ಗುರುವಾರ , ಮೇ 13, 2021
40 °C

ಚೌತಿ ಗಣೇಶನ ವಿಶ್ವರೂಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ನಗರದ  ಪ್ರಮುಖ ಬೀದಿ ಹಾಗೂ ವಿವಿಧ ಬಡಾವಣೆ ಸೇರಿದಂತೆ ರಾಯಚೂರಿನಲ್ಲಿ ಅನೇಕ ವಿಧವಾದ ಕಲಾಕೃತಿಗಳನ್ನು ಬಿಂಬಿಸುವಂತ ಗಣೇಶನ ಮೂರ್ತಿಗಳು ಬುಧವಾರ  ಸ್ಥಾಪನೆಗೊಂಡವು.

ವೀರಭದ್ರೇಶ್ವರ ದೇವಸ್ಥಾನದ ಹತ್ತಿರ  ಸ್ಥಾಪನೆಗೊಂಡಿರುವ 18 ಅಡಿ ವೆಂಕಟೇಶ್ವರ ದೇವರನ್ನು ಬಿಂಬಿಸುವ ಗಣೇಶ ಮೂರ್ತಿ  ಸ್ಥಾಪನೆ ಮಾಡಲಾಯಿತು.ಅನೇಕ ಯುವಕ ಸಂಘಗಳು ನಗರದ ಬಡಾವಣೆ ಹಾಗೂ ಮುಖ್ಯ ಬೀದಿಗಳ ಸೇರಿದಂತೆ ಒಟ್ಟು 450ಕ್ಕೂ ಹೆಚ್ಚು ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.ಗಣೇಶನ ಪ್ರತಿಷ್ಠಾಪನೆಯ ದಿನದಿಂದ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಲಾಗುವುದು. ಒಂಬತ್ತನೇ ದಿನದಂದು ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ.ಈ ಅವಧಿಯಲ್ಲಿ ವಿಶೇಷವಾಗಿ ಸಂಗೀತ, ಹಾಸ್ಯ, ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳ ಗಜಾನನ ಸಮಿತಿಗಳು ಆಯೋಜಿಸಿವೆ. ಕಳೆದ 10 ದಿನಗಳಿಂದಲೂ ಗಣೇಶ ಪ್ರತಿಷ್ಠಾನೆಗೆ ಸಮಿತಿಗಳು ಸಿದ್ಧತೆ ಮಾಡಿಕೊಂಡಿವೆ. ಗಣೇಶನ ದರ್ಶನಕ್ಕೆ ಬರುವ ಭಕ್ತಾಧಿಗಳಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತು.ನೇತಾಜಿ ವೃತ್ತ, ತೀನ್ ಕಂದೀಲ್, ಸುಪರ್ ಮಾರ್ಕೇಟ್ ವೃತ್ತ, ಸ್ಟೇಷನ್ ರಸ್ತೆ ಸೇರಿದಂತೆ ನಗರದ ಅನೇಕ ಪ್ರಮುಖ ವೃತ್ತಗಳಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಲಾಗಿದೆ. ದೇಶ ಭಕ್ತ ಬಿಂಬಿಸುವಂತ ಅಣ್ಣಾ ಹಜಾರೆ ಗಣೇಶ, ವೆಂಕಟೇಶ್ವರ ದೇವರನ್ನು ಬಿಂಬಿಸುವ ಗಣೇಶ ಬಿಂಬಿಸುವ ಹಾಗೂ ಮೂರು ಮುಖದ ಗಣೇಶ ಹೀಗೆ ಹಲವು ವಿಧಗಳ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಜಿಲ್ಲಾಡಳಿ ಹಾಗೂ ಪೊಲೀಸ್ ಇಲಾಖೆಯ ಶಾಂತಿ ವ್ಯವಸ್ಥೆ ಹಿನ್ನೆಲೆಯಲ್ಲಿ ಬಂದೋಬಸ್ತ್ ಮಾಡಿದೆ.ಲೋಹರವಾಡಿ ಪ್ರದೇಶದಲ್ಲಿ ಗಜಾನನ ಯುವಕ ಮಂಡಳಿಯಿಂದ ಸ್ಥಾಪನೆ ಮಾಡಿರುವ ಗಾಂಧಿವಾದಿ ಅಣ್ಣಾ ಹಜಾರೆ ಅವರನ್ನು ಬಿಂಬಿಸುವ ಗಣೇಶ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿದೆ.ಜನಲೋಕಪಾಲ್ ವಸೂದೆ ಜಾರಿಗಾಗಿ ಅಣ್ಣಾ ಹಜಾರೆ ಅವರು ನಡೆಸಿದ ಉಪವಾಸ ಸತ್ಯಾಗ್ರಹದಿಂದ ದೇಶಾದ್ಯಂತ ಜನರಿಗೆ ದೇಶ ಪ್ರೇಮ ಬರುವಂತೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ  ಅಣ್ಣಾ ಹಜಾರೆ ಅವರ ಬಿಂಬಿಸುವಂತ ಗಣೇಶನನ್ನು ಸ್ಥಾಪನೆ ಮಾಡುವ ಉದ್ದೇಶದಿಂದ ಈ ಗಣೇಶನ ಮೂರ್ತಿ ಸ್ಥಾಪನೆ ಮಾಡಲಾಗಿದೆ ಎಂದು ಮಹಿಪಾಲ ಕೋಠಾರಿ ಅವರು `ಪ್ರಜಾವಾಣಿ~ಗೆ ತಿಳಿಸಿದರು. 

ಮಳೆಯಲ್ಲೂ ಸಂಭ್ರಮಕವಿತಾಳ: ಪಟ್ಟಣದ ವಿವಿಧೆಡೆ ಗಣೇಶ ಮೂರ್ತಿಗಳನ್ನು ಗುರುವಾರ ಬೆಳಿಗ್ಗೆ ಪ್ರತಿಷ್ಠಾಪಿಸಲಾಗಿದ್ದು, ಗಣೇಶ ಚತುರ್ಥಿಯನ್ನು  ಸಂಭ್ರಮದಿಂದ ಆಚರಿಸಲಾಗುತ್ತಿದೆ.ಇಲ್ಲಿನ ಸುಭಾಷ್ ಚಂದ್ರ ಭೋಸ್ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ ದೊಡ್ಡ ಗಾತ್ರದಲ್ಲಿದ್ದು ಆಕರ್ಷಕವಾಗಿವೆ.  ಬಾಲಕರ ವಸತಿ ನಿಲಯ, ವೈಶ್ಯ ಸಮಾಜದ ವತಿಯಿಂದ ವಾಸವಿ ದೇವಸ್ಥಾನದಲ್ಲಿ, ಸಮುದಾಯ ಆಸ್ಪತ್ರೆ, ಶಿವಪ್ಪನಮಠ, ಉಪ್ಪಾರ ಓಣಿಯ ಮಾರುತಿ ದೇವಸ್ಥಾನ, ಬೀದಿ ಕಟ್ಟೇರಾಯ, ರಜಪೂತ ಸಮಾಜದ ವತಿಯಿಂದ ಮತ್ತು ದ್ಯಾವಮ್ಮನ ಗುಡಿ ಹತ್ತಿರ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ.

 

ಜಲ ಸಂಪನ್ಮೂಲ ಇಲಾಖೆಯ ಗಣೇಶನ ದೇವಸ್ಥಾನ, ಮಂಜು ಪಟ್ರೋಲ್ ಪಂಪ್ ಸೇರಿದಂತೆ ವಿವಿಧೆಡೆ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳು ಆಕರ್ಷಕವಾಗಿವೆ. ಮಧ್ಯಾಹ್ನದಿಂದ ಮಳೆ ಸುರಿಯುತ್ತಿದ್ದರೂ ಎಲ್ಲೆಡೆ ಯುವಕರು ಗಣೇಶ ಪ್ರತಿಷ್ಠಾಪಿಸಿದಲ್ಲಿ ನಿರಂತರ ಪೂಜೆ ಸಲ್ಲಿಸುವ ಮೂಲಕ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಿದ್ದಾರೆ. ಕೆಲೆವೆಡೆ ಸ್ಪರ್ಧೆಗಳನ್ನು ಏರ್ಪಡಿಸಿದ್ದು ಮಕ್ಕಳು ಭಾಗವಹಿಸುತ್ತಿದ್ದಾರೆ. ಅಂತೂ ಮಳೆಯನ್ನು ಲೆಕ್ಕಿಸಿದೆ ಯುವಕರು ಗಣೇಶನನ್ನು ಸಂಭ್ರಮದಿಂದ ಬರಮಾಡಿಕೊಂಡು ಹಬ್ಬಕ್ಕೆ ಮೆರಗು ನೀಡಿದ್ದಾರೆ.ವೈಶಿಷ್ಟಗಳ ಮಧ್ಯೆ ಗಣೇಶ ಹಬ್ಬ

ದೇವದುರ್ಗ: 
ಈ ಬಾರಿ ಪಟ್ಟಣದಲ್ಲಿ ವಿಭಿನ್ನ ರೀತಿಯ  ವೈಶಿಷ್ಟಪೂರ್ಣವಾದ ಗಣೇಶ ಮೂರ್ತಿಯನ್ನು ವಿವಿಧ ಸಂಘ, ಸಂಸ್ಥೆ, ಶಾಲಾ, ಕಾಲೇಜು ಸೇರಿದಂತೆ ಯುವಕ ಮಂಡಳಿ ವತಿಯಿಂದ ಗುರುವಾರ ಮುಂಜಾನೆ   ಪ್ರತಿಷ್ಠಾಪಿಸಲಾಯಿತು.ಕಳೆದ ಬಾರಿಗಿಂತ ಹೆಚ್ಚುಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಬಹುತೇಕ ಕಡೆ ದುಬಾರಿ ಗಣೇಶನನ್ನು ಕಾಣಬಹುದಾಗಿದ್ದು, ವಿಭಿನ್ನ ರೀತಿಯ ಗಣೇಶ ಮೂರ್ತಿಗಳನ್ನು ದೂರದ ರಾಯಚೂರು, ಸುರಪುರ ಮತ್ತು ಶಹಪುರ ಪಟ್ಟಣಗಳಿಂದ ಬುಧವಾರ ಸಂಜೆ ತೆಗೆದುಕೊಂಡು ಬರಲಾಗಿದೆ. ಗುರುವಾರ ಬೆಳಿಗ್ಗೆ ಸಂಘ, ಸಂಸ್ಥೆ, ಶಾಲಾ, ಕಾಲೇಜು ಮತ್ತು ಯುವಕ ಮಂಡಳಿಗಳು ಮೆರವಣಿಗೆಯ ಮೂಲಕ ತೆಗೆದುಕೊಂಡು ಬಂದು ವಿಶೇಷ ಪೂಜೆ ಜೊತೆ ಪ್ರತಿಷ್ಠಾಪಿಸಲಾಯಿತು.ಪಟ್ಟಣದ ಗೌರಂಪೇಟೆಯ ಯುವಕ ಮಂಡಳಿ, ಬೂದಿ ಬಸವೇಶ್ವರ ಗಜಾನನ ಮಿತ್ರ ಮಂಡಳಿ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳು  ಆಕರ್ಷಣೆಯಾಗಿವೆ. ಪಟ್ಟಣದ ಬಸ್ ನಿಲ್ದಾಣ ರಸ್ತೆಯಲ್ಲಿ ಬರುವ ವೆಂಕೋಬಯ್ಯ ಶೆಟ್ಟಿ ಜಿನ್ನಿಂಗ್ ಪ್ಯಾಕ್ಟ್‌ರಿ ಮುಂದೆ ಸಾರ್ವಜನಿಕವಾಗಿ ಇದೇ ಮೊದಲ ಬಾರಿಗೆ ಬೂದಿ ಬಸವೇಶ್ವರ ಗಜಾನನ ಮಿತ್ರ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯು ವಿಭಿನ್ನವಾಗಿದ್ದು.ಗುರುವಾರ ಸಾವಿರಾರು ಜನರು ದರ್ಶನ ಪಡೆದರು. ಮಂಡಳಿಯ ಅಧ್ಯಕ್ಷ ಶರಣಗೌಡ ಕುರ್ಕಿಹಳ್ಳಿ, ಪದಾಧಿಕಾರಿಗಳಾದ ಪರ್ವತರಡ್ಡಿ ಶಾವಂತಗೇರಾ, ಶಿವುಕುಮಾರ ಕೊಪ್ಪರ, ಪುರುಷೋತ್ತಮ ಸ್ವಾಮಿ, ಬಸವ ಕುರ್ಕಿಹಳ್ಳಿ, ಸುದರ್ಶನ, ನಾಗರಾಜ ಪಾಟೀಲ  ಸಾರ್ವಜನಿಕರ ದರ್ಶನಕ್ಕಾಗಿ ಸೂಕ್ತ ವ್ಯವಸ್ಥೆ ಕೈಗೊಂಡಿದ್ದರು. ಗಣ್ಯರು ಮತ್ತು ಮಹಿಳೆಯರು ಆಗಮಿಸಿ ದರ್ಶನ ಪಡೆದರು.

ಮಕ್ಕಳಿಂದ ವಿಶಿಷ್ಟ ಆಚರಣೆಸಿಂಧನೂರು: ನಗರದ ಸಹನಾ ಎಬಿಸಿ ಮಾಂಟೆಸ್ಸರಿ ಶಾಲೆಯಲ್ಲಿ ಮಂಗಳವಾರ ಗೌರಿ-ಗಣೇಶ ಹಾಗೂ ರಂಜಾನ್ ಹಬ್ಬವನ್ನು ಚಿಕ್ಕಮಕ್ಕಳು ವಿಶಿಷ್ಟವಾಗಿದೆ ಆಚರಿಸಿದರು.ಹಿಂದೂ ಮತ್ತು ಮುಸ್ಲಿಂ ಬಾಂಧವರ ವೇಷಭೂಷಣ ಧರಿಸಿದ ಮುದ್ದುಮಕ್ಕಳು ಪರಸ್ಪರ ಅಪ್ಪಿಕೊಂಡು ಹಿಂದೂ-ಮುಸ್ಲಿಂ ಒಂದೇ ಎಂದು ಸಾರಿದರು. `ಈಶ್ವರ-ಅಲ್ಹಾ ಏಕ್‌ಹೈ ಸಬ್‌ಕೋ~ ಎನ್ನುವ ಸಂದೇಶ ರವಾನಿಸಿದರು. ಸಹನಾ ಆಸ್ಪತ್ರೆ ಮಕ್ಕಳ ತಜ್ಞ ಡಾ.ಕೆ.ಶಿವರಾಜ ಈ ವಿನೂತನ ಕಾರ್ಯಕ್ರಮಕ್ಕೆ ಪ್ರೇರಣೆ ನೀಡಿದರು.ಗಲ್ಲಿ ಗಲ್ಲಿಗಳಲ್ಲಿ ಗಣೇಶ ಸಂಭ್ರಮ

ಲಿಂಗಸುಗೂರ
: ತಾಲ್ಲೂಕಿನ ಮಸ್ಕಿ, ಮುದಗಲ್ಲ, ಹಟ್ಟಿ, ಲಿಂಗಸುಗೂರ ಪಟ್ಟಣ ಪ್ರದೇಶಗಳು ಸೇರಿದಂತೆ ಗ್ರಾಮೀಣ ಪ್ರದೇಶಗಳ ಗಲ್ಲಿ ಗಲ್ಲಿಗಳಲ್ಲಿ ಗಣೇಶಮೂರ್ತಿಗಳ ಪ್ರತಿಷ್ಠಾಪನೆ, ಧ್ವನಿವರ್ಧಕಗಳ ಅರ್ಭಟ, ಪಟಾಕಿಗಳ ಸಪ್ಪಳ, ಭಾಜಾ ಭಜಂತ್ರಿಗಳ ಮೆರಗುಗಳ ಮಧ್ಯೆ ಅಲಂಕೃತ ವೇದಿಕೆಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಗುರುವಾರದ ಗಣೇಶ ಚತುರ್ಥಿ ಸಂಭ್ರಮಕ್ಕೆ ಮೆರಗು ನೀಡಿದ್ದು ಕಂಡು ಬಂದಿತು.ಗುರುವಾರ ಬೆಳಿಗ್ಗೆಯಿಂದಲೇ ಗಣೇಶ ಮೂರ್ತಿಗಳನ್ನು ಮೆರವಣಿಗೆ ಮೂಲಕ ಕರೆದು ತರಲಾಗಿತ್ತು. 

ಗ್ರಾಮೀಣ ಪ್ರದೇಶಗಳಲ್ಲಿ ಕೂಡ ವಾರ್ಡಿಗೊಂದರಂತೆ ಸಾರ್ವಜನಿಕ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಈ ಬಾರಿಯ ವಿಶೇಷ. ಚಿಕ್ಕ ಮಕ್ಕಳು, ಯುವಕರು ಯಾರನ್ನು ನೋಡಿದರು  ರಾರಾಜಿಸುತ್ತಿವೆ. ಗುರುವಾರ ಸಂಜೆ ಆಗುತ್ತಿದ್ದಂತೆ ಮೊದಲ ಹಂತದಲ್ಲಿ ಪ್ರತಿಷ್ಠಾಪನೆಗೊಂಡ ದಿನವೇ ವಿಸರ್ಜನೆ ಮಾಡಿರುವುದು ಹೆಚ್ಚಾಗಿ ಕಂಡು ಬಂದಿತು. ಉಳಿದಂತೆ ಐದನೇ ದಿನಕ್ಕೆ ಗಣೇಶ ವಿಸರ್ಜನೆ ನಡೆಯಲಿದೆ ಎಂದು ಸಮಿತಿಗಳು ತಿಳಿಸಿವೆ.ಪಟ್ಟಣದ ಸ್ವಾಮಿ ವಿವೇಕಾನಂದ, ಆರ್ಯವೈಶ್ಯ ಸೇವಾ ಸಂಘ, ಜೆಸ್ಕಾಂ ಕಚೇರಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಹಿಂದೂ ಜಾಗರಣಾ ವೇದಿಕೆ, ರಾಜಸ್ಥಾನಿ ಯುವಕ ಮಂಡಳಿ ಸೇರಿದಂತೆ ವಿವಿಧ ವೃತ್ತಗಳಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿಗಳ ವಿಸರ್ಜನೆ ಐದನೇ ದಿನಕ್ಕೆ ನಡೆಯಲಿದೆ. ಪ್ರತಿನಿತ್ಯ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪೊಲೀಸ್ ಉಪ ವಿಭಾಗಾಧಿಕಾರಿ ಎಚ್.ಆಂಜನೇಯ ಮಾರ್ಗದರ್ಶನದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಮಾನ್ವಿ : ಜನಾಕರ್ಷಣೆಯ ಗಣಪನ ಮೂರ್ತಿಗಳು

ಮಾನ್ವಿ:
ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಗುರುವಾರ ಗಣೇಶ ಚತುರ್ಥಿ ದಿನದಂದು ಪ್ರತಿಷ್ಠಾಪಿಸಲಾದ ವಿಭಿನ್ನ ಮಾದರಿಯ ಗಣೇಶ ಮೂರ್ತಿಗಳು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಪ್ರತಿ ವರ್ಷಕ್ಕಿಂತ ಈ ಬಾರಿ ವಿಶಿಷ್ಟ ಶೈಲಿಯಲ್ಲಿ ತಯಾರಾದ ಗಣೇಶ ಮೂರ್ತಿಗಳನ್ನು ಎಲ್ಲೆಡೆ ಸ್ಥಾಪಿಸಿರುವುದು ವಿಶೇಷವಾಗಿದೆ.

 

ಕಳೆದ ವರ್ಷ ಪಟ್ಟಣದಲ್ಲಿ 27 ಗಜಾನನ ಸೇವಾ ಸಮಿತಿಗಳು ಗಣೇಶ ಮೂರ್ತಿಗಳನ್ನು ವಿವಿಧ ಕಡೆ ಪ್ರತಿಷ್ಠಾಪಿಸಿದ್ದವು. ಆದರೆ ಈ ವರ್ಷ ಪಟ್ಟಣದಲ್ಲಿ ಸುಮಾರು 43 ಗಜಾನನ ಸೇವಾ ಸಮಿತಿಗಳು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವುದು ಯುವಕರ ಹೆಚ್ಚಿನ ಪ್ರಮಾಣದ ಸಂಘಟನೆ ಹಾಗೂ ಉತ್ಸಾಹಕ್ಕೆ  ಸಾಕ್ಷಿಯಾಗಿದೆ.

 

ಗಣೇಶ ಮಂಟಪಗಳನ್ನು ಬಣ್ಣದ ವಿದ್ಯುದ್ದೀಪಗಳ ಮೂಲಕ ವೈವಿದ್ಯಮಯವಾಗಿ ಅಲಂಕರಿಸಲಾಗಿದ್ದು,  ಎಲ್ಲೆಡೆ ಸಂಭ್ರಮ ಕಾಣುತ್ತಿದೆ. ಪಟ್ಟಣದ ಕೋನಾಪುರಪೇಟೆಯ ಕನಕದಾಸ ವೃತ್ತದಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ವಿಗ್ರಹ ಹಾಗೂ ಅಲಂಕಾರ ಇತರ ವಿಗ್ರಹಗಳಿಗಿಂತ ವಿಭಿನ್ನವಾಗಿದೆ.  ಮಹಾತ್ಮ ಗಾಂಧೀಜಿ ಹಾಗೂ ಅಣ್ಣಾ ಹಜಾರೆ ಅವರ ಭಾವಚಿತ್ರಗಳನ್ನು ಹೊಂದಿದ ಪರದೆಯಲ್ಲಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿರುವುದು ವಿಶೇಷವಾಗಿದೆ. ಇದು ಇತರ ಗಣೇಶ ವಿಗ್ರಹಗಳಿಗಿಂತ ಹೆಚ್ಚಿನ ಜನಾಕರ್ಷಣೆಗೆ ಕಾರಣವಾಗಿದೆ.ಟಿಎಪಿಸಿಎಮ್‌ಎಸ್ ಆವರಣದಲ್ಲಿ ವೀರಶೈವ ಸಮಾಜದಿಂದ ಪ್ರತಿಷ್ಠಾಪಿಸಲಾದ 9 ಅಡಿ ಎತ್ತರದ ಗಣೇಶ ಮೂರ್ತಿ, ಮಾಡಿವಾಳ ಮಾಚಿದೇವ ಸಂಘದ ಪಂಚಮುಖಿ ಗಣೇಶ  ಹಾಗೂ ಎಪಿಎಮ್‌ಸಿ ಉದ್ಭವ ಆಂಜನೇಯ ದೇವಸ್ಥಾನದ ಹತ್ತಿರ ವರ್ತಕರ ಸಂಘ ಪ್ರತಿಷ್ಠಾಪಿಸಿರುವ 16ಅಡಿ ಎತ್ತರದ ಗಣೇಶ ವಿಗ್ರಹಗಳು ಜನರನ್ನು ಆಕರ್ಷಿಸುತ್ತಿವೆ. ಶುಕ್ರವಾರ  ಪಟ್ಟಣದ ಎಲ್ಲಾ ಗಣೇಶ ವಿಗ್ರಹಗಳ ಹತ್ತಿರ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸಾಲು ಸಾಲಾಗಿ ನಿಂತು ಗಣೇಶನ ದರ್ಶನ ಪಡೆಯುತ್ತಿದ್ದ ದೃಶ್ಯ ಕಂಡು ಬಂದಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.