ಆಸರೆಯಾದರು. ಮೊದಲ 59 ಓವರ್‌ಗಳಲ್ಲಿ ಉತ್ತರಪ್ರದೇಶಕ್ಕೆ ಚೇತರಿಸಿಕೊಳ್ಳಲು ಆಗಲಿಲ್ಲ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಕೈಫ್ ನಿಧಾನವಾಗಿ ತಂಡಕ್ಕೆ ಚೇತರಿಕೆ ನೀಡಿದರು. ಆದರೆ, ಇನ್ನೊಂದು ಬದಿಯಿದ್ದ ಬ್ಯಾಟ್ಸ್‌ಮನ್‌ಗಳು ಮೇಲಿಂದ ಮೇಲೆ ವಿಕೆಟ್ ಒಪ್ಪಿಸುತ್ತಿದ್ದರು. ಆದರೆ, ಬಲಗೈ ಬ್ಯಾಟ್ಸ್‌ಮನ್ ಕೈಫ್ ಜೊತೆಗೂಡಿದ ಭುವನೇಶ್ವರ್ ಕುಮಾರ್ (36, 73 ಎಸೆತ, 5 ಬೌಂಡರಿ) ಎಂಟನೇ ವಿಕೆಟ್  ಜೊತೆಯಾಟದಲ್ಲಿ 83 ರನ್ ಗಳಿಸಿದರು. ಇದರಿಂದ ಆತಿಥೇಯರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಇದಕ್ಕೂ ಮುನ್ನ ಆರನೇ ವಿಕೆಟ್‌ಗೆ ಚಾವ್ಲಾ ಮತ್ತು ಕೈಫ್ 61 ರನ್ ಗಳಿಸಿದ್ದರು.ಆರು ಹಾಗೂ ಎಂಟನೇ ವಿಕೆಟ್ ಜೊತೆಯಾಟದಲ್ಲಿ ಕಲೆ ಹಾಕಿದ ರನ್‌ಗಳು ಉತ್ತರಪ್ರದೇಶ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದವು. ಪ್ರಮುಖ ಬ್ಯಾಟ್ಸ್ ಮನ್‌ಗಳಿಲ್ಲದೇ ಉತ್ತರ ಪ್ರದೇಶ ಪರದಾಡುತ್ತಿದ್ದಾಗ ಕೈಫ್ 367 ನಿಮಿಷ ಕ್ರೀಸ್‌ಗೆ ತಾಳ್ಮೆಯಿಂದ ಅಂಟಿಕೊಂಡು ನಿಂತರು. ಪಶ್ಚಿಮದ ಅಂಚಿನತ್ತ ಸೂರ್ಯ ಮುಖ ಮಾಡುತ್ತಿದ್ದರೂ, ಕೈಫ್ ಮಾತ್ರ ಕ್ರೀಸ್ ಬಿಟ್ಟು ಕದಲಲಿಲ್ಲ. ಇದರ ಪರಿಣಾಮವಾಗಿಯೇ 247 ಎಸೆತಗಳಲ್ಲಿ 122 ರನ್‌ಗಳು ಅವರ ಬ್ಯಾಟಿನಿಂದ ಹರಿದು ಬಂದವು. ಇದರಲ್ಲಿ 11 ಬೌಂಡರಿ ಮತ್ತು ಒಂದು ಅಮೋಘ ಸಿಕ್ಸರ್ ಸಹ ಸೇರಿದೆ. ಆದರೆ, ಶರತ್ ಮೊದಲ ಪಂದ್ಯದಲ್ಲಿಯೇ ಹರಿಸಿದ `ಮಿಂಚಿ~ನ ಮುಂದೆ ಕೈಫ್ ಶತಕ ಮಂಕಾಗಿ ಹೋಯಿತು.

ಹೊಸಬರಿಗೆ ಅವಕಾಶ:

ಕರ್ನಾಟಕ ತಂಡ ಮೂವರು ಬೌಲರ್‌ಗಳಿಗೆ ಈ ಪಂದ್ಯದಲ್ಲಿ ಅವಕಾಶ ನೀಡಿ ಪ್ರಯೋಗಕ್ಕೆ ಮುಂದಾಯಿತು. ಶರತ್, ರೋನಿತ್ ಮತ್ತು ಆಫ್ ಸ್ಪಿನ್ನರ್ ಕೆ. ಗೌತಮ್ ಚೊಚ್ಚಲ ರಣಜಿ ಪಂದ್ಯಕ್ಕೆ ಹಸಿರಿನಿಂದ ಕಂಗೊಳಿಸುತ್ತಿರುವ ವಿಕ್ಟೋರಿಯ ಕ್ರೀಡಾಂಗಣ ಸಾಕ್ಷಿಯಾಯಿತು. ಸುನಿಲ್ ರಾಜು ಬದಲು ಗೌತಮ್ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.ಸ್ಕೋರ್ ವಿವರ

ಉತ್ತರಪ್ರದೇಶ 90 ಓವರ್‌ಗಳಲ್ಲಿ 9 ವಿಕೆಟ್‌ಗೆ 273ಅಲಿ ಮುರ್ತುಜಾ ಬಿ ಎಚ್.ಎಸ್. ಶರತ್  04ಮುಕುಲ್ ದಾಗರ್ ಬಿ ಮತ್ತು ಸಿ ಸ್ಟುವರ್ಟ್ ಬಿನ್ನಿ  10ಮೊಹಮ್ಮದ್ ಕೈಫ್ ಬ್ಯಾಟಿಂಗ್  122ಸುರೇಶ್ ರೈನಾ ಬಿ ಎಚ್.ಎಸ್. ಶರತ್  14ಪರ್ವಿಂದರ್ ಸಿಂಗ್ ಸಿ ಕೆ.ಬಿ. ವಪನ್ ಬಿ ಎಚ್.ಎಸ್. ಶರತ್  00ಆರೀಷ್ ಅಲಮ್ ಸಿ ಕೆ.ಎಲ್. ರಾಹುಲ್ ಬಿ ಎಚ್.ಎಸ್. ಶರತ್  27ಪಿಯೂಷ್ ಚಾವ್ಲಾ ಸಿ. ಮನೀಷ್ ಪಾಂಡೆ ಬಿ ಕೆ.ಪಿ. ಅಪ್ಪಣ್ಣ  23ಅಮೀರ್ ಖಾನ್ ಸಿ. ಸಿ.ಎಂ. ಗೌತಮ್ ಬಿ ಕೆ. ಅಪ್ಪಣ್ಣ 10ಭುವನೇಶ್ವರ್ ಕುಮಾರ್ ಸಿ. ಮನೀಷ್ ಪಾಂಡೆ ಬಿ ಎಚ್.ಎಸ್. ಶರತ್  36ಇಮ್ತಿಯಾಜ್ ಅಹಮದ್ ಸಿ ಸ್ಟುವರ್ಟ್ ಬಿನ್ನಿ ಬಿ ರೋನಿತ್ ಮೋರೆ  10ಅಂಕಿತ್‌ಸಿಂಗ್ ರಜಪೂತ್ ಬ್ಯಾಟಿಂಗ್  00ಇತರೆ: (ಬೈ-10, ಲೆಗ್ ಬೈ-5, ನೋ ಬಾಲ್-1, ವೈಡ್-1)  17ವಿಕೆಟ್ ಪತನ: 1-7 (ಮುರ್ತುಜಾ; 3.1), 2-17 (ಮುಕುಲ್; 10.1), 3-40 (ರೈನಾ; 13.6), 4-40(ಪರ್ಮಿಂದರ್; 15.5), 5-105 (ಆರೀಷ್; 35.5), 6-140 (ಚಾವ್ಲಾ; 50.5), 7-162 (ಅಮೀರ್; 58.5), 8-245 (ಭುವನೇಶ್ವರ್; 81.4), 9-267 (ಇಮ್ತಿಯಾಜ್;88.4).ಬೌಲಿಂಗ್: ರೋನಿತ್ ಮೋರೆ 14-5-38-1, ಎಚ್.ಎಸ್.ಶರತ್ 24-7-60-5, ಸ್ಟುವರ್ಟ್ ಬಿನ್ನಿ 16-2-53-1, ಕೆ. ಗೌತಮ್ 10-2-29-0, ಕೆ.ಪಿ. ಅಪ್ಪಣ್ಣ 21-1-56-2, ಅಮಿತ್ ವರ್ಮಾ 3-0-11-0, ಕೆ.ಬಿ. ಪವನ್ 2-0-11-0.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.